PLEASE LOGIN TO KANNADANET.COM FOR REGULAR NEWS-UPDATES


 : ಮಡೆಸ್ನಾನ ನಿಷೇಧ ಸಮಾವೇಶದಲ್ಲಿ ಮಠಾಧೀಶರಿಂದ ಸರಕಾರಕ್ಕೆ ಒತ್ತಾಯ

ಬೆಂಗಳೂರು, ಜ.7: ‘‘ಕರ್ನಾಟಕ ಸರಕಾರ, ಮಾನವ ಘನತೆಗೆ ಕಳಂಕವನ್ನು ಉಂಟು ಮಾಡುತ್ತಿರುವ ಮಡೆಸ್ನಾನವನ್ನು ಬರುವ ಅಧಿವೇಶನದಲ್ಲಿ ನಿಷೇಧ ಮಾಡಬೇಕು ಎಂದು ನಾಡಿನ 21 ಸ್ವಾಮೀಜಿಗಳು ಒಕ್ಕೊರಲಲ್ಲಿ ಒತ್ತಾಯಿಸಿದ್ದಾರೆ. ನಿಡುಮಾಮಿಡಿ ಮಹಾಸಂಸ್ಥಾನ ಮಠ ಮತ್ತು ಮಾನವ ಧರ್ಮಪೀಠದ ವತಿಯಿಂದ ಶನಿವಾರ ನಗರದ ಶಿಕ್ಷಕರ ಸದನದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಜ್ಯದ 21ಕ್ಕೂ ಹೆಚ್ಚು ಮಠಾಧೀಶರು ಮಡೆಸ್ನಾನದ ಹೆಸರಲ್ಲಿ ಎಂಜಲೆಲೆಗಳ ಮೇಲೆ ಉರುಳಾಡುವವರು, ಅದಕ್ಕೆ ಪ್ರೋತ್ಸಾಹ, ಪ್ರೇರಣೆ, ಪೋಷಣೆ ಮತ್ತು ಸಮರ್ಥನೆ ನೀಡುವವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
‘‘ನಮ್ಮ ನಾಡಿನಲ್ಲಿ ಇರುವ ಸಿಡಿ ಮುಂತಾದ ಅನಾಗರಿಕ, ಅಮಾನವೀಯ ಆಚರಣೆಗಳನ್ನು ನಿಷೇಧ ಮಾಡಲಿಕ್ಕೆ ಆದಷ್ಟು ಬೇಗ ಕರ್ನಾಟಕವನ್ನು ಸಮಗ್ರವಾಗಿ ಹಾಗೂ ಸಮಸ್ತ ಜನರನ್ನು ಪ್ರತಿನಿಧಿಸುವ ಪ್ರಾಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಿ, ಆ ಸಮಿತಿಯ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರಕಾರ ನಮ್ಮ ಬೇಡಿಕೆಯನ್ನು ನಿರಾಕರಿಸಿದರೆ, ನಾವಿದನ್ನು ಸವಾಲಾಗಿ ಸ್ವೀಕರಿಸಿ ತೀವ್ರವಾಗಿ ಹೋರಾಟ ಮಾಡಲು ಸಿದ್ಧರಿದ್ದೇವೆ’’ ಎಂದು 21 ಮಠಗಳ ಸ್ವಾಮೀಜಿಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ವೈದಿಕ ವರ್ಗದ ಸಾಂಸ್ಕೃತಿಕ ಯಜಮಾನಿಕೆ, ಧಾರ್ಮಿಕ ಸರ್ವಾಧಿಕಾರಿತನ ಹಾಗೂ ಬ್ರಾಹ್ಮಣ್ಯದ ಅಂಧಾನುಕರಣೆಯ ಫಲವಾಗಿರುವ ಅಮಾನವೀಯ, ಅನಾಗರಿಕ ‘ಮಡೆಸ್ನಾನ’ ಪದ್ಧತಿ ಸೇರಿದಂತೆ ಧರ್ಮ ಹಾಗೂ ನಂಬಿಕೆಯ ಹೆಸರಲ್ಲಿ ಸಮಾಜದಲ್ಲಿ ಪ್ರಚಲಿತವಿರುವ ಎಲ್ಲ ಅನಿಷ್ಟ ಪದ್ಧತಿಗಳನ್ನು ಸರಕಾರ ತಕ್ಷಣ ಕಾನೂನಾತ್ಮಕ ರೀತಿಯಲ್ಲಿ ನಿಷೇಧಿಸಬೇಕು ಎಂದು ಪ್ರಗತಿಪರ ಚಿಂತನೆಯ ಮಠಾಧೀಶರು ಬಲವಾಗಿ ಆಗ್ರಹಿಸಿದ್ದಾರೆ.
ಸಮಾವೇಶ ಉದ್ಘಾಟಿಸಿ ಮಾತನಾಡಿದ ತೋಂಟ ದಾರ್ಯ ಮಹಾಸಂಸ್ಥಾನ ಮಠದ ಡಾ. ಸಿದ್ದಲಿಂಗ ಮಹಾ ಸ್ವಾಮಿ, ಧರ್ಮದ ಹೆಸರಲ್ಲಿ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದು, ಅದರಲ್ಲಿ ಮಡೆಸ್ನಾನವೂ ಒಂದು. ಇದು, ಮುಂದುವರಿದ ಜನಾಂಗ ಹಿಂದುಳಿದ ವರ್ಗಗಳಿಗೆ ನೀಡುವ ಶಿಕ್ಷೆ. ಮಾನವತೆಗೆ ಮಾಡುವ ಘೋರ ಅಪಚಾರವಾಗಿದೆ. ಈ ಅನಾಗರಿಕ ಪದ್ಧತಿಯನ್ನು ಸಮರ್ಥಿಸಿಕೊಳ್ಳುವುದು ಇಡೀ ಮಾನವ ಸಮಾಜವನ್ನು ಮುಜುಗರಕ್ಕೊಳಪಡಿಸಿದಂತೆ. ಮಡೆಸ್ನಾನ ಮಾಡುವವರು, ಅದಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾಡಿನ ಸಾಕ್ಷರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಶೇ.40ರಷ್ಟು ವೈದಿಕರಿದ್ದಾರೆ. ಬ್ರಾಹ್ಮಣರು ಅಂದರೆ ಮಡಿವಂತರು, ಸ್ವಚ್ಛತೆಗೆ ಆದ್ಯತೆ ನೀಡುವವರು ಎಂಬ ನಂಬಿಕೆ ಇದೆ. ಆದರೆ ಅವರೇ ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ. ಈ ಅನಾಗರಿಕ ಪದ್ಧತಿಯನ್ನು ಆಚರಣೆಗೆ ತರುವುದು, ಅದನ್ನು ಬೆಂಬಲಿಸುವುದು, ಸಮರ್ಥಿಸಿಕೊ ಳ್ಳುವುದು ಅಕ್ಷಮ್ಯ, ಅಸಹ್ಯ. ಕುಕ್ಕೆ ಸುಬ್ರಹ್ಮಣ್ಯ ಸರಕಾರಕ್ಕೆ ಸೇರಿದ ದೇವಸ್ಥಾನ. ಹಾಗಾಗಿ ಇಲ್ಲಿ ಜಾರಿಯಲ್ಲಿರುವ ಅನಿಷ್ಟ ಮಡೆಸ್ನಾನ ಪದ್ಧತಿಯನ್ನು ಸರಕಾರ ಕೂಡಲೇ ನಿಷೇಧಿಸಬೇಕು ಎಂದು ತೋಂಟದಾರ್ಯ ಸ್ವಾಮೀಜಿ ಒತ್ತಾಯಿಸಿದರು.
ಪೇಜಾವರ ಶ್ರೀ ಇಬ್ಬಂದಿತನ ಬಿಡಲಿ: ಮಡೆಸ್ನಾನವು 500 ವರ್ಷಗಳಿಂದ ಪರಂಪರಾಗತವಾಗಿ ನಡೆದು ಬಂದ ಪರಂಪರೆ. ಇದು ಜನರ ನಂಬಿಕೆ ವಿಚಾರ. ಕಾಲಾನುಕ್ರಮ ವಾಗಿ ಈ ಪದ್ಧತಿ ಹೊರಟು ಹೋಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಹೇಳಿರುವುದು ದುಖಃದ ಸಂಗತಿ. ಗ್ರಾಮೀಣ ಬಡವರ ಬದುಕನ್ನು ಹಸನು ಮಾಡುವ ಕಾಯಕದಲ್ಲಿ ತೊಡಗಿರುವ ಧರ್ಮಾಧಿಕಾರಿ ಯೊಬ್ಬರು (ವಿರೇಂದ್ರ ಹೆಗ್ಡೆ) ಮಡೆಸ್ನಾನವನ್ನು ಸಮರ್ಥಿಸಿ ಕೊಂಡಿರುವುದು ಸರಿಯಲ್ಲ. ಅದೇ ರೀತಿ ಈ ವಿಚಾರದಲ್ಲಿ ಪೇಜಾವರ ಶ್ರೀಗಳು ಇಬ್ಬಂದಿತನ ನೀತಿ ಕೈಬಿಡಬೇಕು. ಈ ಮೂವರ ಧೋರಣೆ ‘ನಿಂದ ನೆಲದ ಗುಣವೂ; ಕಾಲದ ಗುಣವೂ’ ಎಂಬಂತಾಗಿದೆ ಎಂದು ತೋಂಟದ ಶ್ರೀಗಳು ಮಾರ್ಮಿಕವಾಗಿ ನುಡಿದರು.

ಪೇಜಾವರಶ್ರೀ ಅಡ್ಡಗೋಡೆ ಮೇಲೆ ದೀಪ ಇಡುವುದನ್ನು ಬಿಡಲಿ: ಸಾಣೆಹಳ್ಳಿ ಸ್ವಾಮೀಜಿ ಸಮಾವೇಶದಲ್ಲಿ ಪ್ರಾಸ್ತವಿಕ ನುಡುಗಳನ್ನಾಡಿದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿ, ಮಡೆಸ್ನಾನ, ಮಡೆಸೇವೆ ಹೆಸರಲ್ಲಿ ಕೆಲವು ‘ಜಾಣರು’ ಭ್ರಮೆಗಳನ್ನು ಹುಟ್ಟಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದಯೇ ಹೊರತು, ಸುಧಾರಣೆ ಆಗಲ್ಲ. ಮಡೆಸ್ನಾನ ಬಚ್ಚಲು ನೀರು ಇದ್ದ ಹಾಗೆ. ಇದರಿಂದ ಚರ್ಮರೋಗ ವಾಸಿ ಆಗಲ್ಲ. ಬದಲಾಗಿ ಹೆಚ್ಚಾ ಗುತ್ತದೆ. ಒಂದೊಮ್ಮೆ ಮಡೆಸ್ನಾನದಿಂದ ಚರ್ಮರೋಗ ನಿವಾ ರಣೆ ಆಗುತ್ತದೆ ಎಂದಾದರೆ, ಆಸ್ಪತ್ರೆ, ವೈದ್ಯರ ಅಗತ್ಯವೇನು, ಎಲ್ಲ ಕಡೆ ದೇವಸ್ಥಾನಗಳನ್ನು ನಿರ್ಮಿಸಿ ಎಂಜಲೆಲೆಗಳ ಮೇಲೆ ಉರುಳುವ ವ್ಯವಸ್ಥೆ ಮಾಡಬಹುದಲ್ಲ ಎಂದು ಮಾರ್ಮಿಕ ವಾಗಿ ಪ್ರಶ್ನಿಸಿದರು. ಈ ಅನಾಗರಿಕ ಸ್ಥಿತಿಯ ವಿರುದ್ಧ ಪ್ರತಿಭ ಟನೆ ಮಾಡಬೇಕಾದ ಮಠಾಧೀಶರು ‘ಅಡ್ಡಗೋಡೆ ಮೇಲೆ ದೀಪ ಇಟ್ಟ’ ರೀತಿಯಲ್ಲಿ ಮಾತನಾಡಿ ಜಾಣತನ ಮೆರೆಯು ತ್ತಾರೆ. ಅದರಲ್ಲಿ ಪೇಜಾವರಶ್ರೀ ಹಿಂದೆ ಬಿದ್ದಿಲ್ಲ. ಈ ವಿಚಾರ ದಲ್ಲಿ ಅವರದು ಖಚಿತ ಅಭಿಪ್ರಾಯಗಳಿಲ್ಲ ಎಂದು ಟೀಕಿಸಿದರು.
ಒಕ್ಕಲಿಗ ಮಹಾಸಂಸ್ಥಾನದ ಶ್ರೀಚಂದ್ರಶೇಖರನಾಥ ಸ್ವಾಮೀಜಿ, ಭಾಲ್ಕಿ ಹಿರೆಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು, ಲಿಂ ಗಾಯತ ಪಂಚಮಸಾಲಿ ಗುರುಪೀಠ, ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಭಗೀರಥ ಪೀಠ ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶೀವಯೋಗೀಶ್ವರ ಸಂಸ್ಥಾನ ಇಂಚಲದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಬಸವಯೋಗ ಕೇಂದ್ರ ಬೀದರ್‌ನ ಸಿದ್ದರಾಮ ಬೆಲ್ದಾಳ ಶರಣರು, ಪದ್ಮಸಾಲಿ ಗುರುಪೀಠ, ಹರಿಹರದ ಪ್ರಭುಲಿಂಗ ಮಹಾಸ್ವಾಮೀಜಿ, ವನಶ್ರೀ ಸಂಸ್ಥಾನಮಠ, ಬಿಜಾಪುರದ ಜಯದೇವ ಮಹಾಸ್ವಾಮೀಜಿ, ಬೋವಿ ಗುರುಪೀಠ ಬಾಗಲಕೋಟೆಯ ಇಮ್ಮಡಿ ಸಿದ್ದರಾಮಸ್ವಾಮೀಜಿ ಸೇರಿದಂತೆ ಒಟ್ಟು 21 ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವೈದಿಕ ವರ್ಗದ ಸಾಂಸ್ಕೃತಿಕ ಯಜಮಾನಿಕೆ ಸರಿಯಲ್ಲ: ನಿಡುಮಾಮಿಡಿ

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಡುಮಾಮಿಡಿ ಸ್ವಾಮೀಜಿಗಳು, ನಂಬಿಕೆ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಆದರೆ, ಆ ನಂಬಿಕೆಗಳು ಇನ್ನೊಬ್ಬರಿಗೆ ಕೇಡುಂಟು ಮಾಡಬಾರದು. ಅನೇಕ ನಂಬಿಕೆಗಳು ಮಾನವ ಘನತೆ, ಮನುಷ್ಯನ ಆತ್ಮಸ್ಥೈರ್ಯ ಕುಂದಿಸುವಂಥದ್ದಾಗಿವೆ. ಮಡೆಸ್ನಾನ ವೈದಿಕ ಪರಂಪರೆಯ ಮಗು ಆಗಿದ್ದರೆ, ಪಂಕ್ತಿ ಭೇದ ತಾಯಿ ಇದ್ದಂತೆ. ಯಾವುದೇ ಒಂದು ವರ್ಗ ಸಾಂಸ್ಕೃತಿಕ ಯಜಮಾನಿಕೆ, ಧಾರ್ಮಿಕ ಸರ್ವಾಧಿಕಾರಿತನ ಮೆರೆಯುವುದು ಸರಿಯಲ್ಲ ಎಂದರು.
ಮಠಾಧೀಶರ ಬಗ್ಗೆ ಜಿಗುಪ್ಸೆ, ಅನುಮಾನಗಳು ವ್ಯಾಪಕ ವಾಗಿರುವಾಗ ಮಠಾಧೀಶರು ಯಥಾಸ್ಥಿತಿವಾದಿಗಳು, ಪ್ರಗತಿಪರ ಆಲೋಚನೆಗಳನ್ನು ಬೆಂಬಲಿಸಲ್ಲ, ಸಮಾಜದ ಸುಧಾರಣೆ ಮಾಡಲ್ಲ ಎಂಬ ಅಭಿಪ್ರಾಯಗಳು ದಟ್ಟವಾ ಗಿವೆ. ಅದೇ ರೀತಿಯೇ ಮಠಾಧೀಶರು ನಡೆದುಕೊಳ್ಳುತ್ತಿ ದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಆದರೆ, ಜನನಾಯ ಕರು, ಧಾರ್ಮಿಕ ನಾಯಕರು ಬದಲಾ ವಣೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ದುರಂತ. ಧಾರ್ಮಿಕ ನಾಯಕರು ಬದಲಾವಣೆಯ ಪರವೋ ಅಥವಾ ವಿರುದ್ಧವೋ ಎನ್ನುವುದು ಸ್ಪಷ್ಟಪಡಿಸಬೇಕಾದ ಕಾಲವಿದು. ಉದಾತ್ತ ವೌಲ್ಯಗಳ ಪ್ರತಿಪಾದನೆಗೆ ಜಾತಿ-ಮತಗಳಿಗೆ ಮೀರಿದ ಚಿಂತನೆ ನಡೆಸುವ ಅಗತ್ಯವಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಪ್ರತಿಪಾದಿಸಿದರು.
ತಜ್ಞರ ಸಮಿತಿ ನೇಮಕ ಮಾಡಲಿ: ಮಡೆಸ್ನಾನದ ಹೆಸರಲ್ಲಿ ನಡೆದುಕೊಂಡು ಬರುತ್ತಿರುವ ಅನಿಷ್ಟ ಪದ್ಧತಿಯ ಕುರಿತಂತೆ ಸಮಗ್ರ ಅಧ್ಯಯನ ನಡೆಸಲು ಸರಕಾರ ಎಲ್ಲ ವರ್ಗಗಳ ತಜ್ಞರನ್ನೊಳಗೊಂಡ ಪ್ರಾತಿನಿಧಿಕ ಸಮಿತಿ ರಚಿಸಿ ವರದಿ ತರಿಸಿಕೊಂಡು ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿ. ಮಡೆಸ್ನಾನ ಸೇರಿದಂತೆ ಬ್ರಾಹ್ಮಣ್ಯದ ಅಂಧಾನು ಕರಣೆ ಫಲವಾಗಿ ಜಾರಿಯಲ್ಲಿರುವ ಅನೇಕ ಅನಿಷ್ಟಗಳನ್ನು ಸರಕಾರ ನಿಷೇಧಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಮಾವೇಶವನ್ನು ಸರಕಾರ ಲಘುವಾಗಿ ಪರಿಗಣಿಸಬಾ ರದು ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಶನಿವಾರ ಏರ್ಪಡಿಸಿದ್ದ ‘ಮಡೆಸ್ನಾನ ನಿಷೇಧಿಸಲು ಒತ್ತಾಯಿಸಿ ಪ್ರಗತಿಪರ ಚಿಂತನೆಯ ಮಠಾಧೀಶರ ಸಮಾವೇಶದಲ್ಲಿ ರಾಜ್ಯದ ಹಲವು ಮಠಾಧೀಶರು ಪಾಲ್ಗೊಂಡಿದ್ದರು

Advertisement

0 comments:

Post a Comment

 
Top