ಬೆಂಗಳೂರು, ಜ.13: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ವ್ಯಾಪ್ತಿಯ ಐದು ಸಾವಿರ ಎಕರೆ ಪ್ರದೇಶದಲ್ಲಿ ‘ಫೊಸ್ಕೊ’ ಉಕ್ಕು ಹಾಗೂ ಉಷ್ಣ ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸಲು ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಆ ಭಾಗದ ರೈತರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ.ಭೂಮಿ ನೀಡಲು ತಾವು ಸಿದ್ಧರಿದ್ದು, ಗದಗಿನಲ್ಲಿ ‘ಫೊಸ್ಕೊ’ ಕಂಪೆನಿ ಸ್ಥಾಪನೆಗೆ ಅನುಮತಿ ನೀಡಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಅಲ್ಲಿನ 117 ಸ್ಥಳೀಯ ರೈತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ, ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡುವಂತೆ ತಾನು ಸರಕಾರಕ್ಕೆ ನಿರ್ದೇಶನ ನೀಡುವುದಿಲ್ಲ ಎಂದು ತಿಳಿಸಿದೆ.ಫೊಸ್ಕೊ ಕಂಪೆನಿ ಸ್ಥಾಪಿಸುವ ವಿಚಾರ ರಾಜ್ಯ ಸರಕಾರಕ್ಕೆ ಬಿಟ್ಟದ್ದು. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ. ಅಗತ್ಯವಿದ್ದರೆ ತಮ್ಮ ಮನವಿ ಯನ್ನು ಎರಡು ವಾರಗಳ ಒಳಗೆ ಮತ್ತೊಮ್ಮೆ ಸರಕಾರಕ್ಕೆ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿದ ವಿಭಾ ಗೀಯ ಪೀಠ ಅರ್ಜಿ ವಜಾ ಮಾಡಿತು.
ಏನಿದು ವಿವಾದ?:ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಸಮೀಪ ಐದು ಸಾವಿರ ಎಕರೆ ಪ್ರದೇಶದಲ್ಲಿ ಉಕ್ಕು ಉತ್ಪಾದನಾ ಸಂಸ್ಥೆಯ ಉಕ್ಕು ಹಾಗೂ ಉಷ್ಣ ವಿದ್ಯುತ್ ಸ್ಥಾವರ ಘಟಕವನ್ನು ಸ್ಥಾಪಿಸಲು ರಾಜ್ಯ ಸರಕಾರ ಈ ಹಿಂದೆ ತೀರ್ಮಾನಿಸಿತ್ತು. 32 ಸಾವಿರ ಕೋಟಿ ರೂ.ವೆಚ್ಚದ ಯೋಜನೆ ಇದಾಗಿತ್ತು. ಭೂಮಿ ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 130 ಕೋಟಿ ರೂ. ಪಾವತಿಸಿತ್ತು. ಆದರೆ ಪೋಸ್ಕೋ ಉಕ್ಕು ಕಾರ್ಖಾನೆಗೆ ಭೂಮಿ ನೀಡಲು ಅಲ್ಲಿನ ರೈತರ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಕಾರ್ಖಾನೆ ಸ್ಥಾಪನೆಗೆ ವಿರೊಧಿಸಿ ಗದಗದ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು ಹಾಗೂ ಪರಿಸರವಾದಿಗಳು ಹಲವು ದಿನಗಳ ಕಾಲ ತೀವ್ರ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ 2011ರ ಜುಲೈನಲ್ಲಿ ಯಡಿಯೂರಪ್ಪರ ನೇತೃತ್ವದ ರಾಜ್ಯ ಸರಕಾರ ಕಾರ್ಖಾನೆ ಸ್ಥಾಪನೆಗೆ ಅನುಮತಿ ನಿರಾಕರಿಸಿತು.ಗದಗ ಜಿಲ್ಲೆಯ ಸುತ್ತಮುತ್ತ ತಮಗೆ ಸೇರಿದ ಸುಮಾರು 350 ಎಕರೆ ಭೂಮಿ ಇದೆ. ಇದು ಬಂಜರು ಭೂಮಿಯಾಗಿದ್ದು, ಇದರಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲ.ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡರೆ ಪರಿಹಾರದ ರೂಪದಲ್ಲಿ ಸರಕಾರದಿಂದ ರೈತರಿಗೆ ಹಣ ಸಿಗುತ್ತದೆ. ಕಾರ್ಖಾನೆ ಪ್ರಾರಂಭದಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸಿ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂಬುದು ಅರ್ಜಿದಾರರ ವಾದ.
ಸದ್ಯ ಗದಗ ಜಿಲ್ಲೆ ಸುತ್ತಮುತ್ತಲ ಗ್ರಾಮದ ವೀರಪ್ಪ ಕುರದಗಿ ಸೇರಿದಂತೆ 117 ರೈತರು ತಮ್ಮ 350 ಎಕರೆ ಭೂಮಿಯನ್ನು ಪೋಸ್ಕೋಗೆ ನೀಡಲು ಸಿದ್ಧರಿದ್ದೇವೆ. ಗದಗಿನಲ್ಲಿ ಪೋಸ್ಕೊ ಕಂಪೆನಿ ಸ್ಥಾಪನೆಗೆ ಅನುಮತಿ ನೀಡಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸುವ ಮೂಲಕ ರೈತರ ಆಸೆಗೆ ತಣ್ಣೀರು ಎರಚಿದೆ.
0 comments:
Post a Comment