PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳು ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬಾಕಿ ಇವೆ. ಆದರೆ, ಈ ಮೂರೂವರೆ ವರ್ಷದ ಅವಧಿಯಲ್ಲಿ ನಾಲ್ಕು ಜನ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಂಡಿರುವ ಕೊಪ್ಪಳ ಜಿಲ್ಲೆ ರಾಜಕೀಯವಾಗಿ ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.




ಇಂತಹ ರಾಜಕೀಯ ಬೆಳವಣಿಗೆಯಿಂದಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಸರಿಯಾಗಿ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಗೊಳ್ಳುತ್ತಿಲ್ಲ. ಅವುಗಳಿಗೆ ಪರಿಹಾರ ಸಿಗುತ್ತಿಲ್ಲ ಎಂಬ ಕೊರಗು ಜಿಲ್ಲೆಯ ಜನರಲ್ಲಿದೆ.

ಸದ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಗೋವಿಂದ ಕಾರಜೋಳ ಮೊದಲನೇ ಉಸ್ತುವಾರಿ ಸಚಿವರಾಗಿದ್ದರು. ನಂತರ, ಶಿವನಗೌಡ ನಾಯಕ, ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ನಾಲ್ಕನೆಯವರಾದ ಲಕ್ಷ್ಮಣ ಸವದಿ, ವಿಧಾನಮಂಡಲ ಅಧಿವೇಶನ ವೇಳೆ ಮೊಬೈಲ್‌ನಲ್ಲಿ ಸೆಕ್ಸ್‌ಫಿಲಂ ವೀಕ್ಷಿಸಿ ಸಚಿವ ಸ್ಥಾನ ಕಳೆದುಕೊಂಡರು. ಆ ಮೂಲಕ ಜಿಲ್ಲೆಯೂ ಉಸ್ತುವಾರಿ ಸಚಿವರನ್ನು ಕಳೆದುಕೊಂಡಿದೆ.

ಈ ಎಲ್ಲ ಘಟನಾವಳಿಗಳನ್ನು ಗಮನಿಸಿದಾಗ ಜಿಲ್ಲೆಯ ಉಸ್ತುವಾರಿ ಹೊತ್ತ ಸಚಿವರು ದೀರ್ಘಕಾಲ ಆ ಹುದ್ದೆಯಲ್ಲಿ ಇಲ್ಲ ಎಂಬ ಅಂಶ ವಿಚಿತ್ರವಾದರೂ ಸತ್ಯ ಎಂಬಂತಾಗಿದೆ.

ನೂತನ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಗೋವಿಂದ ಕಾರಜೋಳ ಉಸ್ತುವಾರಿ ಸಚಿವರಾದರು. ಆದರೆ, ಉಮೇಶ್ ಕತ್ತಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಆಗಿನ ತೋಟಗಾರಿಕಾ ಸಚಿವ ಎಸ್.ಕೆ.ಬೆಳ್ಳುಬ್ಬಿ ರಾಜೀನಾಮೆ ನೀಡಬೇಕಾಯಿತು. ಈ ಬೆಳವಣಿಗೆಯಿಂದಾಗಿ ಗೋವಿಂದ ಕಾರಜೋಳ ಅವರಿಗೆ ವಿಜಾಪುರ ಜಿಲ್ಲೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಯಿತು.

ಕೆಲವೇ ಸಮಯದಲ್ಲಿ ಕಾರ್ಯದ ಒತ್ತಡದಿಂದಾಗಿ ಸಚಿವ ಕಾರಜೋಳ ಅವರು ತಮಗೆ ವಿಜಾಪುರ ಉಸ್ತುವಾರಿ ಮಾತ್ರ ಸಾಕು ಎಂಬ ಬೇಡಿಕೆಯಿಂದಾಗಿ ಅವರನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸಲಾಯಿತು.

ನಂತರ, ಉಸ್ತುವಾರಿ ಸಚಿವರನ್ನಾಗಿ ಆಗಿನ ಲೋಕ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರಾಗಿದ್ದ ಶಿವನಗೌಡ ನಾಯಕ ಅವರನ್ನು ನೇಮಕ ಮಾಡಲಾಯಿತು. ಬಿಜೆಪಿಯಲ್ಲಿ ಎದ್ದ ಬಂಡಾಯದ ಸಂದರ್ಭದಲ್ಲಿ ಶಿವನಗೌಡ ನಾಯಕ ರೆಡ್ಡಿ ಸಹೋದರರೊಂದಿಗೆ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಹಾಗೂ ನಂತರ ನಡೆದ ರಾಜಕೀಯ ಬೆಳವಣಿಗೆ ಪರಿಣಾಮ ಜಿಲ್ಲಾ ಉಸ್ತುವಾರಿ ಜೊತೆಗೆ ಸಚಿವ ಸ್ಥಾನವನ್ನೂ ಕಳೆದುಕೊಂಡರು.

ಮೂರನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದ ಶಿವರಾಜ ತಂಗಡಗಿ ಬಹಳ ದಿನಗಳ ಕಾಲ ಆ ಹುದ್ದೆಯಲ್ಲಿ ಮುಂದುವರಿಯಲಿಲ್ಲ. ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣದಲ್ಲಿ ಅವರೂ ತಮ್ಮ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನು ಕಳೆದುಕೊಂಡರು.

ನಾಲ್ಕನೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಲಕ್ಷ್ಮಣ ಸವದಿ ಉಳಿದವರಿಗಿಂತ ಹೆಚ್ಚಿನ ಅವಧಿಗೆ ಆ  ಸ್ಥಾನದಲ್ಲಿ ಮುಂದುವರಿದವರು. ಆದರೆ, ಅಧಿವೇಶನ ನಡೆಯುತ್ತಿದ್ದಾಗ ಸೆಕ್ಸ್‌ಫಿಲಂ ವೀಕ್ಷಿಸಿದ ಅವರು ಭಾರಿ ದಂಡ ತೆರಬೇಕಾಯಿತು. ಹೀಗಾಗಿ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ಕಳೆದುಕೊಂಡಿದ್ದಾರೆ ಅಥವಾ ಜಿಲ್ಲೆ ನಾಲ್ಕನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕಳೆದುಕೊಂಡಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಶಾಸಕ ಪ್ರತಿನಿಧಿಸುವ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿ ಇರುವುದಿಲ್ಲ ಎಂಬ ವಿಚಿತ್ರ ವಿದ್ಯಮಾನ ಕ್ಷೇತ್ರದ ಜನತೆಯ ಅನುಭವಕ್ಕೆ ಬಂದಿದೆ. ಈಗ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಭದ್ರವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡವರು ಯಾರೂ ಪೂರ್ಣ ಅವಧಿ ಪೂರೈಸಿಯೇ ಇಲ್ಲ. ಈ ವಿಚಿತ್ರ ರಾಜಕೀಯ ವಿದ್ಯಮಾನಕ್ಕೂ ಜನತೆ ಸಾಕ್ಷಿಯಾಗಿದ್ದಾರೆ.   *
ಪ್ರಜಾವಾಣಿ ವಾರ್ತೆ/ ಭೀಮಸೇನ ಚಳಗೇರಿ

Advertisement

0 comments:

Post a Comment

 
Top