PLEASE LOGIN TO KANNADANET.COM FOR REGULAR NEWS-UPDATES





"ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾಸಾಗರ ಡಾ. ಸಿ.ಪಿ. ಕೃಷ್ಣಕುಮಾರ್

ಸಿಪಿಕೆ - ಒಂದು ಪರಿಚಯ

"ಸಿಪಿಕೆ ಒಬ್ಬ ಬಹುಶ್ರುತರು. ಅವರ ಭಾಷಾ ಪಾಂಡಿತ್ಯ ಕನ್ನಡ ಇಂಗ್ಲೀಷ್ ಸಂಸ್ಕೃತಗಳದ್ದು. ಹಳಗನ್ನಡ, ನಡುಗನ್ನಡಗಳಲ್ಲಿ ಅವರಿಗೆ ಸಮಾನ ಪ್ರವೇಶ. ಛಂದಸ್ಸು, ಸಾಂಸ್ಕೃತಿಕ ಚರಿತ್ರೆ, ಶಾಸನಶಾಸ್ತ್ರ, ವಿಮರ್ಶೆ, ಭಾಷಾಂತರ, ಜಾನಪದ ಮುಂತಾದ ಸಂಬಂಧಿ ವಿಷಯಗಳಲ್ಲಿ ಏಕಪ್ರಕಾರವಾದ ಪರಿಣಿತಿ, ಜೊತೆಗೆ ಕವಿ. ಈ ಎಲ್ಲದರ ರಸಪಾಕ ಸಿಪಿಕೆ". ಹೌದು, ಇದು ಅಕ್ಷರಶಃ ಸತ್ಯ.
"ಸಿಪಿಕೆ" ಎಂಬ ಮೂರಕ್ಷರ ಮಾತ್ರದಿಂದಲೇ ಕನ್ನಡ ಸಾರಸ್ವತ ಲೋಕದ ಉದ್ದಗಲಕ್ಕೂ ಹೆಸರಾಗಿರುವ ಡಾ. ಸಿ.ಪಿ. ಕೃಷ್ಣಕುಮಾರ್ ಅವರ ಬಗ್ಗೆ ಸಾಹಿತ್ಯ ದಿಗ್ಗಜ ಹಾ.ಮಾ.ನಾ. ಅವರು ಹೇಳಿರುವ ಮೇಲಿನ ಮಾತುಗಳಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಅಂಥ ದೈತ್ಯ ಪ್ರತಿಭೆ ಇವರದು. ನಾಡೋಜ ದೇಜಗೌ ಮಾತಿನಲ್ಲಿ ಹೇಳುವುದಾದರೆ "ಸಿಪಿಕೆಯವರಂಥ ಕವಿಗಳು, ವಿದ್ವಾಂಸರು, ವಿಮರ್ಶಕರು ಜಗತ್ತಿನ ಯಾವ ಭಾಷೆಗಾದರೂ, ಯಾವ ವಿಶ್ವವಿದ್ಯಾನಿಲಯ ಕ್ಕಾದರೂ ಭೂಷಣವಾಗಬಲ್ಲವರು".
೧೯೩೯ ರ ಏಪ್ರಿಲ್ ೮ ರಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಚಿಕ್ಕನಾಯಕನಹಳ್ಳಿಯಲ್ಲಿ ಪುಟ್ಟೇಗೌಡ ಮತ್ತು ಚಿಕ್ಕಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಸಿಪಿಕೆಯವರು ಬಾಲ್ಯದಿಂದಲೂ ಸರಸ್ವತಿ ಪುತ್ರರೇ. ತಂದೆ ಸರ್ಕಾರಿ ಕೆಲಸದಲ್ಲಿದ್ದು ಸರ್ವೇಯರ್ ಆಗಿದ್ದು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಿದ್ದರಿಂದ ಮತ್ತು ತಾಯಿಯ ಅಕಾಲ ಮರಣದಿಂದಾಗಿ ಮಗುವಿನಿಂದಲೂ ಅಜ್ಜಿ ಹಾಗೂ ಸೋದರತ್ತೆಯ ಮಡಿಲಲ್ಲಿ ಬೆಳೆದದ್ದೇ ಹೆಚ್ಚು.
ಗ್ರಾಮೀಣ ಪರಿಸರದ ರೈತ ಕುಟುಂಬದಲ್ಲಿ ಅರಳಿದ ಸಿ.ಪಿ.ಕೆ.ಯವರು ಖಾಸಗಿಯಾಗಿ ಲೋಯರ್ ಸೆಕೆಂಡರಿಯನ್ನೂ, ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ವಿಜ್ಞಾನದ ವಿದ್ಯಾರ್ಥಿಯಾಗಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದರು. ತಂದೆಯಿಂದ ಆಂಗ್ಲ ಭಾಷೆಯಲ್ಲಿ ಆಗಲೇ ಪರಿಣಿತಿ ಸಾಧಿಸಿದ್ದ ಇವರು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೆ ಪಠ್ಯಪುಸ್ತಕದಲ್ಲಿದ್ದ ಇಂಗ್ಲೀಷ್ ಕವನವೊಂದನ್ನು ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿ ಭೇಷ್ ಎನಿಸಿಕೊಂಡಿದ್ದರು. ಶಿವಮೊಗ್ಗದಲ್ಲಿ ಇಂಟರ್ ಮೀಡಿಯಟ್ ಕಾಲೇಜಿಗೆ ಸೇರಿದ ಇವರು ಓದುವಾಗಲೇ ಓದಿನೊಡನೆ ಸಾಹಿತ್ಯದತ್ತ ಆಸಕ್ತಿಯನ್ನು ಬೆಳೆಸಿಕೊಂಡೇ ೧೯೬೦ ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ ಬಿ.ಎ. ಆನರ್ಸ್ ಪದವಿ ಗಳಿಸಿದರು.
ಭಾರತೀಯ ವಿದ್ಯಾಭವನದ ’ಸಂಸ್ಕೃತ ಕೋವಿದ’ ಪದವಿಯನ್ನೂ ಪಡೆದ ಸಿಪಿಕೆ ೧೯೬೧ ರಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಕನ್ನಡ ಎಂ.ಎ. ಪದವಿ ಪಡೆದದ್ದೇ ತಡ ಕಲಿತ ವಿ.ವಿ.ಯಲ್ಲೇ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ೧೯೬೭ ರಲ್ಲಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ೧೯೬೯ ರಲ್ಲಿ ಕನ್ನಡ ವಿಭಾಗದ ಪ್ರವಾಚಕರಾಗಿ, ೧೯೮೯ ರಿಂದ ೧೯೯೧ ರವರೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ಇದೆಲ್ಲದರ ನಡುವೆಯೇ ಸಾಹಿತ್ಯ ಕೃಷಿಯನ್ನೂ ಅವಿರತವಾಗಿ ಮಾಡುತ್ತಾ ಮೈಸೂರು ವಿ.ವಿ.ಯ ಶಿಕ್ಷಣ ಮಂಡಳಿ ಮತ್ತು ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿ ೧೯೯೯ ರಲ್ಲಿ ನಿವೃತ್ತಿ ಹೊಂದಿದರು. ಆನಂತರವೂ ಇವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಸಹ ಕೆಲವು ವರ್ಷಗಳು ಸೇವೆ ಸಲ್ಲಿಸಿ ತಾವು ಅಲಂಕರಿಸಿದ್ದ ಪೀಠದ ಘನತೆಯನ್ನು ಹೆಚ್ಚಿಸಿದ್ದರು.
ಡಾ. ಹಾ.ಮಾ.ನಾ. ರಂಥ ವಿದ್ವಾಂಸರ ಮಾರ್ಗದರ್ಶನದಲ್ಲಿ "ನಾಗವರ್ಮನ ಕರ್ನಾಟಕ ಕಾದಂಬರಿ ಒಂದು ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ" ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ (೧೯೭೮) ಸಂಶೋಧನಾ ಕ್ಷೇತ್ರಕ್ಕೊಂದು ಮಹತ್ತರ ಕಾಣಿಕೆ ನೀಡಿ ಡಾಕ್ಟರೇಟ್ ಪಡೆದ ಸಿಪಿಕೆಯವರು ಬದುಕಿನುದ್ದಕ್ಕೂ ಬರೆಯುತ್ತಲೇ ಬಂದಿದ್ದಾರೆ. ವಿದ್ಯಾರ್ಥಿಜೀವನ ಮತ್ತು ವೃತ್ತಿಜೀವನಗಳೆರಡರಲ್ಲೂ ಕುವೆಂಪು, ದೇಜಗೌ, ಜಿಎಸ್ಸೆಸ್, ಸುಜನಾ, ಹಾಮಾನಾ, ತೀನಂಶ್ರೀ, ಯು.ಆರ್. ಅನಂತಮೂರ್ತಿ ಮುಂತಾದವರ ಗರಡಿಯಲ್ಲಿ ಸಾಹಿತ್ಯದ ತಾಲೀಮು ಮಾಡುತ್ತಲೇ ಸಾಗಿಬಂದ ಸಿಪಿಕೆ ಸಾಹಿತ್ಯ ಶಿಖರವಾಗಿ ರೂಪುಗೊಂಡವರು. ಕನ್ನಡ ಸಾರಸ್ವತ ಲೋಕದಲ್ಲಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸೃಷ್ಠಿಸಿರುವ ಇವರು "ತಾರಾಸಖ" ಕವನ ಸಂಕಲನದ ಮೂಲಕ ೧೯೭೦ ರಲ್ಲಿ ಸಾರಸ್ವತ ಲೋಕ ಪ್ರವೇಶಿಸಿ ಅನಂತಪೃಥ್ವಿ, ಪ್ರಕೃತಿ, ಬೊಗಸೆ, ವರ್ತಮಾನ ಮುಂತಾದ ಕವನ ಸಂಕಲನಗಳು ಸೇರಿದಂತೆ ಕಾವ್ಯದ ವಿವಿಧ ಪ್ರಕಾರಗಳಲ್ಲಿ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿ ತಮ್ಮ ಸೃಜನಶೀಲ ಪ್ರತಿಭೆಯನ್ನು ಮೆರೆಸಿದ್ದಾರೆ. ಕವನ, ಹನಿಗವನ, ವಚನ, ಚುಟುಕು, ಮುಕ್ತಕ, ಖಂಡಕಾವ್ಯ, ಸುನೀತ..... ಹೀಗೆ ಎಲ್ಲದರಲ್ಲೂ ಇವರು ಎತ್ತಿದ ಕೈ! ಮುಕ್ತಕ ಪ್ರಕಾರಕ್ಕೆ ಸುಮಾರು ಮುಕ್ಕಾಲು ಸಾವಿರ ಪದ್ಯಗಳನ್ನು ಕೊಡುಗೆಯಾಗಿ ನೀಡಿರುವ ಇವರು "ಅಂತರತಮ"ದಲ್ಲಿ ಎಂಟುನೂರು ಸೂಕ್ತಿಗಳನ್ನು ಹೆಣೆದಿದ್ದಾರೆ. ಚೋದ್ಯ ಕುಚೋದ್ಯ, ಹನಿಮಿನಿ, ಸಿಪಿಕೆ ಚುಟುಕುಗಳು ಮುಂತಾದ ಇವರ ಹನಿಗವನ ಕೃತಿಗಳು ಕಾವ್ಯಲೋಕಕ್ಕೆ ಹೊಸ ಮಿಂಚನ್ನು ತಂದಿತ್ತಿವೆ. ಆಧುನಿಕ ವಚನಗಳ ರಚನೆಯಲ್ಲೂ ಸಾಕಷ್ಟು ಕೃಷಿಗೈದಿರುವ ಸಿಪಿಕೆಯವರು ವಚನ, ಹನಿಗವನ, ಮುಕ್ತಕ, ಚುಟುಕುಗಳ ಪ್ರಕಾರದಲ್ಲಿ ಸುಮಾರು ನಾಲ್ಕು ಸಾವಿರ ಹನಿಗವಿತೆಗಳನ್ನು ರಚಿಸಿ ಈ ದಿಶೆಯಲ್ಲಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇವರ "ಸುನೀತ ಶತಕ" ದಂತಹ ಖಂಡಕಾವ್ಯ ಕೃತಿಗಳು ಕಾವ್ಯಲೋಕದಲ್ಲಿ ವಿಶೇಷವೆನಿಸಿವೆ.
ಸಿಪಿಕೆಯವರು ಕಾವ್ಯದಲ್ಲೆಂತೋ ಹಾಗೆಯೇ ಸಾಹಿತ್ಯ ವಿಮರ್ಶೆಯಲ್ಲೂ ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ವಿಚಾರ ವಿಮರ್ಶೆ, ಸಂಶೋಧನೆ, ಜಾನಪದ ವಿಷಯಗಳಲ್ಲಿ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದು ತಮ್ಮ ವಸ್ತುನಿಷ್ಟ ದೃಷ್ಟಿಯನ್ನು ಪೂರ್ವಗ್ರಹವಿಲ್ಲದೆ ಇಲ್ಲಿ ದಾಖಲಿಸಿದ್ದಾರೆ. ಪಂಪ, ರನ್ನ, ಜನ್ನ, ನಾಗಚಂದ್ರರ ಕೃತಿಗಳಾದಿಯಾಗಿ ಹಳಗನ್ನಡ ಸಾಹಿತ್ಯವನ್ನು ಅರೆದು ಕುಡಿದಂಥ ಪಾಂಡಿತ್ಯದ ವಿಮರ್ಶೆಯ ಲೇಖನಿ ಇವರದ್ದು. ಕಾವ್ಯಾರಾಧನೆ, ಕಾವ್ಯ ವಿವೇಕ ಇವರ ವಿಮರ್ಶೆಯ ಕೋಲ್ಮಿಂಚುಗಳಾಗಿವೆ. ನೂರಾರು ವಿಮರ್ಶೆ, ಮುನ್ನುಡಿಮಾಲೆ, ಕನ್ನಡ ಕಾವ್ಯ ಹತ್ತು ವರ್ಷ ಕೃತಿಗಳು ಇವರ ವಿಮರ್ಶಾ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಐವತ್ತಕ್ಕೂ ಹೆಚ್ಚು ವಿಮರ್ಶಾ ಕೃತಿಗಳು ಸಿಪಿಕೆಯವರ ಸಾಹಿತ್ಯ ಭಂಡಾರದಲ್ಲಿವೆಯೆಂದರೆ ಇದೇನೂ ಸಾಮಾನ್ಯ ಸಾಧನೆಯಲ್ಲ.
ಸಂಶೋಧನಾ ಕ್ಷೇತ್ರದಲ್ಲಿ ಇವರು ಅಸಾಮಾನ್ಯರೆನಿಸಿದ್ದು ಇವರ "ಶೋಧನೆ" ಯಂಥ ಹಲವು ಹತ್ತು ಕೃತಿಗಳು ಇದನ್ನು ಸಾಕ್ಷೀಕರಿಸುತ್ತವೆ. ಹಾಗೆಯೇ ಗ್ರಂಥ ಸಂಪಾದನೆಯಲ್ಲೂ ಇವರದು ಅನನ್ಯ ಕೊಡುಗೆ. ಅದನ್ನು ಇವರ "ಅರಣ್ಯಪರ್ವ ವೇ ಹೇಳುತ್ತದೆ. ಅಂತೆಯೇ ಅನುವಾದದಲ್ಲೂ ಅಪೂರ್ವ ಸಾಧನೆ ಮಾಡಿರುವ ಸಿಪಿಕೆ ಅವರ ಭಾಷಾಂತರ ಸಾಹಿತ್ಯದ ಸಾಮರ್ಥ್ಯವನ್ನು ಅವರ ಜೈನಕವಿ ವಾದಿರಾಜನ ಯಶೋಧರಚರಿತೆ, ಸಂಸ್ಕೃತ ಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲಾ, ಕನ್ನಡ ಸೌಂದರ್ಯಲಹರಿ, ರಾಮಾಯಣ ಬಾಲಕಾಂಡ ಸಂಗ್ರಹ, ಮಹಾಭಾರತ ಸಂಗ್ರಹ, ಠಾಕೂರರ ವಚನಾಂಜಲಿ..... ಮುಂತಾದ ಕೃತಿಗಳೇ ಸಾರಿ ಹೇಳಬಲ್ಲವು. ಎಲಿಯೆಟ್, ಟಾಲ್‌ಸ್ಟಾಯ್‌ರ ಕೃತಿಗಳನ್ನು ಇವರು ಭಾಷಾಂತರಿಸಿರುವುದಲ್ಲದೆ, ಗ್ರೀಕ್ ನಾಟಕಕಾರರ ಹೆಲೆನ್, ಮೀಡಿಯಾ, ಹಿಪ್ಪೋಲಿಟಸ್ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಿಪಿಕೆಯನ್ನು ಭಾಷಾಂತರ ಸಾಹಿತ್ಯದ ಸಾರ್ವಭೌಮನೆಂದು ಸಾರಸ್ವತ ಲೋಕ ಕರೆಯುವುದುಂಟು.
ಜೀವನ ಚರಿತ್ರೆಗಳ ರಚನೆಯುಲ್ಲೂ ಇವರ ಲೇಖನಿ ಅದ್ವಿತೀಯವೇ ಆಗಿದೆ. ಹಿರಿಯರ ಗೆರೆಗಳು, ಸ್ವಾಮಿ ವಿವೇಕಾನಂದ, ಸಾಕ್ರೆಟಿಸ್, ರತ್ನತ್ರಯ, ಶ್ರೀರಾಮಕೃಷ್ಣ ಮತ್ತು ಯುಗಧರ್ಮ ಕೃತಿಗಳು ಇದನ್ನು ಸಾಬೀತುಪಡಿಸುತ್ತವೆ. ಅಂತೆಯೇ ಅದ್ಭುತ ಪ್ರಬಂಧಕಾರರಾಗಿಯೂ ಸಿಪಿಕೆ ಹೆಸರಾಗಿದ್ದು ಮೆಲುಕು, ಚಿಂತನಬಿಂದು, ಕೋಲ್ಮಿಂಚು, ಬಿಗು-ಲಘು, ದೀಪಸ್ಮಿತ, ಜಾಜಿಮಲ್ಲಿಗೆ, ಹವಳ ಸೇರಿದಂತೆ ಇವರ ಹದಿನೈದಕ್ಕೂ ಹೆಚ್ಚು ಪ್ರಬಂಧ ಕೃತಿಗಳು ಇವರ ಪ್ರಚಂಡ ಪ್ರತಿಭೆಗೆ ಪ್ರಭಾವಳಿ ಇಟ್ಟಿವೆ. ಒಟ್ಟಾರೆ ಸಾಹಿತ್ಯದ ಬಹುಪಾಲು ಎಲ್ಲಾ ಪ್ರಕಾರಗಳನ್ನೂ ತಮ್ಮ ಲೇಖನಿಯಿಂದ ಹಿಡಿದಿಟ್ಟು ಕೃತಿಗಳ ರಾಶಿಯನ್ನು ಕನ್ನಡಮ್ಮನ ಮಡಿಲಿಗೆ ತುಂಬಿರುವ ಡಾ. ಸಿಪಿಕೆಯವರು ನಿಜಕ್ಕೂ ಸಾರಸ್ವತ ಲೋಕದ ಸವ್ಯಸಾಚಿ.
೧೯೬೦ ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಬಿಎಂಶ್ರೀ ಅವರ ರಜತೋತ್ಸವ ಸುವರ್ಣ ಪದಕ, ೧೯೮೮ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ೧೯೯೪ ರಲ್ಲಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಜಾನಪದತಜ್ಞ ಪ್ರಶಸ್ತಿ, ೧೯೯೬ ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ೨೦೦೩ ರಲ್ಲಿ ರಮಣಶ್ರೀ ಪ್ರಶಸ್ತಿ, ಶರಣಶ್ರೀ ಪ್ರಶಸ್ತಿ, ಚಿ.ನ. ಮಂಗಳ ಪ್ರಶಸ್ತಿ, ವಿದ್ವತ್ ಶಿರೋಮಣಿ ಪ್ರಶಸ್ತಿ, ೨೦೦೯ ರಲ್ಲಿ ವಿಶ್ವಮಾನವ ಕುವೆಂಪು ಪ್ರಶಸ್ತಿ, ೨೦೧೦ ರಲ್ಲಿ ಎಚ್.ಎಲ್. ನಾಗೇಗೌಡ ಪ್ರಶಸ್ತಿಗಳು ಸೇರಿದಂತೆ ನಾಡಿನ ನೂರಾರು ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನ-ಗೌರವಗಳು, ಬಿರುದು-ಬಾವಲಿಗಳು ಸಿಪಿಕೆಯವರ ಸಾಧನೆಯ ಕೊರಳನ್ನು ಅಲಂಕರಿಸಿವೆ. ’ಸಾರ್ಥಕ’ ಎಂಬ ಬೃಹತ್ ಅಭಿನಂದನಾ ಗ್ರಂಥ ಕೂಡ ಇವರ ಸಾಹಿತ್ಯ ಕೃಷಿಗೆ ಸಂದಿದೆ. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವಜ್ರಮಹೋತ್ಸವದಲ್ಲಿ ಸಿಪಿಕೆ ಅವರನ್ನು ಸನ್ಮಾನಿಸಿದೆಯಲ್ಲದೆ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನಕ್ಕೂ ಇವರು ಪಾತ್ರರಾಗಿದ್ದಾರೆ. ಇದೀಗ ಇವೆಲ್ಲಕ್ಕೂ ಚಿನ್ನದ ಪ್ರಭಾವಳಿಯಿಟ್ಟಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಕರ್ನಾಟಕದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಪ್ರಸ್ತುತ ಸಾಲಿನ ಪ್ರತಿಷ್ಠಿತ "ನೃಪತುಂಗ ಸಾಹಿತ್ಯ ಪ್ರಶಸ್ತಿ"ಗೆ ಭಾಜನರಾಗಿದ್ದಾರೆ.
ಬಹಳ ಹಿಂದೆಯೇ ಮಹಾಕವಿ ಡಾ. ಪುತಿನ ಹೇಳಿರುವಂತೆ "ಗಟ್ಟಿ ಆಲೋಚನೆಗಳುಳ್ಳ ಅತ್ಯಮೂಲ್ಯವಾದ ಸಾಹಿತ್ಯ ಭಂಡಾರವನ್ನೇ ಕನ್ನಡಕ್ಕೆ ನೀಡಿರುವ ಡಾ. ಸಿಪಿಕೆ ಅವರಂಥವರು ನಮ್ಮೊಡನಿರುವುದು ನಾಡುನುಡಿಯ ಮಹಾಭಾಗ್ಯ. ಈ ಮಹಾಚೇತನಕ್ಕೆ ನಾಡಿನ, ರಾಷ್ಟ್ರದ ಸಾಹಿತ್ಯ ಲೋಕದ ಅತ್ಯುನ್ನತ ಗೌರವಗಳು ದೊರೆಯುವಂತಾಗಲಿ ಎಂಬುದೇ ಜನಕೋಟಿಯ ಹಾರೈಕೆ".

                            ಬನ್ನೂರು ಕೆ. ರಾಜು              ಕೃಪೆ: ಕರವೇ ನಲ್ನುಡಿ

Advertisement

0 comments:

Post a Comment

 
Top