PLEASE LOGIN TO KANNADANET.COM FOR REGULAR NEWS-UPDATES


ಚಿಂದ್ವಾರ (ಮ.ಪ್ರ), ಜ. 21: ಇಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಧ್ಯಪ್ರದೇಶ ಸಚಿವ ಗೌರಿ ಶಂಕರ್ ಬೈಸನ್ ತನ್ನ ಶೂಗಳ ದಾರಗಳನ್ನು ಹುಡುಗನೊಬ್ಬನ ಕೈಯಲ್ಲಿ ಕಟ್ಟಿಸುವ ಮೂಲಕ ವಿವಾದವೊಂದಕ್ಕೆ ಕಾರಣರಾಗಿದ್ದಾರೆ. ಅದೂ ಎರಡೆರಡು ಬಾರಿ ಹುಡುಗನಿಂದ ತನ್ನ ಶೂಗಳ ದಾರಗಳನ್ನು ಕಟ್ಟಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ರಸ್ತೆ ಯೋಜನೆಯೊಂದರ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದ ವೇಳೆ ಸಹಕಾರಿ ಸಚಿವ ಬೈಸನ್, ಆದಿವಾಸಿ ಬಾಲಕನೊಬ್ಬನನ್ನು ಕರೆಸಿ, ತನ್ನ ಶೂಗಳ ದಾರಗಳನ್ನು ಕಟ್ಟುವಂತೆ ಸೂಚಿಸಿದರೆನ್ನಲಾಗಿದೆ. ಘಟನಾ ಸ್ಥಳದಲ್ಲಿದ್ದ ಮಾಧ್ಯಮದ ಮಂದಿ ಸಚಿವರ ವರ್ತನೆಯನ್ನು ಗಮನಿಸಿದುದರ ಅರಿವಿಗೆ ಬಂದ ಸಚಿವರ ಬೆಂಬಲಿಗರು, ಬಿಜೆಪಿ ನಾಯಕರು ತಕ್ಷಣವೇ ಬಾಲಕನನ್ನು ಅಲ್ಲಿಂದ ತಪ್ಪಿಸಿದರು ಎಂದು ಹೇಳಲಾಗಿದೆ. ಇದೀಗ ಬಾಲಕ ನಾಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಘಟನೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಮಲ್‌ನಾಥ್ ಕೂಡ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಅವರು ಬೈಸನ್‌ರ ನಂತರದ ಆಸನದಲ್ಲಿ ಕುಳಿತಿದ್ದರು. ಆದಾಗ್ಯೂ, ಈ ಬಗ್ಗೆ ಅರಿವು ಇದ್ದುದನ್ನು ನಿರಾಕರಿಸಿರುವ ಕೇಂದ್ರ ಸಚಿವ ಕಮಲ್‌ನಾಥ್, ಹುಡುಗ ಬೈಸನ್‌ರ ಶೂಗಳ ಲೇಸ್ ಕಟ್ಟಿದುದನ್ನು ತಾನು ಗಮನಿಸಿಲ್ಲ ಎಂದು ಹೇಳಿದ್ದಾರೆ.
‘‘ನಾನು ಅದನ್ನು ಗಮನಿಸಲಿಲ್ಲ, ಒಂದು ವೇಳೆ ನಾನು ಗಮನಿಸುತ್ತಿದ್ದರೆ ಅಲ್ಲೇ ಅದನ್ನು ವಿರೋಧಿಸುತ್ತಿದ್ದೆ. 31 ವರ್ಷಗಳಿಂದ ಚಿಂದ್ವಾರ ಜಿಲ್ಲಾ ಸಂಸತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಾನು, ನನ್ನ ಜೀವನದಲ್ಲೇ ಇಂತಹುದು ಯಾವತ್ತೂ ನಡೆದಿರಲಿಲ್ಲ. ಇದು ಖಂಡನಾರ್ಹವಾದುದು. ನನ್ನ ಉಪಸ್ಥಿತಿಯಲ್ಲೇ ಇಂತಹ ಘಟನೆ ನಡೆದಿರುವ ಬಗ್ಗೆ ನನಗೆ ತುಂಬಾ ಬೇಸರವಾಗಿದೆ’’ ಎಂದು ಕಮಲನಾಥ್ ತಿಳಿಸಿದ್ದಾರೆ. ಘಟನೆಯು ಬೈಸನ್ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಒಂದು ಉತ್ತಮ ಅಸ್ತ್ರವಾಗಿ ಇದೀಗ ಕಾಂಗ್ರೆಸಿಗರಿಗೆ ಲಭಿಸಿದೆ.
‘‘ಇದು ಆದಿವಾಸಿಗಳು ಮತ್ತು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಬಗ್ಗೆ ಬೈಸನ್‌ರ ಮನಸ್ಥಿತಿಯನ್ನು ತೋರಿಸುತ್ತದೆ. ಶಿವರಾಜ್ ಸಿಂಗ್ ಚೌಹಾಣ್‌ರ ಸಚಿವ ಸಂಪುಟದಲ್ಲಿರುವ ಸಚಿವರ ವರ್ತನೆಗೆ ಇದು ಮತ್ತೊಂದು ಉದಾಹರಣೆಯಾಗಿದೆ. ವಿಷಯಕ್ಕೆ ಸಂಬಂಧಿಸಿ ಬೈಸನ್‌ರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿ ನಾವು ಶೀಘ್ರದಲ್ಲೇ ಪ್ರತಿಭಟನೆ ನಡೆಸಲಿದ್ದೇವೆ’’ ಎಂದು ಕಾಂಗ್ರೆಸ್ ವಕ್ತಾರ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ                                                                - ವಾರ್ತಾಭಾರತಿ

Advertisement

0 comments:

Post a Comment

 
Top