PLEASE LOGIN TO KANNADANET.COM FOR REGULAR NEWS-UPDATES


 ಪಾಟೀಲ್, ಪಾಲೆಮಾರ್ ಆರೋಪಿಗಳಲ್ಲ; ಸವದಿಗೆ ಬುದ್ಧಿವಾದ; ಶಾಸಕರಿಗೆ ವಿಧಿಸಲಾಗಿದ್ದ ನಿರ್ಬಂಧ ರದ್ದು | ವರದಿಯ ಶಿಫಾರಸು : ಸದನದೊಳಗೆ ಮೊಬೈಲ್ ನಿಷೇಧಿಸಿ. ಪ್ರತ್ಯೇಕವಾದ ವಾಹಿನಿ ಸ್ಥಾಪಿಸಿ

ಬೆಂಗಳೂರು,ಮಾ.30:ವಿಧಾನ ಸಭೆಯೊಳಗೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಬ್ಲೂಫಿಲಂ ನೋಡಿ ಸಿಕ್ಕಿ ಬಿದ್ದ ಮೂವರು ಮಾಜಿ ಸಚಿವರಲ್ಲಿ ಇಬ್ಬರಿಗೆ ಸದನ ಸಮಿತಿ ಕ್ಲೀನ್‌ಚಿಟ್ ನೀಡಿದೆ.

ವಿಧಾನಸಭೆಯಲ್ಲಿಂದು ತರಾತುರಿಯಲ್ಲಿ ಸದನ ಸಮಿತಿಯ ಅಧ್ಯಕ್ಷ ಬಿದರೂರು ಶ್ರೀಶೈಲಪ್ಪ ವಿರುಪಾಕ್ಷಪ್ಪ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು,ವರದಿಯಲ್ಲಿ ಮಾಜಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್‌ಗೆ ಕ್ಲೀನ್‌ಚಿಟ್ ನೀಡಲಾಗಿದೆ.
ಮೂವರು ಮಾಜಿ ಸಚಿವರ ಪೈಕಿ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರೆನ್ನುವ ಕುರಿತು ಯಾವುದೇ ಸ್ಪಷ್ಟ ಸಾಕ್ಷಾಧಾರಗಳು ಇಲ್ಲದಿರುವುದರಿಂದ ಅವರ ವಿರುದ್ಧ ಹೊರಿಸಲಾಗಿರುವ ಆರೋಪವು ಸಾಬೀತಾಗಿಲ್ಲ ಎಂದು ಸದನ ಸಮಿತಿ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಜೊತೆಗೆ ಲಕ್ಷ್ಮಣ ಸವದಿ ಮೇಲೆ ಮಾಡಲಾಗಿರುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದ್ದು,ಸಭಾಧ್ಯಕ್ಷರು ಅವರಿಗೆ ಇನ್ನು ಮುಂದೆ ಇಂಥ ಕೃತ್ಯವೆಸಗಬಾರದೆಂದು ಬುದ್ಧಿವಾದದ ಎಚ್ಚರಿಕೆ ನೀಡಬೇಕೆಂದು ಸದನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಮೂವರು ಮಾಜಿ ಸಚಿವರಿಗೆ ಸದನದೊಳಗೆ ಬಾರದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸದನಕ್ಕೆ ಶುಕ್ರವಾರ ತಿಳಿಸಿದರು.

ಫೆ.7ರಂದು ನಡೆದ ವಿಧಾನಸಭೆಯ ಅಧಿವೇಶನದ ಕಲಾಪದ ವೇಳೆ ಸದನದಲ್ಲಿ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಾಟ ಮಾಡಿರುವುದು ಹಾಗೂ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟ ಮಾಡಿರುವ ಪ್ರಚೋದನಕಾರಿ ಭಾಷಣದ ಕುರಿತು ಜಿದ್ದಾಜಿದ್ದಿನ ಗಂಭೀರ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸಹಕಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ್ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ ತಮ್ಮಷ್ಟಕ್ಕೆ ಕಾಮ ಕಲಾಪದಲ್ಲಿ ತೊಡಗಿದ್ದರು.ಇದನ್ನು ಕ್ಷಣ ಮಾತ್ರಕ್ಕೆ ಎಲ್ಲ ದೃಶ್ಯ ಮಾಧ್ಯಮಗಳು ಬಿತ್ತರಿಸಿದ್ದರಿಂದ ಸದನದೊಳಗಿನ ಬ್ಲೂಫಿಲಂ ನೋಡುತ್ತಿದ್ದ ಸಚಿವರು ಬಹಿರಂಗವಾಗಿ ಸಿಕ್ಕಿಬಿದ್ದಿದ್ದರು.

ಇದು ದೇಶಾದ್ಯಂತ ದೊಡ್ಡ ಕೋಲಾಹಲವನ್ನೆ ಎಬ್ಬಿಸಿತ್ತು.ರಾಜ್ಯಾದ್ಯಂತ ತೀವ್ರ ಟೀಕೆಗೆ ಗ್ರಾಸವಾಗಿತ್ತು.ಇದರಿಂದ ಬಿಜೆಪಿ ಸರಕಾರ ತೀವ್ರ ಮುಜುಗರಕ್ಕೀಡಾಯಿತಲ್ಲದೆ,ಬಿಜೆಪಿಯ ವರಿಷ್ಠರು ಕೂಡಾ ತಲೆತಗ್ಗಿಸುವಂತೆ ಮಾಡಿತ್ತು.

ಮಾರನೆ ದಿನ ಬೆಳಗ್ಗೆಯೇ ಲಕ್ಷ್ಮಣ ಸವದಿ,ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್‌ರಿಂದ ರಾಜೀನಾಮೆ ಪಡೆದ ಬಿಜೆಪಿ, ಸದನದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಚರ್ಚೆಗೆ ಅವಕಾಶವೇ ನೀಡದೆ, ಸದನ ಸಮಿತಿಯನ್ನು ರಚಿಸಿತ್ತು.

ಸದನ ಸಮಿತಿ ರಚಿಸಿದ್ದ ಸರಕಾರ,ಅದರ ಅಧ್ಯಕ್ಷರನ್ನಾಗಿ ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪರನ್ನು ನೇಮಕ ಮಾಡಿತ್ತು.ಸದಸ್ಯರನ್ನಾಗಿ ಬಿಜೆಪಿಯ ಸುರೇಶ್ ಗೌಡ,ನೆಹರೂ ಚನ್ನಬಸಪ್ಪ ಓಲೇಕಾರ್,ಎಸ್.ಆರ್.ವಿಶ್ವನಾಥ್,ಕಾಂಗ್ರೆಸ್‌ನ ಡಾ.ಎಚ್.ಸಿ.ಮಹದೇವಪ್ಪ, ಅಮರೇಗೌಡ ಪಾಟೀಲ್ ಬಯ್ಯೆಪುರ ಹಾಗೂ ಜೆಡಿಎಸ್‌ನ ದಿನಕರ ಕೇಶವ ಶೆಟ್ಟಿಯನ್ನು ನೇಮಿಸಿತ್ತು.

ಆದರೆ ಮೂವರು ಸಚಿವರು ಬ್ಲೂಫಿಲಂ ನೋಡಿ ಬಹಿರಂಗವಾಗಿ ಸಿಕ್ಕಿಬಿದ್ದಿರುವುದರಿಂದ ಅವರ ಶಾಸಕತ್ವ ರದ್ದುಪಡಿಸಿ, ಅವರ ಮೇಲೆ ದೂರು ದಾಖಲಿಸಬೇಕು. ಸದನ ಸಮಿತಿ ರಚಿಸಿರುವುದು ಆರೋಪಿಗಳನ್ನು ಬಚಾವ್ ಮಾಡಲು ಎಂದು ಪ್ರತಿಪಕ್ಷ ಆರೋಪಿಸಿ,ಕಾಂಗ್ರೆಸ್‌ನ ಡಾ.ಎಚ್.ಸಿ.ಮಹದೇವಪ್ಪ, ಅಮರೇಗೌಡ ಪಾಟೀಲ್ ಬಯ್ಯೆಪುರ ಹಾಗೂ ಜೆಡಿಎಸ್‌ನ ದಿನಕರ ಕೇಶವ ಶೆಟ್ಟಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

ಅಧಿವೇಶನದ ಕಡೆಯ ದಿನವಾದ ಇಂದು ಸಂಜೆ ತರಾತುರಿಯಲ್ಲಿ ಸದನ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.ವರದಿಯಲ್ಲಿ ಯಾರಿಗೂ ಕೂಡಾ ಶಿಕ್ಷೆ ನೀಡುವ ಕುರಿತು ಶಿಫಾರಸು ಮಾಡದೆ,ಮೂವರನ್ನು ಕೂಡಾ ಬಚಾವ್ ಮಾಡಲಾಗಿದ್ದು,ಕ್ಲೀನ್‌ಚಿಟ್ ನೀಡಿ ಸಮಿತಿ ಕೈತೊಳೆದುಕೊಂಡಿದೆ.

ವರದಿಯ ಶಿಫಾರಸು

ಪಾಟೀಲ್-ಪಾಲೆಮಾರ್‌ರ ಮೇಲಿನ ಆರೋಪ ಸಾಬೀತಾಗಿಲ್ಲ

ಮೂವರು ಮಾಜಿ ಸಚಿವರ ಪೈಕಿ ಸಿ.ಸಿ.ಪಾಟೀಲ್ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರೆನ್ನುವುದು ಹಾಗೂ ಕೃಷ್ಣ ಜೆ.ಪಾಲೆಮಾರ್ ಘಟನೆಗೆ ಕಾರಣರಾಗಿದ್ದಾರೆ ಎನ್ನುವ ಆರೋಪದ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷಾಧಾರಗಳು ಇಲ್ಲದೇ ಇರುವುದರಿಂದ ಅವರ ವಿರುದ್ಧ ಹೊರಿಸಲಾಗಿರುವ ಆರೋಪವು ಸಾಬೀತಾಗಿಲ್ಲವೆಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸವದಿಗೆ ಬುದ್ದಿವಾದದ ಎಚ್ಚರಿಕೆ ನೀಡಿ
ಲಕ್ಷ್ಮಣ ಸವದಿಯವರು ಮೊಬೈಲ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವ ಕುರಿತು ಪರಿಶೀಲಿಸಿದಾಗ,ಅವರು ಬಳಸಿದ ಮೊಬೈಲ್ ಅವರದ್ದಲ್ಲ ಎಂಬುದು ಕಂಡುಬಂದಿದೆ.ಅವರ ಮೊಬೈಲ್ ಆನ್‌ಇದ್ದ ಸಂದರ್ಭದಲ್ಲಿ ಸರಕಾರದ ಆದೇಶನವನ್ನು ಓದುತ್ತಿದ್ದುದ್ದರಿಂದ ಉದ್ದೇಶಪೂರ್ವಕವಾಗಿ ಮೊಬೈಲ್‌ನಲ್ಲಿದ್ದ ಚಿತ್ರಗಳನ್ನು ವೀಕ್ಷಿಸುತ್ತಿರಲಿಲ್ಲ ಎಂಬುದು ಸಮಿತಿಯ ಗಮನಕ್ಕೆ ಬಂದಿರುತ್ತದೆ.ಮೊಬೈಲ್ ಬಳಸಿರುವುದಕ್ಕೆ ಸಮಿತಿಯ ಮುಂದೆ ಕ್ಷಮೆಯಾಚಿಸಿ,ಇನ್ನು ಮುಂದೆ ಸದನದಲ್ಲಿ ಮೊಬೈಲ್ ಬಳಕೆ ಮಾಡುವುದಿಲ್ಲ ಎಂದು ಹೇಳಿಕೆಯನ್ನು ಸಮಿತಿ ಪರಿಗಣಿಸಿದೆ.ಈಗಾಗಲೇ ಒಂದೂವರೆ ತಿಂಗಳಿನಿಂದ ಅವರಿಗೆ ಸದನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ವಿಧಿಸಿರುವುದರ ಮೂಲಕ ಸಭಾಧ್ಯಕ್ಷರು ಅವರಿಗೆ ಶಿಕ್ಷೆ ವಿಧಿಸಿರುತ್ತಾರೆ.ಅವರ ವಿರುದ್ಧ ಮಾಡಲಾಗಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸಭಾಧ್ಯಕ್ಷರು ಲಕ್ಷ್ಮಣ ಸವದಿಗೆ ಇನ್ನು ಮುಂದೆ ಅಂಥ ಕೃತ್ಯವೆಸಗಬಾರದೆಂದು ಬುದ್ಧಿವಾದದ ಎಚ್ಚರಿಕೆಯನ್ನು ನೀಡಬೇಕೆಂದು ಸದನ ಸಮಿತಿ ಶಿಫಾರಸು ಮಾಡಿದೆ.

ಸದನದೊಳಗೆ ಮೊಬೈಲ್ ನಿಷೇಧಿಸಿ
ಸದನದೊಳಗೆ ಮೊಬೈಲ್ ಬಳಕೆಯ ನಿಷೇಧದ ಕುರಿತು ಉಪಬಂಧವನ್ನು ಸೇರಿಸಿ ತಿದ್ದುಪಡಿ ಮಾಡುವುದು ಅವಶ್ಯವೆಂದು ಸಮಿತಿ ಶಿಫಾರಸು ಮಾಡಿದೆ.ಅದೇ ರೀತಿ ನಿಯಮಾವಳಿಯು ತಿದ್ದುಪಡಿಯ ಮೂಲಕ ಜಾರಿಯಾಗುವವರೆಗೆ ವಿಧಾನಸಭೆಯ ಕಾರ್ಯಕಲಾಪ ನಡೆಯುವ ಸಂದರ್ಭದಲ್ಲಿ ಸಭಾಧ್ಯಕ್ಷರು ಮೊಬೈಲ್ ಬಳಕೆ ನಿಷೇಧವನ್ನು ಜಾರಿಗೆ ತರುವಂತೆ ಸಮಿತಿ ಶಿಫಾರಸು ಮಾಡಿದೆ.

ದೃಶ್ಯಮಾಧ್ಯಮದವರಿಗೆ ಮಾರ್ಗಸೂಚಿಸಿ ರಚಿಸಿ
ಕರ್ನಾಟಕ ವಿಧಾನಸಭೆಯಲ್ಲಿಯೂ ಲೋಕಸಭೆಯ ಮಾದರಿಯಲ್ಲಿ ವಿಧಾನಸಭೆಯ ಕಲಾಪಗಳನ್ನು ಪ್ರಸಾರ ಮಾಡಲು ವಿದ್ಯುನ್ಮಾನ ಮಾಧ್ಯಮದವರಿಗೆ ಮಾರ್ಗಸೂಚಿಗಳನ್ನು ರಚಿಸುವಂತೆ ಶಿಫಾರಸು.

ನೀತಿ ನಿರೂಪಣಾ ಸಮಿತಿ ರಚಿಸಿ
ಈ ಘಟನೆಯು ಕರ್ನಾಟಕ ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲೇ ಮೊದಲನೆ ಬಾರಿಗೆ ಘಟಿಸಿದ್ದು,ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟುವ ದಿಸೆಯಲ್ಲಿ ಸದನದಲ್ಲಿ ಶಿಸ್ತು ಮತ್ತು ಸಭ್ಯತೆ ಕಾಪಾಡಿಕೊಂಡು ಬರಲು ಹಾಗೂ ಸದನದ ಒಳಗೆ ಹಾಗೂ ಹೊರಗೆ ಸದಸ್ಯರು ಪಾಲಿಸತಕ್ಕ ನೀತಿಸಂಹಿತೆ ಮತ್ತು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆಗಾಗಿ ಒಂದು ನೀತಿ ನಿರೂಪಣಾ ಸಮಿತಿ ರಚಿಸಲು ಸದನ ಸಮಿತಿ ಶಿಫಾರಸು ಮಾಡಿದೆ.

ಪ್ರತ್ಯೇಕವಾದ ವಾಹಿನಿ ಸ್ಥಾಪಿಸಿ
ವಿಧಾನಸಭೆಯ ಕಾರ್ಯಕಲಾಪಗಳನ್ನು ಉತ್ತಮವಾಗಿ ಹಾಗೂ ವಸ್ತುನಿಷ್ಠವಾಗಿ ಜನಸಾಮಾನ್ಯರಿಗೆ ತಲುಪುವಂತೆ ಪ್ರಸಾರ ಮಾಡಲು ಲೋಕಸಭೆಯಲ್ಲಿ ಇರುವಂಥ ಮಾದರಿಯಲ್ಲೇ ಪ್ರತ್ಯೇಕವಾದ ವಾಹಿನಿ ಅಥವಾ ಸರಕಾರಿ ಸೌಮ್ಯದ ಸಂಸ್ಥೆಯ ಮೂಲಕ ವಿಧಾನಸಭೆಯ ಕಾರ್ಯಕಲಾಪಗಳನ್ನು ಪ್ರಸಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಟಿವಿಯಲ್ಲಿ ಬಂದದ್ದು ಇಂಟರ್‌ನೆಟ್‌ನ ಚಿತ್ರ: ಸಮಿತಿ
 ಬೆಂಗಳೂರು, ಮಾ.30: ಸಮಿತಿಯು ಸುದ್ದಿವಾಹಿನಿಯ ಸಿಡಿಗಳನ್ನು ವೀಕ್ಷಿಸಿದಾಗ, ಅದರಲ್ಲಿ ಮೊಬೈಲ್ ಮೂಲಕ ವೀಕ್ಷಣೆ ಮಾಡುತ್ತಿದ್ದ ಚಿತ್ರಗಳು ಸ್ಪಷ್ಟವಾಗಿಲ್ಲದೆ,ಸುದ್ದಿಯನ್ನು ಪ್ರಸಾರ ಮಾಡುವಾಗ ಟಿವಿ ಪರದೆಯ ಮೇಲೆ ಪ್ರತ್ಯೇಕವಾಗಿ ಅದೇ ಚಿತ್ರಗಳನ್ನು ಸ್ಪಷ್ಟವಾಗಿ ಸುವರ್ಣ 24್ಡ7ಚಾನಲ್ ನವರು ವೈಭವೀಕರಿಸಿ ತೋರಿಸುತ್ತಿದ್ದುದನ್ನು ಗಮನಿಸಿದೆ. ಸುದ್ದಿವಾಹಿನಿಗಳು ಸದನದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದರೂ ಅವುಗಳನ್ನು ವೈಭವೀಕರಿಸಿ ಪ್ರಸಾರ ಮಾಡುವ ಉದ್ದೇಶದಿಂದ ಇಂಟರ್‌ನೆಟ್‌ನಿಂದ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ತೋರಿಸಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಚರ್ಚೆಗೆ ವಿಪಕ್ಷ ಪಟ್ಟು; ಸದನ ಮುಂದೂಡಿಕೆ

ಬೆಂಗಳೂರು,ಮಾ.30:ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಮೂವರು ಮಾಜಿ ಸಚಿವರಿಗೆ ಸದನ ಸಮಿತಿ ಕ್ಲೀನ್‌ಚಿಟ್ ನೀಡಿರುವುದನ್ನು ಆಕ್ಷೇಪಿಸಿ ಪ್ರತಿಪಕ್ಷವಿಂದು ವಿಧಾನಸಭೆಯಲ್ಲಿ ಪಟ್ಟುಹಿಡಿದರೂ, ಅದಕ್ಕೆ ಮಣಿಯದ ಸರಕಾರ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ವಿಧಾನಸಭೆಯಲ್ಲಿಂದು ತರಾತುರಿಯಲ್ಲಿ ಸದನ ಸಮಿತಿ ಅಧ್ಯಕ್ಷ ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ ಅಂತಿಮ ವರದಿ ಸಲ್ಲಿಸಿದ್ದು,ಈ ವರದಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಹೇರಿದರು.

ರಾಜ್ಯದ ಇತಿಹಾಸದಲ್ಲಿಯೇ ನಡೆಯದಂಥ ಘಟನೆ ನಡೆದಿದ್ದು,ನಾವೆಲ್ಲರೂ ತಲೆತಗ್ಗಿಸಿದ್ದೇವೆ. ಇದು ಇಂದು ಮಂಡನೆಯಾಗಿದ್ದು, ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು. ಈ ಹಿನ್ನೆಲೆಯಲ್ಲಿ ಸದನವನ್ನು ಸೋಮವಾರದ ವರೆಗೆ ನಡೆಸಿ ಎಂದು ಸಿದ್ದರಾಮಯ್ಯ ಪರಿಪರಿಯಾಗಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯರನ್ನು ಒತ್ತಾಯಿಸಿದರು.

ಬ್ಲೂಫಿಲಂ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಇಂದು ಸಂಜೆಯ ವೇಳೆ ಸದನದಲ್ಲಿ ಮಂಡಿಸಲಾಗಿದೆ.ಮೂವರು ಸಚಿವರು ಬಹಿರಂಗವಾಗಿ ಸಿಕ್ಕಿಬಿದ್ದಿದ್ದು,ಇದನ್ನು ಎಲ್ಲ ಮಾಧ್ಯಮಗಳು ಜನರಿಗೆ ಪ್ರಸಾರ ಮಾಡಿದೆ.ಆದರೂ ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.ಪ್ರಕರಣ ಮುಚ್ಚಿಹಾಕಲು ಸದನ ಸಮಿತಿ ರಚಿಸಲಾಯಿತು.ಆ ಸಮಿತಿ ಮೂವರಿಗೂ ಕ್ಲೀನ್‌ಚಿಟ್ ನೀಡಿದೆ. ಇದು ಮುಚ್ಚಿ ಹೋಗ ಬಾರದು. ಅದಕ್ಕಾಗಿ ಸೋಮವಾರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು.ಅದಕ್ಕೆ ವಿಪಕ್ಷದ ಸದಸ್ಯರು ಕೂಡಾ ಬೆಂಬಲಿಸಿದರು.

ಆದರೆ ಕಾನೂನು ಸಚಿವ ಸುರೇಶ್ ಕುಮಾರ್,ಜಗದೀಶ್ ಶೆಟ್ಟರ್,ಬಸವರಾಜ ಬೊಮ್ಮಾಯಿ ಮಾತ್ರ ಸದನವನ್ನು ಇಂದೇ ಕೊನೆಗೊಳಿಸಲಾಗುವುದು.ಇದಕ್ಕೆ ಅವಕಾಶವನ್ನು ಮುಂದಿನ ಅಧಿವೇಶನದಲ್ಲಿ ನೀಡಲಾಗುವುದು ಎಂದು ಹೇಳಿದರು.

ಇದರಿಂದ ಕೆರಳಿದ ಸಿದ್ದರಾಮಯ್ಯ,ನಾವೇನೂ ಪರೀಕ್ಷೆಗೆ ತಯಾರಿ ಮಾಡಿಕೊಂಡು ಬರಬೇಕಾಗಿಲ್ಲ.ರಾಜ್ಯದ ಜನ ನಮ್ಮ ಕಡೆ ನೋಡುತ್ತಿರುವುದರಿಂದ ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಹೇಳಿದರು.

ಕೊನೆಗೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಚರ್ಚೆಗೆ ಮುಂದಿನ ಅಧಿವೇಶನದಲ್ಲಿ ಅವಕಾಶ ನೀಡಲಾಗುವುದು.ಸದನವನ್ನು ಇಂದಿಗೆ ಕೊನೆಗೊಳಿಸಿ,ಅನಿರ್ದಿಷ್ಟಾವಧಿಗಳ ಕಾಲ ಮುಂದೂಡಿದರು.

Advertisement

0 comments:

Post a Comment

 
Top