PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,ಮಾ.30: ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣದಲ್ಲಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರೊ.ಬಿ.ಕೃಷ್ಣ ಭಟ್ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿದ ಅವರು, ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಏಕರೂಪ ಸಿಇಟಿ ಪರೀಕ್ಷೆಯನ್ನು ಜಾರಿಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಂಬಿಬಿಎಸ್ ಶಿಕ್ಷಣವನ್ನು ಮುಗಿಸಿರುವ ವೈದ್ಯರು ಒಂದು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಮಾಡಲಾಗಿದ್ದು, ಈ ಸಂಬಂಧ ಅವರಿಂದ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಲಾಗುವುದು. ಒಂದು ವೇಳೆ ಅವರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಸಲ್ಲಿಸದಿದ್ದಲ್ಲಿ ವೈದ್ಯರಿಂದ 22ಲಕ್ಷ ರೂ.ದಂಡ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, ವೈದ್ಯಕೀಯ ಶಿಕ್ಷಣವು ಬಡವರಿಗೆ, ಅರ್ಹರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಏಕರೂಪದ ಸಿಇಟಿ ಅಗತ್ಯ. ಆದರೆ, ಇದಕ್ಕೆ ಖಾಸಗಿ ಸಂಸ್ಥೆಗಳು ವಿರೋಧಿಸುತ್ತಿವೆ. ಏಕೆಂದರೆ, ಶೇ.80ರಷ್ಟು ಇಂತಹ ಸಂಸ್ಥೆಗಳು ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿರುವಂತಹವು ಎಂದರು. ನಮ್ಮ ಸರಕಾರವಿದ್ದಾಗ ಯಾವುದೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾಪನೆಗೆ ಅವಕಾಶ ನೀಡಿರಲಿಲ್ಲ. ಆದರೆ, ನಂತರ ಬಂದ ಸರಕಾರಗಳು 7 ಡೀಮ್ಡ್ ವಿವಿಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿವೆ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮದಾಸ್, ಡೀಮ್ಡ್ ವಿಶ್ವವಿದ್ಯಾಲಯಗಳು ಕೇಂದ್ರ ಸರಕಾರದ ಅಧೀನಕ್ಕೊಳಪಡುತ್ತವೆ. ಆದರೂ, ಅವರಿಂದ ಶೇ.25ರಷ್ಟು ಸೀಟುಗಳನ್ನು ಸರಕಾರ ಪಡೆದುಕೊಳ್ಳುತ್ತಿದೆ ಎಂದರು.

Advertisement

0 comments:

Post a Comment

 
Top