ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಡಿ. 9ರಿಂದ ಮೂರು ದಿನಗಳ ಕಾಲ ನಡೆಯುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರಿನಿಂದ `ಬಲರಾಮ` ಮತ್ತು `ಅಭಿಮನ್ಯು` ಆಗಮಿಸುವ ಸಾಧ್ಯತೆಯಿದೆ.
ಡಿ. 9ರಂದು ಉದ್ಘಾಟನಾ ಸಮಾರಂಭಕ್ಕೂ ಮುನ್ನ ನಡೆಯಲಿರುವ ಮೆರವಣಿಗೆಗೆ ಈ `ವಿಶೇಷ ಅತಿಥಿ`ಗಳನ್ನು ಕಳುಹಿಸುವಂತೆ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕೋರಿದೆ.
ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ಅಂಬಾರಿಯನ್ನು ಹೊರುವ `ಬಲರಾಮ` ಆನೆಯನ್ನು ಕನ್ನಡ ಜಾತ್ರೆಗೆ ಇದೇ ಮೊದಲ ಸಲ ಕರೆತರಲು ನಿರ್ಧರಿಸಿರುವ ಸಮಿತಿ, ಈ ಸಂಬಂಧ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಆದರೆ, ಮೈಸೂರಿನಿಂದ ಗಂಗಾವತಿವರೆಗೆ ದೀರ್ಘ ಪ್ರಯಾಣ ಇರುವುದರಿಂದ ಕೇವಲ `ಬಲರಾಮ` ಆನೆಯನ್ನು ಕಳಿಸುವುದು ಸರಿಯಲ್ಲ. ಈ ಆನೆ ಜೊತೆಗೆ `ಅಭಿಮನ್ಯು`ವನ್ನೂ ಕಳಿಸಬೇಕು ಎಂಬುದಾಗಿ ಹುಣಸೂರಿನಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯ ಜೀವಿ ವಿಭಾಗ) ಕಚೇರಿಯ ಪಶುವೈದ್ಯಾಧಿಕಾರಿ ಹಾಗೂ ಆನೆಗಳ ಮೇಲ್ವಿಚಾರಕರು ಸಲಹೆ ನೀಡಿದ್ದಾರೆ.
ಈ ಸಲಹೆಯಂತೆ ಪ್ರಸಕ್ತ ಇವೆರಡು ಆನೆಗಳ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ವರದಿಯನ್ನು ಕೇಳಲಾಗಿದೆ. ಈ ವರದಿ ಡಿ. 5ರಂದು ಬರುವ ನಿರೀಕ್ಷೆ ಇದೆ. ಈ ಎರಡು ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಅಂದೇ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಇದೇ ಕಚೇರಿ ಮೂಲಗಳು ಹೇಳಿವೆ.
ಭದ್ರತಾ ವ್ಯವಸ್ಥೆ: ಸಮ್ಮೇಳನದ ಮೆರವಣಿಗೆಯ ಸಂದರ್ಭದಲ್ಲಿ ಆನೆಗಳು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಒದಗಿಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕೋರಿದ್ದಾರೆ.
ಮೆರವಣಿಗೆಯಲ್ಲಿ 30 ಸ್ತಬ್ಧಚಿತ್ರಗಳು, 30 ಕಲಾ ತಂಡಗಳು ಪಾಲ್ಗೊಳ್ಳುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಬೇಕು.
ಮೆರವಣಿಗೆ ವೀಕ್ಷಿಸುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಆನೆಗಳನ್ನು ಕರೆತಂದು ನಂತರ ಮೂಲ ಸ್ಥಾನಕ್ಕೆ ಕಳುಹಿಸುವ ವರೆಗೆ ಸಂಪೂರ್ಣ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ -ಪ್ರಜಾವಾಣಿ
0 comments:
Post a Comment