ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿರುವುದರಿಂದ ಅವರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲು ಮಾಡುವಂತಿಲ್ಲ, ಬದಲಿಗೆ ಹೊಸ ಸಾಲ ನೀಡಲು ಅಗತ್ಯ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಮತ್ತು ಜಲಸಂಪನ್ಮೂಲ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಿರೇಹಳ್ಳ ಯೋಜನೆಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಅಡಿ ಶಿರೂರು, ಮುತ್ತಾಳ, ವೀರಾಪುರ ಮತ್ತು ಮುದ್ಲಾಪುರ ಗ್ರಾಮದವರಿಗೆ ಹಕ್ಕುಪತ್ರ ಮತ್ತು ಪರಿಹಾರ ಧನ ವಿತರಣೆಗಾಗಿ ಬುಧವಾರ ಯಲಬುರ್ಗಾ ತಾಲೂಕು ಶಿರೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ, ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉದ್ಯೋಗಖಾತ್ರಿಯಲ್ಲಿ ಕೆರೆ ಹೂಳೆತ್ತಿಸಿ : ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು ೧೫ ಕೋಟಿ ರೂ. ಅನುದಾನ ಲಭ್ಯವಿದ್ದು, ಈ ಅನುದಾನದಲ್ಲಿ ಕೆರೆಗಳ ಹೂಳೆತ್ತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ಮುಂಬರುವ ಮಳೆಗಾಲದಲ್ಲಿ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಭರ್ತಿಯಾಗಲಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಅಲ್ಲದೆ, ಅಂತರ್ಜಲ ಮಟ್ಟವನ್ನು ಸಹ ಹೆಚ್ಚಿಸಲು ಪೂರಕವಾಗಲಿದೆ. ಆದಷ್ಟು ಶೀಘ್ರ ಈ ಕಾರ್ಯ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಕೇಂದ್ರಸ್ಥಾನ ಬಿಡುವಂತಿಲ್ಲ : ಬರಪೀಡಿತ ಜಿಲ್ಲೆಗಳ ಎಲ್ಲ ಇಲಾಖೆಗಳ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರಸ್ಥಾನ ಬಿಟ್ಟು ತೆರಳುವಂತಿಲ್ಲ. ಯಾವುದೇ ಕಾರಣಕ್ಕೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಬಾರದು. ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಸಂಪರ್ಕಕ್ಕೆ ಸಿಗುವಂತಿರಬೇಕು. ಒಂದು ವೇಳೆ ಈ ಕುರಿತಂತೆ ಯಾವುದೇ ಜನಪ್ರತಿನಿಧಿಗಳಿಂದ ದೂರು ಬಂದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ಬರ ಪರಿಸ್ಥಿತಿ ತಿಳಿಯಾಗುವವರೆಗೂ ವಿಶ್ರಾಂತಿ ಬಯಸಬೇಡಿ, ಪರಿಸ್ಥಿತಿ ಸುಧಾರಣೆಯಾಗುವವರೆಗೆ ಜನರೊಂದಿಗೆ ಬೆರೆತು, ಅವರ ಸಂಕಷ್ಟಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ವೈಪಲ್ಯದಿಂದ ಸುಮಾರು ೨೦೦ ಕೋಟಿ ರೂ.ಗಳ ಅಂದಾಜು ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಸುಮಾರು ೩. ೨೫ ಲಕ್ಷ ಜಾನುವಾರುಗಳಿದ್ದು, ಸದ್ಯ ೧೨ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ. ಸದ್ಯ ಈ ಗೋಶಾಲೆಗಳಲ್ಲಿ ಒಟ್ಟು ೫೦೦೦ ಜಾನುವಾರುಗಳಿವೆ. ಶಾಸಕರು ಸೂಚಿಸುವ ಸ್ಥಳದಲ್ಲಿ ಇನ್ನಷ್ಟು ಗೋಶಾಲೆ ಪ್ರಾರಂಭಕ್ಕೆ ಜಿಲ್ಲಾಡಳಿತ ಸಿದ್ಧವಿದೆ. ಜಿಲ್ಲೆಯಲ್ಲಿ ೪೦೦ ಟನ್ ಮೇವು ಸಂಗ್ರಹಿಸಲಾಗಿದ್ದು, ಸದ್ಯ ಭತ್ತದ ಬೆಳೆ ಕಟಾವು ನಡೆಯುತ್ತಿರುವುದರಿಂದ ಇನ್ನಷ್ಟು ಮೇವು ಸಂಗ್ರಹ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು ೧೦೬ ಹೊಸ ಕೊಳವೆಬಾವಿಗಳನ್ನು ಕೊರೆಯಿಸಲಾಗಿದ್ದು, ಕುಡಿಯುವ ನೀರಿನ ೩೫೫ ಕಾಮಗಾರಿಗಳಿಗೆ ೬. ೪೮ ಕೋಟಿ ರೂ. ಕ್ರಿಯಾ ಯೋಜನೆ ಮಾಡಲಾಗಿದೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಕುಡಿಯುವ ನೀರಿನ ಕಾಮಗಾರಿಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಜಿಲ್ಲೆಯಲ್ಲಿ ಸದ್ಯ ೩. ೨೦ ಕೋಟಿ ರೂ. ಹಣದ ಲಭ್ಯತೆ ಇದ್ದು, ಇನ್ನೂ ೭. ೫ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮಾತನಾಡಿ, ೨೦೧೧-೧೨ ನೇ ಸಾಲಿನ ಉದ್ಯೋಗಖಾತ್ರಿ ಯೋಜನೆಯಡಿ ಸುಮಾರು ೧೮ ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿ, ೨೦ ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ೭೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ ೪೮ ಕೋಟಿ ರೂ. ಅನುದಾನ ಖರ್ಚಾಗಿದೆ ಎಂದರು.
ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಸಂಸದ ಶಿವರಾಮಗೌಡ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಶಾಸಕರುಗಳಾದ ಕರಡಿ ಸಂಗಣ್ಣ, ಅಮರೇಗೌಡ ಪಾಟೀಲ್ ಬಯ್ಯಾಪುರ, ಈಶಣ್ಣ ಗುಳಗಣ್ಣವರ್, ಪರಣ್ಣ ಮುನವಳ್ಳಿ, ಶಿವರಾಜ್ ಎಸ್ ತಂಗಡಗಿ, ಹಾಲಪ್ಪ ಆಚಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆ ಸೀತಾ ಹಲಗೇರಿ ಸೇರಿದಂತೆ ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಕೊಪ್ಪಳ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment