PLEASE LOGIN TO KANNADANET.COM FOR REGULAR NEWS-UPDATES

ಉಡುಪಿ, ನ.1: ಜನರ ನೋವನ್ನು ಅರಿತುಕೊಳ್ಳದೆ, ಪರಿಸರ ಮಾಲಿನ್ಯದ ಬಗ್ಗೆ ಅಸಡ್ಡೆ ತೋರಿಸುವುದು ಸಹ ಸಮಾಜ ದ್ರೋಹವಾಗುತ್ತದೆ. ಹೀಗಾಗಿ ಈ ರೀತಿ ವರ್ತಿಸುತ್ತಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯರೂ ಸಮಾಜ ದ್ರೋಹಿಯೇ ಆಗುತ್ತಾರೆ ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಹೇಳಿದ್ದಾರೆ. ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿ ದ್ದರು. ‘ಯುಪಿಸಿಎಲ್‌ನ್ನು ವಿರೋಧಿಸುವವರೆಲ್ಲ ಸಮಾಜ ದ್ರೋಹಿಗಳು’ ಎಂದು ಡಾ.ಆಚಾರ್ಯ ಇತ್ತೀಚೆಗೆ ಕೋಟದಲ್ಲಿ ನೀಡಿದ್ದ ಹೇಳಿಕೆಯ ಕುರಿತು ಪೇಜಾವರ ಶ್ರೀಗಳ ಪ್ರತಿಕ್ರಿಯೆ ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಜನರ ನೋವುಗಳಿಗೆ ಸ್ಪಂದಿಸಿ ಅವರ ಸಂಕಷ್ಟ ಗಳನ್ನು ಅರಿತು ಪರಿಹಾರಕ್ಕಾಗಿ ಅವರೊಂದಿಗೆ ಹೋರಾಡುವುದು ಸಮಾಜ ದ್ರೋಹವಾಗುವುದಾ ದರೆ ಸಚಿವರಾಗಿ ಅವರ ನೋವುಗಳಿಗೆ ಸ್ಪಂದಿಸದೆ, ಅವರನ್ನು ಬಾಧಿಸುವ ಪರಿಸರ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರಿಸುವ ಡಾ.ಆಚಾರ್ಯ ಸಮಾಜ ದ್ರೋಹಿ ಎನಿಸಿಕೊಳ್ಳುತ್ತ್ತಾರೆ ಎಂದವರು ಹೇಳಿದರು. ಚಿವರಾಗುವುದಕ್ಕೆ ಮೊದಲು ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದ ಡಾ.ಆಚಾರ್ಯರು, ಈಗ ಯುಪಿಸಿಎಲ್ ಕಂಪೆನಿಯ ಪ್ರಬಲ ಸಮರ್ಥಕರಾಗಿರುವುದಕ್ಕೆ ಹಾಗೂ ಅವರ ಬದಲಾದ ನೀತಿಗೆ ಕಾರಣಗಳೇನು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದರು.
ಘಟಕ ಆರಂಭಕ್ಕೆ ಸ್ಪಷ್ಟ ವಿರೋಧ: ಎಲ್ಲೂರಿ ನಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರದ ಜನತೆಗಾಗುತ್ತಿ ರುವ ಸಮಸ್ಯೆಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ನೇಮಕಗೊಂಡಿರುವ ತಜ್ಞರ ಸಮಿತಿ ಅತಿ ಶೀಘ್ರದಲ್ಲೇ ಸಾರ್ವಜನಿಕರ ಅಹವಾಲು ಸಭೆ ನಡೆಸಿ ತನ್ನ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಪೇಜಾವರಶ್ರೀ ಆಗ್ರಹಿಸಿದರು. ತಜ್ಞರ ಸಮಿತಿಯ ವರದಿ ಕೈಸೇರುವವರೆಗೆ ಯುಪಿಸಿಎಲ್‌ನ ಮತ್ತೊಂದು ಯೂನಿಟ್‌ನ ಆರಂಭಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸ್ಪಷ್ಟವಾಗಿ ನುಡಿದ ಪೇಜಾವರ ಶ್ರೀಗಳು, ವಾರ್ಷಿಕ ನಿರ್ವಹಣೆಗಾಗಿ ಕಳೆದೊಂದು ತಿಂಗಳಿನಿಂದ ಮುಚ್ಚಿರುವ ಮೊದಲ ಯೂನಿಟ್‌ನ್ನು ಸಹ ತಜ್ಞರ ವರದಿ ಬರುವವರೆಗೆ ಪುನರಾರಂಭಿಸಬಾರದೆಂಬುದು ತನ್ನ ಅಭಿಪ್ರಾಯ ಎಂದರು.
ಸರಕಾರ ನೇಮಿಸಿರುವ ತಜ್ಞರ ವರದಿಯನ್ನು ಪರಿಶೀಲಿಸಿ, ಈಗ ಸ್ಥಾವರ ದಿಂದ ಜನರಿಗಾಗುತ್ತಿರುವ ಎಲ್ಲಾ ಸಮಸ್ಯೆ ಹಾಗೂ ಪರಿಸರ ಮಾಲಿನ್ಯವನ್ನು ಬಗೆಹರಿಸಲು ಸಾಧ್ಯವಾಗುವುದಾದರೆ ಮಾತ್ರ ಮತ್ತೆ ಆರಂಭಿಸಬೇಕು. ಇಲ್ಲದಿದ್ದರೆ ಅದನ್ನು ಮುಚ್ಚಿದರೂ ತಪ್ಪಿಲ್ಲ. ಕಂಪೆನಿ ಪರಿಸರ ಮಾಲಿನ್ಯವನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು ಹಾಗೂ ಎಲ್ಲಾ ಕಾನೂನುಗಳನ್ನು ಪಾಲಿಸಬೇಕು ಎಂದು ಸ್ವಾಮೀಜಿ ನುಡಿದರು.
ನಮಗೆ ವಿದ್ಯುತ್ ಬೇಕು ನಿಜ. ಆದರೆ ಅದಕ್ಕಾಗಿ ಪರಿಸರವನ್ನು ಬಲಿ ಕೊಡಲು ಸಾಧ್ಯವಿಲ್ಲ. ಪರಿಸರಕ್ಕೆ ಹಾನಿಯಾಗದಂತೆ ಅದು ಕಾರ್ಯ ಸಾಧ್ಯವಾದರೆ ಇರಲಿ. ಇಲ್ಲದಿದ್ದರೆ ನಮಗೆ ಯೋಜನೆ ಬೇಡ ಎಂದು ಖಡಾಖಂಡಿತವಾಗಿ ನುಡಿದ, ಅವರು ತಜ್ಞರ ಸಮಿತಿ ಸಭೆ ಶೀಘ್ರವಾಗಿ ನಡೆಯಲಿ ಎಂದರು.
ಹೋರಾಟಕ್ಕೆ ಬೆಂಬಲ: ಯುಪಿಸಿಎಲ್‌ಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ. ಕರೆದರೆ ನಾನು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ನನ್ನ ಕೋರಿಕೆಯಂತೆ ಕರ್ನಾಟಕ ಬಯೋಪೂಯೆಲ್ ಬೋರ್ಡ್‌ನ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಹಾಗೂ ಬೆಂಗಳೂರು ಐಐಎಸ್‌ಸಿಯ ಡಾ.ಟಿ.ವಿ. ರಾಮಚಂದ್ರರನ್ನು ತಜ್ಞರ ಸಮಿತಿಗೆ ನೇಮಿಸಲಾಗಿದೆ ಎಂದರು.
ಸಮಯ ದೂಡುವ ತಂತ್ರ?: ಯುಪಿಸಿಎಲ್ ಸಮಸ್ಯೆಯ ಕುರಿತಂತೆ ಸರಕಾರ ಸಮಯ ದೂಡುವ ತಂತ್ರವನ್ನು ಅನುಸರಿಸುತ್ತಿದೆ ಎಂಬ ಸಂಶಯ ನನಗಿದೆ. ಅದು ಅರೆಮನಸ್ಸಿನಿಂದ ಎಲ್ಲವನ್ನೂ ನಿಧಾನಗತಿಯಲ್ಲಿ ಮಾಡುತ್ತಿದೆ. ತಜ್ಞರ ಸಮಿತಿಯ ಸದಸ್ಯರಿಗೆ ನೀಡಬೇಕಾದ ಯಾವುದೇ ಸೌಲಭ್ಯವನ್ನು, ಭತ್ತೆಗಳನ್ನು ಸರಕಾರ ಇದುವರೆಗೆ ನೀಡಿಲ್ಲ ಎಂದು ಅವರು ಆರೋಪಿಸಿದರು.
ಕೃಷಿ ಭೂಮಿ, ನೈಸರ್ಗಿಕ ವಾತಾವರಣಕ್ಕೂ ಉಷ್ಣ ವಿದ್ಯುತ್ ಸ್ಥಾವರಕ್ಕೂ ಹೊಂದಾಣಿಕೆಯಾಗುವುದಿಲ್ಲ ಎಂಬುದು ತನ್ನ ಅಭಿಪ್ರಾಯವಾಗಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು. 

Advertisement

0 comments:

Post a Comment

 
Top