PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ.: ವಿಷಮ ಪರಿಸ್ಥಿತಿಯಲ್ಲಿ ತಪ್ಪೆಸಗಿ, ಜೈಲಿನಲ್ಲಿ  ಶಿಕ್ಷೆ ಅನುಭವಿಸುತ್ತಿರುವ ಅನಕ್ಷರಸ್ಥ ಖೈದಿಗಳು ತಮ್ಮ ಭವಿಷ್ಯದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಕ್ಷರರಾಗುವುದು ಅಗತ್ಯ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದ್ದಾರೆ.
  ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯವರು ಸಾಕ್ಷರ ಭಾರತ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಅನಕ್ಷರಸ್ಥ ಖೈದಿಗಳಿಗೆ ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಜೈಲಿನಲ್ಲಿ ಕಲಿಕಾ ಕೇಂದ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಯಾವುದೋ ಕೆಟ್ಟ ಘಳಿಗೆಯಲ್ಲಿ ತಪ್ಪೆಸಗಿ, ಶಿಕ್ಷೆ ಅನುಭವಿಸುತ್ತಿರುವ ಅನಕ್ಷರಸ್ಥ ಖೈದಿಗಳು, ಸಾಕ್ಷರರಾಗುವುದರಿಂದ ಅವರ ಭವಿಷ್ಯದ ಜೀವನವನ್ನು ಉತ್ತಮಪಡಿಸಿಕೊಳ್ಳಬಹುದಾಗಿದೆ.  ಸಾಕ್ಷರರಾಗುವುದರಿಂದ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಲಿದೆ ಅಲ್ಲದೆ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ನಡೆಸಲು, ಲೆಕ್ಕಾಚಾರಗಳನ್ನು ಕಲಿತುಕೊಂಡು, ಆರ್ಥಿಕವಾಗಿ ಸಬಲರಾಗಲು ಸಾಕ್ಷರರಾಗುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅಭಿಪ್ರಾಯಪಟ್ಟರು.
  ಜಿಲ್ಲಾ ಕಾರಾಗೃಹದ ಜೈಲು ಅಧಿಕಾರಿ ಶಾಂತಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ. ಕಲ್ಲೇಶ್, ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ಅಧಿಕಾರಿ ಡಾ. ಟಿ. ವೆಂಕಟೇಶ್, ಜಿಲ್ಲಾ ಕಾರ್ಯಕ್ರಮ ಸಹಾಯಕ ಸೋಮಶೇಖರ ತುಪ್ಪದ, ತಾಲೂಕಾ ಸಂಯೋಜಕ ಚಂದ್ರಶೇಖರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  
  ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ೩೩ ಜನ ಅನಕ್ಷರಸ್ಥ ಖೈದಿಗಳಿಗೆ ಈ ಸಂದರ್ಭದಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.  ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಅನಕ್ಷರಸ್ಥ ಖೈದಿಗಳ ಕಲಿಕೆಯ ಕುರಿತು ಪರವೀಕ್ಷಣೆಯನ್ನು ನಿಯಮಿತವಾಗಿ ನಡೆಸಲಿದ್ದು, ಕಲಿಕಾ ಕೇಂದ್ರಗಳ ಪ್ರಗತಿ ಬಗ್ಗೆ ವಾರಕ್ಕೊಮ್ಮೆ ಪರಿಶೀಲನೆ ನಡೆಸಲಿದೆ.

Advertisement

0 comments:

Post a Comment

 
Top