ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿರುವಂತೆಯೇ ಭಾನುವಾರ ಕೆಲವು ಅಹಿತಕರ ಘಟನೆಗಳು ನಡೆದಿವೆ.
ಗ್ರಾಮದಲ್ಲಿ ಪ್ರಚಾರ ನಡೆಸಬಾರದೆಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತಿತರರನ್ನು ಬಳ್ಳಾರಿ ಬಳಿಯ ಅಲ್ಲಿಪುರದಲ್ಲಿ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ಬೆಂಬಲಿಗರು ಭಾನುವಾರ ತಡೆದ ವೇಳೆ ಸಿದ್ದರಾಮಯ್ಯ ಮತ್ತು ಪಾಲಿಕೆ ಸದಸ್ಯ ತೂರ್ಪು ಯಲ್ಲಪ್ಪ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸದಂತೆ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಕೆಲವರು ಸಿದ್ದರಾಮಯ್ಯ ಮತ್ತಿತರರನ್ನು ತಡೆದಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಚುನಾವಣಾ ಕಾರ್ಯದಲ್ಲಿ ನಿರತವಾಗಿ, ಮತದಾರರ ಚೀಟಿ ವಿತರಿಸುತ್ತಿದ್ದ ಶಿಕ್ಷಕಿಯೊಬ್ಬರ ಮೇಲೆ ಕೌಲ್‌ಬಝಾರ್‌ನಲ್ಲಿ ಕೆಲವರು ಹಲ್ಲೆ ನಡೆಸಿದ್ದಾರೆ.
ಅಲ್ಲದೆ, ಮಧ್ಯಾಹ್ನ ನಗರದ ವಿವಿಧೆಡೆ ಪಕ್ಷೇತರ ಅಭ್ಯರ್ಥಿ ಪರ ಮತದಾರರಿಗೆ ಹಣ ಹಂಚುತ್ತಿದ್ದ ಏಳು ಜನರನ್ನು ಬಂಧಿಸಿರುವ ಪೊಲೀಸರು ಒಟ್ಟು ರೂ 3.57 ಲಕ್ಷ ವಶಪಡಿಸಿಕೊಂಡಿದ್ದಾರೆ.
ನಗರದ ಬೆಳಗಲ್ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ವಾಹನವೊಂದರ ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ರೂ 5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ವಾಹನ ಬೆಂಗಳೂರು ಗ್ರಾಮೀಣ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ್ದು, ಕಾರಿನ ಚಾಲಕ ವಿಜಯ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ.
ಟಪಾಲ್ ಗಣೇಶ್ ಬಿಜೆಪಿಗೆ
ಬಳ್ಳಾರಿ: ಅಕ್ರಮ ಗಣಿಗಾರಿಕೆಯನ್ನು ವಿರೋಧಿಸುತ್ತ, ಜಿ.ಜನಾರ್ದನರೆಡ್ಡಿ ಹಾಗೂ ಬಿಜೆಪಿ ಸರ್ಕಾರವನ್ನು ತೆಗಳುತ್ತಿದ್ದ ಗಣಿ ಉದ್ಯಮಿ ಟಪಾಲ್ ಗಣೇಶ್ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ರಾಮಪ್ರಸಾದ್ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು, ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದ ಅವರು ಇದೀಗ ದಿಢೀರ್ ಬಿಜೆಪಿಗೆ ಸೇರಿರುವುದು ಅನೇಕರಲ್ಲಿ ಆಶ್ವರ್ಯ ಮೂಡಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಸಮ್ಮುಖದಲ್ಲಿ ಪಕ್ಷವನ್ನು ವಿಧ್ಯುಕ್ತವಾಗಿ ಸೇರಿದ ಗಣೇಶ್, ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೋರಿಕೆ ಮೇರೆಗೆ ಪಕ್ಷ ಸೇರಿದ್ದಾಗಿ ತಿಳಿಸಿದರು.
ಪ್ರಚಾರಕ್ಕೆ ಬರಬೇಡಿ: ಬಳ್ಳಾರಿಯಲ್ಲಿ ಗೂಂಡಾ ಸಂಸ್ಕೃತಿ ಇದೆ ಎಂದು ಆರೋಪಿಸುತ್ತಲೇ ಇರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ವಿ.ಎಸ್. ಉಗ್ರಪ್ಪ ಮತ್ತಿತರರೊಂದಿಗೆ ಮಧ್ಯಾಹ್ನ ನಗರದ ಹೊರ ವಲಯದಲ್ಲಿರುವ ಅಲ್ಲಿಪುರ ಗ್ರಾಮಕ್ಕೆ ಪ್ರಚಾರಕ್ಕೆಂದು ತೆರಳುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ನಡೆಸುತ್ತಿದ್ದ ಬೆಂಬಲಿಗರು ಅವರನ್ನು ಗ್ರಾಮ ಪ್ರವೇಶಿಸದಂತೆ ತಡೆದರು.
ಪಾಲಿಕೆ ಸದಸ್ಯ ತೂರ್ಪು ಯಲ್ಲಪ್ಪ ಹಾಗೂ 50ಕ್ಕೂ ಅಧಿಕ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ತಡೆದು, `ಗ್ರಾಮದ ಬಹುತೇಕರು ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಅವರನ್ನು ಬೆಂಬಲಿಸಲು ನಿರ್ಧರಿಸಿದ್ದು, ಇಲ್ಲಿ ಬಂದು ಪ್ರಚಾರ ಮಾಡುವ ಅಗತ್ಯವಿಲ್ಲ` ಎಂದು ದಬಾಯಿಸಿದರು. ಇದೇ ವೇಳೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಚಾರಕ್ಕೆ ಬರಬೇಡಿ ಎಂದು ಕೂಗಾಡಿದರು.
`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಂದರ್ಭ ಯಾರಾದರೂ ಪ್ರಚಾರ ಮಾಡಬಹುದು. ಅದಕ್ಕೇಕೆ ಅಡ್ಡಿ ಪಡಿಸುತ್ತೀರಿ` ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ತಮಗೆ ಅಡ್ಡಿಪಡಿಸಿದ ವಿಷಯವನ್ನು ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 63ರಲ್ಲಿ ಕೆಲ ಕಾಲ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.
ಸ್ಥಳಕ್ಕೆ ಧಾವಿಸಿದ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರು ಶ್ರೀರಾಮುಲು ಬೆಂಬಲಿಗರ ವಿರುದ್ಧ ದೂರು ದಾಖಲಿಸುವಂತೆ ಕೋರಿದರಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ಪೊಲೀಸರು ವಾತಾವರಣ ತಿಳಿಗೊಳಿಸಿ ಸಿದ್ದರಾಮಯ್ಯ ಅವರ ಪ್ರಚಾರಕ್ಕೆ ಅನುವು ಮಾಡಿಕೊಟ್ಟರು. ಸಂಜೆಯ ವೇಳೆಗೆ ತೂರ್ಪು ಯಲ್ಲಪ್ಪ ಹಾಗೂ ದೀನಯ್ಯ ಎಂಬುವವರನ್ನು ಬಂಧಿಸಲಾಗಿದ್ದು, ನ.30ರವರೆಗೆ ನ್ಯಾಯಾಂಗ ವಶಕ್ಕೆ ಸಲ್ಲಿಸಲಾಗಿದೆ.
ಸಿದ್ದರಾಮಯ್ಯ ವಿರುದ್ಧ ದೂರು: ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ತೂರ್ಪು ಯಲ್ಲಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂಜೆ ದೂರು ನೀಡಿದ್ದಾರೆ.
ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ: ಚುನಾವಣಾ ಆಯೋಗ ಜಾರಿಗೆ ತಂದಿರುವ ಮತದಾರರ ಚೀಟಿ ವಿತರಣಾ ಕಾರ್ಯದಲ್ಲಿ ತೊಡಗಿದ್ದ ಸರ್ಕಾರಿ ಶಾಲೆ ಶಿಕ್ಷಕಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಗರದ 24ನೇ ವಾರ್ಡ್ ವ್ಯಾಪ್ತಿಯ ನಾಲೆ ಬೀದಿಯಲ್ಲಿ ಮಧ್ಯಾಹ್ನ ಸಂಭವಿಸಿದೆ.
ಕೌಲ್‌ಬಝಾರ್‌ನ ಸರ್ಕಾರಿ ಉರ್ದು ಶಾಲೆ ಶಿಕ್ಷಕಿ ಮಲ್ಲಿಕಾ ಬೇಗಂ ಎಂಬುವವರು ಕರುಣಾಜ್ಯೋತಿ ಎಂಬುವವರ ಜತೆ ಮನೆಮನೆಗೆ ತೆರಳಿ ಮತದಾರರ ಚೀಟಿ ವಿತರಿಸುತ್ತಿದ್ದ ವೇಳೆ, 20ಕ್ಕೂ ಹೆಚ್ಚು ಜನರಿದ್ದ ತಂಡ ಅವರ ಮೇಲೆ ಹಲ್ಲೆನಡೆಸಿದೆ.
ಸಹಿ ಇಲ್ಲದೆ ಮತದಾರರ ಚೀಟಿ ಕೊಡಲಾಗುವುದಿಲ್ಲ ಎಂದು ತಿಳಿಸಿದ್ದರಿಂದ ತನ್ವೀರ್ ಅಹಮದ್ ಎಂಬ ವ್ಯಕ್ತಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಅವರು ಕೌಲ್‌ಬಝಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ವೀರ್ ಅಹಮದ್‌ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಶ್ರೀರಾಮುಲು ಅವರ ಭಾವಚಿತ್ರ ಇರುವ ಟೀ ಶರ್ಟ್‌ಗಳನ್ನು ಹಂಚುತ್ತಿದ್ದ ಯುವಕನೊಬ್ಬನನ್ನು ಅಲ್ಲಿಪುರ ಗ್ರಾಮದ ಬಳಿ ಟೀ ಶರ್ಟ್‌ಗಳ ಸಮೇತ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಜಾವಾಣಿ ನ್ಯೂಸ್
0 comments:
Post a Comment