ಕೊಪ್ಪಳ, ಡಿ. ೧೩. ಕೊಪ್ಪಳ ಜಿಲ್ಲೆಯ ಹೆಮ್ಮೆಯ ಐತಿಹಾಸಿಕ ತಾಣ ಕನಕಗಿರಿಯನ್ನು ರಾಜ್ಯ ಹಾಗೂ ದೇಶದ ಜನರಿಗೆ ಪರಿಚಯಿಸಲು, ಇತಿಹಾಸವನ್ನು ತಿಳಿಸಲು ಹಾಗೂ ಸಾಂಸ್ಕೃತಿಕವಾಗಿ ಬೆಳೆಸಲು ಖಾಸಗಿಯಾಗಿ ಕನಕಗಿರಿ ಉತ್ಸವ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವದಾಗಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಅಲ್ಲಿನ ಜನರ ಎರಡು ದಶಕದ ಕನಸನ್ನು ಪ್ರಥಮ ಬಾರಿಗೆ ೨೦೦೮ ರಲ್ಲಿ ದಲಿತ ಸೇನೆ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಿ ನನಸು ಮಾಡಲಾಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಇಕ್ಬಾಲ್ ಅನ್ಸಾರಿ ಉತ್ಸವವನ್ನು ಉದ್ಘಾಟಿಸಿದ್ದರು, ಜಿ. ಪಂ. ಅಧ್ಯಕ್ಷೆ ಮಾಲತಿ ನಾಯಕ್ ಅನೇಕ ಜನಪ್ರತಿನಿಧಿಗಳ ಜೊತೆಗೆ ಕನಕಗಿರಿ ಸಂಸ್ಥಾನದ ರಾಜಮನೆತನದ ಎಲ್ಲರೂ ಆಗಮಿಸಿದ್ದರು. ಅಲ್ಲಿಗೆ ದಶಕದ ಶಾಪ ವಿಮೋಚನೆಗೊಂಡು, ಸರಕಾರದಿಂದ ಉತ್ಸವ ನಡೆಯಿತು. ಆದರೆ ಸರಕಾರದ ಹಣ ಕೊಳೆಯುತ್ತ ಬಿದ್ದಿದ್ದರೂ ಕಳೆದ ವರ್ಷ ಉತ್ಸವ ಮಾಡಲು ಆಗಲಿಲ್ಲ, ಇಟಗಿ ಉತ್ಸವವನ್ನು ಒಮ್ಮೆ ಮಾಡಿ ಕೈತೊಳೆದುಕೊಂಡಂತೆ ಇದನ್ನೂ ಮಾಡಿದರೆ, ಫೆಬ್ರವರಿಯಲ್ಲಿ ಖಾಸಗಿ ಸಂಘ ಸಂಸ್ಥೆಗಳಿಂದ ಅದ್ಧೂರಿಯಾಗಿ, ಚಲನಚಿತ್ರ, ರಂಗಭೂಮಿ ಕಲಾವಿದರನ್ನು ಸೇರಿಸಿಕೊಂಡು ಉತ್ಸವ ಮಾಡುವದಾಗಿ ಗೊಂಡಬಾಳ ತಿಳಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ತುರ್ತಾಗಿ ಕ್ರಮತೆಗೆದುಕೊಂಡು ಉತ್ಸವ ಮಾಡಲು ದಸಾಪ ಆಗ್ರಹಿಸಿದೆ.
ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಲೆಕ್ಕಪತ್ರಗಳನ್ನು ಮುಂದಿನ ವಾರ ಒಪ್ಪಿಸಲಾಗುವದು, ಸುಮಾರು ೭೮ ಸಾವಿರ ಬಾಕಿ ಕೊಡಬೇಕಾಗಿದ್ದು, ಸಮ್ಮೇಳನಕ್ಕೆ ಸಹಾಯ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದ ನಾಲ್ಕು ಜನ ಜಿಲ್ಲಾ ಪಂಚಾಯತ ಸದಸ್ಯರು, ಹಲವು ಜನಪ್ರತಿನಿಧಿಗಳು ಕೈಕೊಟ್ಟಿದ್ದರಿಂದ ಬಾಕಿ ಕಟ್ಟಲು ಸಾಧ್ಯವಾಗಿಲ್ಲ ಆದ್ದರಿಂದ ಲೆಕ್ಕಪತ್ರ ಕೊಡಲು ತಡವಾಗಿದೆ ಎಂದೂ ಸಹ ತಿಳಿಸಿದ್ದಾರೆ.
0 comments:
Post a Comment