ಬೆಂಗಳೂರು: ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಹಗ್ಗಜಗ್ಗಾಟ ಮುಂದುವರಿದಿರುವುದ ರಿಂದ ಲೋಕಾಯುಕ್ತರ ನೇಮಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್.ಬನ್ನೂರಮಠ್ ಅವರ ಹೆಸರನ್ನು ಸರ್ಕಾರ ಈಗಾಗಲೇ ಶಿಫಾರಸು ಮಾಡಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸಿಕೊಟ್ಟಿದೆ. ಆದರೆ, ಇದನ್ನು ಒಪ್ಪಲು ರಾಜ್ಯಪಾಲರು ಸಿದ್ಧರಿಲ್ಲ.
ನ್ಯಾ. ಬನ್ನೂರಮಠ್ ನೇಮಕ ರಾಜ್ಯಪಾಲರಿಗೆ ಇಷ್ಟ ಇಲ್ಲದಿದ್ದರೂ ಸರ್ಕಾರದ ಶಿಫಾರಸನ್ನು ತಿರಸ್ಕರಿಸುವ ಅಧಿಕಾರ ಅವರಿಗೆ ಇಲ್ಲ. ಹೀಗಾಗಿ ನ್ಯಾ. ಬನ್ನೂರಮಠ್ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಸರ್ಕಾರದಿಂದ ವಿವರಣೆ ಕೇಳಿ ಅದನ್ನು ಪರಿಶೀಲಿಸುವ ನೆಪದಲ್ಲಿ ನಿರ್ಧಾರ ವಿಳಂಬ ಮಾಡುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರೇ ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉತ್ತಮ ಹಿನ್ನೆಲೆಯುಳ್ಳವರನ್ನು ಏಕೆ ಆಯ್ಕೆ ಮಾಡಬಾರದು ಎಂಬ ಅರ್ಥದಲ್ಲಿ ರಾಜ್ಯಪಾಲರು ಮಾತನಾಡಿದ್ದಾರೆ. ಅಲ್ಲದೆ, ಕೆಲವರ ಹೆಸರನ್ನೂ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಕಾರಣಗಳಿಗಾಗಿ ನ್ಯಾ. ಬನ್ನೂರಮಠ್ ಬದಲು ಬೇರೆಯವರನ್ನು ನೇಮಕ ಮಾಡಲು ಸರ್ಕಾರ ಚಿಂತನೆ ಮಾಡುತ್ತಿದೆಯಾದರೂ ರಾಜ್ಯಪಾಲರಿಗೆ ಕಳುಹಿಸಿರುವ ಶಿಫಾರಸಿಗೆ ಅವರಿಂದ ಪ್ರತಿಕ್ರಿಯೆ ಬಂದ ಬಳಿಕವೇ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಂದರೆ, ನ್ಯಾ. ಬನ್ನೂರಮಠ್ ನೇಮಕದ ಶಿಫಾರಸನ್ನು ಮರು ಪರಿಶೀಲಿಸಿ ಎಂದು ರಾಜ್ಯಪಾಲರು ಹೇಳಿದ ಬಳಿಕವೇ ಸರ್ಕಾರ ಮುಂದಿನ ಲೋಕಾಯುಕ್ತರನ್ನು ಆಯ್ಕೆ ಮಾಡಲು ಮುಂದಾಗಿದೆ.
ಸ್ವತಃ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರೇ ಈ ಮಾತನ್ನು ಹೇಳಿದ್ದಾರೆ. ಲೋಕಾಯುಕ್ತ ರ ನೇಮಕದ ಬಗ್ಗೆ ರಾಜ್ಯಪಾಲರೊಂದಿಗೆ ಚರ್ಚಿಸಿದ್ದೇನೆ. ಪ್ರಸ್ತುತ ಚೆಂಡು ಅವರ ಅಂಗಳದಲ್ಲಿ ರುವುದರಿಂದ ಅವರ ಅಭಿಪ್ರಾಯ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಲೋಕಾಯುಕ್ತರ ನೇಮಕ ಕುರಿತಂತೆ ರಾಜ್ಯಪಾಲರ ಜತೆ ಅನೇಕ ವಿಷಯಗಳು ಚರ್ಚೆಯಾಗಿವೆ.
ಆದರೆ, ಅದು ಗೌಪ್ಯ ವಿಚಾರವಾಗಿರುವುದರಿಂದ ಬಹಿರಂಗಪಡಿಸುವುದಿಲ್ಲ. ನ್ಯಾ. ಬನ್ನೂರಮಠ್ ಅವರ ನೇಮಕದ ಕುರಿತು ಸರ್ಕಾರದ ಶಿಫಾರಸಿಗೆ ರಾಜ್ಯಪಾಲರು ಪ್ರತಿಕ್ರಿಯಿಸಲಿ. ನಂತರ ಮುಂದಿನ ಯೋಚನೆ ಮಾಡುತ್ತೇವೆ ಎಂದು ಸದಾನಂದಗೌಡ ಹೇಳಿದ್ದಾರೆ.ಆದರೆ, ರಾಜ್ಯಪಾಲರ ಅಭಿಪ್ರಾಯವೇ ಬೇರೆ. ಲೋಕಾಯುಕ್ತರ ನೇಮಕದ ಬಗ್ಗೆ ತಮ್ಮ ಅಭಿಪ್ರಾ ವನ್ನು ಈಗಾಗಲೇ ಮೌಖಿಕವಾಗಿ ಹೇಳಲಾಗಿದೆ.
ಸರ್ಕಾರದ ಶಿಫಾರಸನ್ನು ತಿರಸ್ಕರಿಸಲು ತಮಗೆ ಅಧಿಕಾರ ಇಲ್ಲದೇ ಇದ್ದರೂ ಅದನ್ನು ಮರುಪರಿಶೀಲಿಸುವಂತೆ ಹೇಳಲು ಅವಕಾಶವಿದೆ. ಹಾಗೆ ಮಾಡಿದರೆ ಸರ್ಕಾರಕ್ಕೆ ಮುಜುಗರ ಉಂಟುಮಾಡಿದಂತಾಗುತ್ತದೆ. ಅದರ ಬದಲು ಶಿಫಾರಸಿಗೆ ಅಂಕಿತ ಹಾಕಲು ತಾವು ವಿಳಂಬ ಮಾಡುತ್ತಿರುವುದನ್ನೇ ಸರ್ಕಾರ ಪರಿಗಣಿಸಿ ಬೇರೆ ಹೆಸರು ಶಿಫಾರಸು ಮಾಡಲಿ ಎಂಬುದು ಅವರ ನಿಲುವು ಎನ್ನಲಾಗಿದೆ.
0 comments:
Post a Comment