ಬಳ್ಳಾರಿಯಲ್ಲಿ ಯಾರು ಗೆಲ್ಲುತ್ತಾರೆ? ಯಾರಿಗೆ ನಿಮ್ಮ ಬೆಂಬಲ? ಎಂದು ಲೋಹಿಯಾ ಪ್ರಕಾಶನದ ಗೆಳೆಯ ಚೆನ್ನಬಸಣ್ಣ ಅವರಿಗೆ ಕೇಳಿದೆ. ಯಾರು ಗೆದ್ದರೂ ಒಂದೇ. ಯಾರಿಗೂ ನಾನು ಮತ ಹಾಕುವುದಿಲ್ಲ ಎಂದು ಚೆನ್ನಬಸಣ್ಣ ನೇರವಾಗಿ ಉತ್ತರಿಸಿದರು. ಬಳ್ಳಾರಿಯಲ್ಲೇ ಜನಿಸಿ ಅಲ್ಲೆ ನೆಲೆಸಿದ ಸೋಷಲಿಸ್ಟ್ ಮಿತ್ರ ಚನ್ನಬಸವಣ್ಣ ಜೊತೆ ಆಗಾಗ ದೂರವಾಣಿಯಲ್ಲಿ ಮಾತಾ ಡುತ್ತೇನೆ. ಹೀಗೆ ಮಾತಾಡುವಾಗೆಲ್ಲ ಇಂಥ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮ ಅಂದರೆ ನಾವಿರುವ ನಾಡು, ಸಮಾಜ ಅಧೋಗತಿಯತ್ತ ಸಾಗಿರುವ ಬಗ್ಗೆ ತುಂಬ ಬೇಸರ, ನೋವು, ಆತಂಕದಿಂದಲೇ ಚನ್ನಬಸಣ್ಣ ಹೇಳಿಕೊಳ್ಳುತ್ತಾರೆ. ಇದರೊಂದಿಗೆ ಇತ್ತೀಚಿನ ಅವರ ಮಾತಿನಲ್ಲಿ ಅಸಹಾಯಕತೆಯೂ ಬೆರೆತುಕೊಂಡಂತೆ ಕಾಣುತ್ತಿದೆ. (ಅಂತಲೇ ಚುನಾವಣೆ ಬಿಟ್ಟು ನೃತ್ಯೋತ್ಸವ ನೋಡಲು ಒಡಿಶಾಕ್ಕೆ ಹೊರಟಿದ್ದಾರೆ)ಇದು ಅಂತಿಂಥ ಅಸಹಾಯಕತೆಯಲ್ಲ.
ಪ್ರಜಾಪ್ರಭುತ್ವದಲ್ಲಿ ಆಯ್ಕೆಗಳೇ ಇಲ್ಲದಂಥ ಅಸಹಾಯಕತೆ. ಹೊಸ ಸಮಾಜದ ಕನಸನ್ನು ಕಟ್ಟಿಕೊಂಡ ಪ್ರಜ್ಞಾವಂತನೊಬ್ಬನಿಗೆ ಈ ರಾಮುಲು, ಅದೇ ಬಿಜೆಪಿ, ಬ್ರೋಕರ್ ಕೊಂಡಯ್ಯನ ಕಾಂಗ್ರೆಸ್, ಕುಮಾರಸ್ವಾಮಿಯ ಕುತಂತ್ರ ಇವೆಲ್ಲ ಕಂಡಾಗ ಇಂಥ ಹತಾಶೆ ತುಂಬಿದ ಅಸಹಾಯಕ ಭಾವ ಮೂಡು ತ್ತದೆ. ಇದು ಬಳ್ಳಾರಿಯ ಸ್ಥಿತಿ ಮಾತ್ರವಲ್ಲ, ಇಡೀ ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೊಸ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳುವ ಕನಸನ್ನೆ ಕೊಂದುಕೊಂಡಿರುವ ಮತಾದರರು ‘ಒಂದು ಓಟಿಗೆ ಒಂದು ಸಾವಿರ ಕೊಡಿ’ ಎರಡು ಸಾವಿರ ಕೊಡಿ’ ಎಂದು ಚೌಕಾಸಿಗೆ ಇಳಿದಾಗ ಅಲ್ಲಿ ಸ್ಪರ್ಧೆ ಏರ್ಪಡುವುದು ಗಣಿಗಳ್ಳರು, ಭೂಗಳ್ಳರು ಹಾಗೂ ಮಾಫಿಯಾಗಳ ನಡುವೆ ಮಾತ್ರ. ಅಂಥಲ್ಲಿ ಸಜ್ಜನ ಸ್ಪರ್ಧಿಗೆ ಅವಕಾಶ ಇರುವುದೇ ಇಲ್ಲ.
ದೇಶಕ್ಕೆ ಸ್ವಾತಂತ್ರ ಬಂದ ಮೊದಲ ಎರಡು ದಶಕದಲ್ಲಿ ಚುನಾವಣಾ ರಾಜಕಾರಣದಲ್ಲಿ ಜವಹರಲಾಲ ನೆಹರೂ, ರಾಮಮನೋಹರ ಲೋಹಿಯಾ, ವೌಲಾನಾ ಅಬುಲ್ ಕಲಾಂ ಆಝಾದ್, ಎ.ಕೆ.ಗೋಪಾಲನ್, ಎಸ್.ಎ.ಡಾಂಗೆ, ನಿಜಲಿಂಗಪ್ಪನವರಂಥ ಮುತ್ಸದ್ದಿಗಳು ಎದ್ದು ಕಾಣುತ್ತಿದ್ದರು. ಇವರೆಲ್ಲ ನಿರ್ಗಮಿಸಿದ ನಂತರ ದೇವರಾಜ ಅರಸು, ಇಂದಿರಾ ಗಾಂಧಿ, ವಾಜಪೇಯಿ, ಎಂ.ವೈ.ಘೋರ್ಪಡೆ, ಕೆ.ಎಚ್.ರಂಗನಾಥ್, ಗೋಪಾಲ ಗೌಡರಂಥ ರಾಜಕಾರಣಿಗಳು ಬಂದರು.
ಈ ಮುತ್ಸದ್ದಿಗಳು ಮತ್ತು ರಾಜಕಾರಣಿಗಳಿಗೆ ಈ ದೇಶ ಕಟ್ಟುವ ತಮ್ಮನ್ನು ಚುನಾಯಿಸಿದ ಜನತೆಗೆ ಒಳ್ಳೆಯದನ್ನು ಮಾಡುವ ಕನಿಷ್ಠ ಬದ್ಧತೆ ಇರುತ್ತಿತ್ತು. ನಿಯತ್ತು ಇರುತ್ತಿತ್ತು.ಆದರೆ ಈಗ ಮುತ್ಸದ್ದಿಗಳೂ ಇಲ್ಲ. ರಾಜಕಾರಣಿಗಳೂ ಇಲ್ಲ. ಚುನಾವಣಾ ರಾಜಕಾರಣದತ್ತ ಕಣ್ಣು ಹೊರಳಿಸಿದರೆ ಗಣಿಗಾರಿಕೆಯಲ್ಲಿ ತೊಡಗಿರುವ ಜನಾರ್ದನ ರೆಡ್ಡಿಯಂಥ ದಗಾಕೋರರು, ಸಕ್ಕರೆ ಲಾಬಿಯ ನಿರಾಣಿಯಂಥ ಖದೀಮರು, ಭೂ ಮಾಫಿಯಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಂಥ ಫಟಿಂಗರು. ಎಲ್ಲಿ ನೋಡಿದರೂ ಇವರೇ ಕಾಣುತ್ತಾರೆ.
ಯಾವುದೇ ಬಲಪಂಥೀಯ ರಾಜಕೀಯ ಪಕ್ಷವೂ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಆತನ ಚಾರಿತ್ರದ ಬಗ್ಗೆ ಪರಿಶೀಲಿಸುವುದಿಲ್ಲ. ಆತನ ಬಳಿ ಎಷ್ಟು ಹಣವಿದೆ, ಆತ ಎಷ್ಟು ಖರ್ಚು ಮಾಡುತ್ತಾನೆ, ಜೊತೆಗೆ ಆತನ ಜಾತಿಯ ಓಟಗಳೆಷ್ಟು ಇವೇ ಈಗ ಅಭ್ಯರ್ಥಿಯ ಆಯ್ಕೆಯ ಮಾನದಂಡಗಳಾಗಿವೆ.ಇಂಥ ದಗಾಕೋರ ದಂಧೆಕೋರರಿಗೆ ಹೆಸರಾಂತ ಮಠಾಧೀಶರ ಆಶೀರ್ವಾದವೂ ಇರುತ್ತದೆ. ಮಾಧ್ಯಮಗಳಲ್ಲಿ ಕೆಲ ಶ್ವಾನಗಳನ್ನು ಇವರು ಸಾಕಿಕೊಂಡಿರುತ್ತಾರೆ. ಇದೆಲ್ಲದರ ಜೊತೆ ರಾಷ್ಟ್ರೀಯ ಪಕ್ಷದ ಟಿಕೇಟ್ ದೊರೆತ ತಕ್ಷಣ ಮತದಾರರ ಬೇಟೆ ಆರಂಭವಾಗುತ್ತದೆ. ಬಳ್ಳಾರಿಯಂಥ ಕಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದು ಓಟಿಗೆ ಒಂದು ಸಾವಿರ ರೂ. ಎಂದು ರೇಟು ನಿಗದಿ ಯಾಗಿತ್ತು. ಈ ಬಾರಿಯಂತೂ ಅದು ಎರಡು ಸಾವಿರದಿಂದ ಮೂರು ಸಾವಿರವರೆಗೆ ಹೋಗಿದೆ. ಓಟು ಕೇಳಲು ಬರುವವರೊಂದಿಗೆ ಚೌಕಾಸಿ ವ್ಯವಹಾರವೂ ನಡೆಯುತ್ತದೆ.
ಬಳ್ಳಾರಿಯಲ್ಲಿ ಗಣಿಗಾರಿಕೆಯಿಂದ ಇಡೀ ಜಿಲ್ಲೆಯ ಪರಿಸರ ಹಾಳಾಗಿ ಹೋಗಿದೆ. ಮಾಲಿನ್ಯದಿಂದ ನಾನಾ ಕಾಯಿಲೆಗಳು ಹರಡಿವೆ. ರಸ್ತೆಗಳು ಗಬ್ಬೆದ್ದು ಹೋಗಿವೆ. ಆದರೆ ಇದ್ಯಾವುದೂ ಚುನಾವಣೆಯಲ್ಲಿ ಚರ್ಚೆಯ ವಿಷಯವಲ್ಲ. ಬಿಜೆಪಿಯಿಂದ ಬಂಡೆದ್ದು ಹೊರಬಂದ ರಾಮುಲು, ಬಿಜೆಪಿಯ ಅಧಿಕೃತ ಅಭ್ಯರ್ಥಿ ಗಾದಿಲಿಂಗಪ್ಪ, ಕಾಂಗ್ರೆಸ್‌ನ ರಾಮಪ್ರಸಾದ್ ಹಿಂದೆ ಇರುವ ಖದೀಮ ಅನಿಲ್‌ಲಾಡ್ ಇವರೆಲ್ಲ ಗಣಿಗಾರಿಕೆಯ ಫಲಾನುಭವಿಗಳಾಗಿರುವು ದರಿಂದ ಆ ಬಗ್ಗೆ ಪ್ರಸ್ತಾಪಿಸುವುದೂ ಇಲ್ಲ. ಜನರಿಗೂ ಅದು ಬೇಕಾಗಿಲ್ಲ. ಇಂಥ ಸನ್ನಿವೇಶದಲ್ಲಿ ಸಮರ್ಥ ಅಭ್ಯರ್ಥಿಯ ಆಯ್ಕೆಗೆ ಅವಕಾಶ ಎಲ್ಲಿದೆ?
ರಾಮುಲು ಗೆದ್ದು ಬಂದರೂ ಆತ ವಾಪಸು ಬಿಜೆಪಿಗೆ ಸೇರುವುದಿಲ್ಲ ಎಂಬುದು ಖಾತರಿಯಿಲ್ಲ. ಈತನನ್ನು ವಾಪಸು ಬಿಜೆಪಿಗೆ ತೆಗೆದುಕೊಳ್ಳುವುದಿಲ್ಲ ಎಂಬುದೂ ಖಚಿತವಿಲ್ಲ. ಅಂತಲೇ ಆರೆಸ್ಸೆಸ್‌ನ ಕಟ್ಟಾ ಸ್ವಯಂ ಸೇವಕ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಪಕ್ಷದ ಶಿಸ್ತನ್ನು ಧಿಕ್ಕರಿಸಿ ಇಂದಿಗೂ ರಾಮುಲು ಜೊತೆಗಿದ್ದಾರೆ. ರಾಮುಲು ವನ್ನು ಬಿಜೆಪಿಗೆ ವಾಪಸು ಕರೆತರುವ ಬಗ್ಗೆ ಆತ್ಮವಿಶ್ವಾಸದಿಂದ ಇದ್ದಾರೆ. ಹಾಗಿದ್ದರೆ ಈ ಚುನಾವಣೆಯ ಅಗತ್ಯವಾದರೂ ಏನಿತ್ತು? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.
ದೇಶದ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಎದುರಾಳಿ ಪಕ್ಷಗಳಂತೆ ಕಂಡರೂ ಆರ್ಥಿಕ ನೀತಿ ಧೋರಣೆಗಳ ಪ್ರಶ್ನೆಯಲ್ಲಿ ಆ ಪಕ್ಷಗಳ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವಲ್ಲಿ ಈ ಎರಡೂ ಪಕ್ಷಗಳೂ ತೀವ್ರ ಆಸಕ್ತಿ ಹೊಂದಿವೆ. ವಿದೇಶದಲ್ಲಿರುವ ಕಪ್ಪು ಹಣದಂಥ ಉಪಯೋಗವಿಲ್ಲದ ವಿಷಯಗಳನ್ನು ಮುಂದೆ ಮಾಡಿ ಬಿಜೆಪಿ ಗಲಾಟೆ ಮಾಡುತ್ತದೆ. ಆದರೆ ಕಾರ್ಪೊರೇಟ್ ಕೊಳ್ಳೆಯ ಬಗ್ಗೆ ಅದು ಬಾಯಿ ಬಿಡುವುದಿಲ್ಲ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ ಮುಖ್ಯ ವ್ಯತ್ಯಾಸವೆಂದರೆ ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ. ಆದರೆ ಬಿಜೆಪಿ ಆರೆಸ್ಸೆಸ್‌ನ ಜನಾಂಗ ದ್ವೇಷಿ ಸಿದ್ಧಾಂತದ ನೆಲೆಯಲ್ಲಿ ರೂಪು ಗೊಂಡ ಪಕ್ಷ. ಆದರೆ ಅಮೆರಿಕನ್ ಸಾಮ್ರಾಜ್ಯಶಾಹಿಯ ಸೇವೆ ಮಾಡುವಲ್ಲಿ ಈ ಪಕ್ಷಗಳಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಎರಡೂ ಕಡೆಯೂ ಮುತ್ಸದ್ದಿಗಳು, ರಾಜಕಾರಣಿಗಳು ಕಾಣುತ್ತಿಲ್ಲ. ವ್ಯಾಪಾರ ವಹಿವಾಟು ದಗಾಕೋರರು ಎರಡೂ ಪಕ್ಷಗಳನ್ನು ನಿಯಂತ್ರಿಸುತ್ತಿದ್ದಾರೆ. ಇಂಥಲ್ಲಿ ಯಾರನ್ನೇ ಆರಿಸಿದರೂ ಪರಿಣಾಮ ಭಿನ್ನವಾಗಿರುವುದಿಲ್ಲ.
ಇಂಥ ಒಂದು ನಿರಾಶದಾಯಕ ಸನ್ನಿವೇಶದಲ್ಲಿ ಈ ದೇಶದ ಮುಂದಿನ ದಾರಿ ಯಾವುದು? ತಲುಪುವ ಗುರಿ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಇನ್ನು ಸಾಕಷ್ಟು ದೂರ ಸಾಗಬೇಕಾಗಿದೆ. ಎಡಪಂಥೀಯ ಸಂಘಟನೆಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದರೂ ಸುತ್ತಲೂ ಕವಿದ ಅಂಧಕಾರದಲ್ಲಿ ಯಾವುದೇ ಆಶಾಕಿರಣ ಕಾಣುತ್ತಿಲ್ಲ.ಆದರೆ ಬದಲಾವಣೆ ಸೃಷ್ಟಿಯ ನಿಯಮ. ಈ ಜಗತ್ತು ಇಂಥ ಪಲ್ಲಟಗಳ ನಡುವೆ ಹೊಸ ಬದಲಾವಣೆಗೆ ಮೈಯೊಡ್ಡಿಕೊಳ್ಳುತ್ತಲೇ ಬಂದಿದೆ. ಅಂತಹ ಬದಲಾವಣೆಗಾಗಿ ಜಗತ್ತಿನಂತೆ ಭಾರತ ಈಗ ಸಜ್ಜಾಗಿ ನಿಂತಿದೆ. ಅದು ಅಂದರೆ ಆ ಬದಲಾವಣೆ ಸಿದ್ಧಿಸುವುದು ಯಾವಾಗ ಎಂಬುದೊಂದೇ ಈಗಿರುವ ಪ್ರಶ್ನೆ.
ಈ ಪ್ರಶ್ನೆಗೆ ಜನತೆಯ ಸಾಮೂಹಿಕ ಕಾರ್ಯಾಚರಣೆಯಲ್ಲಿ ಉತ್ತರ ಕಂಡುಕೊಳ್ಳಬೇಕಾಗಿದೆ. ಇದನ್ನು ಬರೆದು ಮುಗಿಸುವಾಗಲೇ ನಕ್ಸಲ್ ನಾಯಕ ಕಿಶನ್‌ಜಿ ಯನ್ನು ಚಿದಂಬರಂ ಪ್ರಚೋದನೆಯಿಂದ ಮಮತಾ ದೀದಿ ಮತ್ತು ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದ ಸುದ್ದಿ ಬಂತು. ತನ್ನನ್ನು ಬೆಂಬಲಿಸಿ, ಗೆಲ್ಲಲು ಸಹಾಯ ಮಾಡಿದ ನಕ್ಸಲರಿಗೆ ಮಮತಾ ಈ ಹತ್ಯೆಯ ಮೂಲಕ ಋಣ ತೀರಿಸಿದ್ದಾರೆ.
0 comments:
Post a Comment