PLEASE LOGIN TO KANNADANET.COM FOR REGULAR NEWS-UPDATES


ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಚುನಾವಣಾಧಿಕಾರಿಯಾಗಿರುವ ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ ಅವರು ಪ್ರಕಟಿಸಿದ್ದಾರೆ.
  ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರವನ್ನು ಮಾ. ೨೧ ರಿಂದ ೨೮ ರವರೆಗೆ ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ಸಲ್ಲಿಸಬಹುದು.  ಮಾ. ೩೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ. ೦೫ ಕೊನೆಯ ದಿನಾಂಕವಾಗಿರುತ್ತದೆ.  ಏ. ೨೯ ರಂದು ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಅಂದು ಬೆಳಿಗ್ಗೆ ೦೮ ರಿಂದ ಸಂಜೆ ೦೪ ಗಂಟೆಯವರೆಗೆ ನಡೆಯಲಿದೆ.  ಅದೇ ದಿನದಂದು ಮತ ಎಣಿಕೆ ಕಾರ್ಯವೂ ಸಹ ನಡೆಯಲಿದೆ.  ನಾಮಪತ್ರ ಸಲ್ಲಿಸಬಯಸುವವರು, ಭರ್ತಿ ಮಾಡಿದ ನಾಮಪತ್ರ ಪ್ರಪತ್ರ-೨ ರ ಜೊತೆಗೆ ಸಾಹಿತ್ಯ ಪರಿಷತ್ ಕಚೇರಿಯಿಂದ ಪಡೆದ ಅಭ್ಯರ್ಥಿಯ ಹೆಸರಿನ ಬೇಬಾಕಿ ಪತ್ರ, ಅಭ್ಯರ್ಥಿಯ ಮಾದರಿ ಸಹಿ ನಮೂನೆ, ಅಭ್ಯರ್ಥಿಯ ಇತ್ತೀಚಿನ ೦೨ ಕಲರ್ ಫೋಟೋ, ಮತ ಪತ್ರದಲ್ಲಿ ಅಭ್ಯರ್ಥಿಯ ಹೆಸರನ್ನು ಯಾವ ರೀತಿ ಮುದ್ರಿಸಬೇಕು ಎಂಬುದರ ಬಗ್ಗೆ ಮಾಹಿತಿ ಪತ್ರ, ಅಭ್ಯರ್ಥಿಯು ಸರ್ಕಾರಿ ನೌಕರರಾಗಿದ್ದಲ್ಲಿ, ಕಚೇರಿ ಮುಖ್ಯಸ್ಥರಿಂದ ಪಡೆದ ನಿರಾಕ್ಷೇಪಣಾ ಪತ್ರ, ೫೦೦ ರೂ.ಗಳ ಠೇವಣಿ ಮೊತ್ತ, ಹಾಗೂ ಅಭ್ಯರ್ಥಿಯು ಸಾಹಿತ್ಯ ಬಗ್ಗೆ ಸಾಧನೆ ಮಾಡಿದ ಕುರಿತ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.  ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ೫ ವರ್ಷಗಳಿಂದಲೂ ಹಾಗೂ ಮತದಾರರು ಹಿಂದಿನ ಮೂರು ವರ್ಷಗಳಿಂದಲೂ ಸತತವಾಗಿ ಪರಿಷತ್ತಿನ ಸದಸ್ಯರಾಗಿರಬೇಕು, ಮತದಾರರ ಅಂತಿಮ ಪ್ರಕಟಣೆ ನಂತರ ನಾಮಪತ್ರಗಳ ನಮೂನೆಗಳನ್ನು ಮತ್ತು ಮತದಾರರ ಪಟ್ಟಿಯನ್ನು ನಿಗದಿಪಡಿಸಿರುವ ಬೆಲೆಗೆ ತಹಸಿಲ್ದಾರರ ಕಚೇರಿಯಿಂದ ಪಡೆಯಬಹುದು.  ಸಾರ್ವಜನಿಕರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ಈ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು  ಕೊಪ್ಪಳ ತಹಸಿಲ್ದಾರರ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಚುನಾವಣಾಧಿಕಾರಿಯಾಗಿರುವ ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಘೋಟೆ ಅವರು  ತಿಳಿಸಿದ್ದಾರೆ.

Advertisement

0 comments:

Post a Comment

 
Top