PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು,ನ.2:ಗಣಿ ನಾಡು ಬಳ್ಳಾರಿಯ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ತನಗೆ ಬಿಜೆಪಿಯಲ್ಲೇ ಅಡ್ಡಗಾಲು ಹಾಕುತ್ತಿರುವುದರಿಂದ ಕೆಂಡಾ ಮಂಡಲವಾಗಿರುವ ಮಾಜಿ ಸಚಿವ ಬಿ. ಶ್ರೀರಾಮುಲು,ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತನ್ನ ಇಂತಹ ಪ್ರಯತ್ನಕ್ಕೆ ಜೆಡಿಎಸ್‌ನ ಆಶೀರ್ವಾದ ಪಡೆಯಲು ಶ್ರೀರಾಮುಲು ಮುಂದಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಶ್ರೀರಾಮುಲು ನಡೆ ಏನಿರಬಹುದು ಎನ್ನುವ ಕುರಿತು ಬಿಜೆಪಿಯ ಆಂತರಿಕ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು,ಗಣಿ ರೆಡ್ಡಿ ಪಡೆಯ ದಂಡನಾಯಕನನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನಾಳೆ ಬಳ್ಳಾರಿಗೆ ಹೋಗಲಿದ್ದಾರೆ.ಉನ್ನತ ಮೂಲಗಳ ಪ್ರಕಾರ,ಇಂದು ಮಧ್ಯಾಹ್ನ ಶ್ರೀರಾಮುಲು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸಂಪರ್ಕಿಸಿ ಪಕ್ಷೇತರನಾಗಿ ಸ್ಪರ್ಧಿಸಲು ತನಗೆ ಬೆಂಬಲ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದ್ದಾರೆ.ಇದಕ್ಕೆ ಕುಮಾರಸ್ವಾಮಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರೊಂದಿಗೆ ಚರ್ಚಿಸಿ ತಮ್ಮ ಅಂತಿಮ ನಿಲುವು ಪ್ರಕಟಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದಾದ ನಂತರ ಕುಮಾರಸ್ವಾಮಿ,ದೇವೇಗೌಡರೊಂದಿಗೆ ದೂರವಾಣಿ ಮೂಲಕ ಈ ವಿಚಾರ ತಿಳಿಸಿದಾಗ ಗೌಡರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಶ್ರೀರಾಮುಲು ಹೆಸರಿದ್ದು,ಅವರು ಬಿಜೆಪಿಯಲ್ಲಿ ಕಳಂಕಿತರ ಪಟ್ಟಿಯಲ್ಲಿದ್ದಾರೆ.ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರಿಗೆ ದೇವೇಗೌಡ ಸ್ಪಷ್ಟಪಡಿಸಿದ್ದಾರೆ ಎಂದು ಇದೇ ಮೂಲಗಳು ಹೇಳಿವೆ. ಇದರಿಂದಾಗಿ ಶ್ರೀರಾಮುಲು ಅವರನ್ನು ಬೆಂಬಲಿಸಬೇಕೇ,ಬೇಡವೆ ಎನ್ನುವ ಕುರಿತಂತೆ ಕುಮಾರಸ್ವಾಮಿ ಗೊಂದಲಕ್ಕೆ ಸಿಲುಕಿದ್ದು,ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬೆಂಬಲಿಸುವ ಕುರಿತಂತೆ ಗಂಭೀರ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಪಕ್ಷದ ಕಚೇರಿಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತಂತೆ ಬಳ್ಳಾರಿಯ ಜೆಡಿಎಸ್ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಿದ್ದು, ಅಭ್ಯರ್ಥಿ ಆಯ್ಕೆಯನ್ನು ದೇವೇಗೌಡರ ವಿವೇಚನೆಗೆ ಬಿಡದೇ ಬಹುತೇಕ ತಾವೇ ಕೈಗೊಳ್ಳುವ ಸಾಧ್ಯತೆ ಇದೆ.

ಪರ - ವಿರುದ್ಧ:

ಬಿಜೆಪಿಯಲ್ಲಿ ತಮ್ಮ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಡೆ ನಡೆಸುತ್ತಿರುವ ಮಸಲತ್ತಿನಿಂದಾಗಿ ಶ್ರೀರಾಮುಲು ಕೆಂಡಾ ಮಂಡಲರಾಗಿದ್ದು, ಈ ಬೆಳವಣಿಗೆ ನಡುವೆ ಸದಾನಂದ ಗೌಡರು ನಾಳೆ ಬಳ್ಳಾರಿಗೆ ಶ್ರೀರಾಮುಲುರೊಂದಿಗೆ ಚರ್ಚೆ ನಡೆಸಲಿದ್ದಾರೆ.ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಶ್ರೀರಾಮುಲು ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೇ ಕಾಲಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಗುಂಪು ಶ್ರೀರಾಮುಲು ಅವರೇ ಅಭ್ಯರ್ಥಿಯಾಗಲಿ ಎಂದು ಬಯಸಿದೆ.

ಇದಕ್ಕೆ ಈಶ್ವರಪ್ಪ ಬಣದ ವಾದವೆಂದರೆ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದವರಲ್ಲಿ ಗಣಿ ರೆಡ್ಡಿ ಪಡೆಯ ಪಾತ್ರ ಪ್ರಮುಖವಾದುದು.ಹೀಗಾಗಿ ಯಾವ ಕಾರಣಕ್ಕೂ ಅವರನ್ನು ಈ ಸಂದರ್ಭದಲ್ಲಿ ಕೈ ಬಿಡಬಾರದು.ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಗಣಿ ರೆಡ್ಡಿ ಪಡೆಯ ಮೇಲೆ ಇದೀಗ ಆರೋಪ ಎದುರಾಗಿದೆ.ಈ ಆರೋಪದ ಹಿನ್ನೆಲೆಯಲ್ಲಿ ತನಿಖೆಯೂ ನಡೆಯುತ್ತಿದೆ.ಹೀಗಾಗಿ ಇನ್ನೂ ಅವರು ಆರೋಪಿಗಳು ಮಾತ್ರವೇ ಹೊರತು ಅಪರಾಧಿಗಳಲ್ಲ ಎಂಬುದಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿದ ವರದಿ ಹಿನ್ನೆಲೆಯಲ್ಲಿ ಬಿ.ಶ್ರೀರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ.ಆದರೂ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರನ್ನು ನಾವು ಮೆಚ್ಚಲೇಬೇಕು. ಆದ್ದರಿಂದ ಈಗಲೂ ಉಪ ಚುನಾವಣೆಯಲ್ಲಿ ಅವರನ್ನೇ ಕಣಕ್ಕಿಳಿಸಬೇಕು ಎಂಬುದು ಈಶ್ವರಪ್ಪ ಅವರ ಬಣದ ಪ್ರಮುಖರ ವಾದ.

ಆದರೆ ಯಡಿಯೂರಪ್ಪ ಅವರ ಬಣದ ಹಲವು ಸಚಿವರು ಮತ್ತು ಶಾಸಕರು ಈ ಅಭಿಪ್ರಾಯಕ್ಕೆ ತದ್ವಿರುದ್ಧವಾದ ಅಭಿಪ್ರಾಯವನ್ನು ನೀಡುತ್ತಿರುವುದಷ್ಟೇ ಅಲ್ಲ,ಯಾವ ಕಾರಣಕ್ಕೂ ಬಿ.ಶ್ರೀರಾಮುಲು ಅವರಿಗೆ ಪಕ್ಷದ ಟಿಕೆಟ್ ನೀಡಬಾರದು ಎನ್ನುತ್ತಿದ್ದಾರೆ.ಮೊದಲನೆಯದಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವನ್ನು ದುರ್ಬಲಗೊಳಿಸಲು ಗಣಿರೆಡ್ಡಿ ಪಡೆಯ ತ್ರಿಮೂರ್ತಿಗಳು ಸದಾ ಕಾಲ ಯತ್ನಿಸಿದ್ದರು.ಇವರಿಂದಾಗಿಯೇ ಮೊಟ್ಟ ಮೊದಲ ಬಾರಿ ಐವತ್ತಕ್ಕೂ ಹೆಚ್ಚು ಶಾಸಕರು ಬಂಡಾಯ ಏಳುವಂತಾಯಿತು.


ಪಕ್ಷವನ್ನು ದುರ್ಬಲಗೊಳಿಸಲು,ಆ ಮೂಲಕ ಸರಕಾರವನ್ನು ಪದೇ ಪದೇ ಅಸ್ಥಿರಗೊಳಿಸಲು ಇವರು ನಡೆಸಿದ ಪ್ರಯತ್ನ ಒಂದೆರಡಲ್ಲ.ಇವರಿಂದಾಗಿ ರಾಜ್ಯದಲ್ಲಿ ಆಕ್ರಮ ಗಣಿಗಾರಿಕೆ ವ್ಯಾಪಕ ಪ್ರಮಾಣದಲ್ಲಿ ನಡೆಯುವಂತಾಯಿತು.ಇವತ್ತು ಸಿಬಿಐ ಗಣಿರೆಡ್ಡಿ ಪಡೆಯ ಪ್ರಮುಖ,ಮಾಜಿ ಸಚಿವ ಜನಾದರ್ನರೆಡ್ಡಿ ಅವರನ್ನು ಬಂಧಿಸಿ ಹೈದ್ರಾಬಾದ್‌ನ ಚಂಚಲಗೂಡ ಜೈಲಿಗೆ ಹಾಕಿದೆ.ಹೀಗಾಗಿ ಒಂದು ಕಡೆಯಿಂದ ಗಣಿರೆಡ್ಡಿ ಪಡೆಯ ದಂಡನಾಯಕ ಜನಾರ್ದನ ರೆಡ್ಡಿ ಅವರೇ ಜೈಲಿನಲ್ಲಿರುವಾಗ ಮತ್ತೊಂದು ಕಡೆಯಿಂದ ಅವರ ಪಡೆಯ ಬಿ.ಶ್ರೀರಾಮುಲು ಅವರನ್ನು ಉಪ ಚುನಾವಣೆಯ ಕಣಕ್ಕಿಳಿಸುವುದು ಸರಿಯಲ್ಲ ಎಂಬುದು ಯಡಿಯೂರಪ್ಪ ಅವರ ಬಣದ ವಾದ. ಆದರೆ ಈ ನಡುವೆ ರಾಜ್ಯ ಬಿಜೆಪಿಯ ಎರಡು ಬಣಗಳು ರಾಮುಲು ಪಕ್ಷದ ಅಭ್ಯರ್ಥಿಯಾಗಬೇಕೇ ಬೇಡವೇ ಎಂಬ ವಿಷಯದಲ್ಲಿ ಭಿನ್ನ ಭಿನ್ನ ಅಭಿಪ್ರಾಯ ತಳೆದಿದ್ದು,ಇದರಿಂದಾಗಿ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗುತ್ತಾರಾ ಇಲ್ಲವಾ ಎಂಬ ವಿಷಯದಲ್ಲಿ ವ್ಯಾಪಕ ಕುತೂಹಲ ಕಾಡುವಂತಾಗಿದೆ.

ಗೆಲುವು ನಮ್ಮದೇ:ಡಿವಿ

ಬೆಂಗಳೂರು,ನ.2:ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ,ಈ ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮ ಗೊಳಿಸಲಿದ್ದು,ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು.ಕೊಪ್ಪಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯ ಗಳಿಸಿದ್ದು,ಬಳ್ಳಾರಿ ಉಪ ಚುನಾವಣೆ ಬೇಗ ಬಂದಿರುವುದು ಸಂತಸವಾಗಿದೆ ಎಂದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಶ್ರೀರಾಮುಲುರನ್ನೇ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವೇದಿಕೆಯಲ್ಲಿ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದ ಸದಾನಂದ ಗೌಡ,ಶ್ರೀರಾಮುಲು ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ತಿಳಿಸಿದರು.ಆರೆಸೆಸ್ಸ್ ಮುಖಂಡರಿಗೆ ಬೆಲೆ ಬಾಳುವ ನಿವೇಶನವನ್ನು ಕಡಿಮೆ ಬೆಲೆಗೆ ಮಾಜಿ ಸಿಎಂ ಯಡಿಯೂರಪ್ಪ ಮಂಜೂರು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ.ಈ ಸಂಬಂಧ ಕಾನೂನು ಮೀರಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದಗೌಡ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು

Advertisement

0 comments:

Post a Comment

 
Top