PLEASE LOGIN TO KANNADANET.COM FOR REGULAR NEWS-UPDATES


- ಜಿ.ಮಹಾದೇವ್‌ ಕಲ್ಕುಣಿಕೆ

ಎಪ್ರಿಲ್ 14.ಶತಮಾನಗಳಿಂದ ಅಸಮಾನತೆ, ಶೋಷಣೆ, ದೌರ್ಜನ್ಯಗಳ ಸುಳಿಯಲ್ಲಿ ಸಿಕ್ಕು ಧ್ವನಿ ಕಳೆದುಕೊಂಡ ಕೋಟ್ಯಂತರ ದೀನದಲಿತರ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿ ಸ್ವಾಭಿಮಾನದ ಮಹತ್ವ ಸಾರಿದ ಭಾರತದ ಮಹಾನ್ ಹೋರಾಟಗಾರ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಜನ್ಮದಿನ. ತನ್ನಿಮಿತ್ತ ಆ ಮಹಾತ್ಮನಿಗೆ ಈ ನುಡಿನಮನ. ಭಾರತದ ನೆಲದಲ್ಲಿ ಶತ-ಶತಮಾನಗಳಿಂದ ಮೇಲ್ವರ್ಗದ ಪಟ್ಟಭದ್ರರ, ಪ್ರತಿಗಾಮಿ ಪುರೋಹಿತಶಾಹಿಗಳ ಬಿಗಿಮುಷ್ಟಿಯಲ್ಲಿ ಸಿಕ್ಕು ಶೋಷಿತ ಬದುಕನ್ನುಂಡು, ಅಸಹಾಯಕತೆಯ ಬಿಸಿಲಬೇಗೆಯಲ್ಲಿ ಬೆಂದ ಕೋಟ್ಯಂತರ ದಲಿತರು, ಶೋಷಿ ತರು, ಅಸ್ಪಶ್ಯರು,ಅಸಹಾಯಕರ ಎದೆಯಲ್ಲಿ ಭರವಸೆಯ ಬೆಳಕು ಬೀರಿದ ದಿವ್ಯಚೇತನ ಡಾ.ಬಿ.ಆರ್.ಅಂಬೇಡ್ಕರ್. ಭಾರತದಂತಹ ಬಹುಸಂಸ್ಕೃತಿಯುಳ್ಳ,ಸಾಮಾಜಿಕವಾಗಿ,ಹಲವು ಆಯಾಮಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ರಾಷ್ಟ್ರದಲ್ಲಿ ಸಾಮಾಜಿಕ ವೈರುಧ್ಯವೆಂಬಂತೆ ಮನುಷ್ಯ- ಮನುಷ್ಯರನ್ನು ಜಾತಿಯ ನೆಲೆಗಟ್ಟಿನಲ್ಲಿ ಪ್ರತ್ಯೇಕಿಸುವಂತಹ ಸಂದರ್ಭದಲ್ಲಿ ಅಂಬೇಡ್ಕರ್‌ರ ನೆನಪು ನಮ್ಮನ್ನು ವೈಚಾರಿ ಕತೆಯ ದೃಷ್ಟಿಯಿಂದ ಸ್ವಾಭಿಮಾನದ ನೆಲೆಯಿಂದ ಕಾಡದೇ ಇರದು.
ಸಹಮಾನವರಂತೆಯೇ ರಕ್ತಮಾಂಸ, ದೇಹವನ್ನು ಪಡೆದು ಕೊಂಡೇ ಜನ್ಮ ತಳೆದ, ತನ್ನದಲ್ಲದ ತಪ್ಪಿಗೆ ಜಾತಿಯ ಸಂಕೋ ಲೆಯಲ್ಲಿ ಬದುಕಿದ ಅರ್ಥ ಕಳೆದುಕೊಂಡು ಕಂಗೆಟ್ಟ ಕಣ್ಣು ಗಳಲ್ಲಿ ಬದುಕಿನೆಡೆಗೆ, ಭವಿಷ್ಯದೆಡೆಗೆ ಅಸಹಾಯಕತೆ ತುಂಬಿ ಕೊಂಡ ಈ ನೆಲದ ಅಸಂಖ್ಯಾತ ಮನುಷ್ಯ ಜೀವಿಗಳಿಗೆ ತನ್ನ ಹೋರಾಟದ ದಿವ್ಯ ಶಕ್ತಿಯ ಮೂಲಕ ಬದುಕನ್ನೆದುರಿಸುವ, ಅಸಮಾನತೆ ವಿರುದ್ಧ ಸಿಡಿದೇಳುವ ಭರವಸೆ ಮೂಡಿಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡು ಅಹರ್ನಿಶಿ ದುಡಿದ ಮಹಾನ್ ದಾರ್ಶನಿಕ ಡಾ. ಅಂಬೇಡ್ಕರ್.ಎಲ್ಲರಂತೆ ನಾವೂ ಮನುಷ್ಯರೇ. ಈ ನೆಲದ ಅಸ್ತಿತ್ವ ಮತ್ತು ಮನುಷ್ಯತ್ವದ ಘನತೆ ನಮಗೂ ದಕ್ಕಬೇಕು ಎಂಬ ಪ್ರಮುಖ ವಿಚಾರವನ್ನೇ ಅಸ್ತ್ರ ಮಾಡಿಕೊಂಡ ಅಂಬೇಡ್ಕರ್‌ರವರು ಹಕ್ಕು ಆಧಾರಿತ ನೆಲೆಗಳಲ್ಲಿ ದೀನದಲಿತರ ಪರ ಹೋರಾಟ ರೂಪಿಸಿದವರು, ಅಸಮಾನತೆಯ ಸಂಕೋಲೆಯನ್ನು ಕಿತ್ತೊಗೆದು ಸಮಾನತೆಯ ಕನಸನ್ನು ಕಂಡವರು.
ಆ ಕನಸನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ ತನ್ನೆಲ್ಲ ಚೈತನ್ಯವನ್ನು ಹುರಿ ಗೊಳಿಸಿ ಜೀವನದ ಸಂಕಟದಲ್ಲಿ, ಅಜ್ಞಾನದಲ್ಲಿ ಹುದುಗಿ ಹೋದ ದಲಿತರು, ಶೋಷಿತರು, ದಮನಿತರ ಕಸುವು ಕಳೆದುಕೊಂಡ ಮೈಮನಗಳಲ್ಲಿ ಸಮಾನತೆಯ ಹೂ ಅರಳುವ ದಿನಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ಕರ್ಮಯೋಗಿ ಬಾಬಾ ಅಂಬೇಡ್ಕರ್.ಹನ್ನೊಂದನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಅಸ್ಪೃಶ್ಯರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅಸ್ಪಶತೆಯನ್ನು ತೊಡೆದು ಹಾಕಲು ಜೀವನ ಪರ್ಯಂತ ಹೋರಾಡಿದ್ದು ಸಮಾನತೆಯ ನಾಡೊಂದನ್ನು ಕಟ್ಟುವ ಸಂಕಲ್ಪದಿಂದಲೇ. ಕಾಲಕಾಲಕ್ಕೆ ಅಸ ಮಾನತೆಯ ವಿರುದ್ಧ, ಸಾಮಾಜಿಕ, ಧಾರ್ಮಿಕ ಅಪಸವ್ಯಗಳ ವಿರುದ್ಧ ಹೋರಾಡಲು ಜನ್ಮ ತಳೆದ ಯುಗಪುರುಷರ ಸಾಲಿಗೆ ಸೇರಿದವರು ಅಂಬೇಡ್ಕರ್.
ಅಂಬೇಡ್ಕರ್‌ರು 20ನೆ ಶತಮಾನದ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸರಿಸುಮಾರು 40 ವರ್ಷಗಳ ಕಾಲ ತನ್ನ ಬೌದ್ಧಿಕ ದೃಷ್ಟಿಕೋನದಿಂದ ರೂಪಿಸಿದ ಹೋರಾಟಗಳ ಮೂಲಕ ಪ್ರಭಾವ ಬೀರಿದವರು. ಇಡೀ ಭಾರತೀಯ ನೆಲೆ ಯಲ್ಲಿ ಅಸಮಾನತೆಯ ವಿರುದ್ಧದ ಹೋರಾಟದ ಆವರಣ ವನ್ನು ಆವರಿಸಿಕೊಂಡ ಅಂಬೇಡ್ಕರ್ ಸಮಾನತೆಯೇ ಮನುಜ ಕುಲದ ಮಹಾನ್ ವೌಲ್ಯ ಎಂಬುದನ್ನು ಅರ್ಥೈ ಸಲು ಬಹುವಾಗಿ ಶ್ರಮಿಸಿದರು.ಅಂಬೇಡ್ಕರ್ ದಲಿತರಿಗೆ, ಅಸ್ಪಶ್ಯರಿಗೆ ತಮ್ಮ ವೌಢ್ಯದ ಕೂಪದಿಂದ ಹೊರಬರಲು ಕರೆನೀಡಿ ಅವರಿಗೆ ಸಮಾನ ಹಕ್ಕು,ಅವಕಾಶಗಳನ್ನು ದಕ್ಕಿಸಿಕೊಡಲು ಹಲವಾರು ಹೋರಾಟಗಳನ್ನು ಸಂಘಟಿಸಿದರು.
ಹಕ್ಕು ಆಧಾರಿತ ಹೋರಾಟಗಳ ಮೂಲಕ ನ್ಯಾಯಕ್ಕಾಗಿ ಆಳುವ ವರ್ಗವನ್ನು ಎಚ್ಚರಿಸುವ ಹಾಗೂ ಪ್ರಶ್ನಿಸುವ ಪಾಠ ಹೇಳಿಕೊಟ್ಟ ಬಾಬಾ ಸಾಹೇಬರು ನ್ಯಾಯಯುತ ಹೋರಾಟಕ್ಕೆ ಪ್ರೇರೇಪಿಸಿದರು.ಈ ಬಗೆಯ ಹಕ್ಕು ಆಧಾರಿತ ಹೋರಾಟಗಳ ಸರಣಿ ಯಲ್ಲಿ ಪ್ರಮುಖವಾದದ್ದು 1920ರ ದಶಕದಲ್ಲಿ ಮಹಾರಾಷ್ಟ್ರದ ‘ಚೌದರ್ ಕೆರೆ’ ನೀರನ್ನು ಅಸ್ಪಶ್ಯರು ಬಳಸಲು ರೂಪಿಸಿದ ಮಹಾನ್ ಹೋರಾಟ. ಚೌದರ್ ಕೆರೆಯ ನೀರನ್ನು ಅಸ್ಪ ಶ್ಯರು ಬಳಸಬಾರದು ಎಂಬ ಮನುಷ್ಯತ್ವ ವಿರೋಧಿ ಭಾವನೆ ಯನ್ನು ಹೊಂದಿದ್ದ ಚೌದರ್ ಪ್ರದೇಶದ ಮೇಲ್ವರ್ಗದವರ ವ್ಯವಸ್ಥಿತ ಸಂಚಿನ ವಿರುದ್ಧ ಬೃಹತ್ ಆಂದೋಲನ ಸಂಘ ಟಿಸಿ ಬಹುಸಂಖ್ಯಾತ ಅಸ್ಪಶ್ಯರೊಂದಿಗೆ ಚೌದರ್ ಕೆರೆಗೆ ತೆರಳಿ ಆ ನೀರನ್ನು ಬಳಸಿದ್ದು ಆ ಕಾಲದ ಭಾರತದ ಸಾಮಾಜಿಕ ವಲಯದ ಹೋರಾಟಗಳಲ್ಲಿಯೇ ಗಮನೀಯ ವಾದದ್ದು.
1920ರಲ್ಲಿ ನಾಗಪುರದಲ್ಲಿ ಅಸ್ಪಶ್ಯರ ಸಮ್ಮೇಳನ ನಡೆಸಿದ ಅಂಬೇಡ್ಕರ್‌ರು ತಮ್ಮ ಬದುಕಿನ ಸ್ಥಿತಿಗತಿಗಳನ್ನು ಅರಿಯದೇ ಮುಗ್ಧತೆಯ ಮುಸುಕಿನೊಳಗೆ ಇದ್ದ ದಲಿತರು ಮತ್ತು ಅಸ್ಪಶ್ಯರಿಗೆ ತಮ್ಮ ಹಕ್ಕುಗಳಿಗಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಒಂದಾಗಿ ಹೋರಾಡುವಂತೆ ಕರೆ ನೀಡಿ ಅವರಲ್ಲಿ ಚಿಂತನೆಯ ಹಣತೆ ಬೆಳಗಿ ಅವರ ಪಾಲಿಗೊಬ್ಬ ಪ್ರಶ್ನಾತೀತ ನಾಯಕನಾಗಿ ರೂಪುಗೊಂಡರು.ಮದ್ರಾಸಿನ ಹಿಂದೂ ದೇವಾಲಯಕ್ಕೆ ಅಸ್ಪಶ್ಯರು ಪ್ರವೇಶ ಮಾಡುವಂತಿಲ್ಲ ಎಂಬ ನಿರ್ಧಾರದ ವಿರುದ್ಧ ಕಾನೂನು ಹೋರಾಟ ರೂಪಿಸಿದವರು ಅಂಬೇಡ್ಕರ್. ಅಸ್ಪಶ್ಯರೂ ದೇವಾಲಯವನ್ನು ಪ್ರವೇಶಿಸಬಹುದು ಎಂದು ಮದ್ರಾಸಿನ ಉನ್ನತ ನ್ಯಾಯಾಲಯ ಐತಿಹಾಸಿಕ, ಕ್ರಾಂತಿಕಾರಕ ತೀರ್ಪು ನೀಡಿತು. ಈ ಬಗೆಯ ತೀರ್ಪು ಹೊರಬರಲು ಅಂಬೇಡ್ಕರ್‌ರ ಅಪಾರ ಶ್ರಮ ಹಾಗೂ ಅಸ್ಪಶ್ಯರೆಡೆಗೆ ಅವರಿಗಿದ್ದ ಅಪಾರ ಕಾಳಜಿಯೇ ಹಿನ್ನೆಲೆಯಾಗಿತ್ತು.ಮಾನವ ಹಕ್ಕುಗಳು ಮತ್ತು ವ್ಯಕ್ತಿ ಸ್ವಾತಂತ್ರ ಇವೆರಡೂ ಸಾಮಾಜಿಕ ನ್ಯಾಯದ ಎರಡು ಮುಖಗಳು. ಇವು ಪ್ರತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವೆಂಬುದು ಅಂಬೇಡ್ಕರ್‌ರ ಅಭಿಮತವಾಗಿತ್ತು.ಅಮೆರಿಕದ ನಿಗ್ರೋಗಳಿಗಿಂತ ಭಾರತಿಯ ಅಸ್ಪಶ್ಯನ ಬಾಳು ನಿಜಕ್ಕೂ ನರಕ ಎಂಬುದನ್ನು ಅರಿತಿದ್ದ ಅಂಬೇಡ್ಕರ್ ಹಗಲಿರುಳೆನ್ನದೆ ತನ್ನ ಬದುಕಿನ ಆವಶ್ಯಕತೆಗಳನ್ನೂ ಪರಿಗಣಿಸದೆ ನಿಸ್ವಾರ್ಥಿಯಾಗಿ ಜೀವನ ಪರ್ಯಂತ ಹೋರಾಡಿ ದೀನದಲಿತರಿಗೆ, ಅಸ್ಪಶ್ಯರಿಗೆ ಮತ್ತು ನೊಂದವರಿಗೆ ಸ್ವಾಭಿಮಾನದ ಬಾಳನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟ ನಿಜದರ್ಥದ ವ್ಯಕ್ತಿ ಸ್ವಾತಂತ್ರ ಪ್ರೇಮಿ.ಸಾಮಾಜಿಕ ನ್ಯಾಯ ಬದುಕಿನಲ್ಲಿ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಶಿಕ್ಷಣ, ಆರ್ಥಿಕ, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಲಭ್ಯವಿರುವ ಅಪಾರ ಅವಕಾಶಗಳನ್ನು ಬಳಸಿಕೊಂಡು ನಾಗರಿಕ ಪ್ರಪಂಚದ ಮುಖ್ಯವಾಹಿನಿಯಲ್ಲಿ ದೀನದಲಿತರು, ಶೂದ್ರರು ಮತ್ತು ಅಸ್ಪಶ್ಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸ್ಫೂರ್ತಿಯ ಸೆಲೆಯಾದವರು ಡಾ. ಅಂಬೇಡ್ಕರ್.ಜೀವನ ಸಂಘರ್ಷದಲ್ಲಿ ನೆಲೆ ಕಳೆದುಕೊಂಡವರಿಗೆ, ಶೂದ್ರರಿಗೆ, ಅಬಲರಿಗೆ, ಮಹಿಳೆಯರಿಗೆ ಮತ್ತು ಅಸ್ಪಶ್ಯರಿಗೆ ಸಾಂವಿಧಾನಿಕ ಹಕ್ಕು ದಕ್ಕಬೇಕು ಎಂಬುದನ್ನು ಅರಿತಿದ್ದವರು ಅಂಬೇಡ್ಕರ್. ಪ್ರತಿಯೊಬ್ಬ ದಲಿತನೂ ಕಾನೂನು ಪ್ರಕ್ರಿಯೆಯ ಬೆಂಬಲ ಪಡೆದು ವ್ಯಕ್ತಿತ್ವ ರಕ್ಷಣೆ ಮಾಡಿಕೊಳ್ಳಬೇಕು, ಹಕ್ಕು ಮತ್ತು ಅವಕಾಶಗಳಿಗಾಗಿ ಕಾನೂನು ಬೆಂಬಲ ಬೇಕು ಎಂಬ ಹಿನ್ನೆಲೆಯಲ್ಲಿ ದೀನದಲಿತರಿಗೆ ಬೇಕಾಗುವ ವಿಶಿಷ್ಟ ಮತ್ತು ಐತಿಹಾಸಿಕ ಮಹತ್ವ ಪಡೆದ ಸಂವಿಧಾನವನ್ನು ರೂಪಿಸಿದ್ದು, ಸ್ವತಂತ್ರ ಭಾರತದ ಇತಿಹಾಸದ ಅದ್ಭುತ ಅಧ್ಯಾಯಗಳಲ್ಲೊಂದು. ಎಲ್ಲ ಸ್ತರದ ಜನರಿಗೂ ಸಲ್ಲುವ ಅಪೂರ್ವ ಸಂವಿಧಾನವನ್ನು ನೀಡಿ ಅಸಮಾನತೆಯ ವಿರುದ್ಧದ ಹೋರಾಟದ ಭೂಮಿಕೆಯಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ ಧ್ರುವತಾರೆ ಇವರು. ಮಹತ್ತರ ಪರಿವರ್ತನೆಗಾಗಿ ಸಾಮಾಜಿಕ ಕ್ರಾಂತಿ ರೂಪುಗೊಳ್ಳಬೇಕು, ಸಾಮಾಜಿಕ ವಿರೋಧಾಭಾಸಗಳಿಗೆ ವೈಚಾರಿಕ ಸಂಘರ್ಷದ ಮುಖಾಮುಖಿಯಾಗಬೇಕು ಎಂಬ ನೀತಿಯನ್ನು ಜಗತ್ತಿಗೆ ಸಾರಿದ ಭಾರತದ ಹೆಮ್ಮೆಯ ಪುತ್ರ ಡಾ. ಅಂಬೇಡ್ಕರ್.ತನ್ನ ಬದುಕು-ಬರಹ ಮತ್ತು ಹೋರಾಟಗಳ ಮೂಲಕ ಭಾರತ ದೇಶದ ಸಮಸ್ತ ಶೋಷಿತರ ಸ್ವಾಭಿಮಾನದ ರೂಪಕವಾಗಿ ಇತಿಹಾಸದ ಪುಟಗಳಲ್ಲಿ ಅಮರರಾದವರು ಧೀಮಂತ ವ್ಯಕ್ತಿತ್ವದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್.

Advertisement

0 comments:

Post a Comment

 
Top