PLEASE LOGIN TO KANNADANET.COM FOR REGULAR NEWS-UPDATES


ಹಾವಿನ ಮೇಲೆ ಕುಳಿತು ಸವಾರಿಗೆ ಹೊರಟ ಕಪ್ಪೆಯಂತಾಗಿದೆ ಪಾಕಿಸ್ತಾನದ ಸ್ಥಿತಿ. ಅಮೆರಿಕದ ಸ್ನೇಹವನ್ನು ಮಾಡಿದ ತಪ್ಪಿಗಾಗಿ ಪಾಕಿಸ್ತಾನ ತೆರಿಗೆ ಕಟ್ಟುವುದಕ್ಕೆ ತೊಡಗಿದೆ. ಶನಿವಾರ ಪಾಕಿಸ್ತಾನದ ವಾಯವ್ಯ ಪ್ರಾಂತ್ಯದಲ್ಲಿ ನ್ಯಾಟೊ ಹೆಲಿಕಾಪ್ಟರ್ ನಡೆಸಿದ ದಾಳಿಗೆ 28 ಮಂದಿ ಪಾಕ್ ಯೋಧರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಮುಖ್ಯವಾಗಿ ಇದು ಕೇವಲ ಪಾಕಿಸ್ತಾನದ ಸೈನಿಕರ ಸಾವು ನೋವಿನ ಪ್ರಶ್ನೆಯಲ್ಲ. ದಾಳಿ ನಡೆದಿರುವುದು ಸೈನಿಕರ ಮೇಲಲ್ಲ, ಪಾಕಿಸ್ತಾನದ ಸಾರ್ವಭೌಮತೆಯ ಮೇಲೆ. ಇದರ ವಿರುದ್ಧ ಪಾಕಿಸ್ತಾನ ವ್ಯಕ್ತಪಡಿಸಿರುವ ಆಕ್ರೋಶ, ಅಸಹಾಯಕ ಚೀತ್ಕಾರದಂತೆ ಕೇಳುತ್ತಿದೆ. ಯಾಕೆಂದರೆ ಅಮೆರಿಕದ ವಿರುದ್ಧ ತನ್ನ ಸಿಟ್ಟನ್ನು ಜೋರಾಗಿ ವ್ಯಕ್ತಪಡಿಸುವಂತಹ ಸ್ಥಿತಿಯಲ್ಲಿ ಪಾಕಿಸ್ತಾನವಿಲ್ಲ. ಪಾಕಿಸ್ತಾನದ ಇಂದಿನ ಸ್ಥಿತಿಗೆ ನಾವು ಅಮೆರಿಕವನ್ನು ದೂಷಿಸುವಂತಿಲ್ಲ. ಇದು ಪಾಕಿಸ್ತಾನ ತನ್ನ ಸ್ವಯಂ ಅಪರಾಧಕ್ಕೆ ತೆತ್ತ ಬೆಲೆ. ಯಾವುದೇ ದೇಶ ಅಮೆರಿಕದ ಜೊತೆಗಿನ ಸ್ನೇಹವನ್ನು ಗಳಿಸಿಕೊಳ್ಳಬೇಕಾದರೆ ಅದು ತೆರಬೇಕಾದುದು ತನ್ನ ಸಾರ್ವಭೌಮತೆಯನ್ನು. ವಿಶ್ವದ ಹಲವೆಡೆ ಸಾಬೀತಾಗಿರುವ ಈ ನಿಜ, ಇದೀಗ ಪಾಕಿಸ್ತಾನದ ಪಾಲಿಗೂ ನಿಜವಾಗುವ ಹಂತಕ್ಕೆ ಬಂದಿದೆ.
ಹಾಗೆ ನೋಡಿದರೆ ನಾವು ನೆಹರೂ ಅವರನ್ನು ಕೆಲವು ಕಾರಣಗಳಿಗಾಗಿ ಮೆಚ್ಚಲೇ ಬೇಕು. ಭಾರತ ಸ್ವತಂತ್ರಗೊಂಡಾಗ ಪಾಕಿಸ್ತಾನ ಪ್ರಬಲ ಅಮೆರಿಕದ ಸ್ನೇಹಕ್ಕೆ ಹಾತೊರೆದರೆ, ಭಾರತ ರಶ್ಯಾದ ಸ್ನೇಹಕ್ಕೆ ಕೈ ಚಾಚಿತು. ಆದರೆ, ಇದೇ ಸಂದರ್ಭದಲ್ಲಿ ತನ್ನ ಅಲಿಪ್ತ ನೀತಿಯನ್ನು ಸ್ಪಷ್ಟ ಪಡಿಸಿತು. ಇಂದು ಭಾರತಕ್ಕೆ ವಿಶ್ವದಲ್ಲಿ ಅಲ್ಪಸ್ವಲ್ಪ ಗೌರವ ಉಳಿದಿದ್ದರೆ ಇದೇ ಕಾರಣಕ್ಕೆ.ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಈ ಅಲಿಪ್ತ ನೀತಿಯಿಂದ ಭಾರತ ದೂರ ಸರಿದಿದೆ. ಹಾಗೆ ದೂರ ಸರಿದಂತೆಯೇ ಶ್ರೀಮಂತ ರಾಷ್ಟ್ರಗಳ ಹಿಡಿತ ಭಾರತದ ಮೇಲೆ ಬಿಗಿಯಾಗುತ್ತಿದೆ.ವಿದೇಶಾಂಗ ನೀತಿಯೇ ಅಸ್ತವ್ಯಸ್ತಗೊಂಡಿದೆ.
ಪಾಕಿಸ್ತಾನದ ಸ್ಥಿತಿಯಂತೂ, ಭಾರತದ ಮೇಲಿನ ಸಿಟ್ಟಿಗೆ ತನ್ನ ಮೂಗನ್ನು ಕೊಯ್ದುಕೊಂಡಂತಾಗಿದೆ. ಪಾಕಿಸ್ತಾನ ಅಮೆರಿಕ ವನ್ನು ಆಶ್ರಯಿಸಿದುದು ಮುಖ್ಯವಾಗಿ ಯುದ್ಧದ ಕಾರಣಗಳಿಗಾಗಿ.ಮೊದಲು ಕಾಶ್ಮೀರ, ಬಳಿಕ ಬಾಂಗ್ಲವನ್ನು ತನ್ನದಾಗಿಸುವ ಪಾಕಿಸ್ತಾನದ ಹಠವನ್ನು ಅಮೆರಿಕ ಚೆನ್ನಾಗಿಯೇ ಬಳಸಿಕೊಂಡಿತು.ಕಾಶ್ಮೀರವೆನ್ನುವ ಚಿಕನ್ ಕಬಾಬನ್ನು ತೋರಿಸುತ್ತಾ, ಭಾರತದ ಗುಮ್ಮ ತೋರಿಸಿ ಬೆದರಿಸುತ್ತಾ ಪಾಕಿಸ್ತಾನವನ್ನು ಅಮೆರಿಕ ಪರೋಕ್ಷವಾಗಿ ಆಳ ತೊಡಗಿತು. ಅಮೆರಿಕ ಪಾಕಿಸ್ತಾನಕ್ಕೆ ಕೋಟಿ ಕೋಟಿ ಧನ ಸಹಾಯವನ್ನೇನೋ ಮಾಡಿತು ನಿಜ.
ಆದರೆ ಅದಕ್ಕಾಗಿ ಪಾಕಿಸ್ತಾನ ತನ್ನ ದೇಶದ ಸ್ವಂತಿಕೆಯನ್ನೇ ಒತ್ತೆ ಇಡಬೇಕಾಯಿತು. ಒಂದು ಕಾಲದಲ್ಲಿ ಇದೇ ಅಮೆರಿಕದ ಸಲಹೆಯ ಮೇರೆಗೆ ಸಾಕಿ ಬೆಳೆಸಿದ ಉಗ್ರರು ಒಂದೆಡೆ ಪಾಕಿಸ್ತಾನಕ್ಕೆ ಸವಾಲಾಗಿದ್ದಾರೆ. ಇದೀಗ ಅದೇ ಉಗ್ರರನ್ನು ಮುಂದಿಟ್ಟು ಅಮೆರಿಕವು ಪಾಕಿಸ್ತಾನದ ಮೇಲೆ ಪರೋಕ್ಷ ದಾಳಿ ನಡೆಸುತ್ತಿದೆ. ಅತ್ತ ದರಿ-ಇತ್ತ ಪುಲಿ ಎಂಬಂತಾಗಿದೆ ಪಾಕಿಸ್ತಾನದ ಸ್ಥಿತಿ.
ನ್ಯಾಟೊ ದಾಳಿ ಖಂಡಿತವಾಗಿ ಒಂದು ಆಕಸ್ಮಿಕವಲ್ಲ. ಯಾವಾಗ ಅಮೆರಿಕದ ಸೇನೆ ಉಸಾಮ ಬಿನ್ ಲಾದೆನ್‌ನ ಹೆಸರಿನಲ್ಲಿ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿತೋ ಆಗಲೇ ಅದು ಪಾಕಿಸ್ತಾನದ ಪ್ರಭುತ್ವಕ್ಕೆ ಸವಾಲು ಹಾಕಿತ್ತು. ಪಾಕಿಸ್ತಾನದ ನಾಗರಿಕರ ಮೇಲೆ ಅಮೆರಿಕ, ನ್ಯಾಟೊ ಪಡೆಗಳ ದಾಳಿ ಹೊಸತೇನೂ ಅಲ್ಲ. ನಾಗರಿಕರು ಸತ್ತರೆ ‘ಉಗ್ರ’ರೆಂಬ ಹಣೆಪಟ್ಟಿ ಕಟ್ಟಿ ಬಾಯಿ ಮುಚ್ಚಿಸುತ್ತಿತ್ತು. ಪಾಕಿಸ್ತಾನ ಅದನ್ನು ಅಸಹಾಯಕವಾಗಿ ನೋಡುತ್ತಿತ್ತು. ಆದರೆ ಶನಿವಾರ ಸೇನೆಯ ಮೇಲೆ ನಡೆದ ದಾಳಿ ಮಾತ್ರ ಪಾಕಿಸ್ತಾನಕ್ಕೆ ಭಾರೀ ಮುಖಭಂಗವುಂಟುಮಾಡಿದೆ.ಅದಕ್ಕೆ ಪ್ರತಿಯಾಗಿ ನ್ಯಾಟೊದ ಪೂರೈಕೆ ಮಾರ್ಗಕ್ಕೆ ತಡೆ ನೀಡಿದೆಯಾದರೂ,ಸದ್ಯಕ್ಕೆ ಪಾಕಿಸ್ತಾನ ಅಮೆರಿಕವನ್ನು ಸಂಪೂರ್ಣ ಅವಲಂಬಿತವಾಗಿರುವುದರಿಂದ ಈ ನಿರ್ಧಾರ ಶಾಶ್ವತವಲ್ಲ ಎನ್ನುವುದು ವಿಶ್ವಕ್ಕೆ ಗೊತ್ತಿರುವ ಸತ್ಯ
ಅಮೆರಿಕದ ಜೊತೆಗಿನ ಸಂಬಂಧ ಹಳಸುತ್ತಿರುವ ಕಾರಣಕ್ಕೆ ಪಾಕಿಸ್ತಾನ ಚೀನದ ಜೊತೆಗೆ ತನ್ನ ಸಂಬಂಧವನ್ನು ಗಾಢವಾಗಿಸುತ್ತಿದೆ.ಈ ಮೂಲಕ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಆಲೋಚನೆ ಪಾಕಿಸ್ತಾನದ್ದು. ಚೀನ ಭಾರತಕ್ಕೆ ವೈರಿ. ಕಾಶ್ಮೀರದ ಭೂಭಾಗವನ್ನು ಚೀನಕ್ಕೆ ಬಿಟ್ಟುಕೊಡುವ ಮೂಲಕ, ಚೀನದ ಸ್ನೇಹವನ್ನು ಸಂಪಾದಿಸಿದರೆ ಪರೋಕ್ಷವಾಗಿ ಅಮೆರಿಕಕ್ಕೂ ಒಂದು ಎಚ್ಚರಿಕೆ ಯಾಗುತ್ತದೆ ಎನ್ನುವುದು ಆದರ ಹಂಚಿಕೆ. ಆದರೆ ಅಮೆರಿಕ ಎಷ್ಟು ಅಪಾಯಕಾರಿಯೋ ಅಷ್ಟೇ ಚೀನವೂ ಅಪಾಯಕಾರಿ. ಪಾಕಿಸ್ತಾನ ನಿಜಕ್ಕೂ ತನ್ನ ದೇಶದ ಒಳಿತನ್ನು ಬಯಸಿದ್ದರೆ ಅದು ಮಾಡಬೇಕಾಗಿರುವುದು ಭಾರತದೊಂದಿಗೆ ಮೈತ್ರಿ. ಭಾರತದ ಜೊತೆಗಿನ ಅನಗತ್ಯ ದ್ವೇಷವನ್ನು ತೊರೆದು, ಮಿತ್ರತ್ವವನ್ನು ಸಾಧಿಸಿದರೆ ಪಾಕಿಸ್ತಾನ-ಭಾರತ ಎರಡೂ ಅಭಿವೃದ್ಧಿಯೆಡೆಗೆ ಸಾಗುತ್ತವೆ.
ಪಾಕಿಸ್ತಾನದ ಇಂದಿನ ಸ್ಥಿತಿ ಭಾರತಕ್ಕೆ ಒಂದು ಎಚ್ಚರಿಕೆಯಾಗಬೇಕು. ನಮ್ಮ ರಾಜಕಾರಣಿಗಳು ಅಮೆರಿಕದ ಸ್ನೇಹಕ್ಕಾಗಿ ಹಂಬಲಿಸುತ್ತಿದ್ದಾರೆ. ದೇಶದ ಹಿತಾಸಕ್ತಿಯನ್ನು ಬಲಿ ಕೊಡುವುದಕ್ಕೂ ಹಿಂಜರಿಯದಂತಹ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ. ಅಮೆರಿಕದ ಸ್ನೇಹ ಭಾರತವನ್ನು ಸುಭದ್ರಗೊಳಿಸಲಾರದು. ಬದಲಿಗೆ ಅದರ ಸಾರ್ವಭೌಮತೆಯನ್ನು ಇನ್ನಷ್ಟು ದುರ್ಬಲ ಗೊಳಿಸಲಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶದ ಸ್ನೇಹವನ್ನು ಅಮೆರಿಕ ಬಯಸುತ್ತಿರುವುದು ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳಲು. ಇದನ್ನು ಅರ್ಥಮಾಡಿ ಕೊಂಡು ತನ್ನದೇ ಸ್ವಂತಿಕೆಯ, ಸ್ವಾವಲಂಬನೆಯ ದಾರಿಯಲ್ಲಿ ಭಾರತ ಹೆಜ್ಜೆಯಿಡಬೇಕಾಗಿದೆ.              ವಾರ್ತಾಭಾರತಿ ಅಂಕಣ

Advertisement

0 comments:

Post a Comment

 
Top