-ಶಿವಸುಂದರ್
ಬಿಜೆಪಿ ಸರಕಾರದೊಳಗಡೆ ಏನೇ ಮತ ಭೇದ ಗಳಿದ್ದರೂ ಹಿಂದುತ್ವದ ಅಜೆಂಡಾವನ್ನು ಆಚರ ಣೆಗೆ ತರುವಲ್ಲಿ ಮಾತ್ರ ಯಡ್ಡಿ-ರೆಡ್ಡಿ, ಯಡ್ಡಿ- ಈಶ್ವರಪ್ಪಎಲ್ಲರೂ ಒಂದಾಗಿ ಬಿಡುತ್ತಾರೆ. ಕೆಲವೊಮ್ಮೆ ಅದಕ್ಕೆ ಕಾಂಗ್ರೆಸ್ ಒಳಗೂ ಮಿತ್ರರು ಸಿಕ್ಕಿಬಿಡುವುದು ಅಪರೂಪವೇನಲ್ಲ. (ಇತ್ತೀಚೆಗೆ ದೆಹಲಿ ಯೂನಿವರ್ಸಿಟಿಯಲ್ಲಿ ಎ.ಕೆ. ರಾಮಾನುಜನ್ ಅವರ ಮುನ್ನೂರು ರಾಮಾ ಯಣಗಳು ಎಂಬ ಪುಸ್ತಕವನ್ನು ಎಬಿವಿಪಿ ಅಪಪ್ರಚಾರದಿಂದ ಹಿಂದೆಗೆದುಕೊಳ್ಳಲಾಯಿತು. ತನ್ನದಲ್ಲದ ಕ್ಷೇತ್ರದಲ್ಲೂ ಕಾರಣವಿಲ್ಲದೆ ಮೂಗು ತೂರಿಸುವ ಕಾಂಗ್ರೆಸ್‌ನ ಶಿಕ್ಷಣ ಮಂತ್ರಿ ಕಪಿಲ್ ಸಿಬಲ್ ತಾನು ಇದರಲ್ಲಿ ಮಾತ್ರ ಮೂಗು ತೂರಿಸುವುದಿಲ್ಲ ಎಂದು ಸುಮ್ಮನೆ ಕೂತಿದ್ದು ತಾಜಾ ಅದಕ್ಕೆ ತಾಜಾ ಉದಾಹರಣೆ.) ಅದೇನೆ ಇರಲಿ; ಬಿಜೆಪಿಯೊಳಗಿನ ಭಿನ್ನಾಭಿಪ್ರಾಯ ಗಳನ್ನು ಸೆಕ್ಯುಲರ್ ಕಾರಣಗಳಿಗೆ ಬಳಸಿಕೊಳ್ಳ ಬಹುದೆಂಬ ಭ್ರಾಂತಿ ನೀಗುವಂತೆ ಈಗ ಬಿಜೆಪಿ ಸರಕಾರ ಶಿಕ್ಷಣದಲ್ಲಿ ತನ್ನ ಹಿಂದುತ್ವ ಅಜೆಂಡಾ ವನ್ನು ದೊಡ್ಡ ಮಟ್ಟದಲ್ಲಿ ಜಾರಿಗೆ ತರಲು ಹೊರಟಿದೆ.
ಸದ್ದುಗದ್ದಲವಿಲ್ಲದಂತೆ 5 ಮತ್ತು 8 ನೆ ತರಗತಿಯ ಪಠ್ಯಪುಸ್ತಕಗಳನ್ನು ದೊಡ್ಡ ಮಟ್ಟದಲ್ಲಿ ಕೇಸರೀಕರಣ ಮಾಡಲು ಹೊರಟಿದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಇದರ ಬಗ್ಗೆ ಸಿ.ಎಸ್. ದ್ವಾರಕಾನಾಥ್ ಅವರು ಒಂದು ಲೇಖನ ಬರೆದು ರಾಜ್ಯದ ಜನತೆಯ ಗಮನ ಸೆಳೆಯದಿದ್ದರೆ, ನಂತರದಲ್ಲಿ ಕೆಲವು ಪತ್ರಿಕೆಗಳು ಅದರ ಬಗ್ಗೆ ವಿಶೇಷವಾಗಿ ಬರೆದು ಜನರ ಗಮನಕ್ಕೆ ತರದಿದ್ದರೆ, ನಾಡಿನ ಮಕ್ಕಳ ಮೆದುಳಲ್ಲಿ ವೌಢ್ಯ ಮತ್ತು ಕೋಮುವಾದಿ ವಿಷವನ್ನು ತಣ್ಣಗೆ ಬೆರೆಸುವ ಕೆಲಸ ಮುಗಿದೇ ಹೋಗುತ್ತಿತ್ತು. ಈಗಲೂ ಅದು ನಿಂತಿದೆ ಯಂತಲ್ಲ. ಈ ಲೇಖನಗಳೆಲ್ಲಾ ಬಂದು ಕೋಮು ಸೌಹಾರ್ದ ವೇದಿಕೆಯೂ ಸೇರಿದಂತೆ ದಲಿತ ಸಂಘರ್ಷ ಸಮಿತಿಗಳು, ಎಡಪಕ್ಷಗಳು ಇದರ ಬಗ್ಗೆ ಪ್ರತಿರೋಧವನ್ನು ವ್ಯಕ್ತ ಪಡಿಸುತ್ತಿದ್ದರೂ ಶಿಕ್ಷಣ ಕ್ಷೇತ್ರದ ಮೇಲೆ ಕಾಗೆ ಹಾರಿಸಲು ಹೊರಟಿರುವ ಕಾಗೇರಿ ಈ ಪಠ್ಯಪುಸ್ತಕಗಳನ್ನು ಪ್ರಿಂಟ್ ಮಾಡಲು ಈಗಾ ಗಲೆ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆ ಇತ್ತಿದ್ದಾರೆ.
ಹೀಗಾಗಿ ನಾಡಿನ ಮಕ್ಕಳ ತಲೆಯಲ್ಲಿ ವಿಷ ತುಂಬಲು ಬಿಜೆಪಿ ಸರಕಾರ ದೃಢ ನಿರ್ಧಾರ ಮಾಡಿ ಹೊರಟಿದೆ. ಆದ್ದರಿಂದಲೇ ಇದನ್ನು ತಡೆಯಬೇಕೆಂದರೆ ನಾಡಿನ ಜನರೂ ಸಹ ದೃಢ ನಿರ್ಧಾರದಿಂದ ದೊಡ್ಡ ಹೋರಾಟಕ್ಕೆ ಅಣಿಯಾಗಬೇಕಿದೆ. ಅದಕ್ಕೆ ಮುಂಚೆ ಈ ಪಠ್ಯಪುಸ್ತಕದಲ್ಲಿ ಬಿಜೆಪಿ ಸರಕಾರ ತರುತ್ತಿರುವ ಬದಲಾವಣೆ ಗಳ ಸ್ವರೂಪವನ್ನು ನಾಡಿನ ಜನತೆ ಸ್ಪಷ್ಟವಾಗಿ ಅರ್ಥಮಾಡಿ ಕೊಳ್ಳಬೇಕಿದೆ. ಏಕೆಂದರೆ ಬಿಜೆಪಿ ಸರಕಾರ ಈ ಪಠ್ಯಗಳನ್ನು ಪಠ್ಯಪುಸ್ತಕ ರಚನಾ ಮಂಡಳಿಯ ಅದರಲ್ಲೂ ಸಮಾಜ ವಿಜ್ಞಾನ ಪಠ್ಯಮಂಡಳಿಯ ಅಧ್ಯಕ್ಷರ ಗಮನಕ್ಕೆ ಎಲ್ಲವನ್ನೂ ತರದೆ ಮುದ್ರಿಸಲು ಹೊರಟಿದೆ. ಆವರು ಶಿಫಾರಸು ಮಾಡಿದ ಹಲವು ತಿದ್ದುಪಡಿಗಳನ್ನು ಅಂತಿಮವಾಗಿ ತಮ್ಮ ಆ ಸಮಿತಿಯಲ್ಲಿ ತರಾ ತುರಿಯಲ್ಲಿ ತಾವು ನೇಮಕ ಮಾಡಿದ ಆರೆಸ್ಸೆಸ್ ವಟುಗಳು ರಚಿಸಿದ ಕರಡನ್ನೇ ಯಾವುದೇ ಚರ್ಚೆಯಿಲ್ಲದೆ ಕ್ಯಾಬಿನೆಟ್ಟಿನಲ್ಲಿ ಅನುಮೋದಿಸಿ ಮುದ್ರಿಸಲು ಹೊರಟಿದೆ. ಹೀಗಾಗಿ ಆ ಪುಸ್ತಕದ ಪಠ್ಯವನ್ನು ಒಂದು ರಹಸ್ಯ ಬಾಂಬ್ ರೀತಿಯಲ್ಲಿ ಜನರ ಮೇಲೆ ಪ್ರಯೋಗಿಸಲು ಹೊರಟಿರು ವಾಗ ಅದೇನೆಂದು ಅರ್ಥಮಾಡಿಕೊಂಡು ಅದರ ಫ್ಯೂಸ್ ಕಿತ್ತೊಗೆಯುವ ಅಗತ್ಯವಿದೆ.
2005ರಲ್ಲಿ ಕೇಂದ್ರದ ಎನ್.ಸಿ.ಇ.ಆರ್.ಟಿ ಶಿಕ್ಷಣ ಸಂಸೋಧನಾ ಮತ್ತು ತರಬೇತಿ ಸಂಸ್ಥೆ ದೇಶಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಪಠ್ಯಗಳನ್ನು ಪುನರಚಿಸಲು ಒಂದು ಮಾರ್ಗದರ್ಶಿ ನಿಯಮಾವಳಿಗಳನ್ನು ರೂಪಿಸಿತು. ಅದರಂತೆ ದೇಶದ ಎಲ್ಲಾ ರಾಜ್ಯ ಸರಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಈ ಮಾರ್ಗದರ್ಶಿ ಸೂತ್ರಕ್ಕನುಗುಣವಾಗಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯವನ್ನು ಪುನರಚಿಸಬೇಕಿತ್ತು. ಈ ಮಾರ್ಗದರ್ಶಿ ಸೂತ್ರದ ಪ್ರಧಾನ ಆಶಯಗಳು: 1. ಮಕ್ಕಳ ವಿಶ್ಲೇಷಣಾ ಮತ್ತು ಸೃಜನಶೀಲ ಸಾಮರ್ಥ್ಯಕ್ಕೆ ಬೇಕಾದ ಮನೋಭೂಮಿಕೆಯನ್ನು ಸಿದ್ಧಪಡಿಸುವುದು. ವಿವಿಧ ಬಗೆಯ ವ್ಯಾಖ್ಯಾನ ಗಳಿರುವಾಗ ಒಂದು ವೈಜ್ಞಾನಿಕ ಪದ್ಧತಿಯ ಪ್ರಕಾರ ಹೆಚ್ಚು ವಸ್ತುನಿಷ್ಠ ನಿರ್ಣಯಗಳಿಗೆ ತಲು ಪಲು ಬೇಕಾದ ವೈಜ್ಞಾನಿಕ ವಿಶ್ಲೇಷಣಾ ಸಾಮ ರ್ಥ್ಯವನ್ನು ಪೊರೆಯುವುದು.
2. ಸಮಾಜ ವಿಜ್ಞಾನವು ಸ್ವಾತಂತ್ರ್ಯ, ಪರಸ್ಪರ ವಿಶ್ವಾಸ, ಪರಸ್ಪರ ಗೌರವ, ಸಮಾಜ ದಲ್ಲಿರುವ ವಿವಿಧತೆಗಳ ಬಗ್ಗೆ ಅಸಹನೆಗಿಂತ ಗೌರವಗಳಂಥ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ಬೇಕಾದ ತಳಹದಿಯನ್ನು ರೂಪಿಸುವುದನ್ನೂ ಸಹ ತನ್ನ ಗುರಿಯಾಗಿಟ್ಟುಕೊಂಡಿರಬೇಕು. ಹೀಗಾಗಿ ಸಮಾಜ ವಿಜ್ಞಾನದ ಬೋಧನೆಯ ಗುರಿಯು ಮಕ್ಕಳಲ್ಲಿ ಮೇಲೆ ಹೇಳಲಾದ ವೌಲ್ಯಗಳನ್ನು ಹಾಳು ಮಾಡಲು ನಿರತರಾದ ಶಕ್ತಿಗಳನ್ನು ಸ್ವತಂತ್ರವಾಗಿ ಪ್ರತಿರೋಧಿಸಲು ಬೇಕಾದ ಮಾನಸಿಕ ಮತ್ತು ನೈತಿಕ ಶಕ್ತಿಯನ್ನು ಒದಗಿಸುವುದೇ ಆಗಿದೆ.
ಈ ಗುರಿಗಳನ್ನು ಈಡೇರಿಸಿಕೊಳ್ಳಲು ಪಠ್ಯಬೋಧನಾ ಚೌಕಟ್ಟಿನಲ್ಲಿ:
1.ಪ್ರಾದೇಶಿಕ ಗ್ರಹಿಕೆಗಳಲ್ಲಿ ರಾಷ್ಟ್ರ ಮತ್ತು ರಾಷ್ಟ್ರೀಯ ಐಕ್ಯತೆಯ ಗ್ರಹಿಕೆಗಳು ಹೇಗೆ ಅಭಿವ್ಯಕ್ತಿಗೊಂಡಿದೆ ಎಂಬುದಕ್ಕೆ ಒತ್ತುಕೊಡುವುದು. ಆ ನಿಟ್ಟಿನಲ್ಲಿ ಇಡೀ ಪಠ್ಯಗಳನ್ನು ಪ್ರಾದೇಶಿಕಗೊಳಿಸುವುದು.
2. ಪಠ್ಯಪುಸ್ತಕವನ್ನು ಕೇವಲ ಒಂದು ಏಕೈಕ ನಿರ್ದೇಶನಾ ಪಠ್ಯವನ್ನಾಗಿ ಮಾಡಿ ದಂತೆ ಅದನ್ನು ಕೇವಲ ವಿಷಯ ಪರಿಚಯ ಪಠ್ಯವನ್ನಾಗಿ ಬಳಸಿ, ವಿದ್ಯಾರ್ಥಿಗಳು ಪಠ್ಯ ದಾಚೆಗೂ ಜ್ಞಾನ ಸಂಗ್ರಹಕ್ಕೆ ಅನ್ವೇಷಿಸು ವಂತೆ ಪ್ರಚೋದಿಸುವುದು.
3.ಸಮಾಜ ವಿಜ್ಞಾನ ಪಠ್ಯಗಳನ್ನಂತೂ ಕೇವಲ ವ್ಯಾವಹಾರಿಕ ಬಳಕೆಯ ಜ್ಞಾನ ವನ್ನಷ್ಟೆ ಬೋಧಿಸುವಂತಾಗಿದೆ, ಆದ್ದರಿಂದ ಆ ಇಡಿ ಜ್ಞಾನಶಿಸ್ತಿನ ಪಠ್ಯವನ್ನು ಸಾಮಾಜಿಕ ರಾಜಕೀಯದಲ್ಲಿ ಸಮಾನತೆ, ನ್ಯಾಯ ಪ್ರಜ್ಞೆಗಳಂಥ ಆದರ್ಶಗಳನ್ನು ಮೈಗೂಡಿಸಿ ಕೊಳ್ಳುವಂತೆ ಮಾಡುವ ಆದರ್ಶವಾದಿ ಪಠ್ಯವನ್ನಾಗಿ ಪುನರಚಿಸುವ ಅಗತ್ಯವಿದೆ. 4. ಅಲ್ಲದೆ ಸಮಾಜವಿಜ್ಞಾನ ಬೋಧನೆಗಳಲ್ಲಿ ಲಿಂಗ ತಾರತಮ್ಯವನ್ನು ಹೊಡೆದೋಡಿಸುವ ಉದ್ದೇಶದಿಂದ ಸ್ತ್ರೀ ದೃಷ್ಟಿ ಕೋನವನ್ನು ಇತಿಹಾಸ ಪಠ್ಯ ಬೋಧನೆಯಲ್ಲಿ ಆಂತರಿಕವಾಗಿಯೇ ಅಡಕಗೊಳಿಸಬೇಕು.
5.ಅದೇ ರೀತಿ ಪೌರನೀತಿ-ಸಿವಿಕ್ಸ್ ಎಂಬ ಪರಿಕಲ್ಪನೆಯೇ ವಸಾಹತುಶಾಹಿ ದೃಷ್ಟಿಕೋನದಲ್ಲಿ ಹುಟ್ಟಿದ್ದು.ಅದನ್ನು ರಾಜ ನೀತಿ ಎಂದು ಬದಲಿಸಬೇಕು ಮತ್ತು ಅದರಲ್ಲಿ ಸಮಾಜದಲ್ಲಿ ಯಾವ ಪ್ರಕ್ರಿಯೆ ಯಗಳು ಶೋಷಕ ಶಕ್ತಿಗಳನ್ನು ಮತ್ತು ಅದರ ವಿರುದ್ಧ ಪ್ರತಿರೋಧಗಳನ್ನು ಹುಟ್ಟು ಹಾಕುತ್ತವೆ ಎಂದು ಕಾಣಿಸಬೇಕು. ಇವೇ ಇನ್ನಿತ್ಯಾದಿ ಸಲಹೆಗಳನ್ನು ನೀಡಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ :
ಸಮಾಜ ವಿಜ್ಞಾನವನ್ನು ಅಧ್ಯಯನ ಮಾಡುವಾಗ ಸಮಾಜದ ಸಮಸ್ಯೆಗಳತ್ತ ಅದರಲ್ಲೂ ಬಡತನ, ಜಾತಿಪದ್ಧತಿ, ಅನ ಕ್ಷರತೆ, ಲಿಂಗ ತಾರತಮ್ಯ ಇನ್ನಿತ್ಯಾದಿ ಸಮ ಸ್ಯೆಗಳತ್ತ ವಿದ್ಯಾರ್ಥಿಗಳ ಗಮನ ಹರಿಯು ವಂತೆ ಮಾಡುವುದು ಸಮಾಜ ವಿಜ್ಞಾನಗಳ ಬೋಧನೆಯ ಪ್ರಮುಖ ವಸ್ತು ಮತ್ತು ಉದ್ದೇಶವಾಗಬೇಕು ಎಂಬುದು ಎನ್‌ಸಿಇ ಆರ್‌ಟಿ ಮಾರ್ಗದರ್ಶಿ ಸೂತ್ರಗಳ ಪ್ರಮುಖ ನಿರ್ದೇಶನವಾಗಿತ್ತು. -ಅದರಲ್ಲೂ ವಿವಿಧ ಜನಸಮುದಾ ಯಗಳ ಹಿನ್ನೆಲೆಯುಳ್ಳ ಭಾರತೀಯ ಸಮಾ ಜವನ್ನು ಸ್ತ್ರೀಯರ, ಆದಿವಾಸಿಗಳ, ದಲಿತರ ಇನ್ನಿತ್ಯಾದಿ ವಿಭಿನ್ನ ಹಿನ್ನೆಲೆಯಿಂದ ಅರ್ಥಮಾಡಿ ಕೊಳ್ಳುವುದು ಎಂಬ ನಿರ್ದೇಶನವನ್ನೂ ಆ ಸೂತ್ರ ನೀಡುತ್ತದೆ. -ವಿಭಿನ್ನ ಸಂಸ್ಕೃತಿ, ಭಾಷೆ ಮತ್ತು ಬದುಕುಗಳ ಬಗ್ಗೆ ಗೌರವವನ್ನು ರೂಢಿಸಿ ಕೊಳ್ಳುವುದು ಮತ್ತು ಸಂವಿಧಾನದಲ್ಲಿ ಘೋಷಿತವಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳನ್ನು ಹಾಗೂ -ರಾಜನೀತಿಯಲ್ಲಿ ಸಂವಿಧಾನದಲ್ಲಿ ಘೋಷಿತ ವಾದ ಸಮಾಜವಾದಿ, ಜಾತ್ಯತೀತ ಭಾರತವನ್ನು ಕಟ್ಟುವುದು ಹೇಗೆ ಎಂಬ ದಿಕ್ಕಿನೆಡೆಗೆ ಕೇಂದ್ರೀಕೃತ ವಾಗಬೇಕು ಎಂದೂ ಸ್ಪಷ್ಟವಾಗಿ ನಿರ್ದೇಶಿಸಲಾ ಗಿದೆ. ಮೇಲ್ನೋಟಕ್ಕೆ ಭಾರತವನ್ನು ನಿಜವಾದ ಸೆಕ್ಯುಲರ್, ಸಮಾಜವಾದಿ ಗಣರಾಜ್ಯವನ್ನಾಗಿ ಕಟ್ಟಲು ಬೇಕಾದ ಪೌರರನ್ನು ರೂಪಿಸಲು ಬೇಕಾದ ಪಠ್ಯ- ಮತ್ತು ಬೋಧನಾ ಪದ್ಧತಿಗಳನ್ನು ಕೇಂದ್ರದ ಎನ್‌ಸಿಇಆರ್‌ಟಿ ನಿರ್ದೇಶನಗಳು ಒಳಗೊಂಡಿತ್ತು.
2005ರ ಎನ್‌ಸಿಇಆರ್‌ಟಿ ನಿರ್ದೆಶನದನ್ವಯ ಕರ್ನಾಟಕದಲ್ಲೂ ಆಗಿನ ಜೆಡಿಎಸ್- ಬಿಜೆಪಿ ಸರಕಾರ ಪಠ್ಯಪುನಾರಚನಾ ಸಮಿತಿಯನ್ನು ನೇಮಿಸಿತು. ಯಥಾ ಸರಕಾರ ತಥಾ ಸಮಿತಿ ಎಂಬಂತೆ ಸಮಿತಿಗಳಲ್ಲೂ ಕೋಮುವಾದಿ ಮತ್ತು ಪ್ರಗತಿಪರರು ಎರಡು ಬಗೆಯ ಚಿಂತನೆಯುಳ್ಳ ತಜ್ಞರು ಸಮಿತಿಗಳಲ್ಲಿ ನೇಮಕಗೊಂಡರು. ಆದರೆ 2008ರಲ್ಲಿ ಬಿಜೆಪಿ ಸರಕಾರವೇ ಸಂಪೂರ್ಣವಾಗಿ ಅಧಿಕಾರಕ್ಕೆ ಬಂದ ಮೇಲೆ ಈ ಸಮಿತಿಗಳಲ್ಲಿ ಅಧ್ಯಕ್ಷರ ಮತ್ತು ಪ್ರಗತಿಪರ ಸದಸ್ಯರುಗಳ ಗಮನಕ್ಕೆ ಬರದಂತೆ ಪರಮ ಕೋಮುವಾದಿಗಳು ಕೇವಲ ಆರೆಸ್ಸೆಸ್ ಹಿನ್ನೆಲೆಯುಳ್ಳ ಏಕೈಕ ಪ್ರತಿಭೆಯಿಂದಾಗಿ ಪಠ್ಯರಚನಾ ಸಮಿತಿಯನ್ನು ಸೇರಿಕೊಂಡರು. ಹಲವು ಪ್ರಗತಿಪರ ಸದಸ್ಯರನ್ನು ಏಕಾಏಕಿ ಕಿತ್ತುಹಾಕಲಾಯಿತು. ಉಳಿದವರು ಈ ಹುನ್ನಾರವನ್ನು ಮೊದಲೇ ಅರ್ಥಮಾಡಿಕೊಂಡು ಹೊರಬಂದಿದ್ದರೆ ಬಿಜೆಪಿ ಸಕಾರ ಇನ್ನಷ್ಟು ಬಯಲಾಗುತ್ತಿತ್ತು.
ಆದರೆ ಅವರು ಇದ್ದಿದ್ದರಲ್ಲಿ ಏನಾದರೂ ಒಳ್ಳೇದು ಮಾಡಬಹುದು ಎಂದು ಅಲ್ಲೇ ಉಳಿದುಕೊಂಡರು. ಆದರೆ ಬಿಜೆಪಿ ಸರಕಾರ ಅವರ ನೆರಳಲ್ಲೇ ಕೋಮುವಾದಿ ಪಠ್ಯಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಉಣಬಡಿಸಲು ಹೊರಟಿದೆ. ಬಿಜೆಪಿ ಸರಕಾರ ಈ ಸಮಿತಿಗಳನ್ನು ಹೇಗೆ ತನ್ನ ಪ್ರಚಾರ ಕಚೇರಿ ಮಾಡಿಕೊಂಡಿದೆಯೆಂದರೆ, ಇಡೀ ಪಠ್ಯ ಸಂಯೋಜನೆಗೆ ಮುಡಿಬಡಿತ್ತಾಯ ಎನ್ನುವ ಆರೆಸ್ಸೆಸ್‌ನ ನಿಷ್ಠಾವಂತ ಸದಸ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಗುಮಾಸ್ತಗಿರಿಗೆ ಸಂಬಂಧಪಟ್ಟ ಕೆಲಸ ಮಾಡುವ ಅರ್ಹತೆಯನ್ನು ಬಿಟ್ಟರೆ ಬೇರೇನೂ ಶೈಕ್ಷಣಿಕ ಅಥವಾ ಅಕಾಡಮಿಕ್ ಅರ್ಹತೆಯಿಲ್ಲದ ವ್ಯಕ್ತಿಯನ್ನೂ ಸಂಯೋಜಕನನ್ನಾಗಿ ನೇಮಿಸಿದೆ. 9 ಮತ್ತು 10 ನೆ ತರಗತಿಯ ಪಠ್ಯ ರಚನೆಗೆ ಕೊಟ್ರೇಶ್ ಎಂಬ ಆರೆಸ್ಸೆಸ್ ವ್ಯಕ್ತಿಯನ್ನು ಮತ್ತು ಈಗ ಪ್ರಕಟವಾಗಿರುವ 5 ಮತ್ತು ಮುಂದೆ ಬರಲಿರುವ 6 ಮತ್ತು 7 ನೆ ತರಗತಿಯ ಇತಿಹಾಸ ಪಠ್ಯಕ್ಕೆ ರಾಜಶೇಖರ್ ಎಂಬ ಮತ್ತೊಬ್ಬ ಆರೆಸ್ಸೆಸ್ ಹಾಗೂ ಮಂಗಳೂರಿನ ಪಿಯು ಕಾಲೇಜಿನ ಪ್ರಿನ್ಸಿಪಾಲೊಬ್ಬರನ್ನು ನೇಮಕ ಮಾಡಲಾಗಿದೆ. 8 ನೆ ತರಗತಿಯ ಪಠ್ಯ ರಚನೆಯಲ್ಲಿ ವೈದಿಕ ಇತಿಹಾಸದ ಪಠ್ಯವನ್ನು ಸೇರಿಸಲು ಶೃಂಗೇರಿ ಮಠ ತನ್ನೊಬ್ಬ ಉಪನ್ಯಾಸಕ ಭಕ್ತನೊಬ್ಬನನ್ನು ಅಟ್ಟಿತ್ತೆನ್ನುವ ಸುದ್ದಿಯೂ ಇದೆ. ಹಾಗೂ ಮಠದಿಂದ ಬಂದ ಬರಹವನ್ನೇ ಇತಿಹಾಸವೆಂದು ಸೇರಿಸಲು ಒತ್ತಾಯವನ್ನೂ ಹೇರಲಾಗಿತ್ತೆಂಬ ಸುದ್ದಿಯನ್ನು ಆ ಮಹಾಶಯರೇ ಅಲ್ಲಲ್ಲಿ ಹೇಳಿಕೊಂಡು ಸುದ್ದಿಯಾಗಿದೆ...
ಅದೇನೇ ಇರಲಿ, ಇವು ಬಿಜೆಪಿ ಸರಕಾರ ಹೇಗೆ ಪಠ್ಯ ಪುನಾರಚನೆಯ ಮೊದಲಿಗೆ ಪಠ್ಯ ಸಮಿತಿಯನ್ನೇ ಹೇಗೆ ತನ್ನ ಗುಪ್ತ ಹಿಂದುತ್ವದ ಅಜೆಂಡಾಗಳಿಗೆ ಪೂರಕವಾಗಿ ಬಳಸಿಕೊಂಡಿದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ. ಇತಿಹಾಸ ಪಠ್ಯಕ್ಕೆ ಇಷ್ಟೆಲ್ಲಾ ಕರಸೇವೆ ಮಾಡಿದ ನಂತರ ಬಿಜೆಪಿ ಸರಕಾರ ಈಗ ಹೊರತಂದಿರುವ 5 ಮತ್ತು 8ನೆ ತರಗತಿಯ ಪಠ್ಯಗಳು ಗಾಬರಿಗೊಳಿಸುವಷ್ಟು ಹಿಂದುತ್ವ ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಹೊಂದಿರುವುದು ಎದ್ದು ಕಾಣುತ್ತದೆ. ಭಾರತವನ್ನು ಸಂವಿಧಾನಬದ್ಧವಾಗಿಯಲ್ಲದೆ ಗುಪ್ತ ಹಿಂದುತ್ವವಾದಿ ಅಜೆಂಡಾಗೆ ತಕ್ಕಂತೆ ಪ್ರತಿಗಾಮಿ ಬ್ರಾಹ್ಮಣಶಾಹಿ ಸ್ವಾರ್ಥ ಮೇಲರಿಮೆಯುಳ್ಳ ದಲಿತ, ಸ್ತ್ರೀ, ಆದಿವಾಸಿ, ಅಲ್ಪಸಂಖ್ಯಾತರನ್ನು ಕೀಳಾಗಿ ಅಥವಾ ಶತ್ರುಗಳನ್ನಾಗಿ ಕಾಣುವ ಮೇಲ್ಜಾತಿ ಮತ್ತು ಮೇಲ್ವರ್ಗದವರನ್ನು ಸರ್ವಗುಣ ಸಂಪನ್ನರಾಗಿ ಕಾಣುವಂತೆ ಮಾಡುವ ಪಠ್ಯಗಳನ್ನು ಬಹಳ ಜಾಣತನದಿಂದ ಸೇರಿಸಿದೆ.* ವಾರ್ತಾಭಾರತಿ ಅಂಕಣ ಬರಹ
0 comments:
Post a Comment