ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿಯ ವಾಸನೆ ಹಿಡಿದ ಅಧಿಕಾರಿಗಳು ದಾಳಿಯ ಮುಂಚೆಯೇ ಜಾಗ ಖಾಲಿ ಮಾಡಿದ್ದರು.
ಬೆಂಗಳೂರು:ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಾದ್ಯಂತ 55ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳು ಮತ್ತು ಏಳು ಸಾರಿಗೆ ತನಿಖಾ ಠಾಣೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ತೀವ್ರ ಶೋಧ ನಡೆಸಿದರು.ಮಧ್ಯಾಹ್ನ ಆರಂಭವಾದ ದಾಳಿ ರಾತ್ರಿಯವರೆಗೂ ಮುಂದುವರಿದಿದ್ದು, ಹೆಚ್ಚಿನ ಅಕ್ರಮ ಪತ್ತೆಯಾಗಿಲ್ಲ.
ಪ್ರಾದೇಶಿಕ ಸಾರಿಗೆ ಕಚೇರಿಗಳು ಮತ್ತು ಸಾರಿಗೆ ತನಿಖಾ ಠಾಣೆಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ಪದೇ ಪದೇ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಎಲ್ಲ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ನಿರ್ಧರಿಸಿದ್ದರು.ಶುಕ್ರವಾರ ಲೋಕಾಯುಕ್ತದ ಎಲ್ಲ ಪೊಲೀಸರನ್ನೂ ಈ ಕಾರ್ಯಾಚರಣೆಗೆ ಇಳಿಸಿದರು.
`ಲೋಕಾಯುಕ್ತದ ಎಸ್‌ಪಿಗಳು,ಡಿವೈಎಸ್‌ಪಿಗಳು ಮತ್ತು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.ಗದಗ ಹಾಗೂ ಬೆಳಗಾವಿಯ ಎರಡು ಕಡೆಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಖಾಸಗಿ ಮಧ್ಯವರ್ತಿಗಳು ಕಾರ್ಯನಿರ್ವಹಿಸುತ್ತಿದ್ದುದು ಪತ್ತೆಯಾಗಿದೆ.ಉಳಿದಂತೆ ಬಹುತೇಕ ಕಡೆಗಳಲ್ಲಿ ಸಣ್ಣಪುಟ್ಟ ಲೋಪಗಳಷ್ಟೇ ಕಂಡುಬಂದಿವೆ`ಎಂದು ಸತ್ಯನಾರಾಯಣ ರಾವ್ ಅವರು ತಿಳಿಸಿದರು.
ಕೆಲವು ಕಡೆಗಳಲ್ಲಿ ಇಲಾಖೆಯ ಹಣಕಾಸು ವಿಭಾಗದಲ್ಲಿ ವಸೂಲಾದ ಮೊತ್ತದಲ್ಲಿ ಕೊರತೆ ಕಂಡುಬಂದಿದೆ.ಇನ್ನು ಕೆಲವೆಡೆ ದಾಖಲಾತಿಗಳ ನಿರ್ವಹಣೆಯಲ್ಲಿ ಲೋಪ ಇರುವುದು ಪತ್ತೆಯಾಗಿದೆ.ಆಡಳಿತಾತ್ಮಕ ಲೋಪಗಳನ್ನೂ ಗುರುತಿಸಲಾಗಿದೆ.ಇಂತಹ ಪ್ರಕರಣಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ,ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ.
0 comments:
Post a Comment