ಪಾಕ್ ಧ್ವಜ ಹಾರಾಟ:
ಬಿಜಾಪುರ, ಜ.7: ಸಿಂಧಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಎಲ್ಲ ಆರು ಮಂದಿ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಡಿ.ಸಿ. ರಾಜಪ್ಪ ಪುನಃ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎನ್ನುವುದಕ್ಕೆ ಪೊಲೀಸರ ಬಳಿ ನಿರ್ವಿವಾದವಾದ ಮತ್ತು ನಿಖರವಾದ ದಾಖಲೆಗಳಿವೆ. ಸೂಕ್ತ ಸಂದರ್ಭದಲ್ಲಿ ಈ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ.ಈ ವಿಚಾರದಲ್ಲಿ ಯಾರೂ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.‘‘ಬಂಧಿತರು ನಮ್ಮವರಲ್ಲ.ನಮ್ಮಲ್ಲಿ ವಿದ್ಯಾರ್ಥಿ ಘಟಕವೇ ಇಲ್ಲ. ಈ ಬಗ್ಗೆ ಸಾಕ್ಷಗಳಿದ್ದರೆ ಪೊಲೀಸರು ಬಹಿರಂಗಪಡಿಸಲಿ.
ಪಾಕ್ ಧ್ವಜ ಹಾರಿಸಿದ ಘಟನೆಯ ಹಿಂದೆ ಆರೆಸ್ಸೆಸ್ ಕೈವಾಡವಿದೆ’’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಸೂಕ್ತ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬಂಧಿತ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎಂಬುದಕ್ಕೆ ಬಲವಾದ ಸಾಕ್ಷಗಳಿವೆ. ಸೂಕ್ತ ಸಂದರ್ಭದಲ್ಲಿ ಅದನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಈ ಬಗ್ಗೆ ಅನಗತ್ಯ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂಬ ಅವರ ಹೇಳಿಕೆ ಮುತಾಲಿಕ್‌ಗೆ ತಿರುಗೇಟು ನೀಡಿದಂತಾಗಿದೆ.
ಸಿಂಧಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಘಟನೆ ಜ.1ರಂದು ನಡೆದಿತ್ತು. ಈ ಸಂಬಂಧ ಜ.4ರಂದು ಶ್ರೀರಾಮಸೇನೆ ವಿದ್ಯಾರ್ಥಿಘಟಕದ ಸಿಂಧಗಿ ತಾಲೂಕು ಅಧ್ಯಕ್ಷ ರಾಕೇಶ್ ಸಿದ್ಧರಾಮ ಮಠ (19) ಸೇರಿದಂತೆ ಮಲ್ಲನಗೌಡ ವಿಜಯಕುಮಾರ್ ಪಾಟೀಲ್ (18), ಪರಶುರಾಮ್ ಅಶೋಕ್ ವಾಗ್ಮೋರೆ (20), ರೋಹಿತ್ ಈಶ್ವರ್ ನಾವಿ (18), ಅರುಣ್ ವಾಗ್ಮೋರೆ (20) ಹಾಗೂ ಸುನಿಲ್ ಮಡಿವಾಳಪ್ಪ ಅಗಸರ್ (18) ಎಂಬವರನ್ನು ಪೊಲೀಸರು ಬಂಧಿಸಿದ್ದರು.ಇದೇ ಸಂದರ್ಭದಲ್ಲಿ ಬಂಧಿತರೆಲ್ಲರೂ ಶ್ರೀರಾಮಸೇನೆಯ ಕಾರ್ಯಕರ್ತರು ಎಂದು ಎಸ್ಪಿ ಸ್ಪಷ್ಟಪಡಿಸಿದ್ದರು. ಆದರೆ, ಈ ಸಂಬಂಧ ಪ್ರಮೋದ್ ಮುತಾಲಿಕ್ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಎಸ್ಪಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
0 comments:
Post a Comment