ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿ ಶತಮಾನೋತ್ಸವದ ಅಂಗವಾಗಿ ಏ. ೨೪ ರಂದು ಶತಮಾನೋತ್ಸವದ ಭವ್ಯ ಜ್ಯೋತಿಯನ್ನು ಬೆಳಗಿಸಿ, ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಹೇಳಿದ್ದಾರೆ.
ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಸವ ಜಯಂತಿಯ ಶತಮಾನೋತ್ಸವದ ಬಗ್ಗೆ ಹಾಗೂ ಅವರ ತತ್ವಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಮೆರವಣಿಗೆ ಸಂದರ್ಭದಲ್ಲಿ ವಿಶೇಷ ಜ್ಯೋತಿಯನ್ನು ಬೆಳಗಿಸಿ, ಜಾಗೃತಿ ಮೂಡಿಸಿದಲ್ಲಿ ಅರ್ಥಪೂರ್ಣವಾಗಲಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್. ಪಾಟೀಲ್ ಅವರ ಸಲಹೆಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸಹಮತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಬಸವ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಅವರು ಮಾತನಾಡಿ ಏ. ೨೪ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಸವೇಶ್ವರ ವೃತ್ತದ ಬಳಿ ಜಗಜ್ಯೋತಿ ಬಸವೇಶ್ವರರ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದು ಸಂಜೆ ೪ ಗಂಟೆಗೆ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಏರ್ಪಡಿಸಲಾಗಿದ್ದು, ಮೆರವಣಿಗೆಯು ಕೋಟೆ ಮಹೇಶ್ವರ ದೇವಸ್ಥಾನದಿಂದ ಹೊರಟು, ಜವಾಹರ ರಸ್ತೆ ಮಾರ್ಗವಾಗಿ ಗವಿಮಠ ಆವರಣ ತಲುಪಲಿದೆ. ಧಾರ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಸ್. ಮಲ್ಲಿಕಾರ್ಜುನ್ ಹಾಗೂ ಗೋನಾಳ್ ಅವರುಗಳು ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಎಲ್ಲ ಕಚೇರಿಗಳಲ್ಲಿ ಅಳವಡಿಸಬೇಕು, ಹಾಗೂ ಅಂದಿನ ದಿನ ಬಸವೇಶ್ವರರ ಭಾವಚಿತ್ರಕ್ಕೆ ಗೌರವ ಸಮರ್ಪಿಸುವಂತಾಗಬೇಕು. ಕಾರ್ಯಕ್ರಮದ ದಿನದಂದು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಗರವನ್ನು ಸುಂದರಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ಶರಣಬಸಪ್ಪ, ನಗರಸಭೆ ಸದಸ್ಯ ಗವಿಸಿದ್ದಪ್ಪ ಮುಂಡರಗಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, , ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿಯ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ವೀರಣ್ಣ ಕೊರ‍್ಲಹಳ್ಳಿ, ಡಾ. ಜ್ಞಾನಸುಂದರ್, ಶಿವಕುಮಾರ ಕುಕನೂರು, ಗವಿಸಿದ್ದಪ್ಪ ಕೊಪ್ಪಳ, ಕೋಮಲಕ್ಕ ಕುದರಿಮೋತಿ, ಅಪರ್ಣ ಬಳ್ಳೊಳ್ಳಿ, ಹನುಮಂತಪ್ಪ ಬೂದಗುಂಪಿ, ಶಿವಣ್ಣ, ನಾಗರಾಜ್, ಮಾರುತಿ ನಿಕ್ಕಂ ಮುಂತಾದ ಗಣ್ಯರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು
0 comments:
Post a Comment