PLEASE LOGIN TO KANNADANET.COM FOR REGULAR NEWS-UPDATES


ನ.10: ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ಪರಿಹಾರ ಪಡೆಯಲು ಕೃಷಿಕನೋರ್ವ ಗ್ರಾಹಕ ನ್ಯಾಯಾಲಯದಲ್ಲಿ ಹೂಡಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಿ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ. ಯಶಸ್ವಿನಿ ಯೋಜನೆಯ ಪರಿಹಾರ ಒದಗಿಸುವ ವಿಷಯದಲ್ಲಿ ಡಿ.5ರಂದು ಖುದ್ದಾಗಿ ಇಲ್ಲವೆ ವಕೀಲರ ಮೂಲಕ ವಿವರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ
ಎಂದು ದಾವೆದಾರರ ಪರ ವಕೀಲ ಕೆ.ಎಸ್.ಎನ್.ರಾಜೇಶ್ ತಿಳಿಸಿದ್ದಾರೆ. ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಸದಸ್ಯರಾಗಿರುವ ಬೊಂಡಂತಿಲ ಬೋರಗುಡ್ಡೆ ನಿವಾಸಿ ಲೋಕೇಶ್ ಪೂಜಾರಿ ಎಂಬವರು ಯಶಸ್ವಿನಿ ಕುಟುಂಬ ಆರೋಗ್ಯ ಯೋಜನೆಯ ಸದಸ್ಯರಾಗಿದ್ದು, ಇವರ ಪತ್ನಿ ಹಾಗೂ ಪುತ್ರ (ಹಸುಳೆ) ಕಳೆದ ಫೆಬ್ರುವರಿಯಲ್ಲಿ ಮಂಗಳೂರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗಾಗಿ 60 ಸಾವಿರ ವೆಚ್ಚವಾಗಿತ್ತು. ಯಶಸ್ವಿನಿ ಯೋಜನೆಯ ಫಲಾನುಭವಿ ಆಗಿರುವುದರಿಂದ ಚಿಕಿತ್ಸಾ ವೆಚ್ಚ ಭರಿಸುವಂತೆ ಲೋಕೇಶ್ ಪೂಜಾರಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ರವರಲ್ಲಿ ಕೇಳಿಕೊಂಡಿದ್ದರು. ಯಶಸ್ವಿನಿ ಯೋಜನೆ ತಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ಹೇಳಿ ಬ್ಯಾಂಕ್‌ನವರು ಪರಿಹಾರ ನೀಡಲು ನಿರಾಕರಿಸಿದ್ದರು ಎಂದು ವಕೀಲ ರಾಜೇಶ್ ಮಾಹಿತಿ ನೀಡಿದರು.
ಕಾನೂನು ಬದ್ಧವಾಗಿ ಪರಿಹಾರ ಒದಗಿಸುವಂತೆ ಕೋರಿ ಗುರುಪುರ ಬ್ಯಾಂಕ್‌ಗೆ ಮಾ.30ರಂದು ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ಗೆ ಸರಿಯಾದ ಉತ್ತರ ನೀಡದ ಬ್ಯಾಂಕ್‌ನವರು ಪರಿಹಾರ ನೀಡಲು ನಿರಾಕರಿಸಿದ್ದರು. ಬ್ಯಾಂಕ್‌ನವರ ನಿರಾಕರಣೆಯ ವಿರುದ್ಧ ಲೋಕೇಶ್ ಪೂಜಾರಿ ದ.ಕ. ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ದಾವೆ ಹೂಡಿದ್ದರು. ದಾವೆಗೆ ಜೂ.28ರಂದು ಪ್ರತಿಕ್ರಿಯಿಸಿರುವ ಗುರುಪುರ ಬ್ಯಾಂಕ್‌ನವರು ಯಶಸ್ವಿನಿ ಸಹಕಾರ ಯೋಜನೆ ಆಗಿರುವುದರಿಂದ ಪರಿಹಾರ ಒದಗಿಸುವ ವಿಷಯದಲ್ಲಿ ಯಶಸ್ವಿನಿ ಕೋ ಆಪರೇಟಿವ್ ಪಾರ್ಮರ್ಸ್‌ ಹೆಲ್ತ್‌ಕೇರ್ ಟ್ರಸ್ಟ್‌ನವರೇ ಬಾಧ್ಯಸ್ಥರಾಗಿರುತ್ತಾರೆ ಎಂದು ತಿಳಿಸಿದ್ದು, ಯಶಸ್ವಿನಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹಕಾರಿ ಸಚಿವ ಟ್ರಸ್ಟಿ ಲಕ್ಷಣ ಸವದಿ ಸೇರಿದಂತೆ ಯಶಸ್ವಿನಿ ಯೋಜನೆಯ ವ್ಯಾಪ್ತಿಯ ಏಳು ಪಾರ್ಟಿಗಳನ್ನು ಹೆಸರಿಸಿದ್ದರು. ಅವರ ಉಲ್ಲೇಖವನ್ನೇ ಆಧರಿಸಿ ಪರಿಹಾರ ವಿಷಯದ ಪೂರ್ಣ ವಿವರ ನೀಡುವಂತೆ ಯಶಸ್ವಿನಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಬಿ.ಎಸ್.ಯಡಿಯೂರಪ್ಪರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯ ಅದ್ಯಕ್ಷೆ ಆಶಾ ಶೆಟ್ಟಿ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ದಾವೆದಾರರ ಪರ ವಕೀಲ ರಾಜೇಶ್ ವಿವರ ನೀಡಿದ್ದಾರೆ.
ಪರಿಹಾರ ಕೋರಿದುದಕ್ಕೆ ಸದಸ್ಯತ್ವ ರದ್ದು

ಯಶಸ್ವಿನಿ ಯೋಜನೆಯಡಿ ಪರಿಹಾರ ಕೋರಿ ಗ್ರಾಹಕರ ವೇದಿಕೆಯಲ್ಲಿ ದಾವೆ ಹೂಡಿದುದಕ್ಕಾಗಿ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಲೋಕೇಶ್ ಪೂಜಾರಿಯವರ ಸದಸ್ಯತ್ವವನ್ನೇ ನವೀಕರಿಸಿಲ್ಲ ಎಂಬ ಮಾಹಿತಿಯನ್ನು ವಕೀಲ ರಾಜೇಶ್ ನೀಡಿದ್ದಾರೆ.
ಕಾನೂನು ಬದ್ಧವಾಗಿ ಪರಿಹಾರ ಒದಗಿಸುವಂತೆ ಕೋರಿ ಗುರುಪುರ ಬ್ಯಾಂಕ್‌ಗೆ ಮಾ.30ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಅದರ ಬಳಿಕ ಲೋಕೇಶ್ ಪೂಜಾರಿಯವರಿಗೆ ನೋಟಿಸ್ ನೀಡಿರುವ ಬ್ಯಾಂಕ್‌ನ ಆಡಳಿತ ಬ್ಯಾಂಕ್‌ನ ವಿರುದ್ಧ ಯಾವುದೇ ದಾವೆ ಹೂಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಆಗ್ರಹಿಸಿ, ಮುಚ್ಚಳಿಕೆ ಬರೆದು ಕೊಡದಿದ್ದರೆ ಸದಸ್ಯತ್ವ ನವೀಕರಿಸುವುದಿಲ್ಲ ಎಂದು ಅವರಿಗೆ ಎಚ್ಚರಿಕೆ ನೀಡಿದೆಯೆಂದು ಅವರು ತಿಳಿಸಿದರು.

Advertisement

0 comments:

Post a Comment

 
Top