PLEASE LOGIN TO KANNADANET.COM FOR REGULAR NEWS-UPDATES


 ನಿವೃತ್ತ ನ್ಯಾ.ಮೂ. ಎಚ್.ಸುರೇಶ್

ಹೊಸದಿಲ್ಲಿ, ಎ.11:ಗುಜರಾತ್ ನರಮೇಧ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ವಿಶೇಷ ತನಿಖಾ ತಂಡ (ಸಿಟ್)ದ ಮುಖ್ಯಸ್ಥ ಆರ್.ಕೆ. ರಾಘವನ್ ಸಲ್ಲಿಸಿರುವ ಪ್ರಕರಣದ ತನಿಖೆಯ ಅಂತಿಮ ವರದಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ವಿರುದ್ಧದ ಸಾಕ್ಷಗಳನ್ನು ಕಡೆಗಣಿಸಿದ್ದಾರೆ ಎಂದು 2002ರ ನರಮೇಧದ ಕುರಿತು ಈ ಹಿಂದೆ ತನಿಖೆ ನಡೆಸಿರುವ ನಿವೃತ್ತ ನ್ಯಾಯಾಧೀಶ ಎಚ್ ಸುರೇಶ್ ಆಪಾದಿಸಿದ್ದಾರೆ. 2002 ಫೆಬ್ರವರಿ 28ರಂದು ಗುಜರಾತ್ ನರಮೇಧದ ಹಿನ್ನೆಲೆಯಲ್ಲಿ, ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಹತ್ಯೆಗೀಡಾಗಿರುವ ಕಾಂಗ್ರೆಸ್ ಸಂಸದ ಇಹ್ಸಾನ್ ಜಾಫ್ರಿಯ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಮೋದಿ ಮತ್ತು ಇತರ 57 ಆರೋಪಿಗಳ ವಿರುದ್ಧ ಸಿಟ್ ಸಾಕ್ಷಗಳನ್ನು ಪತ್ತೆ ಹಚ್ಚಿಲ್ಲ ಎಂದು ನ್ಯಾಯಾಲಯ ಸೋಮವಾರ ಅಭಿಪ್ರಾಯ ಪಟ್ಟಿದೆ. ಗುಜರಾತ್ ನರಮೇಧದಲ್ಲಿ ಮೋದಿ ಮತ್ತು ಇತರರು ಸಂಚುಕೋರರು ಎಂದು ಝಕಿಯಾ ಜಾಫ್ರಿ ತನ್ನ ದೂರಿನಲ್ಲಿ ಆಪಾದಿಸಿದ್ದರು.
2002ರ ನರಮೇಧದ ಬಳಿಕ ತಕ್ಷಣಕ್ಕೆ ನಡೆದ ನಾಗರಿಕರ ಸತ್ಯಶೋಧನಾ ಸಮಿತಿಯಲ್ಲಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ಎಚ್ ಸುರೇಶ್ ರಾಜ್ಯಾದ್ಯಂತ ಸುತ್ತಾಡಿ ಕೋಮು ಹಿಂಸಾಚಾರಕ್ಕೆ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಿದ್ದರು. ಗಲಭೆಕೋರರನ್ನು ಮುಕ್ತವಾಗಿ ಬಿಡಲು ಮುಖ್ಯಮಂತ್ರಿ ನರೇಂದ್ರ ಮೋದಿ ಪೊಲೀಸರಿಗೆ ನಿರ್ದೇಶನ ನೀಡಿದ್ದರು ಎಂದು ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ತನ್ನ ಸಮಿತಿಯ ಮುಂದೆ ತಿಳಿಸಿದ್ದರು ಎಂದು ನ್ಯಾಯಮೂರ್ತಿ ಸುರೇಶ್ ಹೇಳಿದ್ದಾರೆ. ಆದರೆ ಹರೇನ್ ಪಾಂಡ್ಯರ ಹೇಳಿಕೆಯನ್ನು ಸಿಟ್ ಕಡೆಗಣಿಸಿದೆ ಎಂದು ಅವರು ಆಪಾದಿಸಿದ್ದಾರೆ.
ಹರೇನ್ ಪಾಂಡ್ಯರ ಹೇಳಿಕೆಯನ್ನು ಸಿಟ್ ಪರಿಗಣನೆಗೆ ತೆಗೆದುಕೊಂಡಿದೆ. ಆದರೂ ರಾಘವನ್ ನೇತೃತ್ವದ ತನಿಖಾ ಸಮಿತಿಯು ಈ ಹೇಳಿಕೆಯನ್ನು ಕಡೆಗಣಿಸಿ, ತನಿಖೆಯ ಮುಕ್ತಾಯ ವರದಿಯಲ್ಲಿ, ಮೋದಿಯ ವಿರುದ್ಧ ಸಾಕ್ಷಗಳಿಲ್ಲ ಎಂದು ಹೇಳಿದೆ. ‘‘ಅದನ್ನು ಪರಿಗಣನೆಗೆ ತೆಗೆದುಕೊಂಡಿರುವುದಾಗಿ ಅವರು (ರಾಘವನ್) ಹೇಳಿದ್ದಾರೆ. ಅದನ್ನು ಅವರು ಪರಿಗಣನೆಗೆ ತೆಗೆದುಕೊಂಡಿದ್ದಲ್ಲಿ, ಇತರ ಯಾವ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಇತರ ಸಂದರ್ಭಗಳ ಕುರಿತ ಪ್ರಸ್ತಾಪ ಎಲ್ಲಿದೆ? ಉದಾಹರಣೆಗೆ, ಇಬ್ಬರು ಸಚಿವರು ಕುಳಿತಿದ್ದ ಪೊಲೀಸ್ ಕಂಟ್ರೋಲ್ ರೂಂಗೆ ಜಾಫ್ರಿ ಪದೇಪದೇ ದೂರವಾಣಿ ಕರೆಗಳನ್ನು ಮಾಡಿದ್ದರು.
ಆ ಸಚಿವರು ಅಲ್ಲಿ ಯಾಕಿದ್ದರು? ಅವರು ಎಲ್ಲ ಕರೆಗಳನ್ನು ನಿರ್ಲಕ್ಷಿಸಿದ್ದರು. ಜಾಫ್ರಿ ನರೇಂದ್ರ ಮೋದಿಯೊಂದಿಗೆ ನೇರವಾಗಿ ಮಾತನಾಡಿದ್ದುದನ್ನು ಮತ್ತು ಅವರಿಗೆ ಸಹಾಯ ಮಾಡುವುದಿಲ್ಲ ಎಂದು ಮೋದಿ ಹೇಳಿರಬಹುದಾದುದನ್ನು ನೀವು ಜಾಫ್ರಿಯ ಪತ್ನಿಯ ಬಳಿ ಕೇಳಿದರೂ ಹೇಳುತ್ತಾರೆ. ಇಡೀ ಘಟನೆಯ ಹಿಂದೆ ಮೋದಿ ಇದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷವಾಗಿದೆ. ಆದರೂ, ಅವರ ವಿರುದ್ಧ ಸಾಕ್ಷವಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಆಶ್ಚರ್ಯವನ್ನುಂಟು ಮಾಡಿದೆ’’ ಎಂದು ನ್ಯಾಯಮೂರ್ತಿ ಸುರೇಶ್ ಹೇಳಿದ್ದಾರೆ.

Advertisement

0 comments:

Post a Comment

 
Top