PLEASE LOGIN TO KANNADANET.COM FOR REGULAR NEWS-UPDATES



ಡಾ. ಭರಣಿ ವೇದಿಕೆಯಿಂದ ವಿಶಿಷ್ಟ 

ಬಳ್ಳಾರಿ, ಮಾ. ೨೭:  ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸತ್ಕರಿಸಿ ಗೌರವಿಸುವುದರ ಮೂಲಕ ನಗರದ ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆ ವಿಶಿಷ್ಟವಾಗಿ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸಿತು. 
ಕಳೆದ ಎರಡು ದಶಕಗಳಿಂದ ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗ ಕಲಾವಿದ ಜೆ ವೆಂಕೋಬಾಚಾರ್ ಮತ್ತು ಕೊಳಗಲ್  ಗ್ರಾಮದ ರಂಗ ಕಲಾವಿದ ಎಂ ಎ ಆರ್ ಉಮರ್ ಅವರನ್ನು ಮಂಗಳವಾರ ಬೆಳಿಗ್ಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಪರವಾಗಿ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ಗೌರವ ಪ್ರಶಸ್ತಿ ಪುರಸ್ಕೃತ, ಅಭಿನಯ ಕಲಾ ಕೇಂದ್ರದ ಅಧ್ಯಕ್ಷ, ರಂಗ ನಿರ್ದೇಶಕ ಕೆ. ಜಗದೀಶ್ ಅವರು ಕಲಾವಿದರಿಗೆ ಶಾಲು ಹೊದೆಸಿ, ಸನ್ಮಾನ ಪತ್ರ ನೀಡಿ ಗೌರವ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಅವರು, ರಂಗಭೂಮಿಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಬಳ್ಳಾರಿ ರಾಘವ,  ಜೋಳದರಾಶಿ ಡಾ. ದೊಡ್ಡನಗೌಡರು, ದಿ. ಚಂದ್ರಯ್ಯ ಸ್ವಾಮಿ, ನಾಡೋಜ ಸುಭದ್ರಮ್ಮ ಮನ್ಸೂರು, ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪುರಸ್ಕೃತ ಬೆಳಗಲ್ ವೀರಣ್ಣ ಅವರು ಸೇರಿದಂತೆ ಜಿಲ್ಲೆಯ ಹಲವರು ಕನ್ನಡ ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ವೇದಿಕೆ ಅಧ್ಯಕ, ಪತ್ರಕರ್ತ ಸಿ. ಮಂಜುನಾಥ್ ಅವರು ಮಾತನಾಡಿ, ನಾಟಕ,  ಕಲೆಗಳ ತವರೂರು ಆಗಿರುವ ಬಳ್ಳಾರಿ ಜಿಲ್ಲೆಯಲ್ಲಿ ವೇದಿಕೆ, ಕಳೆದ ನಾಲ್ಕು ವರ್ಷಗಳಿಂದ ವಿಶಿಷ್ಟವಾಗಿ ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ರಂಗ ಕರ್ಮಿಗಳು, ಕಲಾವಿದರಿಗೆ ಮನೆಗಳಿಗೆ ತೆರಳಿ ಸತ್ಕರಿಸಿ ಗೌರವಿಸುವ ಕಾರ್ಯವನ್ನು ಮುಂದಿನ ವರ್ಷಗಳಲ್ಲೂ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೆ. ವೆಂಕೋಬಾಚಾರ್, ಉಮರ್ ಅವರು ಮಾತನಾಡಿ, ಕಲಾವಿದರನ್ನು ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಕಲಾವಿದರಿಗೆ ಮತ್ತಷ್ಟು ಉತ್ಸಾಹ, ಹುಮ್ಮಸ್ಸು ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. 
ರಂಗ ಕಲಾವಿದ ಕೊಳಗಲ್ ಜಗದೀಶ ಸ್ವಾಮಿ, ಪ್ರಹ್ಲಾದಾಚಾರ್, ಕಲಾವಿದರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು

Advertisement

0 comments:

Post a Comment

 
Top