ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಉರಿಬಿಸಿಲು. ಬೆಳಿಗ್ಗೆ ೯ ರ ನಂತರ ಯಾರೂ ಹೊರಗಡೆ ತಿರುಗಾಡದಂಥ ಪರಿಸ್ಥಿತಿ, ಹೀಗಿರುವಾಗ ಅಂಗನವಾಡಿ ಕಂದಮ್ಮಗಳು ಅಂಗನವಾಡಿ ಕೇಂದ್ರಗಳಲ್ಲಿ ಕುಳಿತುಕೊಳ್ಳಲು ಹೇಗೆ ಸಾಧ್ಯ? ಬಿಸಿಲಿನ ಝಳ, ಕುಡಿಯುವ ನೀರಿನ ಸಮಸ್ಯೆಗಳಿಂದಾಗಿ ಮಕ್ಕಳು ತತ್ತರಿಸಿ ಹೋಗಿವೆ. ಕೇಂದ್ರಗಳಿಗೆ ಕಂದಮ್ಮಗಳು ಬರಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಅಂಗನವಾಡಿ ಕಂದಮ್ಮಗಳಿಗೆ ಹಾಗೂ ಅಂಗನವಾಡಿ ಉದ್ಯೋಗಿಗಳಿಗೆ ೨ ತಿಂಗಳುಗಳ ಕಾಲ ಅಂದರೆ ಎಪ್ರಿಲ್ ಮತ್ತು ಮೇ ಬೇಸಿಗೆ ರಜೆ ನೀಡಿ ಬಿಸಿಲಿನ ತಾಪದಿಂದ ಸರ್ಕಾರವು ರಕ್ಷಸಿಬೇಕಾಗಿದೆ ಹಾಗೂ ಕೆಳ ಕಂಡ ಬೇಡಿಕೆಗಳನ್ನು ಈಡೇರಿಸಬೇಕಾಗಿ ವಿನಂತಿ.
ಬೇಡಿಕೆಗಳು :
೧) ಬೇಸಿಗೆ ರಜೆ : ಹೈದ್ರಾಬಾದ ಕರ್ನಾಟಕ ವ್ಯಾಪ್ತಿಗೆ ಸೇರುವ ಕೊಪ್ಪಳ ಜಿಲ್ಲೆಯು ವಿಪರೀತ ಬಿಸಲಿನ ತಾಪಕ್ಕೆ ಒಳಗಾಗಿದ್ದು, ಈ ಬಿಸಿಲಿನ ಪರಿಣಾಮವನ್ನರಿತು ಸರ್ಕಾರವು ಶಾಲಾ ಕಾಲೇಜು ಮಕ್ಕಳಿಗೆ ಎರಡು ತಿಂಗಳ ಬೇಸಿಗೆ ರಜೆ ನೀಡುತ್ತಿದೆ. ಅಷ್ಟೇ ಅಲ್ಲ ಸರ್ಕಾರಿ ನೌಕರರಿಗೂ ಕೆಲಸದ ವಿಷಯದಲ್ಲಿ ರಿಯಾಯಿತಿ ನೀಡಿ, ನೌಕರರಿಗೆ ಕೇವಲ ಬೆಳಗಿನ ವೇಳೆಯಲ್ಲಿ ಕೆಲಸ ನಿರ್ವಹಿಸಲು ತಿಳಿಸಿದೆ. ಆದರೆ ಈ ಸೌಲತ್ತು ಅಂಗನವಾಡಿ ಮಕ್ಕಳಿಗೆ ಇರದ ಕಾರಣ ಅಂಗನವಾಡಿ ಮಕ್ಕಳು ಬೆಳಗಿನಿಂದ ಸಂಜೆಯವರೆಗೂ ಅಂಗನವಾಡಿ ಕೇಂದ್ರದಲ್ಲಿಯೇ ಉಳಿಯ ಬೇಕಾಗಿದೆ. ಉರಿ ಬಿಸಿಲಿನ ಪರಿಣಾಮ ಕೇಂದ್ರಗಳಿಗೆ ಬರುವ ಚಿಕ್ಕ ಕಂದಮ್ಮಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವದರಿಂದ ಆ ಮಕ್ಕಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಬೆಳೆಗ್ಗೆ ೧೦ರ ನಂತರ ದೊಡ್ಡವರು ಮನೆಯಿಂದ ಹೊರ ಬರಲು ಕಷ್ಟವಾಗುತ್ತಿರುವಾಗ ಮಕ್ಕಳು ಕೇಂದ್ರಕ್ಕೆ ಬರುವುದು ಕಷ್ಟ ಸಾಧ್ಯ. ಈ ಸಮಸ್ಯೆಗೆ ಸಂಬಂದ ಪಟ್ಟಂತೆ ಸಂಘಟನೆ ಮೂರು ವರ್ಷಗಳಿಂದ ಹೋರಾಟ ಮಾಡಿ ಮನವಿಯನ್ನು ಅರ್ಪಿಸಿದೆ. ತಾವು ಈ ಕುರಿತಂತೆ ಸಮಗ್ರ ಚರ್ಚೆ ಮಾಡಿ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳಿಗೂ ಎರಡು ತಿಂಗಳ ಬೇಸಿಗೆ ರಜೆ ನೀಡಿ ಬಿಸಿಲಿನ ತಾಪದಿಂದ ರಕ್ಷಿಸಲು ಕ್ರಮ ಕೈಗೊಳ್ಳಬೇಕು.
೨) ಗೌರವಧನ ಹೆಚ್ಚಳಕ್ಕೆ ಒತ್ತಾಯ : ಗೌರವಧನ ಹೆಚ್ಚಳ ಮಾಡದೇ ಸರ್ಕಾರಗಳು ಅಂಗನವಾಡಿ ಉದ್ಯೋಗಿಗಳಿಗೆ ಅನ್ಯಾಯ ಮಾಡಿವೆ. ಸರ್ಕಾರವು ತಕ್ಷಣ ಬೆಲೆ ಏರಿಕೆಗೆ ಅನುಗುಣವಾಗಿ ಗೌರವಧನವನ್ನು ಹೆಚ್ಚಿಸಬೇಕು.
೩) ಮಕ್ಕಳಿಗೆ ಸಮವಸ್ತ್ರ : ಸರ್ಕಾರವೂ ಅಂಗನವಾಡಿ ಉದ್ಯೋಗಿಗಳಿಗೆ ಸಮವಸ್ತ್ರ ನೀಡುತ್ತಿರುವುದು ತಮಗೆಲ್ಲಾ ಗೊತ್ತಿರುವಂತೆ, ಅಂಗನವಾಡಿ ಮಕ್ಕಳಿಗೂ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಲು ಸರ್ಕಾರಕ್ಕೆ ಸಂಘಟನೆಯ ಮೂಲಕ ಕೇಳಲಾಗಿದೆ. ತಾವು ಈ ಕುರಿತಂತೆ ಕ್ರಮ ಕೈಗೊಂಡು ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಬೇಕು.
೪) ಪೌಷ್ಠಿಕ ಆಹಾರ : ಅಂಗನವಾಡಿ ಕೇಂದ್ರಗಳಿಗೆ ಈ ಹಿಂದೆ ತಮಿಳನಾಡು ಮೂಲದ ಸಂಸ್ಥೆಯು ಕಳಪೆ ಗುಣಮಟ್ಟದ ಅಪೌಷ್ಠಿಕ ಆಹಾರವನ್ನು ಪೂರೈಕೆ ಮಾಡಿದ ಕಾರಣ ಮಕ್ಕಳಿಗೆ ತೊಂದರೆಯಾಗಿ ಬಹಳಷ್ಟು ಕಷ್ಟವನ್ನು ಅನುಭವಿಸಿದ್ದರ ಕುರಿತಂತೆ ಪತ್ರಿಕೆಗಳಲ್ಲಿ, ಟಿ.ವಿ. ಮಾಧ್ಯಮಗಳಲ್ಲಿ ಸಾಕಷ್ಟು ಸುದ್ಧಿಯಾಗಿದೆ. ಹೀಗೆ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಿದೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಉತ್ತಮ ಗುಣಮಟ್ಟದ, ಪೌಷ್ಠಿಕ ಆಹಾರ ಪೂರೈಕೆ ಮಾಡಲು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಳಗೊಂಡು ಸಮಿತಿಯೊಂದನ್ನ ರಚಿಸಿ, ಆಯಾ ಜಿಲ್ಲೆಯ ಸಂಬಂಧ ಪಟ್ಟ ಅಧಿಕಾರಿಗಳಿಂದಲೇ ಆಹಾರ ಖರೀದಿ ಹಾಗೂ ಕೇಂದ್ರಗಳಿಗೆ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು.
೫) ಸಾಮಾಗ್ರಿ ಖರೀದಿ : ಅಂಗನವಾಡಿ ಕೇಂದ್ರಗಳಿಗೆ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ಸಾಮಾಗ್ರಿಗಳ ಖರೀದಿಯ ಅಧಿಕಾರವನ್ನು ಆಯಾ ಜಿಲ್ಲೆಯ ಸಂಬಂಧ ಪಟ್ಟ ಇಲಾಖೆಗೆ ವಹಿಸಿಕೊಡುವಂತೆ ಕ್ರಮಕೈಗೊಳ್ಳಬೇಕು. ಇತ್ತೀಚಿಗೆ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗಿರುವಂಥ ಬಹುತೇಕ ಸಾಮಾಗ್ರಿಗಳು ಕಳಪೆ ಆಗಿರುವದರಿಂದ, ಆ ಸಾಮಾಗ್ರಿಗಳನ್ನು ಹೊರಗಿನವರು ಬೇನಾಮಿ ಸಂಸಯವರು ಪೂರೈಕೆ ಮಾಡಿರುವದರಿಂದ ಒಳ್ಳೆಯ ಗುಣಮಟ್ಟದ ಸಾಮಾಗ್ರಿಗಳ ಖರೀದಿಗೆ ಸಂಬಂಧಪಟ್ಟಂತೆ ಸಂಬಂಧ ಪಟ್ಟ ಇಲಾಖೆಯ ನೇತೃತ್ವದಲ್ಲಿ ಸಮಿತಿಯೊಂದನ್ನ ರಚಿಸಬೇಕು.
೬) ಕ್ರಮಕ್ಕೆ ಒತ್ತಾಯ : ಕೊಪ್ಪಳ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗುವ ಆಹಾರ ಸಾಮಾಗ್ರಿ ಕಳಪೆಯಿಂದ ಕೂಡಿದ್ದು ಹಾಗೂ ತೂಕದಲ್ಲಿ ಅವ್ಯವಹಾರ ನಡೆದಿದ್ದು, ತಾವು ತಕ್ಷಣ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ, ವಾಟರ್ ಫಿಲ್ಟರ್, ಮೆಡಿಸನ್ ಕಿಟ್ಸ್, ಆಟಿಕೆ ಸಾಮಾನುಗಳನ್ನು ಇನ್ನೀತರ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ ಸಂಸ್ಥೆಗಳ ವಿರುದ್ಧ ಹಾಗೂ ಕಳಪೆ ಸಾಮಾಗ್ರಿ ಪೂರೈಕೆ ಮಾಡಿದ ಸಂಸ್ಥೆಗಳಿಗೆ ಹಣ ಪಾವತಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲಾಖೆಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಆದೇಶವಿಲ್ಲದೆ ಕಳಪೆ ಗುಣಮಟ್ಟದ ಆಟಿಕೆ ಸಾಮಾನುಗಳನ್ನು ಕೆಲವೇ ಕೆಲವು ಅಂಗನವಾಡಿ ಕೇಂದ್ರಗಳಿಗೆ ಅನಧೀಕೃತವಾಗಿ ಪೂರೈಕೆ ಮಾಡಿ ಹಣ ಪಾವತಿಸಿಲು ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಾಯಿಸುತ್ತಿರುವ ಹುಬ್ಬಳ್ಳಿ ಮೂಲದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.
೭) ಕೇಂದ್ರಗಳ ಕಟ್ಟಡಕ್ಕೆ ಮನವಿ : ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳಿಲ್ಲ, ಕಟ್ಟಡಗಳು ಇಲ್ಲದ ಕಡೆ ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಬೇಸಿಗೆ ಕಾಲ, ಮಳೆ ಗಾಲ, ಚಳಿಗಾಲ ಎಲ್ಲಾ ಕಾಲದಲ್ಲೂ ಮಕ್ಕಳಿಗೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಕಾಡುತ್ತಿರುವದರಿಂದ ಕಟ್ಟಡಗಳು ಇಲ್ಲದ ಕಡೆ ತಕ್ಷಣ ಕಟ್ಟಡಗಳನ್ನು ಕಟ್ಟಿಕೊಡಬೇಕು.
೮) ನಿರ್ಭಂಧನೆಗಳ ಸಡಿಲಿಕೆಗೆ ಒತ್ತಾಯ : ಭಾಗ್ಯ ಲಕ್ಷ್ಮೀ ಬಾಂಡ್ ಸೌಲತ್ತು ಪಡೆಯಲು ಸರ್ಕಾರವು ಬಿ.ಪಿ.ಎಲ್. ಕಾರ್ಡ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಕೊಪ್ಪಳ ಜಿಲ್ಲೆಯ ಸುಮಾರು ಎಪ್ಪತ್ತರಷ್ಟು ಕುಟುಂಬಗಳಿಗೆ ಬಿ.ಪಿ.ಎಲ್. ಕಾರ್ಡ್ ಸಿಕ್ಕಿರುವದಿಲ್ಲ. ಬಿ.ಪಿ.ಎಲ್. ಕಾರ್ಡ್ ಇರದೇ ಇರುವ ಬಡಕುಂಟುಂಬಗಳು ಭಾಗ್ಯ ಲಕ್ಷ್ಮೀ ಸೌಲತ್ತಿನಿಂದ ವಂಚಿತರಾಗಿದ್ದಾರೆ. ಕಾರಣ ನಿಯಮ ಸಡಿಲಿಸಿ, ಆದಾಯ ಮಿತಿಗೆ ಒಳಪಟ್ಟ ಬಡ ಕುಟುಂಬಗಳಿಗೂ ಈ ಸೌಲತ್ತು ಸಿಗುವಂತೆ ಕ್ರಮ ಕೈಗೊಳ್ಳಬೇಕು.
೯) ಖಾಯಂಗೊಳಿಸಿ : ಅಂಗನವಾಡಿ ಉದ್ಯೋಗಿಗಳನ್ನು ಖಾಯಂಗೊಳಿಸಬೇಕು ಹಾಗೂ ನಿವೃತ್ತಿ ವೇತನವನ್ನು ಎಲ್.ಐ.ಸಿ. ಮುಖಾಂತರ ಜಾರಿಗೊಳಿಸಬೇಕು
ಮೇಲ್ಕಾಣಿಸಿದ ಬೇಡಿಕೆಗಳನ್ನು ತಮ್ಮ ಮುಂದೆ ಇಟ್ಟಿದ್ದು ತಾವುಗಳು ಕುರಿತಂತೆ ಗಂಭೀರ ಚರ್ಚೆ ನಡೆಸಿ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ತಾವು ಆದಷ್ಟು ಬೇಗ ಬೇಸಿಗೆ ರಜೆ ಕುರಿತಂತೆ ಆದೇಶ ಹೊರಡಿಸಲು ವಿಶೇಷ ಕಾಳಜಿ ವಹಿಸುತ್ತೀರೆಂದು, ಮಕ್ಕಳನ್ನು ಉರಿ ಬಿಸಿಲಿನ ತಾಪದಿಂದ ರಕ್ಷಿಸುತ್ತೀರೆಂದು ಆಶಿಸುತ್ತೇವೆ. ಒಂದು ವೇಳೆ ತಾವು ಎರಡು ತಿಂಗಳ ರಜೆ ಮಂಜೂರಾತಿಗೆ ಕ್ರಮ ಕೈಗೊಂಡಲ್ಲಿ ರಜೆ ವೇಳೆಯಲ್ಲಿ ಅಂಗನವಾಡಿ ಮಕ್ಕಳಿಗೆ ಆಹಾರ ವಿತರಿಸುವ ವ್ಯವಸ್ಥೆಯನ್ನು ಕಾರ್ಯಕರ್ತೆಯರು ನಿರ್ವಹಿಸುತ್ತಾರೆ.
ತಹಶೀಲ್ದಾರ ಕಛೇರಿಯ ಎದುರಿಗೆ ಇಂದು ಧರಣಿ ನಡೆಸಿ ಕೊನೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಣ್ಣ ಹಾಗೂ ಸಿ.ಡಿ.ಪಿ.ಓ. ಹನುಮಂತಪ್ಪ ಓಲೆಕಾರ ಹಾಗೂ ತಹಶೀಲ್ದಾರ ಇವರಿಗೆ ಮನವಿ ಪತ್ರ ನೀಡಿ ಸಮಸ್ಯೆಗಳ ವಿವರವಾಗಿ ತಿಳಿಸಿ ತೀವ್ರದಲ್ಲಿ ಕ್ರಮ ಕೈಗೊಳ್ಳಲು ಸರಕಾರದ ಗಮನ ಸೆಳೆಯಲು ಒತ್ತಾಯಿಸಿದರು. ಮುಖಂಡರಾದ ಬಸವರಾಜ ಶೀಲವಂತರ್, ಎಸ್.ಎ.ಗಫಾರ್, ಗಾಳೇಪ್ಪ ಮುಂಗೋಲಿ, ನನ್ನುಸಾಬ ನೀಲಿ, ಶಿವಪ್ಪ ಹಡಪದ, ವಿಜಯ ಲಕ್ಷ್ಮೀ ಹಿರೇಮಠ, ಮರಿಬಸಮ್ಮ, ಶೈಲಜಾ ಶಶಿಮಠ, ಶಿವಾನಂದ ಹೋದ್ಲೂರ, ಮೈಲಪ್ಪ ಬಿಸರಳ್ಳಿ, ಗಾಳೆಪ್ಪ ಕಡೆಮನಿ, ಮಖಬೂಲ ರಾಯಚೂರ್ ಮುಂತಾದವರು ಧರಣಿಯ ನೇತೃತ್ವ ವಹಿಸಿದ್ದರು.
0 comments:
Post a Comment