1872-73ರಲ್ಲಿ ಹೆಣವಾದವರ ಕುರುಹುಗಳು :ಇನ್ನೂ ಉಳಿದಿದೆ ಸಂಶಯ
ಧಾರವಾಡ-ಹುಬ್ಬಳ್ಳಿ: ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿದ್ದ ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ ಪತ್ತೆಯಾದ ಸಾಲು ಸಾಲು ಮಾನವ ತಲೆ ಬುರುಡೆಗಳ ವೃತ್ತಾಂತ ಕೊನೆಗೂ ಬಯಲಾಗಿದೆ. ೧೮೭೨-೭೩ ರಲ್ಲಿ ಈ ನಾಡನ್ನು ಭೀಕರವಾಗಿ ಹುರಿದು ಮುಕ್ಕಿದ ‘ಡೋಗಿ ಬರ’ದಲ್ಲಿ ಹೆಣವಾದವರ ಕುರುಹುಗಳಿವು.
ಅಮೆರಿಕದ ಪ್ಲೋರಿಡಾ ರಾಜ್ಯದ ಮಿಯಾಮಿ ನಗರದ ಬೀಟಾ ಅನಾಲೆಟಿಕ್ ಕಂಪನಿಯ ‘ರೇಡಿಯೋ ಕಾರ್ಬನ್ ಲ್ಯಾಬ್’ ಈ ಬುರುಡೆಗಳ ಕಾಲಮಾನ (ಸಿ-೧೪ ಕಾರ್ಬನ್ ಡೇಟಿಂಗ್)ವನ್ನು ೧೮೧ ವರ್ಷಗಳ ಪ್ರಾಚೀನ (೧೮೩೦ ರಿಂದ ಈಚೆಗೆ) ಎಂದು ಖಚಿತಪಡಿಸಿರುವ ಹಿನ್ನಲೆ ಯಲ್ಲಿ ತಜ್ಞರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಈ ವರದಿ ಗುರುವಾರ ಮಧ್ಯಾಹ್ನ ಮೈಸೂರು ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್ ಕೈ ಸೇರಿದ್ದು, ಈ ಕಾಲಮಾನ ಮತ್ತು ಅಣ್ಣಿಗೇರಿಯಲ್ಲಿ ಉತ್ಖನನ ನಡೆಸಿದಾಗ ಲಭ್ಯವಾದ ಕುರುವುಗಳು ಮತ್ತು ಪ್ರಾದೇಶಿಕ ಇತಿಹಾಸವನ್ನು ತಾಳೆಹಾಕಿ ಇಂಥದೊಂದು ತಾತ್ಕಾಲಿಕ ನಿಲುವಿಗೆ ಬರಲಾಗಿದೆ.
’ಈ ಕಾಲಮಾನದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು. ಆಗ ಯಾವುದೇ ಭೀಕರ ಯುದ್ಧಗಳು ಘಟಿಸಿಲ್ಲ. ಡೋಗಿ ಬರ ಮತ್ತು ಕೆಲವು ಸಾಂಕ್ರಾಮಿಕ ರೋಗಗಳು ಆವರಿಸಿ ಜನತೆಯನ್ನು ಸಾಮೂಹಿಕವಾಗಿ ಸಾವು-ನೋವಿಗೆ ಈಡು ಮಾಡಿದ ದಾಖಲೆಗಳಿವೆ. ಹಾಗಾಗಿ ಈ ಬುರುಡೆಗಳು ಯುದ್ಧ, ಹತ್ಯಾ ಕಾಂಡದ ಕುರುಹುಗಳಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೂ ಹಿರಿಯ ದಂತ ವೈದ್ಯ ಡಾ. ಅಶಿತಾಚಾರ್ಯ ವರದಿಯಲ್ಲಿ ಬುರುಡೆ- ಮತ್ತು ಎಲುವುಗಳಲ್ಲಿ ಆಳ ಗಾಯಗಳಾಗಿ ರುವುದು ಕಂಡು ಬಂದಿದ್ದರಿಂದ ಇನ್ನಷ್ಟು ತನಿಖೆ ಅಗತ್ಯ’ ಎಂದು ಡಾ.ಗೋಪಾಲ್ ತಿಳಿಸಿದರು.
ಬರುಡೆ ವೃತ್ತಾಂತ ಬಯಲು: ೨೮, ಆಗಸ್ಟ್ ೨೦೧೦ ರಂದು ಅಣ್ಣಿಗೇರಿಯ ಹೊರ ವಲಯದ ತೆರೆದ ಗಟಾರು ದುರಸ್ಥಿ ವೇಳೆ ೬೦೧ತಲೆ ಬುರುಡೆಗಳು ಪತ್ತೆಯಾಗಿ ಜನತೆಯನ್ನು ಬೆಚ್ಚಿ ಬೀಳಿಸಿದ್ದವು. ಈ ಮೂಲಕ ಆದಿಕವಿ ಪಂಪನ ಜನ್ಮಭೂಮಿ ಅಣ್ಣಿಗೇರಿ ದೊಡ್ಡ ಸುದ್ದಿಯಾಗಿತ್ತು.
ಮೊದಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಕಿಮ್ಸ್ ವೈದ್ಯರ ತಂಡ ಮೂರು ಬುರುಡೆಗಳನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಿ ಕಾಲಮಾನದ ವರದಿ ಕೇಳಿತ್ತು. ಆದರೆ, ಅಲ್ಲಿ ಸಾಧ್ಯವಾಗಿರಲಿಲ್ಲ. ಬಳಿಕ ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಒಂದು ಬುರುಡೆಯನ್ನು ಭುವನೇಶ್ವರ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದು ‘೬೨೮ ವರ್ಷಗಳ ಹಿಂದಿನ ಬುರುಡೆ’ (೧೩೮೩) ಎಂದು ವರದಿ ನೀಡಿತ್ತು.
ಆದರೆ, ಅಣ್ಣಿಗೇರಿಯಲ್ಲಿ ನಾಲ್ಕು ತಿಂಗಳು ಉತ್ಖನನ ನಡೆಸಿದ ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ನೇತೃತ್ವದ ಪ್ರಾಚ್ಯವಸ್ತು ತಜ್ಞರ ತಂಡ ಬುರುಡೆಗಳ ಕಾಲಮಾನ (ಸಿ-೧೪ ಕಾರ್ಬನ್ ಡೇಟಿಂಗ್) ಅರಿಯಲು ಕೊನೆ ಪ್ರಯತ್ನವಾಗಿ ಒಂದು ಬುರುಡೆಯನ್ನು ಅಮೆರಿಕಕ್ಕೆ ಕಳುಹಿಸಿತ್ತು.
ಇನ್ನೂ ಉಳಿದಿದೆ ಸಂಶಯ: ಇಲ್ಲಿನ ಎಸ್‌ಡಿಎಂ ಡೆಂಟಲ್ ಕಾಲೇಜಿನ ದಂತ ವೈದ್ಯ ಡಾ. ಅಶಿತಾಚಾರ್ಯ ಅವರು ೬ ರಿಂದ ೬೦ ವರ್ಷ ವಯೋವಾನದ ಮಕ್ಕಳು, ಮಹಿಳೆಯರು, ಪುರುಷರ ೩೬ ಬುರುಡೆಗಳನ್ನು ಪ್ರಯೋಗಕ್ಕೆ ಒಳಪಡಿಸಿದ್ದರು. ಅವುಗಳಲ್ಲಿ ೧೦ ಬುರುಡೆಗಳಿಗೆ ಮಾರಕಾಸ್ತ್ರದಿಂದ ಆಳವಾದ ಗಾಯ ಆಗಿರುವುದು ಖಚಿತವಾಗಿದೆ.
ಅದರಂತೆ ಉತ್ಖನನ ಸ್ಥಳದಲ್ಲಿ ಕಪ್ಪು ಕಲ್ಲಿನ ರಾಶಿ ಮತ್ತು ವಧಾಸ್ತಂಬದ ಕುರುಹು ಲಭಿಸಿದ್ದವು. ಮೇಲಾಗಿ ಈ ಬುರುಡೆಗಳನ್ನು ಸಾಲಾಗಿ ಜೋಡಿಸಿದ್ದರಿಂದ ಇದೊಂದು ಹತ್ಯಾಕಾಂಡ ಇಲ್ಲವೇ ಯುದ್ಧ ಇರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು. ಈ ವಾದಕ್ಕೆ ಇನ್ನಷ್ಟು ಪುಷ್ಟಿಕೊಡುವಂತೆ ಕವಿವಿ ಪ್ರಾಧ್ಯಾಪಕ ಡಾ.ಷಡಕ್ಷರಿ, ಡಾ.ಎಂ.ಎಂ.ಕಲಬುರ್ಗಿ ಕೆಲವು ಸ್ಥಳೀಯ ಆಚರಣೆಗಳನ್ನು ವಿವರಿಸಿದ್ದರು.
ಈ ಹಿನ್ನೆಲೆಯಲ್ಲಿ ತಜ್ಞರು ಸ್ಥಳೀಯ ಜಾನಪದ ಲಾವಣಿಗಳನ್ನು, ಆಚರಣೆಗಳ ಬಗ್ಗೆ ಗಮನ ಹರಿಸಿದ್ದೂ ಉಂಟು. ಆಗ ಡೋಗಿ ಬರ, ವಿಜಯನಗರ ಆಳ್ವಿಕೆ, ಮೊಗಲ್ ಆಳ್ವಿಕೆ, ಆದಿಲ್‌ಷಾಹಿ ಆಳ್ವಿಕೆ, ಟಿಪ್ಪು ಆಳ್ವಿಕೆಗಳಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಸಾಮೂಹಿಕ ಆತ್ಮಹತ್ಯೆ, ಶಿರಚ್ಛೇದನ, ದಾಳಿ ಇತ್ಯಾದಿ ಘಟನೆಗಳನ್ನು ಅವಲೋಕಿಸಿದ್ದರು. ಹಾಗಾಗಿ ಇನ್ನಷ್ಟು ಖಚಿತ ಪಡಿಸಿಕೊಳ್ಳಬೇಕಿದೆ ಎನ್ನುವುದು ಡಾ.ಗೋಪಾಲ್ ನಿಲುವು.
ಹೀಗೆ ನಡೆಯಿತು ಉತ್ಖನನ: ಕಳೆದ ಜ.೧೩ ರಿಂದ ಉತ್ಖನನ ಆರಂಭಿಸಲಾಗಿತ್ತು. ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆರ್.ಗಂಗಾಧರ, ಗದಗಿನ ರಾಜಾರಾಮ, ಎಂಜಿನಿಯರು ಗಳು ಸೇರಿದಂತೆ ತಜ್ಞರ ತಂಡ ಅಣ್ಣಿಗೇರಿಯಲ್ಲಿ ವಾಸ್ತವ್ಯ ಹೂಡಿತ್ತು.
ಸುಮಾರು ೩೦ ಕಾರ್ಮಿಕರು, ೧ ಜೆಸಿಬಿ ಹಗಲಿರುಳು ಕೆಲಸ ಮಾಡಿ ಬುರುಡೆ ಇರುವ ಸ್ಥಳದಿಂದ ಐದಡಿ ಅಂತರದಲ್ಲಿ ಎರಡು ಬೃಹತ್ ಗುಂಡಿಗಳನ್ನು ಮತ್ತು ಪಕ್ಕದ ತೆರೆದ ಗಟಾರನ್ನು ಇನ್ನಷ್ಟು ಆಳ ತೋಡಲಾಗಿದೆ. ಅಲ್ಲಿ ಸಂಗ್ರಹವಾಗುವ ನೀರನ್ನು ಪಂಪ್‌ಸೆಟ್ ಮೂಲಕ ಎತ್ತಿ ನೆಲವನ್ನು ಒಣಗಿಸಲಾಗಿತ್ತು. ಗಟಾರ ದಂಡೆಗೂಂಟ ಸುಮಾರು ೧೦ ಅಡಿ ಅಗಲ, ೫ ಅಡಿ ಆಳ, ೩೦ ಅಡಿ ಉದ್ದದ ಪ್ರದೇಶದಲ್ಲಿ ಮಾತ್ರ ಈ ಬುರುಡೆಗಳು, ಅವುಗಳಿಗೆ ಸಂಬಂಧಿಸಿದ ಇನ್ನುಳಿದ ಕುರುಹುಗಳು ಇರುವುದನ್ನು ತಜ್ಞರ ತಂಡ ಖಚಿತಪಡಿಸಿದೆ.
ಉತ್ಖನನದ ಪ್ರತಿ ಹಂತವನ್ನೂ ಚಿತ್ರೀಕರಿಸಲಾಗಿದೆ. ಅವುಗಳ ರೇಖಾಚಿತ್ರಗಳೂ ರಚನೆಯಾ ಗಿವೆ. ಖಚಿತ ಪಡಿಸಿಕೊಂಡ ಬಳಿಕವೇ ಅಲ್ಲಿಂದ ಬುರುಡೆಗಳನ್ನು ಹೊರ ತೆಗೆಯಲಾಗಿದೆ.
’ಈ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿದ್ದರಿಂದ ಮುಂದೊಂದು ದಿನ ಇದೇ ಅಣ್ಣಿಗೇರಿಯಲ್ಲಿ ವಸ್ತುಸಂಗ್ರಹಾಲಯ ನಿರ್ಮಿಸಿ ಬುರುಡೆಗಳನ್ನು ಯತಾಸ್ಥಿತಿಯಲ್ಲಿ ಇಡುವ ಮೂಲಕ ಮುಂದಿನ ಪೀಳಿಗೆಗೆ ನೀಡುವ ಆಲೋಚನೆ ಇದೆ’ ಎಂದು ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅಂದೇ ಹೇಳಿದ್ದರು
0 comments:
Post a Comment