ಮಂಗಳೂರು, ಡಿ.25: ಮಡೆಸ್ನಾನ ನಿಷೇಧಿಸುವ ಬಗ್ಗೆ ಜ.7ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿಡುಮಾಮಿಡಿ ಸ್ವಾಮೀಜಿ ತನಗೆ ನೇರ ಆಹ್ವಾನ ನೀಡಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುರತ್ಕಲ್‌ನಲ್ಲಿ ರವಿವಾರ ನಡೆದ ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀನಿವಾಸ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರೊಂದಿಗೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಕಾರ್ಯಕ್ರಮಕ್ಕೆ ದಿನಾಂಕವನ್ನು ನಿಗದಿ ಮಾಡುವಾಗಲೂ ತನ್ನೊಂದಿಗೆ ಚರ್ಚಿಸಿಲ್ಲ. ಪತ್ರಿಕೆ ಓದಿದಾಗ ತನಗೆ ಈ ವಿಷಯ ತಿಳಿಯಿತು. ಅದೇ ದಿನ ಚೆನ್ನೈಯಲ್ಲಿ ಪೂರ್ವ ನಿಗದಿತ ಕಾರ್ಯಕ್ರಮವೊಂದು ಇರುವುದರಿಂದ ತಾನು ಚೆನ್ನೈಗೆ ತೆರಳಲಿದ್ದೇನೆ. ಸಾಧ್ಯವಾದರೆ ಮಧ್ಯಾಹ್ನದ ನಂತರ ಶಿಕ್ಷಕರ ಸದನಕ್ಕೆ ಹೋಗುತ್ತೇನೆ ಎಂದು ಪೇಜಾವರ ಶ್ರೀ ಹೇಳಿದರು.
ಘೋಷಣೆ ಕೂಗಬಾರದು: ಮಧ್ಯಾಹ್ನದನಂತರ ತಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ತನ್ನ ವಿರುದ್ಧ ಯಾವುದೇ ಘೋಷಣೆ ಕೂಗಬಾರದು, ರಾಜಕೀಯ ದೃಷ್ಟಿಕೋನದಿಂದ ತನ್ನನ್ನು ನೋಡಬಾರದು. ಶಾಂತಿಯುತ ಚರ್ಚೆಗೆ ತಾನು ಮುಕ್ತವಾಗಿದ್ದೇನೆ ಎಂದು ಪೇಜಾವರ ಶ್ರೀ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ದ್ವಂದ್ವಾಚಾಯ...: ಪೇಜಾವರ ಶ್ರೀಯನ್ನು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದ್ವಂದ್ವಾಚಾರ್ಯ ಎಂದು ಸಂಬೋಧಿಸಿರುವುದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಆ ದಿನ ಅವರೂ ಕೂಡ ಚರ್ಚೆಗೆ ಬರಲಿ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು. ಮಡೆಸ್ನಾನದ ವಿರುದ್ಧ ಸ್ವಾಮೀಜಿಗಳು ಕೈಗೊಳ್ಳುವ ಪಾದಯಾತ್ರೆಯಲ್ಲಿ ತಾವು ಕೂಡ ಪಾಲ್ಗೊಳ್ಳುವಿರಾ ಎಂದು ಪ್ರಶ್ನಿಸಿದಾಗ, ತಾನು ಮಡೆಸ್ನಾದ ಪರವೂ ಇಲ್ಲ, ವಿರೋಧವೂ ಇಲ್ಲ. ತಟಸ್ಥ ನಿಲುವನ್ನು ಹೊಂದಿರುವ ಬಗ್ಗೆ ನಾನು ಈಗಾಗಲೇ ಹೇಳಿಯಾಗಿದೆ. ಮಡೆಸ್ನಾನ ದಲಿತ ವಿರೋಧಿಯೂ ಅಲ್ಲ, ಪುರೋಹಿತ ಶಾಹಿಗಳ ಕುತಂತ್ರವೂ ಅಲ್ಲ ಎಂದು ಪೇಜಾವರ ಶ್ರೀ ಸ್ಪಷ್ಟಪಡಿಸಿದರು.
0 comments:
Post a Comment