PLEASE LOGIN TO KANNADANET.COM FOR REGULAR NEWS-UPDATES


- ಜ್ಯೋತಿ ಗುರುಪ್ರಸಾದ್
ಮಾನವತೆಯ ಕೊಲೆ ಇನ್ನು ನಡೆಯಬಾರದೆಂಬ ಸಂಕಲ್ಪವನ್ನು ಹೊತ್ತು ಮಾತ್ರ ಅಂಬೇಡ್ಕರ್‌ರವರು ಭಾರತದಲ್ಲಿ ಹುಟ್ಟಿದರೆನಿಸುವುದಿಲ್ಲವೇ? ಅವರ ಈ ಹುಟ್ಟನ್ನು ಅಭಿನಂದಿ ಸುವ ದಿನ ನಾವುಗಳು ಎಷ್ಟೆಷ್ಟು ಮಾನವೀಯ ವಾಗಿ ವರ್ತಿಸುತ್ತಿದ್ದೇವೆ? ನಮ್ಮ ವಾತಾವರಣ ವನ್ನು ಇದಕ್ಕಾಗಿ ಹೇಗೆ ಸೃಷ್ಟಿಸುತ್ತಿದ್ದೇವೆ? ಎಂಬ ವಾಸ್ತವದ ನಡೆ-ನುಡಿಯಿಂದ ಮಾತ್ರ ಸಾರ್ಥಕವಾಗುವುದೆಂದು ನನಗನಿಸುತ್ತದೆ.ಎಲ್ಲ ಮಗುವಿನಂತೆಯೇ ಸಹಜವಾಗಿ ಮನುಷ್ಯನಾಗಿಯೇ ಜನಿಸಿದರು ಭೀಮರಾವ್ ಅಂಬೇಡ್ಕರ್‌ರವರು. ಮನುಷ್ಯ ಮಗು ಎಂಬ ಸಮಾನತೆ ಕಾಣಲಿಲ್ಲ. ದಲಿತ ಮಗುವೆಂದು ಅಸ್ಪಶತೆಯ ಅಂಧ ಸಮಾಜದಲ್ಲಿ ‘ಇತರ ಮಕ್ಕಳಿಗಿಂತ ಕಡಿಮೆ’ ಎಂಬ ತುಚ್ಚ ಭಾವದಲ್ಲೇ ಬೆಂದು ಆ ಅವಮಾನದ ಬೆಂಕಿಯಲ್ಲೇ ಹೂವಾಗಿ ಅರಳಿ ಬಾಬಾ ಸಾಹೇಬ ಅಂಬೇಡ್ಕರ್ ಆಗಿ ಸಂವಿಧಾನ ಶಿಲ್ಪಿಯಾಗಿ ಪ್ರಪಂಚಕ್ಕೆಲ್ಲ ಪರಿಮಳ ಬೀರಿದ ಚರಿತ್ರೆ ಮಾನವ ಇತಿಹಾಸದ ಚಾರಿತ್ರದ ಕಥೆ. ಈ ಚಾರಿತ್ರದ ವಧೆ ಎಂದಿಗೂ ಆಗಕೂಡದು. ಈ ಚಾರಿತ್ರಕ್ಕೆ ಮತ್ತೇ ಯಾವುದೇ ಹುಸಿ ಜಾತಿ ಭಾವನೆ ಬೆರೆಸಿ ಅಂಬೇಡ್ಕರರನ್ನು ‘ದಲಿತ’ ಎಂಬ ಹಣೆಪಟ್ಟಿ ಮಾತ್ರ ಹಂಚಿ ಸೀಮಿತ ಭಾವದಿಂದ ನೋಡುತ್ತಾ ಅವರ ಪ್ರತಿಮೆಗೆ ಅವಮಾನಿಸುವ - ಒಂದು ಕೋಮಿಗೆ ಸೀಮಿತ ಮಾಡಿ ಕೇವಲ ಫೊಟೋ ಇಟ್ಟು ಪೂಜಿಸುವ ನಿಷ್ಕ್ರಿಯತೆಯನ್ನು ಮಾತ್ರ ತೋರಿದರೆ ಅದು ಮತ್ತೆ ಅಂಬೇಡ್ಕರ್‌ರ ವಿಕಾಸವಾದ ಘನ ವ್ಯಕ್ತಿತ್ವಕ್ಕೆ- ಪ್ರಜಾಪ್ರಭುತ್ವಕ್ಕೆ ಎಸಗುವ ಅವಮಾನ. ಆದರೆ ಅವರ ವ್ಯಕ್ತಿತ್ವವನ್ನು ಅರಿತು ಅವರಿಗೆ ಸಲ್ಲಿಸುವ ವಿನಯದ ಯಾವುದೇ ಮಾನವತೆಯ ಪೂಜೆಯು ಅರಿವಿನ ಬೆಳಕಿನಲ್ಲಿ ಸಾರ್ಥಕವಾಗುತ್ತದೆ.
ಯಾವುದೇ ದಲಿತರು ತಮ್ಮ ಆ ದಲಿತತನದಿಂದ ಹೇಗೆ ಹೊರಬಂದು ಮೇಲೇರಬಹುದು ಎಂಬ ಕ್ರಿಯಾಶೀಲತೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾದರೆ ಮಾತ್ರ ಈ ಕ್ರಿಯಾಶೀಲತೆಯ ಪರಿಸರಕ್ಕೆ ಅವಕಾಶವಾದರೆ ಮಾತ್ರ ಅಂಬೇಡ್ಕರ್ ಎಂಬ ಮಾನವತಾವಾದಿಗೆ ಸಲ್ಲುವ ನಿಜವಾದ ಗೌರವ. ಅಂಬೇಡ್ಕರ್‌ರ ಸರಳ ಕಥೆಯ ಮನನವೂ ಕೂಡ ಈ ಸಾಕ್ಷಾತ್ಕಾರದ ಅನುಭೂತಿಗೆ ಅನುವು ಮಾಡಿಕೊಡುತ್ತದೆ ಎಂದು ನನ್ನ ಅನಿಸಿಕೆ. ಅತ್ಯಂತ ಬಡತನದ ದಲಿತ ಕುಟುಂಬವೊಂದ ರಲ್ಲಿ ಮೋಟು ಗೋಡೆಯ ಬುಡ್ಡಿ ದೀಪದ ಬೆಳಕಿನಲ್ಲಿ ಓದಿಕೊಂಡು ಬೆಳೆದ ಬಾಬಾ ಸಾಹೇಬರಿಗೆ ತಂದೆ -ತಾಯಿಯ ಅದಮ್ಯ ಪ್ರೀತಿ ವಾತ್ಸಲ್ಯಗಳೇ ಶ್ರೀ ರಕ್ಷೆಯಾಗಿತ್ತು ಎಂಬುದು ಕಥೆಯ ಮೊದಲ ಗಮನಾರ್ಹ ಅಂಶ. ತಾಯಿ ಅಸುನೀಗಿದರೂ ತಾಯಿಯ ಸ್ಥಾನವನ್ನು ತುಂಬಿದ ತಂದೆಯ ಪಾತ್ರ ಅಂಬೇಡ್ಕರ್ ಜೀವನದಲ್ಲಿ ಬಹು ದೊಡ್ಡದು.
ತಮ್ಮ ತಿಳಿವಳಿಕೆಯ ಪ್ರೀತಿಯ ಓದನ್ನು ಅಂಬೇಡ್ಕರ್‌ರ ತಂದೆ ತನ್ನ ಮಗನ ತಲೆಯಲ್ಲೂ ತುಂಬಿ ಆ ಓದು ಎಲ್ಲೂ ಮಕ್ಕಿ ಕಾ ಮಕ್ಕಿ ಪುಸ್ತಕದ ಹುಳುವಾಗಿ ಕೊರೆದು ವ್ಯರ್ಥವಾಗದೆ ಜೀವನದಲ್ಲಿ ಧೀರನಾಗಿ ಮುಂದುವರೆಯುವ ಎಲ್ಲ ಆತ್ಮವಿಶ್ವಾಸವನ್ನು ಬೆಳೆಸುವಂತಹ ಕಿಡಿ ಯೊಂದನ್ನು ಆತ್ಮದಲ್ಲಿ ಹೊತ್ತಿಸುವಂತೆ ಅಂಬೇಡ್ಕರ್‌ರನ್ನು ಅವರ ತಂದೆ ಬೆಳೆಸಿದರು. ಇದರಿಂದಾಗಿ ಪ್ರೈಮರಿ ಶಾಲೆಯ ಬಾಲ್ಯದ ವಾತಾವರಣದಲ್ಲಿ ಭೀಮ್‌ರಾವ್ ಎಂಬ ಹೆಸರಿನಿಂದ ಕರೆಸಿಕೊಂಡ ಅಂಬೇಡ್ಕರ್‌ರಿಗೆ ಸ್ವತಃ ಶಾಲಾ ಶಿಕ್ಷಕರಿಂದ ‘ನೀನು ದಲಿತ, ಎಲ್ಲ ಮಕ್ಕಳ ಜೊತೆ ಕೂರುವ ಅರ್ಹತೆ ನಿನಗಿಲ್ಲ. ದೂರ ಹೋಗು’ ಎಂಬ ಅವಮಾನದ ಬಿರುನುಡಿಗಳನ್ನು ಕೇಳಬೇಕಾಗಿ ಬಂದು ಭೂಮಿಗೆ ಕುಸಿದು ಹೋಗುವಂತಹ ದುಃಖ ಉಂಟಾದರೂ ಆ ದುಃಖದ ಖಿನ್ನತೆಯನ್ನು ಸಹಿಸಿ ‘ಇದು ಯಾಕೆ ಹೀಗಾಯಿತು?’ ಎಂದು ಪ್ರಶ್ನಿಸಿ ಇದರಲ್ಲಿ ತನ್ನದೇನೂ ತಪ್ಪಿಲ್ಲ ತನ್ನನು ಹೀನಾಯವಾಗಿ ಅನ್ಯಾಯವಾಗಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಈ ಸಮಾಜದ್ದೇ ತಪ್ಪು ಎಂಬ ಅರಿವಿನಿಂದ ಮುನ್ನಡೆಯುವಂತಾಯಿತು.
ಇದೇ ಅಂಬೇಡ್ಕರ್‌ರ ಕಥೆಯ ಎರಡನೆಯ ಗಮ ನಾರ್ಹ ಅಂಶ. ಅಂಬೇಡ್ಕರ್‌ರಿಗೆ ತಂದೆ ಹೇಳಿದ ಪುರಾಣ ಕಥೆಗಳು-ಮಹಾಕಾವ್ಯದ ಕಥೆಗಳು ಅಪಾರ ಪರಿಣಾಮವನ್ನು ಬೀರಿದವು. ಬೇರೆ ಯಾವುದೂ-ಯಾರೂ ಅವರ ನಂಬಿಕೆಯ ಸಂಗಾತಿಯಾಗದಿದ್ದರೂ ತಂದೆ ಕಲಿಸಿದ್ದ ಪ್ರಾಮಾ ಣಿಕತೆಯ ನಂಬಿಕೆಯ ಮಾತು ಮತ್ತು ಸದಾ ಅಂಬೇಡ್ಕರ್‌ರಿಗೆ ಸ್ನೇಹಿತನಂತೆ ಜೊತೆಯಾಗಿರು ತ್ತಿದ್ದ ಒಳ್ಳೆಯ ಪುಸ್ತಕ-ಓದು- ಅಂತರಂಗದ ಶಿಸ್ತು ಇವು ಅಂಬೇಡ್ಕರ್‌ರನ್ನು ಎಲ್ಲ ಕತ್ತಲನ್ನು ಸೀಳಿ ಕೊಂಡು ಬೆಳಕಿನೆಡೆಗೆ ಮುಖ ಮಾಡಲು ಕಲಿ ಸಿದ ಪ್ರಖರ ಹೆಜ್ಜೆ. ಈ ಹೆಜ್ಜೆಯನ್ನು ಇಂದಿನ ಕಂದ ಮರೆಯದಂತೆ ರೂಪಿಸ ಬೇಕಾಗಿರುವುದು ಎಲ್ಲ ಶಿಕ್ಷಕರ, ತಂದೆ ತಾಯಿಯರ ಕರ್ತವ್ಯ.

ಆದರೆ ಇಂದಿನ ಕಂದ ಗಂಡೋ ಅಥವಾ ಹೆಣ್ಣೋ ಎಂದು ನೋಡುತ್ತ ಹೆಣ್ಣು ಜಾತಿಯನ್ನು ದಲಿತ ಜಾತಿಗಿಂತ ಕೀಳಾಗಿ ಕಂಡು ಮುಗಿಸಿ ಬಿಡಬೇಕೆನ್ನುವ ಅಂಧಕಾರದ ಕ್ರೌರ್ಯದ ನಶೆಯಲ್ಲಿ ಆಧುನಿಕ ತಂದೆಯೊಬ್ಬ ವಿಕೃತಿಯ ರೋಗದಿಂದ ನರಳುತ್ತಿದ್ದಾನೆ ಎಂದರೆ ಇದಕ್ಕಿಂತ ಮಾನವತೆಯ ಅಧಃಪತನ ಇನ್ನೊಂದಿರಲು ಸಾಧ್ಯವೇ? ರೇಷ್ಮಾಬಾನು ಹೆತ್ತ ತನ್ನದೇ ಹಸುಗೂಸು ನೇಹಾಳನ್ನು ಅದರ ತಂದೆ ಅದು ‘ಹೆಣ್ಣು ಮಗು’ ಎಂಬ ಕಾರಣಕ್ಕೆ ಮೂರು ತಿಂಗಳ ಆ ಮಗುವಿನ ದೇಹವನ್ನು ತನ್ನ ಮಗು ಎಂಬ ಯಾವುದೇ ಸಂವೇದನೆ ಇಲ್ಲದೆ ಚಿತ್ರಹಿಂಸೆ ಕೊಟ್ಟು ಕೊಲೆಗೈಯಲು ನೋಡುತ್ತಾನೆಂದರೆ ಇದರ ಹಿಂದೆ ಎಂತಹ ಹಿಂಸಾತ್ಮಕ ಮನಸ್ಸಿನ ನಿರಂತರ ತರಬೇತಿ ನಡೆದಿರಬೇಕು?
ಹೆಣ್ಣು ಮಗು ಹುಟ್ಟುವುದೇ ಸಿಕ್ಕಾಪಟ್ಟೆ ವರದಕ್ಷಿಣೆ ಕೊಟ್ಟು ಅದ್ದೂರಿ ಮದುವೆ ಮಾಡಿಕೊಡುವ ಕಾರಣಕ್ಕಾಗಿ ಎಂಬ ಆಸ್ತಿ ಪ್ರಜ್ಞೆಯ ಪುರುಷ ಪ್ರಧಾನ ಕುರುಡು ನಂಬಿಕೆಯೇ ಇಂತಹ ಮಾನವತೆಯ ಕಗ್ಗೊಲೆಯ ಹಿಂದಿರುವ ಪ್ರಧಾನ ಕಾರಣವಲ್ಲವೇ? ಇಂತಹ ಹಿಂಸಾತ್ಮಕ ಮನಸ್ಸು ರೇಷ್ಮಾ ಬಾನುವಿನೊಳಗಿದ್ದ ತಾಯಿ ಮಮತೆಯ ಹೆಂಗರುಳನ್ನು ಅರಿಯದೆ ಅವಳ ಬೆಳೆಯಬೇಕಾದ ಮನಸ್ಸನ್ನು ಭಯದಿಂದ ಅಜ್ಞಾನದಿಂದ ತುಂಬಿ ಅವಳ ಸ್ವಾತಂತ್ರವನ್ನು ತಾಯಿಯ ಹಕ್ಕನ್ನು ಕಸಿದು ಅವಳ ಮಗುವನ್ನು ಕೊಲೆಗೈದು ಅವಳ ಹೃದಯವನ್ನು ತಬ್ಬಲಿಗೊಳಿಸಿದೆ.
ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ರ ತಂದೆಯನ್ನು ಸ್ಮರಿಸುತ್ತಾ ನಾನು ಒಂದು ವೇಳೆ ಅಂಬೇಡ್ಕರ್ ತಂದೆಗೆ ಭೀಮ್‌ರಾವ್ ಎಂಬ ಗಂಡುಮಗುವಿನ ಜಾಗದಲ್ಲಿ ಅಕಸ್ಮಾತ್ ಹೆಣ್ಣು ಮಗುವೊಂದು ಜನಿಸಿದ್ದರೂ ಕೂಡ ಅವರು ಅದನ್ನು ನಿಜವಾಗಿ ಯಾವ ಭೇದವನ್ನು ಮಾಡದೆ ಮನುಕುಲಕ್ಕೆ ವರವಾಗುವ ರೀತಿಯಲ್ಲೇ ಪ್ರೀತಿಯಿಂದ ಬೆಳೆಸುತ್ತಿದ್ದರು ಎಂಬ ಅನುಭೂತಿಯನ್ನು ನನಗೆ ಇಲ್ಲಿ ಮುಖ್ಯವಾಗಿ ಹೇಳಬೆಕೆನಿಸಿತು.ಭೀಮ್‌ರಾವ್ ಎಂಬ ಹುಡುಗ ಮುಂದೆ ತನ್ನ ಸ್ವ ಸಾಮರ್ಥ್ಯದಿಂದಲೇ-ಕಠಿಣ ಪರಿಶ್ರಮದಿಂದಲೇ ಎಲ್ಲ ಅಧ್ಯಯನಗಳಲ್ಲೂ ಪಾರಂಗತನಾಗಿ ಭಾರತದ-ಪಾಶ್ಚಾತ್ಯ ಸಂಸ್ಕೃತಿಯ ಭಾಷೆ, ಪಾಂಡಿತ್ಯ ಎಲ್ಲವನ್ನೂ ಅರಗಿಸಿ ಕುಡಿದು ಕಟ್ಟ ಕಡೆಗೆ ತನ್ನನ್ನು ಗುರುವಾಗಿ ಸಲಹಿ ಕಣ್ಬೆಳಕು ತಂದ ಪಾಶ್ಚಾತ್ಯ ಪ್ರೊಫೆಸರ್ ಅಂಬೇಡ್ಕರ್‌ರವರ ಸರ್‌ನೇಮ್‌ನ್ನೇ ತನ್ನ ಹುಟ್ಟು ಹೆಸರಿನ ಮುಂದೆ ಗೌರವದಲ್ಲಿ ಇರಿಸಿಕೊಂಡು ತಮ್ಮ ಹೆಸರಿನಲ್ಲಿ ಆತ್ಮಗೌರವವನ್ನು ಕಂಡರು.
ಹಿಂದೂ ಧರ್ಮದ ಚಾತುವರ್ಣದ ಜಾತಿ ಭಾವನೆಯ ಅಸ್ಪಶತಾ ಆರೋಪದಿಂದ ರೋಸಿ ಹೋಗಿ ಅದಕ್ಕೆ ಅವರದೇ ಆದ ಪ್ರತಿಭಟನೆಯಂತೆ ಮಾನವತೆಯ ಧರ್ಮ ನನಗೆ ಬೇಕಾಗಿರುವುದು ಎಂದು ಲೋಕಕ್ಕೆ ಸಾರಲು ಬುದ್ಧನ ಮಾರ್ಗವನ್ನು ಅನುಸರಿಸಿ ಆ ಧರ್ಮದ ಗುರುತಿನಲ್ಲಿಯೇ ಸಾಯಲು ಇಚ್ಛಿಸಿದ್ದು ಅಂಬೇಡ್ಕರ್ ಜೀವನದ ಅಸಹಾಯಕತೆಯ ಪ್ರಧಾನ ಅಂಶ. ಎಂದರೆ ಧರ್ಮ ಭಾವನೆಯನ್ನು ಕೆರಳಿಸುವಲ್ಲಿ ಸೀಮಿತವಾದರೆ ಮಾನವತೆಯನ್ನು ಪ್ರಕಾಶಿಸದಿದ್ದರೆ ಅದು ನಿಂತ ನೀರು ಎಂದು ಲಿಟರರಿ ಆಗಿಯೂ ಅಂಬೇಡ್ಕರ್ ಪ್ರಪಂಚಕ್ಕೆ ಸಾರಿದರು. ಇದು ಯಾವುದೇ ಮತಾಂತರಕ್ಕೆ ಸೀಮಿತವಾಗಿಸುವ ಹೆಸರಿನ ಬಳುವಳಿಯಲ್ಲ. ಭೌದ್ಧ ಧರ್ಮ ಮಾನವತೆಯನ್ನು ಅಸ್ಪಶತೆಯ ಹಂಗಿಲ್ಲದೆ ಉಣಿಸುತ್ತದೆ ಎಂಬ ಸ್ವಾನುಭವದ ವಿಪಶ್ಯನ ಮಾರ್ಗ ಮಾತ್ರ.
ಇಲ್ಲಿ ಮತ್ತೆ ಇದೀಗ ತನ್ನ ನಿಷ್ಪಾಪಿ ಹಸುಗೂಸನ್ನು ಅದು ಹೆಣ್ಣು ಮಗು ಎಂಬ ಒಂದೇ ಕಾರಣಕ್ಕಾಗಿ ಮಾತ್ರ ಕಳೆದುಕೊಂಡಿರುವ ನತದೃಷ್ಟ ತಾಯಿ ರೇಷ್ಮಾಬಾನು ನೆನಪಾಗುತ್ತಾಳೆ, ಎಲ್ಲ ದೌರ್ಜನ್ಯಕ್ಕೆ ಒಳಗಾದ ದಲಿತತನಕ್ಕೆ ಪ್ರತೀಕವಾಗಿ. ಅವಳ ಕಣ್ಣ ಕಂಬನಿಯ ಅಸಹಾಯಕತೆಯಲ್ಲಿ ಇಂದು ಇಂತಹ ಮಾನವತೆಯ ಕಗ್ಗೊಲೆಯನ್ನೆಲ್ಲ ಬುಡ ಸಮೇತ ಕಿತ್ತು ಹಾಕುವಂತಹ ಮಾನವತೆಯ ಸೆಲೆ ಧೈರ್ಯ ಮತ್ತೇ ಹುಟ್ಟಿ ಬರಬೇಕಿದೆ. ಆ ಹಸಿ ಬಾಣಂತಿಯ ಎದೆಯಿಂದ ವ್ಯರ್ಥವಾಗಿ ಹರಿದು ಹೋಗುತ್ತಿರುವ ಹಾಲು, ರೋದಿಸುತ್ತಿರುವ ರೋದನ ಇನ್ನೊಮ್ಮೆ ಯಾವ ತಾಯಿಗೂ ಸಂಭವಿಸದಂತೆ ಎಲ್ಲ ದುಷ್ಟತನದ ವಿರುದ್ಧ ಭೂಮಿ ಕಂಪಿಸುತ್ತಿರಲಿ..

ಅಮೃತವಾಹಿನಿಯೊಂದು ಹರಿಯುತಿದೆ
ಮಾನವನ ಎದೆಯಿಂದ ಎದೆಗೆ ಸತತ
ಗ್ರೀಷ್ಮಗಳು ನೂರಾರು ಉರಿಸಿದರೂ
ಆರದಿದು ಸುತ್ತ ಮುತ್ತಲೂ ಮರಳು ಮೇಲೆ ಪಾಚಿ
ಮುತ್ತಿಕೊಂಡರೂ ಲುಕ್ತವಾಗದು ಈ ಅಮೃತಧುನಿ
ಏನನೋ ಕಾಯುತಿದೆ ಗುಪ್ತವಾಗಿ

ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಹೊಳೆಯು
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗ
ಬಂದೀತು ಸ್ವದೆಯ ಮಳೆ ತುಂಬೀತು ಎದೆಯ ಹೊಳೆ
ಬಂದೇ ಬರಬೇಕಯ್ಯೋ ಬಂದೇ ತೀರಲು ಬೇಕು
ಈ ಬಾಳಿಗಾಮಹಾಪೂರ...
                             -ಗೋಪಾಲಕೃಷ್ಣ ಅಡಿಗ

Advertisement

0 comments:

Post a Comment

 
Top