: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು
ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡಿದರು.
ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆಯನ್ನು ಏಪ್ರಿಲ್ ೦೫ ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಏ. ೧೪ ರಂದು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು. ಆಯಾ ದಿನಗಳಂದು ಬೆಳಿಗ್ಗೆ ಡೊಳ್ಳು ಕುಣಿತ, ಹಲಗೆ ಮೇಳ, ಕರಡಿ ಮಜಲು, ವೀರಗಾಸೆ ಮುಂತಾದ ಜಾನಪದ ತಂಡಗಳೊಂದಿಗೆ ಬೆಳಿಗ್ಗೆ ೦೭ ಗಂಟೆಗೆ ಕೊಪ್ಪಳ ತಹಸಿಲ್ದಾರರ ಕಚೇರಿಯಿಂದ ಮೆರವಣಿಗೆ ಹೊರಡಿಸಲಾಗುವುದು. ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಜಿಲ್ಲೆಯ ಸಂಸದರು, ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುವುದು. ಎರಡೂ ಕಾರ್ಯಕ್ರಮಗಳಿಗೆ ವಿಶೇಷ ಉಪನ್ಯಾಸ ನೀಡಲು ಹಂಪಿ ಕನ್ನಡ ವಿ.ವಿ.ಯ ಡಾ. ಪುಟ್ಟಯ್ಯ, ಬಂಜೆಗೆರೆ ಜಯಪ್ರಕಾಶ್, ಡಾ. ರಹಮತ್ ತರೀಕೆರೆ, ಟಿ.ವಿ. ಮಾಗಳದ, ಗದುಗಿನ ಅರ್ಜುನ ಗೊಳಸಂಗಿ, ಗುಲಬರ್ಗಾ ವಿ.ವಿ.ಯ ಮಲ್ಲಪ್ಪ ಚಲುವಾದಿ ಅವರುಗಳ ಪೈಕಿ ಇಬ್ಬರು ಗಣ್ಯರನ್ನು ಆಮಂತ್ರಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಬ್ಬರು ಮಹನೀಯರ ಜನ್ಮದಿನಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಸೂಚಿಸಲಾಗುವುದು. ಅದೇ ರೀತಿ ಎಲ್ಲ ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಸಮಾರಂಭಗಳಲ್ಲಿ ಭಾಗವಹಿಸಲು ವ್ಯವಸ್ಥೆಗೊಳಿಸಲಾಗುವುದು. ಶೋಷಿತ ವರ್ಗದವರ ಧ್ವನಿಯಾಗಿ ಸಮಾಜ ಸೇವೆ ಮಾಡಿದ ಈ ಮಹನೀಯರ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ರೀತಿಯಾಗಿ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕರೆ ನೀಡಿದರು.
ಮಹಾನ್ ಮಾನವತಾವಾದಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಅವರ ಮೂರ್ತಿಗಳು ಈಗಾಗಲೆ ಸಿದ್ಧಗೊಂಡಿದ್ದರೂ, ನಗರದಲ್ಲಿ ಅವುಗಳನ್ನು ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ವಿಳಂಬ ಧೋರಣೆ ಸರಿಯಲ್ಲ, ಕೂಡಲೆ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರುಗಳಾದ ಡಾ. ಜ್ಞಾನಸುಂದರ್, ಸಿದ್ದಪ್ಪ ಹೊಸಮನಿ ಸೇರಿದಂತೆ ಹಲವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಯಾವುದೇ ಮೂರ್ತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಕುರಿತಂತೆ ಸರ್ಕಾರದ ಅನುಮತಿ ಅಗತ್ಯವಾಗಿದ್ದು, ಈಗಾಗಲೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಪತ್ರವನ್ನು ನಿರೀಕ್ಷಿಸಲಾಗುತ್ತಿದ್ದು, ಅನುಮತಿ ದೊರೆತ ಕೂಡಲೆ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬಹುಮಾನ ನೀಡಬೇಕು. ಇದರಿಂದ ಯುವಪೀಳಿಗೆಗೆ ಮಹನೀಯರುಗಳ ಬಗ್ಗೆ ಮಾಹಿತಿ ಒದಗಿಸುವುದರೊಂದಿಗೆ ಅವರ ಜೀವನ ಚರಿತ್ರೆಯ ಬಗ್ಗೆ ಬೆಳಕು ಚೆಲ್ಲಲು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಮ್ ಅವರು ತಿಳಿಸಿದರು.
ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಹಾಗೂ ಪ.ಜಾತಿ, ವರ್ಗದವರಿಗೆ ನೀಡುವ ಸಹಾಯಧನ ಹಾಗೂ ಸವಲತ್ತುಗಳನ್ನು ಸಾಹಿತ್ಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದು ಮ್ಯಾಗೇರಿ, ಸದಸ್ಯರುಗಳಾದ ಸುಮಾ ಕಟ್ಟಿಮನಿ, ವಿಷ್ಣುತೀರ್ಥ ಗುಬ್ಬಿ, ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳಾದ ಹಾಲೇಶ್ ಕಂದಾರಿ ಶಿವಪುತ್ರಪ್ಪ ಗುಮಗೇರಿ, ಗವಿಸಿದ್ದಪ್ಪ, ಕಾಶಪ್ಪ ಅಳ್ಳಳ್ಳಿ, ಶಿವಣ್ಣ ಹಟ್ಟಿ, ಸಿದ್ದೇಶ್ ಪೂಜಾರ್, ಯಲ್ಲಪ್ಪ ಬೆಲ್ಲದ, ಆನಂದ ಭಂಡಾರಿ, ವೀರೇಶ್ ಕಟ್ಟಿಮನಿ, ವೆಂಕಟೇಶ್ ಕುಣಿಕೇರಿ, ಸಿದ್ದಪ್ಪ ಕಿಡದಾಳ, ಮುದಕಪ್ಪ, ಸೇರಿದಂತೆ ಹಲವಾರು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
0 comments:
Post a Comment