PLEASE LOGIN TO KANNADANET.COM FOR REGULAR NEWS-UPDATES




ಇತಿಹಾಸ ಓದದವರು ಇತಿಹಾಸವನ್ನು ನಿರ್ಮಿಸಲಾರರು.ಅಂತೆಯೇ ಪೂರ್ವಗ್ರಹ ಪೀಡಿತ ಮನಸ್ಸುಳ್ಳ ಸಂಶೋಧಕರು ಇತಿಹಾಸಕಾರರಾಗುವುದಿಲ್ಲ.ಅವರು ‘ಸಂಶೋಧಕರಾಗಿಯೇ ಉಳಿಯುತ್ತಾರೆ. ಅಂತೆಯೇ ಮೈಸೂರು ಸಾಮ್ರಾಜ್ಯವನ್ನು ದಕ್ಷಿಣ ಭಾರತದ ಅರ್ಧಭಾಗಕ್ಕೆ ವಿಸ್ತರಿಸಿದ ‘ಹೈದರ್ -ಟಿಪ್ಪು’’ಗಳ ಸಾಹಸವನ್ನು ಬ್ರಿಟಿಷರು ನೀಡಿರುವ ಚರಿತ್ರೆಯನ್ನು ಹಳದಿ ಕನ್ನಡಕದಿಂದ ನೋಡದೆ ವಾಸ್ತವಾಂಶಗಳಿಂದ ಸತ್ಯಶೋಧನೆ ಮಾಡಿದಾಗ ನಿಜ ಸಂಗತಿಗಳ ಅರಿವಾಗುತ್ತದೆ.ಅಂತೆಯೇ ಕ್ರಿ.ಶ.1721ರಿಂದ 1782ರವರೆಗೆ ಕೇವಲ ಓರ್ವ ಸೈನಿಕನಾಗಿ ಮೈಸೂರ ಅರಸರ ಅರಮನೆ ಸೇರಿ ಇಮ್ಮಡಿ ಚಿಕ್ಕಕೃಷ್ಣರಾಜ ಒಡೆಯರ ಮಂತ್ರಿಯಾದ ನಂಜರಾಜ ಅರಸರ ವಿಶ್ವಾಸವನ್ನು ಗಳಿಸಿ ‘ದಿಂಡಿಗಲ್ ಅನ್ನು ಗೆದ್ದಮೇಲೆ ‘ಪೌಜುದಾರ್’ ಪಟ್ಟವನ್ನು ಗಳಿಸಿ ಸಮಯಾನುಸಾರ ಬಂದ ಎಡರು ತೊಡರುಗಳನ್ನು ಎದುರಿಸಿ 1762ರ ಸುಮಾರಿಗೆ ಮೈಸೂರ ಅರಸರನ್ನು ನಿಮಿತ್ತ ಮಾತ್ರ ರಾಜರಾಗಿರಿಸುವುದರಲ್ಲಿ ಯಶಸ್ವಿಯಾದ ಹೈದರ್, ರಾಜರಿಂದ ‘ಬಹದ್ದೂರ್’ ಪಟ್ಟವನ್ನು ಗಳಿಸುವಷ್ಟು ಜನಾನುರಾಗಿಯಾದ.
ಆದರೆ ಅಂದಿನ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿ ನಿಭಾಯಿಸುವಷ್ಟು ಚೈತನ್ಯ ಅಂದಿನ ರಾಜನಿಗಿರಲಿಲ್ಲ. ಇದರಲ್ಲಿ ವಿಷಯ ಲೋಲಪತೆಯೂ ಒಂದು, ಆಗ ‘ಮೊಘಲ್ ಸಾಮ್ರಾಜ್ಯದ ವರ್ಚಸ್ಸು ಇಳಿಮುಖವಾಗುತ್ತಿತ್ತು. ಮರಾಠರು ‘ಬಲಾಢ್ಯರಾಗುತ್ತಿದ್ದು ಯುರೋಪಿಯನ್ನರು ಅದರಲ್ಲೂ ಬ್ರಿಟಿಷರು ‘ಈಸ್ಟ್ ಇಂಡಿಯಾ ಕಂಪೆನಿ’ ಎಂಬ ವ್ಯಾಪಾರಿ ಸಂಸ್ಥೆಯ ಮೂಲಕ ಭಾರತ ಉಪಖಂಡದಲ್ಲಿ ಆಡಳಿತ ನಡೆಸುವ ಹುನ್ನಾರದಲ್ಲಿದ್ದು, ಪೋರ್ಚುಗೀಸರೂ ಸಹ ತಮ್ಮದೇ ಆದ ರೀತಿಯಲ್ಲಿ ನಮ್ಮ ನೆಲ ಕಬಳಿಸುವ ಹಂತದಲ್ಲಿ ಮನಗಂಡ ಹೈದರ್ ಇವರೆಲ್ಲರನ್ನು ಎದುರಿಸಲಾಗದಷ್ಟು ಸಂದಿಗ್ದದಲ್ಲಿದ್ದ.
1769ರ ಹೊತ್ತಿಗೆ ಹೈದರ್ ಮೈಸೂರು ಸಾಮ್ರಾಜ್ಯವನ್ನು ಉತ್ತರದ ‘ಕೃಷ್ಣಾನದಿ’ ಯಿಂದ ದಕ್ಷಿಣದಲ್ಲಿ ಕಾವೇರಿ ನದಿಯವರೆಗೆ ಹಾಗೂ ಪೂರ್ವದ ಬಳ್ಳಾರಿ ಕಡಪದಿಂದ ಪಶ್ಚಿಮದ ದಕ್ಷಿಣ-ಉತ್ತರ ಕನ್ನಡದವರೆಗೂ ವಿಸ್ತರಿಸಿ ಸಣ್ಣಪುಟ್ಟ ನವಾಬರು ಬಂಡುಕೋರ ಪಾಳೆಗಾರರುಗಳನ್ನು ಸದೆಬಡಿದು ಉತ್ತಮ ಮಿಲಿಟರಿ ನೆಲೆಯಾಗಿ ರೂಪಿಸಿದ್ದ. ಅಷ್ಟೇ ಅಲ್ಲದೆ ತನ್ನ ಚಾಕಚಕ್ಯತೆ, ಧೈರ್ಯ-ಸ್ಥೈರ್ಯ, ನಿಪುಣತನಗಳಿಂದ ಹೈದರಾಬಾದಿನ ನಿಜಾಮರು, ಮರಾಠರು ಅಷ್ಟೇ ಏಕೆ 1769ರ ಮೊದಲನೆ ಆಂಗ್ಲೋ, ಮೈಸೂರು ಯುದ್ಧದಲ್ಲಿ ಗೆದ್ದು ಬ್ರಿಟಿಷರನ್ನೂ ಸದೆ ಬಡಿದಿದ್ದ.
ಇಷ್ಟನ್ನೆಲ್ಲಾ ಸಾಧಿಸಿದ ಹೈದರ್-ಆರ್ಕಾಟ ನವಾಬನಾಗಿದ್ದ ಮುಹಮ್ಮದ್ ಆಲಿ ಹಾಗೂ ಬ್ರಿಟಿಷ್ ಪಾಳಯದ ‘ವಾರನ್ ಹೇಸ್ಟಿಂಗ್ಸ್‌ನ ಕುಟಿಲತೆಯ ಪರಿಣಾಮವಾಗಿ ಇಂದಿನ ಆಂಧ್ರ ಪ್ರದೇಶದ ಚಿತ್ತೂರು ಬಳಿಯ ನರಸರಾಜಕೋಟೆಯಲ್ಲಿ ನಡೆದ ಎರಡನೆ ಆಂಗ್ಲೋ-ಮೈಸೂರು ಯುದ್ಧದಲ್ಲಿ 1782 ನವೆಂಬರ್ 7ರಂದು ಸಾವನ್ನಪ್ಪಿದ.ತದನಂತರ ಐದು ತಿಂಗಳುಗಳವರೆಗೆ ಅಂದರೆ 1783 ಮಾರ್ಚ್ 4 ವರೆಗೆ ಒಂದು ರೀತಿಯ ಸೂತಕದ ಛಾಯೆ ರಾಜ್ಯದಲ್ಲಿತ್ತು ಎಂಬುದಕ್ಕೆ ಪುರಾವೆ ಎಂಬಂತೆ ಹೈದರ್ ಮರಣದ ನಂತರ ಆತನ ಕಳೇಬರವನ್ನು ‘ಕೋಲಾರದಲ್ಲಿರಿಸಿ ಒಂದು ವಾರದ ನಂತರ ಶ್ರೀರಂಗಪಟ್ಟಣದಲ್ಲಿ ಸಮಾಧಿ ಮಾಡಿರುವುದನ್ನು ಗಮನಿಸಿದಾಗ ವಿಷಯದ ಗಂಭೀರತೆಯನ್ನು ಗಮನಿಸಬಹುದು.
ಅಷ್ಟೇ ಅಲ್ಲದೇ ಹೈದರ್ ಮರಣದ ಸುದ್ದಿಯನ್ನು ಮಲಬಾರ್‌ನಲ್ಲಿದ್ದ ಟಿಪ್ಪುವಿಗೆ ತಿಳಿಸಲು ಮಿರ್ಜಾ ಖಾನ್ ಮೂಲಕ ರಹಸ್ಯವಾಗಿ ತಿಳಿಸಿ, ಚಾಕಚಕ್ಯತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ ಕೀರ್ತಿ ಅಂದಿನ ಅರ್ಥಮಂತ್ರಿ ಪೂರ್ಣಯ್ಯನವರಿಗೆ ಸಲ್ಲುತ್ತದೆ.ಟಿಪ್ಪುಸುಲ್ತಾನ ತನ್ನ ಜೀವನದುದ್ದಕ್ಕೂ ಸಂಘರ್ಷವನ್ನೇ ಎದುರಿಸಿದ ಮಹಾನ್ ವ್ಯಕ್ತಿ.1779 ಮೇ, 4 ರಂದು ರಣರಂಗದಲ್ಲೇ ಹೋರಾಡುತ್ತಾ ವೀರಮರಣವನ್ನು ಅಪ್ಪಿದ ‘ಟಿಪ್ಪುಸುಲ್ತಾನ್’ ವಿಶ್ವದ ಇತಿಹಾಸದಲ್ಲಿ ಯುದ್ಧರಂಗದಲ್ಲಿ ಮರಣ ಹೊಂದಿದ ಪ್ರಥಮ ‘ದೊರೆ’ಯಾಗಿದ್ದು, ಅನಂತರವೂ ಇಲ್ಲಿಯವರೆಗೂ ಯಾರೂ ಈ ದಾಖಲೆಯನ್ನು ಮುರಿದಿಲ್ಲ.
ಅಷ್ಟೇ ಅಲ್ಲದೆ, ಕಾಲಾನುಸಾರವಾಗಿ ನಡೆದ ಆಂಗ್ಲೋ -ಮೈಸೂರು ಯುದ್ಧಗಳು, ಮೂರನೆ ಯುದ್ಧದಲ್ಲಿ (1790-92) ಆಂಗ್ಲರೊಡನೆ ನಡೆದ ‘ಒಡಂಬಡಿಕೆ’ ಯಂತೆ ತನ್ನ ಹತ್ತು ವರುಷದ ಮಗನಾದ ಅಬ್ದುಲ್ ಖಾಲಿಕ್ ಮತ್ತು ಎಂಟು ವರ್ಷದ ಮಗ ಮೊಯ್ದಿನ್ ಅವರುಗಳನ್ನು ಬ್ರಿಟಿಷರಿಗೆ ಯುದ್ಧದ ಖರ್ಚನ್ನು ನೀಡಲಾಗದೆ ಜನತೆಯ ಮೇಲೆ ಹೆಚ್ಚು ತೆರಿಗೆಯನ್ನು ಹಾಕಲು ಬಯಸದೆ ವರ್ಷಗಟ್ಟಲೆ ಒತ್ತೆ ಇಟ್ಟ ಪ್ರಕರಣ ದೇಶದ ಇತಿಹಾಸದಲ್ಲಿ ಇನ್ನೆಂದೂ ಕಾಣಸಿಗದು. ಇಲ್ಲಿ ಲಾರ್ಡ್ ಕಾರ್ನ್‌ವಾಲೀಸ್‌ನೊಡನೆ ನಮ್ಮವರೆ ಆದ ಹೈದರಾಬಾದಿನ ನಿಜಾಮ ಹಾಗೂ ಮರಾಠರು ಹೂಡಿದ ಸಂಚಿನ ಸಮಯದಲ್ಲಿ ಧಾರ್ಮಿಕ ಸಮಚಿತ್ತತೆಯನ್ನು ಕಾಪಾಡಿಕೊಂಡ ಸುಲ್ತಾನ್ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಬರುವ ಘಂಟಾನಾದ, ಮಸೀದಿಯ ಪ್ರಾರ್ಥನೆ ತನ್ನ ಎರಡೂ ಕಿವಿಗಳಿಗೆ ಮುಟ್ಟಲು ಶ್ರೀರಂಗಪಟ್ಟಣದ ಅರಮನೆಯಲ್ಲಿ ವಾಸ್ತವ್ಯ ಮಾಡಿದ.
ನಂಜನಗೂಡಿನ ದೇವಾಲಯದಲ್ಲಿ ಬೆಲೆ ಕಟ್ಟಲಾಗದ ‘ಪಚ್ಚೆಲಿಂಗ’ ಸ್ಥಾಪನೆ, ದೇವನಹಳ್ಳಿಯ ಕೋಟೆಯ ವೇಣುಗೋಪಾಲ ಸ್ವಾಮಿಗೆ ನೀಡಿರುವ ಅಪಾರ ದೇಣಿಗೆ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥಸ್ವಾಮಿ ಮತ್ತು ನರಸಿಂಹಸ್ವಾಮಿ, ಬಾದಾಮಿಯ ವಾತಾಪಿ, ಇಲ್ವಲ ಬೆಟ್ಟದ ಮೇಲಿನ ಕೋಟೆ, ಬೆಂಗಳೂರು ಕೋಟೆಯೊಳಗಿನ ಗಣೇಶನ ದೇವಾಲಯ, ಕೋಟೆ ವೆಂಕಟರಮಣ ಸ್ವಾಮಿ ಪಕ್ಕದಲ್ಲೇ ನಿರ್ಮಿಸಿರುವ ‘ಟಿಪ್ಪು ಸುಲ್ತಾನರ ಅರಮನೆ’, ಆತನ ಕಾಲದಲ್ಲಿದ್ದ ನಾಣ್ಯದ ಮೇಲೆ ತ್ರಿಶೂಲ ಹಾಗೂ ಲಕ್ಷ್ಮಿದೇವಿಯ ಕೆತ್ತನೆ ಇವೆಲ್ಲಾ ಸುಲ್ತಾನನ ಜಾತ್ಯತೀತ ಮನೋಭಾವದ ಸಂಕೇತಗಳಲ್ಲವೆ?.
ಇನ್ನೊಂದು ವಿಷಯವನ್ನು ಅವಗಾಹಿಸಿದಾಗ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಅಲ್ಲಿದ್ದ ಅಪಾರವಾದ ನಗನಾಣ್ಯಗಳನ್ನು ಅಪಹರಿಸಿದಾಗ ಅಂದಿನ ಸ್ವಾಮೀಜಿ ಸುಲ್ತಾನನನ್ನು ಮೂದಲಿಸಿ ಪತ್ರ ಬರೆದಾಗ ರಕ್ಷಣೆ ಕೊಡದಿದ್ದಕ್ಕೆ ಕ್ಷಮೆಯಾಚಿಸಿದ ಟಿಪ್ಪು ಆದ ನಷ್ಟವನ್ನು ಭರಿಸಿ ಅವರ ರಕ್ಷಣೆಗಾಗಿ ವಿಶೇಷ ಮುತುವರ್ಜಿ ವಹಿಸಿದ ಪುರಾವೆಗಳು ದಾಖಲಿತವಾಗಿವೆ. ಇಂದೂ ಸಹ ಸ್ವಾಮೀಜಿಯವರು ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರನ್ನು ಸರಕಾರದ ವತಿಯಿಂದ ಅಧಿಕಾರಿಗಳು ಪ್ರದೇಶ, ಸ್ಥಳದಲ್ಲಿ ಸ್ವಾಗತಿಸುವ ಪರಂಪರೆ ನಡೆದು ಬಂದಿದೆ. ಬೆಂಗಳೂರಿಗೆ ಪ್ರವೇಶಿಸಿದಾಗ ‘ಮೇಯರ್’ ಅವರು ಇಲ್ಲವೇ ಯಾವುದೇ ಅಧಿಕಾರಿ ಸ್ವಾಗತಿಸುವ ‘ಸಂಪ್ರದಾಯ’ ಇಂದೂ ಇದೆ.
ಇಷ್ಟೆಲ್ಲಾ ಆಂತರಿಕ ಕೀರ್ತಿ-ಆಡಳಿತ ದಕ್ಷತೆಯನ್ನು ಹೊಂದಿದ್ದ ‘ಸುಲ್ತಾನ್’ ವ್ಯವಸಾಯದಲ್ಲೂ ಅನೇಕ ಸುಧಾರಣೆಗಳನ್ನು ತಂದು, ಇಂದಿನ ಕೃಷ್ಣರಾಜಸಾಗರ ಅಣೆಕಟ್ಟು ಅಂದರೆ ಕನ್ನಂಬಾಡಿ ಕಟ್ಟೆಯ ನಿರ್ಮಾಣಕ್ಕೆ ಕಾರಣನಾಗಿದ್ದ. ಅದನ್ನು ಈಗಲೂ ಕಟ್ಟೆಯ ಪ್ರದೇಶ ದ್ವಾರದಲ್ಲಿ ಕಾಣಬಹುದು. ಅಂತೆಯೇ ರೇಷ್ಮೆಬೆಳೆಯನ್ನು ತಂದದ್ದೂ ಟಿಪ್ಪು ಸುಲ್ತಾನನೇ ಆಗಿದ್ದಾನೆ. ಹಾಗೆಯೇ ಸೂರ್ಯ ಗಡಿಯಾರದ ಚಾಲನೆ ಹಾಗೂ ಕ್ಷಿಪಣಿಯ ಜನಕನೂ ಆಗಿದ್ದಾನೆ.
ಬೆಂಗಳೂರಿನ ಮಟ್ಟಿಗೆ ಹೇಳಬೇಕೆಂದರೆ ಹೈದರ್-ಟಿಪ್ಪುಗಳ ಕೊಡುಗೆ ಅಪಾರ ಹಾಗೂ ಅಮೋಘ. ರಾಜ್ಯೋದ್ಯಾನವಾಗಿ ‘ಲಾಲ್‌ಬಾಗ್’ ತೋಟವನ್ನು ಸ್ಥಾಪಿಸಿ ತನ್ನ ಕೋಟೆಯಿಂದ ತೋಟಕ್ಕೆ ದಾರಿ ನಿರ್ಮಿಸಿ ಅದು ಇಂದೂ ಕೋಟೆ ಹೈಸ್ಕೂಲ್ ಕಡೆಯಿಂದ ತೋಟಕ್ಕೆ ಸಾಗುವ ದಾರಿಗೆ ಈಗಲೂ Lalbagh Fort Road ಎಂದು ಹೆಸರಿದೆ. ನಂದಿ ಬೆಟ್ಟವನ್ನು ‘ಟಿಪ್ಪು’ ತನ್ನ ಹವ್ಯಾಸಿ ಸ್ಥಾವರವನ್ನಾಗಿ ಮಾಡಿದ ಪರಿಣಾಮವಾಗಿ ಇಂದು ಅದು ಉತ್ತಮ ಪ್ರವಾಸಿ ಕೇಂದ್ರವಾಗಿದೆ.
ಟಿಪ್ಪು ಕಾಲದ ಬೆಂಗಳೂರಿನ ಹಳೆಯ ಕೋಟೆಯ ನಕ್ಷೆಯ ಪ್ರಕಾರ ಅದು ಉತ್ತರದಲ್ಲಿ ಇಂದಿನ ಮೈಸೂರು ಬ್ಯಾಂಕ್ ವೃತ್ತ, ದಕ್ಷಿಣಕ್ಕೆ ಕೆಂಪೇಗೌಡ ಆಸ್ಪತ್ರೆ, ಅಂತೆಯೇ ಪೂರ್ವಕ್ಕೆ ಇಂದಿನ ಹಲಸೂರು ಗೇಟ್‌ನಿಂದ ಇಂದಿನ ಬಿನ್ನಿಮಿಲ್‌ವರೆಗಿನ ಪ್ರದೇಶ.ಒಂದು ಐತಿಹಾಸಿಕ ದಾಖಲೆಯನ್ನು ಗಮನಿಸಬೇಕು.ಈಗಿನ ಹಲಸೂರು ಪೊಲೀಸ್ ಸ್ಟೇಷನ್ ಹಾಗೂ ಕಾರ್ಪೋರೇಷನ್ ಕಚೇರಿಯ ಮಧ್ಯೆ ಸ್ತೂಪ ಒಂದಿತ್ತು. ಅದನ್ನು ಟಿಪ್ಪು ಅವಸಾನದ ಮೊದಲು ಬೆಂಗಳೂರನ್ನು ಗೆದ್ದ ಕುರುಹಾಗಿ ಸ್ಥಾಪಿಸಲಾಗಿತ್ತು. ಇದು ಅನೇಕ ದೇಶ ಪ್ರೇಮಿಗಳನ್ನು ಅಣಕಿಸುತ್ತಿತ್ತು. ಅದರ ಮೇಲೆ ಯುದ್ಧದಲ್ಲಿ ಮಡಿದ ಆಂಗ್ಲ ಅಧಿಕಾರಿಗಳ ಜೊತೆಯಲ್ಲಿ ಕನ್ನಡಿಗರನ್ನು Cenotaph Natives(ಸ್ಥಳೀಯರು)  ಎಂದು ಆಂಗ್ಲಭಾಷೆಯಲ್ಲಿ ಕಲ್ಲಿನ ಮೇಲೆ ಕೆತ್ತಿಸಲಾಗಿತ್ತು.
ಇದನ್ನು ನೋಡಿ ಕೆರಳಿದ ಕನ್ನಡ ಚಳವಳಿಯ ನಾಯಕರಾದ ವಾಟಾಳ್ ನಾಗರಾಜ್ ಸುಮಾರು ಇಪ್ಪತ್ತೈದು ಸಾವಿರ ಜನರ ‘ರ್ಯಾಲಿ’ಯನ್ನು ಸಂಘಟಿಸಿ ಒಂದು ರೀತಿಯ ಯುದ್ಧವನ್ನೇ ಸಾರಿ ಬಂಧನಕ್ಕೊಳಗಾದರು. ಅದನ್ನು ಸ್ಥಳೀಯ ಮಾಧ್ಯಮಗಳು ‘ಗೆರಿಲ್ಲಾ ವಾರ್’ ಎಂದು ಕರೆಯಿತು. ಇದರಿಂದ ಕಣ್ತೆರೆದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಅಂದಿನ ಮೇಯರ್ ಜಿ.ನಾರಾಯಣ ಅವರಿಗೆ ಆದೇಶಿಸಿ ಸದರಿ ಸ್ತೂಪವನ್ನು ಒಡೆಸಿ ಹಾಕಿದರು. ಇದಾದ ನಂತರ ‘ಲಂಡನ್’ ಪತ್ರಿಕೆಗಳೂ ಸಹ ಇಂತಹ ಐತಿಹಾಸಿಕ ದಾಖಲೆಗಳ ನಾಶ ಕೂಡದಿತ್ತು ಎಂದು ಬರೆದವು. ಇದು 1963ರ ಆಗಸ್ಟ್ ತಿಂಗಳಲ್ಲಿ ಎಂಬುದು ವಿಶೇಷ. ಎಷ್ಟೇ ಆಗಲಿ ಅದು ಸ್ವಾತಂತ್ರದ ತಿಂಗಳಲ್ಲವೇ?

ಟಿಪ್ಪು ಸುಲ್ತಾನರು ಮೈಸೂರು ಸಾಮ್ರಾಜ್ಯವನ್ನು ಮದ್ರಾಸ್ ರಾಜ್ಯದ (ಇಂದಿನ ತಮಿಳುನಾಡು) ಆಂಧ್ರದ ಕೇರಳ ಮರಾಠ ಪ್ರದೇಶಗಳ ಮೇಲೆ ವಿಸ್ತರಿಸದಿದ್ದರೆ, 1775ರಲ್ಲಿ ಹೈದರ್ ಅಲಿ ಬಳ್ಳಾರಿಯನ್ನು ಗೆಲ್ಲದಿದ್ದರೆ ಬ್ರಿಟಿಷರು ನಮ್ಮ ತಂಟೆಗೆ ಬರುತ್ತಿರಲಿಲ್ಲ. ಅಂತೆಯೇ ನಿಜಾಮನಂತೆ ಶರಣಾಗತನಾಗಿದ್ದರೆ ಟಿಪ್ಪು ಸಾಮಾನ್ಯನಾಗಿಯೇ ಉಳಿಯುತ್ತಿದ್ದ. ಬ್ರಿಟಿಷರು ತಮಗೆ ಸಹಕರಿಸಿದ ಉಪಕಾರಕ್ಕಾಗಿ ಮೈಸೂರು ಸಾಮ್ರಾಜ್ಯದ ಹಲವಾರು ಪ್ರದೇಶಗಳನ್ನು ನಿಜಾಮ್-ಮರಾಠರಿಗೆ ಹಂಚಿ ಬಹುತೇಕ ಪ್ರದೇಶವನ್ನು ‘ಮದ್ರಾಸ್ ಪ್ರೆಸಿಡಿನ್ಸಿಯಾದ ತಮ್ಮ ಹತೋಟಿಯಲ್ಲಿ ಇಟ್ಟುಕೊಂಡರು. ಇದು ಸ್ವಾತಂತ್ರೋತ್ತರದಲ್ಲಿ ಏಕೀಕರಣ ಚಳವಳಿಗೆ ನಾಂದಿಯಾಯಿತು. ನಮ್ಮ ಪ್ರದೇಶಗಳ ವಿಕೇಂದ್ರೀಕರಣಕ್ಕೆ ಬ್ರಿಟಿಷರ ಕುಟಿಲತೆಯೇ ಕಾರಣವಾಯಿತು. ಟಿಪ್ಪು ಸುಲ್ತಾನನ ತಾಂತ್ರಿಕ ನಿಪುಣತೆಯ ಬಗ್ಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೀಗೆ ಹೇಳುತ್ತಾರೆ.
Tipu sultan, the innovator of the world's First war rocket.'
Two of these rockets captures by the British in Srirangapattana are displayed in the WOOLWICH museum artillery in London.
Secret correspondence of  Who are my people?All of them-YES, Those that ring the temple bells, those that praying in the mosques, they are my people and this Land is theirs and mine

ಹಾಗೆಯೇ ಪುಟ 306 Secret correspondence of Tipusultan ದಾಖಲೆಯಂತೆ ಶಿರೋನಾಮೆಯಲ್ಲಿ Tipu Sultan Tipu's Views on Religion communal harmony and Tolerance ಎಂದು ಘೋಷಿಸಿದ್ದಾನೆ. ಟಿಪ್ಪು ಸುಲ್ತಾನರ ಒಂದು ಖಡ್ಗವನ್ನು ಲಂಡನ್‌ನಲ್ಲಿ ಹರಾಜು ಹಾಕಿದಾಗ ಉದ್ಯಮಿ ವಿಜಯ ಮಲ್ಯರು ಅದನ್ನು ಹತ್ತು ಕೋಟಿ ರೂ.ಗಳಿಗೆ ಪಡೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಕೇಂದ್ರ-ರಾಜ್ಯ ಸರಕಾರಗಳು ಮಾಡಬೇಕಾದ ಕೆಲಸವಾಗಿತ್ತು.

ಇನ್ನು ಪಾನನಿಷೇಧದ ಬಗ್ಗೆ ಟಿಪ್ಪುವಿನ ಕಠಿಣ ನಿಲುವು ಹೀಗಿತ್ತು.
For the social economic and moral good of the people there shall be total prohibition on distilling and selling of liquor. Licenses shall be issued for limited quantities strictly for the sale to Foreigners.
(From the Tipu's revenue regulations of 1787 page 307 Secret correspondence of Tipusultan )
ಇಷ್ಟೆಲ್ಲಾ ಐತಿಹಾಸಿಕ ಪುರಾವೆಗಳಿದ್ದರೂ ಟಿಪ್ಪು ಸುಲ್ತಾನನನ್ನೂ ತಪ್ಪು ತಪ್ಪಾಗಿ ವ್ಯಾಖ್ಯಾನಿಸುವ ಒಂದು ರೀತಿಯ ನವವ್ಯಾಖ್ಯಾನ ಪಂಡಿತರು ಹುಟ್ಟಿಕೊಳ್ಳುತ್ತಿದ್ದಾರೆ. ಇಂತಹವರ ಬಗ್ಗೆ ವಿಷಾದವಿದೆ. ಅವರಿಗೆ ವಿವೇಕ ಬರಲಿ.

Advertisement

0 comments:

Post a Comment

 
Top