PLEASE LOGIN TO KANNADANET.COM FOR REGULAR NEWS-UPDATES


ನವದೆಹಲಿ:ಪ್ರಧಾನಿ ಮನಮೋಹನ್‌ಸಿಂಗ್ ಅಧಿಕೃತ ನಿವಾಸದಿಂದ ಕೂಗಳತೆ ದೂರದಲ್ಲಿ ಇಸ್ರೇಲ್ ರಾಯಭಾರ ಕಚೇರಿಗೆ ಸೇರಿದ ಕಾರು ಸ್ಫೋಟಿಸಿ,ರಾಜತಾಂತ್ರಿಕ ಅಧಿಕಾರಿಯೊಬ್ಬರು ಸೇರಿದಂತೆ ನಾಲ್ವರು ಗಾಯಗೊಂಡ ದುರ್ಘಟನೆ ಔರಂಗಜೇಬ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಅತಿ ಭದ್ರತೆ ಇರುವ ರೇಸ್‌ಕೋರ್ಸ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಮಧ್ಯಾಹ್ನ 3.18ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.ಘಟನೆ ನಡೆದ ಸ್ಥಳ ಪ್ರಧಾನಿ ಅಧಿಕೃತ ನಿವಾಸದಿಂದ ಕೇವಲ 500ಮೀಟರ್ ದೂರ ಇದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ ಇಸ್ರೇಲ್ ರಾಯಭಾರ ಕಚೇರಿಯಿಂದ ಹೊರಟ`ಟೊಯೊಟಾ ಇನ್ನೋವಾ`ಕಾರು (109-ಸಿಡಿ-35)ಔರಂಗಜೇಬ್ ರಸ್ತೆಯ ಸಿಗ್ನಲ್ ಬಳಿ ನಿಂತಿತು.ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಕಾರಿನ ಹಿಂದೆ ಯಾವುದೋ ವಸ್ತುವನ್ನು ಇಟ್ಟು ಪರಾರಿಯಾದ ಕ್ಷಣಾರ್ಧದಲ್ಲೇ ಸ್ಫೋಟ ಸಂಭವಿಸಿ.ಕಾರಿಗೆ ಬೆಂಕಿ ಹತ್ತಿಕೊಂಡಿತು. 
ಸ್ಫೋಟದಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಮಹಿಳಾ ಅಧಿಕಾರಿ ತಾಲ್ ಯಹೋಶುವಾ ಕೋರೆನ್ ತೀವ್ರವಾಗಿ ಗಾಯಗೊಂಡಿದ್ದಾರೆ.ಈಕೆ ಇಸ್ರೇಲ್ ರಾಯಭಾರ ಕಚೇರಿಯ ರಕ್ಷಣಾ ಅಧಿಕಾರಿಯೊಬ್ಬರ ಪತ್ನಿ.ತಾಲ್ ಅವರನ್ನು ದಕ್ಷಿಣ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಆರೋಗ್ಯ ಸ್ಥಿರವಾಗಿದ್ದು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಬೆನ್ನು ಹುರಿ ಶಸ್ತ್ರಚಿಕಿತ್ಸೆ ನಡೆಸುವ ಸಂಭವವಿದೆ.

ಘಟನೆಯಲ್ಲಿ ಗಾಯಗೊಂಡಿರುವ ಕಾರಿನ ಚಾಲಕ ಮನೋಜ್ ಶರ್ಮ(42),ಮತ್ತೊಂದು ಕಾರಿನಲ್ಲಿ ಇದ್ದ ಅರುಣ್ ಶರ್ಮ ಹಾಗೂ ಮನಜೀತ್‌ಸಿಂಗ್ ಅವರನ್ನು ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.  .


ಈ ಸ್ಫೋಟದಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ.ಸಮೀಪದ ವಾಯು ಪಡೆ ಕೇಂದ್ರದಿಂದ ಬಂದ ಅಗ್ನಿ ಶಾಮಕ ವಾಹನ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿತು.ಕಾರಿನ ಹಿಂದಿದ್ದ ಸಿಎನ್‌ಜಿ ಅನಿಲ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಮೊದಲಿಗೆ ಶಂಕಿಸಲಾಯಿತು. ಇದು ಉಗ್ರರು ನಡೆಸಿರುವ ದಾಳಿ ಇರಬಹುದು ಎಂದು ಇಸ್ರೇಲ್ ರಾಯಭಾರ ಕಚೇರಿ ಮೂಲಗಳು ಶಂಕೆ ವ್ಯಕ್ತಪಡಿಸಿವೆ.ಇದರ ಹಿಂದೆ ಇರಾನ್ ಕೈವಾಡವಿದೆ ಎಂಬ ಸಂಶಯವಿದೆ.

ಕಾರಿನ ಹಿಂದೆ ಮ್ಯಾಗ್ನೆಟ್ ಬಳಸಿ ತಯಾರಿಸಲಾದ ಬಾಂಬ್ ಇಟ್ಟು`ರಿಮೋಟ್ ಕಂಟ್ರೋಲ್` ನೆರವಿನಿಂದ ಸ್ಫೋಟಿಸಿರಬಹುದು ಎಂದು ಪೊಲೀಸ್ ಕಮಿಷನರ್ ಬಿ.ಕೆ.ಗುಪ್ತಾ ಅವರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ದೆಹಲಿ ಪೊಲೀಸ್ ವಿಶೇಷ ವಿಭಾಗಕ್ಕೆ ಸೂಚಿಸಲಾಗಿದೆ.ಕಾರು ಸಿಗ್ನಲ್ ದಾಟಿ ಮುಂದೆ ಹೋಗುತ್ತಿದ್ದಂತೆ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಮಗೆ ತಿಳಿಸಿದ್ದಾರೆ.ಟೈಮರ್ ಬಳಸಿ ಬಾಂಬ್ ಸ್ಫೋಟಿಸಿಲ್ಲ ಎಂದು ಗುಪ್ತಾ ವಿವರಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಫೋಟದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.ಈ ಘಟನೆ ಹಿಂದೆ ಸ್ಥಳೀಯ ಗ್ಯಾಂಗ್ ಕೈವಾಡವಿಲ್ಲ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ..



ಉಗ್ರರ ದಾಳಿ?:

ಈ ಘಟನೆಯ ಹಿಂದೆ ಉಗ್ರರ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಸ್ಫೋಟ ಸಂಭವಿಸುವ ಮುನ್ನ ಒಂದು ಬೈಕ್ ಸ್ಫೋಟಗೊಂಡ ಇನ್ನೋವಾ ವಾಹನವನ್ನು ಹಿಂಬಾಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಬೈಕಿನಲ್ಲಿದ್ದವರು ಇನ್ನೋವಾಗೆ ಯಾವುದೇ ಪದಾರ್ಥ ಅಂಟಿಸಿದ ಗಳಿಗೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.


ಕಾರು ಸ್ಫೋಟ ಕುರಿತು ರಾಜಧಾನಿ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ,ಇಸ್ರೇಲ್ ಆಡಳಿತ ಘಟನೆ ಹಿಂದೆ ಉಗ್ರರ ಕೈವಾಡವಿರಬಹುದು ಎಂದು ಶಂಕಿಸಿದೆ.ಜಾರ್ಜಿಯಾದ ಇಸ್ರೇಲ್ ರಾಯಭಾರ ಕಚೇರಿ ಬಳಿ ಪತ್ತೆಯಾದ ಬಾಂಬ್ ಜತೆಗೆ ಈ ಘಟನೆಯನ್ನು ತಳಕು ಹಾಕಲಾಗುತ್ತಿದೆ.

ಇರಾನ್, ಹಿಜಿಬುಲ್ಲಾ ಕೈವಾಡ- ಇಸ್ರೇಲ್

ಜೆರುಸಲೇಂ(ಪಿಟಿಐ):ಭಾರತ ಮತ್ತು ಜಾರ್ಜಿಯಾ ರಾಜಧಾನಿ ಟಿಬಿಲ್ಸಿಯಲ್ಲಿ ಇಸ್ರೇಲ್‌ನ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ನಡೆದ ಅವಳಿ ಬಾಂಬ್ ದಾಳಿಗೆ ಇರಾನ್ ಕಾರಣ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.

ತಮ್ಮ ಪಕ್ಷದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು,`ಈ ಎರಡು ಪ್ರಕರಣಗಳಲ್ಲಿ,ದಾಳಿಯ ಹಿಂದೆ ಇರಾನ್ ಮತ್ತು ಅದರ ಆಶ್ರಯ ಪಡೆದಿರುವ ಲೆಬನಾನ್‌ನ ಶಿಯಾ ಸಮುದಾಯದ ಉಗ್ರರ ಗುಂಪು ಹಿಜಿಬುಲ್ಲಾ ಕೈವಾಡ ಇದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಅವಿಗ್ಡರ್ ಲಿಬರ್‌ಮನ್ ಅವರು,`ಇಸ್ರೇಲಿನ ಪ್ರಜೆಗಳು ಇಸ್ರೇಲ್‌ನ ಹೊರಗೆ ಮತ್ತು ಒಳಗೆ ಉಗ್ರರ ದಾಳಿ ಭೀತಿಯನ್ನು ಎದುರಿಸುತ್ತಿದ್ದಾರೆ. ದಾಳಿಯನ್ನು ಯಾರು ನಡೆಸಿದ್ದಾರೆಂದು ಪತ್ತೆ ಹಚ್ಚುವ ಬಗ್ಗೆ ತಮಗೆ ತಿಳಿದಿದೆ` ಎಂದಿದ್ದಾರೆ.

ಸ್ಫೋಟ: ಕಟ್ಟೆಚ್ಚರ
ಮುಂಬೈ /ಚೆನ್ನೈ(ಪಿಟಿಐ):ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸೋಮವಾರ ಸಂಭವಿಸಿದ ಕಾರು ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಮುಂಬೈ ಮತ್ತು ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈನಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.

ಘಟನೆ ನಡೆದ ತಕ್ಷಣ ಎಚ್ಚೆತ್ತಕೊಂಡ ಪೊಲೀಸ್ ಇಲಾಖೆ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಇಸ್ರೇಲ್ ಪ್ರತಿಕ್ರಿಯೆ:ತಮ್ಮ ದೇಶದ ರಾಯಭಾರಿಗಳ ಮೇಲೆ ದೆಹಲಿಯಲ್ಲಾದ ದಾಳಿ ಉಗ್ರರ ಕೃತ್ಯವಾಗಿದ್ದು,ಇದನ್ನು ಸಹಿಸುವುದಿಲ್ಲ ಎಂದು ಇಸ್ರೇಲ್ ಕೆಂಡಕಾರಿದೆ.ಜಾರ್ಜಿಯಾದಲ್ಲಿ ಕೂಡ ಇಸ್ರೇಲ್ ಮೇಲೆ ಬಾಂಬ್ ದಾಳಿಗೆ ಸಂಚು ಹೂಡಲಾಗಿತ್ತು.ಆದರೆ,ಬಾಂಬನ್ನು ನಿಷ್ಕ್ರಿಯಗೊಳಿಸಲಾಗಿದೆ.ದೆಹಲಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ

Advertisement

0 comments:

Post a Comment

 
Top