ಕುಷ್ಟಗಿ ಇಲ್ಲಿಗೆ ಸಮೀಪದ ಹನುಮನಾಳ ಗ್ರಾಮದ ಖ್ಯಾತ ಸಿತಾರ್ ವಾದಕರಾಗಿರುವ ಗುರುನಾಥ ಪತ್ತಾರ ಬಿಡುವಿನ ವೇಳೆಯಲ್ಲಿ ಅಚ್ಚರಿ ಮೂಡಿಸುವ ಸುಂದರ ಕಲಾಕೃತಿಗಳನ್ನು ತಯಾರಿಸಿ ನೋಡಗರು ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ.
ಕಿರು ಬೆರಳು ಹೋಗಲೂ ಸಾಧ್ಯವಿಲ್ಲದಂತಹ ಗಾಜಿನ ಬಾಟಲಿಯ ಬಾಯಿಯ ಒಳಗಡೆ ತಮ್ಮ ಕೈಚಳಕದ ಮೂಲಕ ದೊಡ್ಡದಾಗಿರುವ ಕಚ್ಚಾ ವಸ್ತುಗಳನ್ನು ತೂರಿಸಿ ತಂತಿ, ಕಡ್ಡಿಗಳ ಸಹಾಯದಿಂದ ಬಾಟಲಿಯ ಒಳಗಡೆ ಸುಂದರ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ.ಇತ್ತೀಚೆಗೆ ತಯಾರಿಸಿದ ಚಲಿಸುವ ರಥ ಅದ್ಭುತವಾದ ಕಲಾಕೃತಿಯಾಗಿದೆ. ಈ ಬಾಟಲಿಯನ್ನು ಅಲುಗಾಡಿಸಿದರೆ ಅಥವಾ ಉರುಳಿಸಿದರೆ ಒಳಗಿರುವ ರಥ ಚಕ್ರಗಳು ಚಲಿಸಿದಂತೆ ಭಾಸವಾಗುತ್ತದೆ.
ಬಾಟಲಿಯೊಳಗೆ ಚಕ್ರಗಳನ್ನು, ಚಕ್ರಗಳಿಗೆ ಹಾಕಿರುವ ಕಟ್ಟಿಗೆಯ ಎಕ್ಸೆಲ್‌ಗಳನ್ನು ಒಳಗಡೆ ತೂರಿಸಿದ್ದು ಹೇಗೆ ಎಂದು ಪತ್ತಾರ ಅವರನ್ನು ಕೇಳಿದರೆ ತಾಳ್ಮೆ, ಶ್ರದ್ಧೆ ಹಾಗೂ ಉತ್ಸಾಹ ಇದ್ದರೆ ಇದಕ್ಕಿಂತಲೂ ಮಿಗಿಲಾದ ಕಲಾಕೃತಿಗಳನ್ನು ತಯಾರಿಸಬಹುದು ಎಂದು ಹೇಳುತ್ತಾರೆ.
ಬಾಟಲಿಯ ವ್ಯಾಸದ ಅಳತೆಗೆ ತಕ್ಕಂತೆ ಮೊದಲೆ ಕಟ್ಟಿಗೆಯ ರಥ ತಯಾರಿಸಿ ಬಾಟಲಿ ಒಳಗಡೆ ತೂರುವ ಮುಂಚೆ ಅದನ್ನೆಲ್ಲ ಅಳತೆಗೆ ತಕ್ಕಂತೆ ತುಂಡಾಗಿ ಕತ್ತರಿಸುತ್ತಾರೆ. ಒಂದೊಂದೆ ವಸ್ತುಗಳನ್ನು ಬಾಟಲಿಯೊಳಗಡೆ ಸೇರಿಸಿ ಸೂಕ್ಷ್ಮವಾಗಿ ಪ್ರತಿಯೊಂದು ವಸ್ತುಗಳನ್ನು ಜೋಡಿಸುತ್ತಾರೆ, ನಂತರ ಬ್ರಶ್ ಸಹಾಯದಿಂದ ವಿವಿಧ ಬಣ್ಣ ಲೇಪಿಸುತ್ತಾರೆ.
ಬಾಟಲಿಯೊಳಗೆ ಗದೆ ಹಿಡಿದು ನಿಂತಿರುವ ಹಿರಣ್ಯಕಷ್ಯಪು, ಮಕ್ಕಳ ಆಟಿಕೆಗಳು, ಸೋಫಾ-ಚೇರ್, ಅರಮನೆ, ದೇವರು- ಹೀಗೆ ಹಲವಾರು ಕಲಾಕೃತಿಗಳನ್ನು ಮೂಡಿಸಿದ್ದಾರೆ.
ಇದೆಲ್ಲದರ ಜೊತೆಗೆ ಹತ್ತಾರು ವರ್ಷಗಳ ಹಿಂದೆ ಗುಡಿಸಲಿನಲ್ಲಿ ಇವರು ಆರಂಭಿಸಿದ ಶ್ರೀಗುರು ಗಂಗಾಧರೇಶ್ವರ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ರಾಷ್ಟ್ರಮಟ್ಟದವರೆಗೆ ತಮ್ಮ ಪ್ರತಿಭೆ ಮೆರೆದಿದ್ದಾರೆ.
ಕಲಾ ಪ್ರತಿಭೋತ್ಸವ, ಸಂಧ್ಯಾರಾಗ, ಸಾಹಿತ್ಯ ಸಮ್ಮೇಳನ, ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ಶ್ರೀರವಿಶಂಕರ ಗುರೂಜಿ ಹಮ್ಮಿಕೊಂಡಿದ್ದ ಸಾಮೂಹಿಕ ಸಿತಾರ್ ವಾದನದಲ್ಲಿ ಈ ಹಳ್ಳಿಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬ್ರಹ್ಮನಾದ ಮೂಡಿಸಿ ಕೀರ್ತಿ ತಂದಿದ್ದಾರೆ.
ಜೀವಿತ ಅಂತ್ಯ ಘಟ್ಟದಲ್ಲಿ ನೋವಿನಿಂದ ಬಳಸಲುತ್ತಿರುವಂತಹ ವೃದ್ಧರಿಗೆ ನೆಮ್ಮದಿ ದೊರಕಿಸಿಕೊಡುವ ಉದ್ದೇಶದಿಂದ `ಹರೇ ಶ್ರೀನಿವಾಸ` ವೃದ್ಧಾಶ್ರಮ ನಿರ್ಮಾಣ ಮಾಡಲು ಹೊರಟ್ದ್ದಿದಾರೆ. ಹನುಮನಾಳ ಸಮೀಪದ ಮುರನಾಳ ಗ್ರಾಮದಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಹಂತದಲ್ಲಿದೆ.
ಗುಡಿಸಲಿನಲ್ಲಿಯೇ ನಾದ ಲಹರಿ ಹೊಮ್ಮುತ್ತಿರುವುದನ್ನು ಕಂಡ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಈ ಸಂಗೀತ ಶಾಲೆ ನೂತನ ಕಟ್ಟಡ ಹೊಂದುವಂತೆ ಮಾಡಿದ್ದಾರಂತೆ. ಅದಕ್ಕಾಗಿ ಡಿ.3 ರಂದು ಹನುಮನಾಳದಲ್ಲಿ ನಡೆಯುವ ಶೈಕ್ಷಣಿಕ ಸಮಾವೇಶದಲ್ಲಿ ಬಾಟಲಿಯಲ್ಲಿ ಶಾಸಕರ ಭಾವಚಿತ್ರ ತೂರಿಸಿ ಅದಕ್ಕೆ ಸುಂದರ ಚೌಕಟ್ಟು ಹಾಕಿರುವ ಕಲಾಕೃತಿಯೊಂದನ್ನು ಶಾಸಕರಿಗೆ ನೀಡುವುದರ ಜೊತೆಗೆ ತಮ್ಮ ಕಲಾಕೃತಿಗಳ ಪ್ರದರ್ಶನವನ್ನು ಈ ಕಲಾವಿದ ಏರ್ಪಡಿಸಿದ್ದಾರೆ. -ಕಿಶನ್ ರಾವ್ ಕುಲಕರ್ಣಿ
0 comments:
Post a Comment