ಕೊಪ್ಪಳ ನ.:: ಗ್ರಾಮಸ್ಥರಲ್ಲಿ ಮಕ್ಕಳ ಹಕ್ಕುಗಳ ಜಾರಿಯಲ್ಲಿ ಅವರ ಜವಾಬ್ದಾರಿ ಮತ್ತು ಅರಿವನ್ನು ಮೂಡಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ಮಕ್ಕಳ ಗ್ರಾಮಸಭೆ ನಡೆಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶಿಸಿದ್ದಾರೆ.
ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಪ್ರತಿಯೊಂದು ಮಗುವಿಗೆ ಬದುಕುವ, ರಕ್ಷಣೆಯ, ಅಭಿವೃದ್ಧಿಯ ಮತ್ತು ಭಾಗವಹಿಸುವ ಹಕ್ಕಿದೆ. ಭಾರತ ಸರ್ಕಾರ ಈ ಒಡಂಬಡಿಕೆಗೆ ೧೯೯೨ ರಲ್ಲಿ ವಿಶ್ವ ಸಂಸ್ಥೆಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದ್ದು, ಸಂವಿಧಾನ ಬದ್ಧವಾದ ಈ ಹಕ್ಕುಗಳ ಜಾರಿ ಆಯಾ ಗ್ರಾಮ ಪಂಚಾಯತ್‌ನ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನವೆಂಬರ್ ೧೩ ರಇಂದ ಪ್ರಾರಂಭಿಸಿ, ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಬೇಕಾಗಿರುತ್ತದೆ. ಯೂನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಸಮುದಾಯ ಸಂಘಟಕರು, ವಿವಿಧ ಸಂಘ ಸಂಸ್ಥೆಗಳು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತರು, ಅಂಗನವಾಡಿ ಮೇಲ್ವಿಚಾರಕರು, ಪೊಲೀಸ್ ಅಧಿಕಾರಿಗಳು, ಸ್ಥಳೀಯ ಗ್ರಾಮ ಲೆಕ್ಕಿಗರು, ಆರೋಗ್ಯ ಕಾರ್ಯಕರ್ತರು ಹಾಗೂ ಇತರರೊಂದಿಗೆ ಸೇರಿಕೊಂಡು ಗ್ರಾಮ ಸಭೆಯನ್ನು ಆಯೋಜಿಸಬೇಕು. ಇಂತಹ ಗ್ರಾಮ ಸಭೆಯಲ್ಲಿ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಠಿಕ ಆಹಾರ ಒದಗಿಸುವುದು, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟಪಾಟಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವುದು, ಪ್ರತಿ ೩ ವರ್ಷದಿಂದ ೬ ವರ್ಷದ ಎಲ್ಲಾ ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಲ್ಲಿ ದಾಖಲಾಗಿ ಶಿಕ್ಷಣವನ್ನು ಪ್ರಾರಂಭಿಸುವುದು, ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುವುದು, ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆ ಮುಂತಾದ ಅಂಶಗಳನ್ನಲದೆ, ಮಕ್ಕಳ ಪರವಾಗಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಕಾರ್ಯಕ್ರಮಗಳನ್ನು ವಿವರವಾಗಿ ಚರ್ಚಿಸಿ, ಗ್ರಾಮಸ್ಥರು ಹಾಗೂ ಪೋಷಕರುಗಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನಾಗಿಸಬೇಕು. ಈ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಗೆ ಆಯಾ ಗ್ರಾಮ ಪಂಚಾಯತ್ತಿ ವ್ಯಾಪ್ತಿಯ ಮಕ್ಕಳು, ಪೋಷಕರು, ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ಅಲ್ಲದೆ ಸಂಬಂಧಪಟ್ಟವರೆಲ್ಲರೂ ಹಾಜರಾಗಲು ಆಯಾ ಗ್ರಾಮ ಪಂಚಾಯತಿಗಳು ವಿಶೇಷ ವ್ಯವಸ್ಥೆ ರೂಪಿಸಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment