ಬೆಂಗಳೂರು: ದೇಶದ ಸ್ವತ್ತಾಗಿರುವ ಕೊಹಿನೂರು ವಜ್ರವನ್ನು ಇಲ್ಲಿಗೇ ವರ್ಗಾಯಿಸಲು ಬ್ರಿಟಿಷ್ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸುವಂತೆ ಹೈಕೋರ್ಟ್ ಅರ್ಜಿದಾರರೊಬ್ಬರಿಗೆ ಗುರುವಾರ ಸೂಚಿಸಿತು.
ನಗರದ ವೇದಶ್ರೀ ಪಿ.ಆರ್. ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ವಜ್ರ ವಾಪಸಿಗೆ ಆದೇಶಿಸುವಂತೆ ಕೋರ್ಟ್ ಅನ್ನು ಕೋರಿದ್ದರು.
13ನೇ ಶತಮಾನದಿಂದ ಭಾರತದಲ್ಲಿ ಈ ವಜ್ರ ಪಡೆದುಕೊಂಡಿರುವ ಪ್ರಾಶಸ್ತ್ಯ ಕುರಿತಾಗಿ ಅರ್ಜಿಯಲ್ಲಿ ಅವರು ವಿವರಿಸಿದ್ದರು. `ಈ ವಜ್ರ ನಮ್ಮ ಸಾಂಸ್ಕೃತಿಕ ಆಸ್ತಿ. ಇದನ್ನು ಯಾವುದೇ ದೇಶಗಳು ತೆಗೆದುಕೊಂಡು ಹೋಗುವುದು ಕಾನೂನುಬಾಹಿರ. ಆದರೆ ಈವರೆಗೆ ಈ ನಿಟ್ಟಿನಲ್ಲಿ ಯಾವ ಸರ್ಕಾರ ಕೂಡ ಗಮನಹರಿಸಿಲ್ಲ. ಇದು ನಮ್ಮ ದೇಶದ `ಶಮಂತಕಮಣಿ` ಇದ್ದಂತೆ` ಎಂದು ಅವರು ತಿಳಿಸಿದ್ದರು.
ಅರ್ಜಿದಾರರು ಪಟ್ಟಿರುವ ಪ್ರಯತ್ನಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಪ್ರಶಂಸೆ ವ್ಯಕ್ತಪಡಿಸಿತು. ಆದರೆ ಅರ್ಜಿದಾರರು ಮಾಡಿಕೊಂಡಿ ರುವ ಮನವಿಯನ್ನು ಹೈಕೋರ್ಟ್ ಈಡೇರಿಸಲು ಆಗದು, ಇದು ಕೋರ್ಟ್ ವ್ಯಾಪ್ತಿ ಮೀರಿದ್ದು ಎಂದ ಪೀಠ ಈ ಕುರಿತು ಪ್ರಧಾನಿಗೆ ಮನವಿ ಸಲ್ಲಿಸುವಂತೆ ಸೂಚಿಸಿತು.
ಟಿಪ್ಪುವಿನ ಖಡ್ಗ: ವಿಚಾರಣೆ ವೇಳೆ ಅರ್ಜಿಯಲ್ಲಿನ ಕೆಲ ಅಂಶಗಳ ಬಗ್ಗೆ ನ್ಯಾ.ಸೇನ್ ಚಟಾಕಿ ಹಾರಿಸಿದರು.
`ವಜ್ರ ಸೇರಿದಂತೆ ನಮ್ಮ ದೇಶದ ಅಮೂಲ್ಯ ವಸ್ತುಗಳ ಕುರಿತು ಅರ್ಜಿಯಲ್ಲಿ ಇಷ್ಟೆಲ್ಲ ಅಂಶ ಬರೆದಿದ್ದೀರಲ್ಲ. ಟಿಪ್ಪುವಿನ ಖಡ್ಗ ಎಲ್ಲಿದೆ ಎಂಬುದನ್ನು ಶೋಧಿಸಲಿಲ್ಲವೇ?` ಎಂದು ಪ್ರಶ್ನಿಸಿದರು.
`ಇದನ್ನು ಶೋಧಿಸಲು ಹೋದರೆ ವಿಜಯ ಮಲ್ಯ ಸಿಕ್ಕಿಹಾಕಿಕೊಳ್ಳುತ್ತಾರೆ (ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಮಲ್ಯ ಅವರು ಇದನ್ನು ಖರೀದಿ ಮಾಡಿದ್ದಾರೆ). ಹಾಗೆಂದು ಅವರನ್ನು ಕೇಳಲು ಹೋಗ ಬೇಡಿ ಮತ್ತೆ. ನಿಮ್ಮನ್ನು ಹೊಡೆದು ಅಟ್ಟಿ ಬಿಡುತ್ತಾರೆ` ಎಂದು ಚಟಾಕಿ ಸಿಡಿಸಿದರು.
ಮಾರ್ಗಸೂಚಿಗೆ ಮನವಿ: ನೋಟಿಸ್
ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಸಂಬಂಧ ಕೆಲವೊಂದು ಮಾರ್ಗಸೂಚಿಯನ್ನು ರೂಪಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಪ್ರಣಾಳಿಕೆಯಲ್ಲಿರುವ ಹೆಚ್ಚಿನ ಅಂಶಗಳನ್ನು ರಾಜಕಾರಣಿಗಳು ಪಾಲಿಸುವುದಿಲ್ಲ. ಮನಸೋ ಇಚ್ಛೆ ನಡೆದುಕೊಳ್ಳುತ್ತಾರೆ. ಅದರಲ್ಲಿನ ಅಂಶಗಳನ್ನು ಅವರು ಚಾಚೂ ತಪ್ಪದೆ ಪಾಲಿಸಬೇಕಾದ ಅಗತ್ಯ ಇದೆ ಎನ್ನುವುದು ಅರ್ಜಿದಾರರಾದ ನಗರದ ವೀರೇಂದ್ರ ಪಾಟೀಲ್ ಅವರ ವಾದ.
ಮಾರ್ಗಸೂಚಿ ರೂಪಿಸುವುದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೇರಿದಂತೆ ಕೆಲವು ಹೈಕೋರ್ಟ್‌ಗಳಿಂದ ಹೊರಟ ಆದೇಶಗಳ ಕುರಿತು ಇನ್ನಷ್ಟು ಮಾಹಿತಿ ನೀಡುವಂತೆ ಅರ್ಜಿದಾರ ರಿಗೆ ಸೂಚಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿತು.
ಕೃಷ್ಣ ಅರ್ಜಿ ಬೇರೆ ಪೀಠಕ್ಕೆ
ಬೆಂಗಳೂರು: ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಚ್. ಎನ್.ಕೃಷ್ಣ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸಿ ನ್ಯಾಯಮೂರ್ತಿ ಬಿ.ವಿ.ಪಿಂಟೊ ಆದೇಶಿಸಿದ್ದಾರೆ.
ಇವರು ಈ ಮೊದಲು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಅವರು ನಡೆಸಿದ್ದ ಹಿನ್ನೆಲೆಯಲ್ಲಿ, ಈ ಜಾಮೀನಿನ ಅರ್ಜಿಯು ಅದೇ ಪೀಠದ ಮುಂದೆ ಬರಬೇಕು ಎಂದು ಅವರು ತಿಳಿಸಿದರು.
1998, 1999 ಹಾಗೂ 2004ರಲ್ಲಿ ನಡೆದ ಗೆಜೆಡೆಟ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಆರೋಪದ ಮೇಲೆ ಕೃಷ್ಣ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ
0 comments:
Post a Comment