ಕೊಪ್ಪಳ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಮುಷ್ಕರವನ್ನು ಮುಂದುವರೆಸದೆ, ತಮ್ಮ ತಮ್ಮ ಕರ್ತವ್ಯಕ್ಕೆ ಮರಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮುಷ್ಕರ ನಿರತ ಗ್ರಾ.ಪಂ. ನೌಕರರಿಗೆ ಮನವಿ ಮಾಡಿಕೊಂಡಿದ್ದಾರೆ.
ಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಮುಷ್ಕರ ನಡೆಸುತ್ತಿರುವ ಗ್ರಾಮ ಪಂಚಾಯತಿಗಳ ಕರ ವಸೂಲಿಗಾರರು, ನೀರಗಂಟಿಗಳು ಮುಂತಾದ ಸಿಬ್ಬಂದಿಗಳು ಮುಷ್ಕರ ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಹಿಂದಿರುಗಬೇಕು. ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಬಿಸಿಲಿನ ಪ್ರಖರಕ್ಕೆ ಜನ, ಜಾನುವಾರುಗಳು ತತ್ತರಗೊಂಡಿದ್ದು, ಬೇಸಿಗೆಯ ತಿಂಗಳುಗಳು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಬರದ ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿಗಳು ತಮ್ಮ ಕರ್ತವ್ಯದ ಹೊಣೆಗಾರಿಕೆಯನ್ನು ಮರೆತು, ಮುಷ್ಕರ ನಡೆಸುವುದು ಯಾರಿಗೂ ಶೋಭೆ ತರುವಂತಹ ವಿಷಯವಲ್ಲ. ಗ್ರಾಮ ಪಂಚಾಯತಿ ನೌಕರರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗುವ ವಿಷಯಗಳಾಗಿದ್ದು, ಜಿಲ್ಲಾ ಮಟ್ಟದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬರ ಪರಿಸ್ಥಿತಿಯ ಸಂದರ್ಭದಲ್ಲಿ ಆತಂಕದಲ್ಲಿರುವ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಸೂಕ್ತ ಮೇವು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ನೌಕರರು ಮುಷ್ಕರವನ್ನು ನಿಲ್ಲಿಸಿ, ಕರ್ತವ್ಯಕ್ಕೆ ಹಿಂದಿರುಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮನವಿ ಮಾಡಿದ್ದಾರೆ
0 comments:
Post a Comment