♦ ಪೊಲೀಸರಿಂದ ಲಾಠಿಚಾರ್ಜ್ ♦ ಐವರಿಗೆ ಗಾಯ
ಚಿಕ್ಕಮಗಳೂರು, ಡಿ.13: ತಾಲೂಕಿನ ಆಲ್ದೂರು ಹೋಬಳಿ ಕೇಂದ್ರದ ವೃತ್ತವೊಂದರಲ್ಲಿ ಭಗವಾಧ್ವಜವನ್ನು ತೆರವುಗೊಳಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಟ್ಟು ಅವರ ಪ್ರತಿಮೆ ಪ್ರತಿಷ್ಠಾಪಿಸಲು ಶಂಕುಸ್ಥಾಪನೆ ನಡೆಸಿದ ಸ್ಥಳೀಯ ಗ್ರಾಪಂ ಕ್ರಮವನ್ನು ಖಂಡಿಸಿ ಬಜರಂಗದಳ ಮತ್ತು ವಿಎಚ್‌ಪಿ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಭಟನೆ ವೇಳೆ ಆಲ್ದೂರು ಪಟ್ಟಣದಲ್ಲಿ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದು ಪೊಲೀಸರ ಸಹಿತ 5 ಮಂದಿ ಗಾಯಗೊಂಡಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ.
ಆಲ್ದೂರು ಗ್ರಾಪಂ ನ.24ರಂದು ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಹವ್ವಲ್ಲಿ ವೃತ್ತವನ್ನು ತೆರವುಗೊಳಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡುವ ಪ್ರಯತ್ನ ನಡೆಸಿತ್ತು. ಅದರ ಅಂಗವಾಗಿ ರಸ್ತೆ ನಡುವೆ ವೃತ್ತಾಕಾರದಲ್ಲಿದ್ದ ಕಟ್ಟೆಯನ್ನು ತೆರವುಗೊಳಿಸಿ ಶಂಕುಸ್ಥಾಪನೆಯನ್ನು ನೆರವೇರಿಸಿತ್ತು. ಈ ಸಮಯದಲ್ಲಿ ಡಿಎಸ್‌ಎಸ್, ಬಿಎಸ್ಪಿ ಸಹಿತ ಪಿಎಫ್‌ಐ ಸಂಘಟನೆಗಳು ಗ್ರಾಪಂ ನಿಲುವಿಗೆ ಬೆಂಬಲ ಸೂಚಿಸಿ ಘೋಷಣೆಗಳನ್ನು ಕೂಗಿತ್ತೆನ್ನಲಾಗಿದೆ.
ಗ್ರಾಪಂ 24ರಂದು ನಡೆಸಿದ ಸಭೆಗೆ ಬಜರಂಗದಳ, ವಿಎಚ್‌ಪಿ ಸಹಿತ ಸ್ಥಳೀಯ ಬಹುತೇಕ ಎಲ್ಲ ಸಂಘಟನೆಗಳು ಹಾಜರಿದ್ದವು. ದತ್ತ ಜಯಂತಿ ಆಚರಣೆ ಮುಕ್ತಾಯದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಅಂದು ಗ್ರಾಪಂ ನಿರ್ಣಯ ಕೈಗೊಂಡಿದ್ದನ್ನು ಎಲ್ಲ ಸಂಘಟನೆಗಳ ಮುಖಂಡರು ಒಪ್ಪಿಗೆ ಸೂಚಿಸಿದ್ದರು. ಗ್ರಾಪಂ ನಿರ್ಣಯದಂತೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಿ ಹೆಸರಿಡುವ ಕಾರ್ಯಕ್ರಮಕ್ಕೆ ನಿನ್ನೆ ಶಂಕುಸ್ಥಾಪನೆ ನಡೆಸುವ ವೇಳೆ ಬಜರಂಗದಳ ಮತ್ತು ವಿಎಚ್‌ಪಿ ತೀವ್ರವಾಗಿ ವಿರೋಧಿಸಿದ್ದವು. ಆದರೆ ಪಟ್ಟು ಸಡಿಲಿಸದ ಗ್ರಾಪಂ, ವೃತ್ತದಿಂದ ಭಗವಾಧ್ವಜವನ್ನು ತೆರವುಗೊಳಿಸಿ ಶಂಕುಸ್ಥಾಪನೆ ನಡೆಸಿತ್ತು. ಇದರಿಂದ ಅಕ್ರೋಶಗೊಂಡ ಸಂಘ ಪರಿವಾರದ ಸಂಘಟ ನೆಗಳು ಇಂದು ಆಲ್ದೂರು ಬಂದ್‌ಗೆ ಕರೆ ನೀಡಿತ್ತು.
ಬೆಳಗ್ಗೆ ಬಂದ್ ಸಮಯದಲ್ಲಿ ಬಸ್ ನಿಲ್ದಾಣದ ಬಳಿಯಿಂದ ವಿವಾದಿತ ವೃತ್ತದ ವರೆಗೆ ಮೆರವಣಿಗೆ ನಡೆಸಿದ ಸಂಘ ಪರಿವಾರದ ಸಂಘಟನೆಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ಸಂದರ್ಭ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಲಾಠಿ ಚಾರ್ಜ್ ನಡೆಸಲು ಪೊಲೀಸರಿಗೆ ಸೂಚಿಸಿದರೆನ್ನ ಲಾಗಿದೆ. ಹಿಂಸಾಚಾರಕ್ಕೆ ಪ್ರತಿಭಟನೆ ತಿರುಗಿದ್ದನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪುಗೂಡಿದ್ದ ಜನರನ್ನು ಚದುರಿಸಿದರು.
ಬಳಿಕ ಸುಮಾರು 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದರು. ಕಲ್ಲು ತೂರಾಟದಿಂದ ಆಲ್ದೂರು ಠಾಣೆಯ ಪಿಎಸ್ಸೈ ಪರಮೇಶ್ವರ, ಸ್ಥಳೀಯ ಪತ್ರಿಕೆಯೊಂದರೆ ಛಾಯಾಗ್ರಾಹಕ ಪ್ರಕಾಶ್ ಸಹಿತ ಐದು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಹತೋಟಿ ಯಲ್ಲಿದ್ದು, ಜಿಲ್ಲಾಡಳಿತ ತೀವ್ರ ನಿಗಾವಹಿಸಿದೆ. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಿಂಸಾಚಾರ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ
0 comments:
Post a Comment