PLEASE LOGIN TO KANNADANET.COM FOR REGULAR NEWS-UPDATES


    
 ;ಬೆಚ್ಚಿ ಬಿದ್ದ ಜನತೆ

ಹೊಸದಿಲ್ಲಿ,ಎ.11:ಇಂಡೋನೇಶ್ಯದ ಸುಮತ್ರಾ ದ್ವೀಪದಲ್ಲಿ ಉಂಟಾಗಿರುವ ಭೂಕಂಪ ಭಾರತದಲ್ಲೂ ತನ್ನ ಪರಿಣಾಮವನ್ನು ಬೀರಿದ್ದು, ದೇಶಾದ್ಯಂತ ಅಲ್ಲಲ್ಲಿ ಲಘುಕಂಪನ ಕಂಡು ಬಂದಿದೆ. ಈ ಅನಿರೀಕ್ಷಿತ ಕಂಪನ ದೇಶದ ಜನರನ್ನು ಬೆಚ್ಚಿ ಬೀಳಿಸಿದ್ದು, ಸುನಾಮಿಯ ವದಂತಿ ಹರಡಲು ಕಾರಣವಾಯಿತು. ಬೆಂಗಳೂರು ಕೊಲ್ಕತಾ, ಚೆನ್ನೈ, ಮುಂಬೈ ಮೊದಲಾದೆಡೆ ಲಘುಕಂಪನ ಕಾಣಿಸಿಕೊಂಡಿತು.ಉತ್ತರ ಸುಮಾತ್ರದ ಪಶ್ಚಿಮದ ಕಡಲಿನಲ್ಲಿ 8.9ತೀವ್ರತೆಯ ಭೂಕಂಪವೊಂದು ಸಂಭವಿಸಿದ ಬಳಿಕ ನಿಕೋಬಾರ್ ದ್ವೀಪದಲ್ಲಿ ಸುನಾಮಿಯ ಮುನ್ನೆಚ್ಚರಿಕೆ ಯನ್ನು ಭಾರತ ನೀಡಿದೆಯಲ್ಲದೆ,ತಮಿಳುನಾಡು ಹಾಗೂ ಆಂಧ್ರಪ್ರದೇಶ ಕರಾವಳಿಗಳಿಗೆ ಅಪಾಯದ ಮುನ್ನೆಚ್ಚರಿಕೆ ನೀಡಿದೆ.ತಾವು ನಿಕೋಬಾರ್ ದ್ವೀಪಕ್ಕೆ ಸುನಾಮಿಯ ಮುನ್ನೆ ಚ್ಚರಿಕೆ ನೀಡಿದ್ದೇವೆಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಶೈಲೇಶ್ ನಾಯಕ್ ತಿಳಿಸಿದ್ದಾರೆ.ಭಾರತೀಯ ಕಾಲಮಾನ ಅಪರಾಹ್ಣ 2:08ಕ್ಕೆ ಭೂಕಂಪವು ಪ್ರದೇಶವನ್ನು ನಡುಗಿಸಿದ ಬಳಿಕ ಅದರಿಂದುಂಟಾದ ಅಲೆಗಳು ನಿಕೋಬಾರ್, ಕೊಮಾತ್ರಾ ಹಾಗೂ ಕಟ್ಚಲ್‌ಗಳ ತೀರವನ್ನು ಅಪ್ಪಳಿಸುವುದು ಕಂಡುಬಂದಿತೆಂದು ಭಾರತೀಯ ಸುನಾಮಿ ಮುನ್ನೆಚ್ಚರಿಕೆ ಕೇಂದ್ರವು ಹೊರಡಿಸಿದ ಸೂಚನೆಯೊಂದು ಹೇಳಿದೆ.
ಅದು, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಅಂಡಮಾನ್‌ಗಳ ತೀರಪ್ರದೇಶಗಳನ್ನು ಅಪ್ಪಳಿಸಲಿರುವ ಮೊದಲ ಸುನಾಮಿ ಅಲೆಗಳ ಕುರಿತು ಮುನ್ಸೂಚನೆಯನ್ನೂ ನೀಡಿದೆ.ಚೆನ್ನೈ ಹಾಗೂ ಹತ್ತಿರದ ಪ್ರದೇಶಗಳಲ್ಲಿ ಪ್ರಬಲ ಕಂಪನದ ಅನುಭವ ಉಂಟಾಗಿದ್ದು,ಎತ್ತರದ ಕಟ್ಟಡಗಳಲ್ಲಿ ವಾಸಿಸುವ ಹಾಗೂ ಕೆಲಸ ಮಾಡುವ ಜನರು ಭಯಭೀತರಾಗಿ ತೆರೆದ ಬಯಲಿಗೆ ಓಡಿದರು.ಕೋಲ್ಕತಾ,ನೆರೆಯ 24 ಪರಗಣ ಹಾಗೂ ಉತ್ತರದ ಸಿಲಿಗುರಿಗಳಲ್ಲೂ ಭೂಕಂಪನವಾಗಿದೆ. ಕಿಟಕಿ, ಬಾಗಿಲುಗಳು ಹೊಡೆದುಕೊಳ್ಳತೊಡಗಿದಾಗ ಪಾರ್ಕ್‌ಸ್ಟ್ರೀಟ್ ಹಾಗೂ ಕೆಳಪೇಟೆಯ ಬಿಬಿಡಿ ಬಾಗ್‌ನ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಬೀದಿಗೆ ಓಡಿದರು.ಪಾರ್ಕ್ ಸ್ಟ್ರೀಟ್‌ನ ಕೆಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆಯೆಂದು ವರದಿಗಳು ತಿಳಿಸಿವೆ.
ಮಹಾನಗರಿಗಳ ಮೆಟ್ರೋ ರೈಲು ಸಂಚಾರವನ್ನು ಅಪರಾಹ್ಣ 2:42ರ ಬಳಿಕ ನಿಲ್ಲಿಸಲಾಯಿತು ಹಾಗೂ ಪ್ರಯಾಣಿಕರಿಗೆ ನಿಲ್ದಾಣಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.ಇಂಡೋನೇಶ್ಯ, ಭಾರತ,ಶ್ರೀಲಂಕಾ,ಆಸ್ಟ್ರೇಲಿಯ, ಮ್ಯಾನ್ಮಾರ್, ಥಾಯ್ಲೆಂಡ್,ಮಾಲ್ಡೀವ್ಸ್ ಸಹಿತ ಇತರ ಹಿಂದೂ ಮಹಾಸಾಗರದ ದ್ವೀಪಗಳು,ಮಲೇಶ್ಯ, ಪಾಕಿಸ್ತಾನ, ಸೊಮಾಲಿಯ, ಒಮಾನ್,ಇರಾಕ್,ಬಾಂಗ್ಲಾದೇಶ,ಕೆನ್ಯಾ, ದಕ್ಷಿಣ ಆಫ್ರಿಕ ಹಾಗೂ ಸಿಂಗಾಪುರಗಳಲ್ಲಿ ಸುನಾಮಿ ನಿಗಾ ಜಾರಿಯಲ್ಲಿದೆಯೆಂದು ಹವಾಯಿಯಲ್ಲಿನ ಪೆಸಿಫಿಕ್ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ. ಸಾಗರ ತಳದ 33 ಕಿ.ಮೀ. ಆಳದಲ್ಲಿ ಪ್ರಬಲ ಭೂಕಂಪ ಕೇಂದ್ರೀಕೃತವಾಗಿತ್ತೆಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಹೇಳಿದೆ.2004ರ ಡಿ.26ರಂದು 9.1 ತೀವ್ರತೆಯ ಭೂಕಂಪವೊಂದು ಉಂಟಾಗಿ ಸಂಭವಿಸಿದ ಸುನಾಮಿಯಲ್ಲಿ ಸುಮಾರು 2.30 ಲಕ್ಷ ಜನರು ಅಸುನೀಗಿದ್ದರು.
ಮುಂಬೈ ಸಮುದ್ರದಲ್ಲಿ ಭೂಕಂಪ
ಹೊಸದಿಲ್ಲಿ,ಎ.11:ಮುಂಬೈಯಿಂದ 155 ಕಿ.ಮೀ. ದೂರದ ಅರಬಿ ಸಮುದ್ರದೊಳಗೆ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ದಾಖಲಾಗಿದೆ.ಅರಬಿ ಸಮುದ್ರದಲ್ಲಿ 18.6 ಡಿಗ್ರಿ ಅಕ್ಷಾಂಶ ಹಾಗೂ 71.3 ಡಿಗ್ರಿ ರೇಖಾಂಶದಲ್ಲಿ ಈ ಕಂಪನ ಉಂಟಾಗಿದೆಯೆಂದು ಹವಾಮಾನ ಇಲಾಖೆಯ ನಿರ್ದೇಶಕ ರಾಜೀವ ನಾಯ್ಕಿ ತಿಳಿಸಿದ್ದಾರೆ.ಮುಂಬೈಯಿಂದ 155 ಕಿ.ಮೀ.ದೂರದಲ್ಲಿ ಭೂಕಂಪದ ಕೇಂದ್ರವಿತ್ತು. ಕಂಪನವು ಮಧ್ಯಾಹ್ನ 12:31ರ ವೇಳೆ ಅನುಭವಕ್ಕೆ ಬಂತೆಂದು ಅವರು ಹೇಳಿದ್ದಾರೆ.ಉತ್ತರ ಮುಂಬೈಯ ಕೆಲವು ಭಾಗಗಳಲ್ಲೂ ಭೂಕಂಪ ಉಂಟಾಗಿದೆಯೆಂದು ವರದಿಯಾಗಿದ್ದರೂ, ಹವಾಮಾನ ಇಲಾಖೆ ಅದನ್ನು ಈತನಕ ದೃಢಪಡಿಸಿಲ್ಲ.
ದಕ್ಷಿಣ ಭಾರತದಲ್ಲಿ ಕಂಪನ
ಚೆನ್ನೈ:ಇಂಡೋನೇಶ್ಯದಲ್ಲಿ 8.9 ತೀವ್ರತೆಯ ಭೂಕಂಪ ಸಂಭವಿಸಿದ ಬಳಿಕ ಚೆನ್ನೈ,ಮಂಗಳೂರು, ಬೆಂಗಳೂರು, ತಿರುವನಂತಪುರ ಹಾಗೂ ದಕ್ಷಿಣ ಭಾರತದ ಇತರ ಕೆಲವು ನಗರಗಳಲ್ಲೂ ಕಂಪನದ ಅನುಭವವಾಗಿದೆ.ಚೆನ್ನೈಯ ಮರಿನಾ ಕರಾವಳಿ ಸಹಿತ ತಮಿಳುನಾಡು,ಆಂಧ್ರಪ್ರದೇಶ ಹಾಗೂ ನಿಕೋಬಾರ್ ದ್ವೀಪಗಳ ಕರಾವಳಿಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.ತಕ್ಷಣಕ್ಕೆ ಯಾವುದೇ ನಾಶ ನಷ್ಟಗಳ ವರದಿ ಬಂದಿಲ್ಲ.
ಈಶಾನ್ಯ ಭಾರತದಲ್ಲಿ ನಡುಕ
ಕೋಲ್ಕತಾ ಹಾಗೂ ನೆರೆಯ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. 24 ಪರಗಣ ಹಾಗೂ ಸಿಲಿಗುರಿಗಳಲ್ಲೂ ಭೂಮಿ ನಡುಗಿದೆ.ಪಾರ್ಕ್ ಸ್ಟ್ರೀಡ್‌ನಲ್ಲಿ ಕೆಲವು ಕಟ್ಟಡಗಳು ಬಿರುಕು ಬಿಟ್ಟಿದ್ದು, ಅಪರಾಹ್ನ 2:42ರ ಬಳಿಕ ಮೆಟ್ರೋ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಮೀನುಗಾರಿಕೆಗೆ ತೆರಳದಿರಿ: ಡಿವಿ 
ಹೊಸದಿಲ್ಲಿ,ಎ.11:ಸುನಾಮಿ ಹಾಗೂ ಭೂಕಂಪನ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಪ್ರದೇಶದ ಮೀನುಗಾರರಿಗೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳದಂತೆ ಅಗತ್ಯ ಮುನ್ನಚ್ಚರಿಕೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ ಪ್ರದೇಶದ ಜನರಿಗೆ ಎತ್ತರದ ಪ್ರದೇಶಕ್ಕೆ ತೆರಳಲು ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತಗಳಿಗೂ ಕೂಡ ಮುನ್ನೆಚ್ಚರಿಕೆ ಕೈಗೊಳ್ಳಲು ಆದೇಶಿಸಲಾಗಿದೆ ಎಂದರು.ಭೂಕಂಪನದ ತೀವ್ರತೆ ರಾಜ್ಯದಲ್ಲಿ ಬಹಳ ಕಡಿಮೆ ಇದ್ದು, ರಾಜ್ಯ ಸರಕಾರ ಭೂಕಂಪನವನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿದೆ. ನಾಗರಿಕರು ಯಾವುದೇ ಸಂದರ್ಭದಲ್ಲಿಯೂ ಆತಂಕಪಡುವ ಅಗತ್ಯವಿಲ್ಲ ಎಂದು ಸದಾನಂದ ಗೌಡ ಇದೇ ವೇಳೆ ಆಭಯ ನೀಡಿದರು

Advertisement

0 comments:

Post a Comment

 
Top