ಯಡ್ಡಿ ಬಿಡೆ-ಈಶ್ವರಪ್ಪ ಕೊಡೆ :
ಶಿವಮೊಗ್ಗ, ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ, ಮುಖಂಡರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಮತ್ತೊಂದೆಡೆ ವಿವಾದದ ಕೇಂದ್ರ ಬಿಂದುವಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬೀಡು ಬಿಟ್ಟಿದ್ದು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ರವಿವಾರ ಯಡಿಯೂರಪ್ಪ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಸಮೀಪದ ಧಾರ್ಮಿಕ ಕ್ಷೇತ್ರ ಶಿವನಪಾದಕ್ಕೆ ಭೇಟಿ ನೀಡಿದರು. ಇದನ್ನು ಹೊರತುಪಡಿಸಿದರೆ, ಮತ್ತಾವುದೇ ಸಾರ್ವಜನಿಕ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿಲ್ಲ.
ಇದು ತೀವ್ರ ಕುತೂಹಲ ಮೂಡಿಸಿದೆ. ಚರ್ಚೆ:
ಮತ್ತೊಂದೆಡೆ ಯಡಿ ಯೂರಪ್ಪಹಾಗೂ ಈಶ್ವರಪ್ಪನವರ ನಡುವೆ ಮತ್ತೆ ಭಿನ್ನಾಭಿಪ್ರಾಯ ತಲೆದೋರಿರುವುದು ಶಿವಮೊಗ್ಗ ಬಿಜೆಪಿ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಮುಂದೇನು ಎಂಬ ಲೆಕ್ಕಾಚಾರದಲ್ಲಿ ಮುಖಂಡರು ತೊಡಗಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕದ ವೇಳೆ, ಸೌಜನ್ಯಕ್ಕಾದರೂ ಯಡಿಯೂರಪ್ಪನವರನ್ನು ಕೇಳದೆ ಈಶ್ವರಪ್ಪ ನೇಮಕ ಮಾಡಿದ್ದಾರೆ ಎಂಬುದು ಯಡಿಯೂರಪ್ಪ ಬಣ ದಲ್ಲಿ ಅಸಮಾಧಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಹಾಗೆಯೇ ಶಿವಮೊಗ್ಗ ನಗರಸಭೆ ಮಹಾನಗರ ಪಾಲಿಕೆಯಾದರೆ ಈಗಿರುವ ಅಧ್ಯಕ್ಷ -ಉಪಾಧ್ಯಕ್ಷರೇ ಮೇಯರ್-ಉಪಮೇಯರ್ ಆಗಿ ಮುಂದುವರಿಯಲಿದ್ದಾರೆಂದು ಈಶ್ವರಪ್ಪಬಹಿರಂಗವಾಗಿಯೇ ಘೋಷಿಸಿದ್ದರು.
ಇದು ಬಿಎಸ್‌ವೈ ಬಣದಲ್ಲಿ ಆಕ್ರೋಶ ಮೂಡಿಸಿದೆ. ಇದು ಸೇರಿದಂತೆ, ಈ ಹಿಂದಿನಿಂದಲೂ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪಹಾಗೂ ಈಶ್ವರಪ್ಪನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ನಡುವೆ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪರು ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿಯೇ ಎದುರಿಸಬೇಕು ಎಂಬುದು ಪಕ್ಷದ ಹೈಕಮಾಂಡ್ ಅಭಿಪ್ರಾಯವಾಗಿದೆ ಎಂದು ಹೇಳಿದ್ದರು. ಇದಕ್ಕೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಯಡಿಯೂರಪ್ಪ, ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದರು.
ಈ ಹಿಂದಿನಿಂದಲೂ ಬಿಜೆಪಿಯೆಂದರೆ ಯಡಿಯೂರಪ್ಪ ಎಂಬ ಭಾವನೆ ಜನಮಾನಸದಲ್ಲಿದೆ. ನನ್ನ ನಾಯಕತ್ವ ಬೇಡವಾದರೆ ಈಶ್ವರಪ್ಪ ಬೇರೆ ನಾಯಕನನ್ನು ಹುಡುಕಿಕೊಳ್ಳಲಿ ಎಂದು ತಿರುಗೇಟು ನೀಡಿದ್ದರು. ಜೊತೆಗೆ ಈಶ್ವರಪ್ಪರ ಮಾತಿಗೆ ತಾವು ಯಾವುದೇ ಸೊಪ್ಪು ಹಾಕುವುದಿಲ್ಲ ಎಂದು ಎದಿರೇಟು ನೀಡಿದ್ದರು. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಶಕ್ತಿ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ, ದಿನೇ ದಿನೇ ಬಿಜೆಪಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ. ಮುಂದೆ ಇದು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
0 comments:
Post a Comment