ಹೊಸದಿಲ್ಲಿ, ಅ.13: ಹಿರಿಯ ವಕೀಲ ಹಾಗೂ ಅಣ್ಣಾ ಹಝಾರೆ ತಂಡದ ಸದಸ್ಯ ಪ್ರಶಾಂತ್ ಭೂಷಣ್‌ರ ಮೇಲೆ ಶಂಕಿತ ಶ್ರೀರಾಮ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಮರುದಿನವೇ ಇಂದು ಸಂಘಟನೆಯ ಗೂಂಡಾಗಳು ವೃದ್ಧರು ಸೇರಿದಂತೆ ಅಣ್ಣಾ ಬೆಂಬಲಿಗರ ಮೇಲೆ ಮತ್ತೆ ದಾಳಿ ನಡೆಸಿದ ಪ್ರಕರಣ ವರದಿಯಾಗಿದೆ. ಪಾಟಿಯಾಲ ಹೌಸ್ ಕೋರ್ಟ್‌ನ ಬಳಿ ನಿನ್ನೆಯ ಘಟನೆಯನ್ನು ಪ್ರತಿಭಟಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ರಾಜಕುಮಾರ್ ಎಂಬ ವೃದ್ಧನಿಗೆ ಥಳಿಸಿದರೆನ್ನಲಾಗಿದೆ.
ಜೀನ್ಸ್ ಧಾರಿ ಯುವಕನೊಬ್ಬ ಅವರನ್ನು ಎಳೆದಾಡಿ, ಬಡಿದು, ಒದ್ದನೆಂದು ಅಣ್ಣಾ ಬೆಂಬಲಿಗನೋರ್ವ ತಿಳಿಸಿದ್ದು, ರಾಜಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳಿದ್ದಾನೆ. ಪ್ರಶಾಂತ್ ಮೇಲಿನ ನಿನ್ನೆಯ ಹಲ್ಲೆಯನ್ನು ತಾವು ಪ್ರತಿಭಟಿಸುತ್ತಿದ್ದೆವು. ತಮಗೆ ಜಗಳವಾಡುವ ಬಯಕೆಯಿರಲಿಲ್ಲ. ಆದರೆ, ಈ ವ್ಯಕ್ತಿಗಳು ಬಂದು ತಮ್ಮನ್ನು ಥಳಿಸಿ, ಎಳೆದಾಡಿ ಒದ್ದರೆಂದು ಆತ ವಿವರಿಸಿದ್ದಾನೆ. ರಾಮ್‌ಲೀಲಾ ಮೈದಾನದಲ್ಲಿ ನಡೆಸಿದ್ದ 13 ದಿನಗಳ ನಿರಶನವನ್ನು ಹಝಾರೆ ರಾಜಕುಮಾರ್‌ರ ಮೊಮ್ಮಗಳು ಸಹಿತ ಇಬ್ಬರು ಬಾಲಕಿಯರು ನೀಡಿದ ಹಣ್ಣಿನ ರಸ ಕುಡಿಯುವ ಮೂಲಕ ಕೊನೆಗೊಳಿಸಿದ್ದರು.
ಇಂದು ಸಂಜೆ 5ರ ಸುಮಾರಿಗೆ ಪಾಟಿಯಾಲ ಕೋರ್ಟ್ 2ನೆ ಪ್ರವೇಶ ದ್ವಾರದ ಬಳಿ ಈ ಘಟನೆ ನಡೆದಿದೆ. ಗಾಯಾಳುಗಳಾದ ರಾಜಕುಮಾರ್ ಹಾಗೂ ಮುಹಮ್ಮದ್ ಸೂಫಿ ಎಂಬವರನ್ನು ಪೊಲೀಸರು ರಾಮ್‌ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭೂಷಣ್‌ರ ಮೇಲೆ ನಿನ್ನೆ ದಾಳಿ ನಡೆಸಿದ್ದ ಮೂವರು ಯುವಕರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಶ್ರೀರಾಮ ಸೇನೆಯ ಕಾರ್ಯಕರ್ತರೆನ್ನಲಾದ ಯುವಕರು ಬೀದಿಗಿಳಿದು ಈ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
0 comments:
Post a Comment