PLEASE LOGIN TO KANNADANET.COM FOR REGULAR NEWS-UPDATES



ಹಿರಿಯ ವಕೀಲ, ಮುತ್ಸದ್ದಿ, ಚಿಂತಕ, ಅಣ್ಣಾ ಹಝಾರೆ ಬಳಗದಲ್ಲಿ ಒಬ್ಬರಾದ ಪ್ರಶಾಂತ್ ಭೂಷಣ್‌ರ ಮೇಲೆ ಹಲ್ಲೆಯಾಗಿದೆ. ಮುಖ್ಯವಾಗಿ ಸುಪ್ರಿಂಕೋರ್ಟ್ ಆವರಣ ದಲ್ಲಿರುವ ಕಚೇರಿಗೆ ನುಗ್ಗಿ ದುಷ್ಕರ್ಮಿಗಳು ಈ ಬರ್ಬರ ಕೃತ್ಯವನ್ನು ನಡೆಸಿದ್ದಾರೆ. ಅಲ್ಲಿ ಪ್ರಶಾಂತ್ ಭೂಷಣ್‌ರ ಕೊಲೆ ನಡೆದಿದ್ದರೂ ಅದನ್ನು ತಡೆಯುವವರಾರೂ ಇರಲಿಲ್ಲ. ಮಾಧ್ಯಮಗಳ ಮುಂದೆಯೇ, ಭೂಷಣ್‌ಗೆ ಯದ್ವಾತದ್ವಾ ಥಳಿಸಲಾಗಿದೆ ಮಾತ್ರವಲ್ಲ, ಕಾಲಿನಿಂದ ತುಳಿಯಲಾಗಿದೆ. ಮತ್ತು ಈ ಹಲ್ಲೆಗೆ ಎಂದಿನಂತೆ ದುಷ್ಕರ್ಮಿಗಳು ದೇಶಪ್ರೇಮದ ಮುಖವಾಡ ವನ್ನು ತೊಡಿಸಿದ್ದಾರೆ.ಇತ್ತೀಚೆಗೆ ದಿಲ್ಲಿಯ ಹೈಕೋರ್ಟ್ ಆವರಣ ದಲ್ಲಿ ಉಗ್ರರಿಂದ ಬಾಂಬ್ ದಾಳಿ ನಡೆಯಿತು. ಈ ಬಾಂಬ್ ದಾಳಿಗೂ, ಭೂಷಣ್‌ರ ಮೇಲೆ ನಡೆದ ದಾಳಿಗೂ ಭಾರೀ ವ್ಯತ್ಯಾಸವೇನೂ ಇಲ್ಲ. ಇಷ್ಟಕ್ಕೂ ಸಂಘಪರಿವಾರದ ಉಗ್ರರು ಈಗ ಬಾಂಬ್ ದಾಳಿಯಲ್ಲೂ ಚೆನ್ನಾಗಿಯೇ ಪಳಗಿದ್ದಾರೆ. ಎಷ್ಟು ಜನರು ಸತ್ತರು ಎನ್ನುವ ಆಧಾರದಲ್ಲಿ ನಾವು ದಾಳಿಯ ಭೀಕರತೆಯನ್ನು ಅಳೆಯಲು ಸಾಧ್ಯವಿಲ್ಲ.
ಸುಪ್ರೀಂಕೋರ್ಟ್ ಆವರಣದಲ್ಲಿ ಹಿರಿಯ ವಕೀಲರೊಬ್ಬರ ಮೇಲೆ ಶ್ರೀರಾಮಸೇನೆಯ ಸದಸ್ಯರೆಂದು ಕರೆಸಿ ಕೊಂಡವರು ನಡೆಸಿರುವ ದಾಳಿ ಬರೇ ಒಬ್ಬ ವ್ಯಕ್ತಿಯ ಮೇಲೆ ಅಲ್ಲ. ಅವರು ಸುಪ್ರೀಂಕೋರ್ಟ್‌ಗೇ ಕಳಂಕವನ್ನುಂಟು ಮಾಡಿದ್ದಾರೆ. ಈ ದಾಳಿ ನಮ್ಮ ಸಂವಿಧಾನಕ್ಕೆ ಮಾಡಿದ ಗಾಯ. ಒಬ್ಬನ ವಾಕ್‌ಸ್ವಾತಂತ್ರವನ್ನು ಪ್ರಶ್ನಿಸುವ, ನ್ಯಾಯಾಲಯದ ಘನತೆಯನ್ನು ಭಗ್ನಗೊಳಿಸುವ ಉದ್ದೇಶವನ್ನು ಈ ದಾಳಿ ಹೊಂದಿದೆ. ಭೂಷಣ್ ಹೇಳಿದಂತೆ, ಬರೇ ಇಬ್ಬರನ್ನು ಬಂಧಿಸಿದರೆ ಸರಕಾರದ ಕೆಲಸ ಮುಗಿಯುವುದಿಲ್ಲ. ಇದರ ಹಿಂದಿರುವ ಸಂಘಟನೆಗಳನ್ನು ಎಲ್ಲಿಯವರೆಗೆ ನಿಷೇಧಿಸ ಲಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತವೆ.
ಇನ್ನುಳಿದಂತೆ ಭೂಷಣ್‌ರ ಮೇಲೆ ಯಾವ ಕಾರಣಕ್ಕೆ ಹಲ್ಲೆ ನಡೆಯಿತು ಎನ್ನುವುದನ್ನು ಗಮನಿಸೋಣ. ಕಾಶ್ಮೀರದ ಕುರಿತಂತೆ ಭೂಷಣ್ ನೀಡಿರುವ ವಿವಾದಾತ್ಮಕ ಹೇಳಿಕೆಯೇ ಹಲ್ಲೆಗೆ ಕಾರಣವಂತೆ. ಕಾಶ್ಮೀರದಲ್ಲಿ ಜನಮತ ಸಂಗ್ರಹವಾಗಬೇಕು, ಅಲ್ಲಿರುವ ಸೇನೆಯನ್ನು ಹಿಂದೆಗೆಯಬೇಕು, ಕಾಶ್ಮೀರ ಭಾರತದಲ್ಲಿರಬೇಕೋ ಬೇಡವೋ ಎನ್ನುವುದನ್ನು ಕಾಶ್ಮೀರಿಗಳೇ ನಿರ್ಧರಿಸಲಿ ಎನ್ನುವ ಭೂಷಣ್‌ರ ಹೇಳಿಕೆ ಸಂಘಪರಿವಾರದ ಗುಂಪನ್ನು ಆಕ್ರೋಶಕ್ಕೀಡು ಮಾಡಿದೆ.
ಈ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ. ಒಂದು ವೇಳೆ ಈ ಹೇಳಿಕೆ ದೇಶದ್ರೋಹಿಯಾದುದೇ ಆಗಿದ್ದರೆ, ಅದರ ವಿರುದ್ಧ ಮಾಧ್ಯಮಗಳಲ್ಲಿ ಹೇಳಿಕೆ ನೀಡಬಹುದಿತು, ಅಥವಾ ಭೂಷಣ್‌ರ ಮೇಲೆ ಮೊಕದ್ದಮೆಯನ್ನು ದಾಖಲಿಸುವುದಕ್ಕೂ ಸಂಘ ಪರಿವಾರದ ಸಂಘಟನೆಗಳಿಗೆ ಅವಕಾಶವಿದೆ. ಇಷ್ಟಕ್ಕೂ ಭೂಷಣ್ ಹೇಳಿದಾಕ್ಷಣ ಕಾಶ್ಮೀರ ವಿವಾದ ಇತ್ಯರ್ಥವಾಗಿ ಬಿಡುತ್ತದೆಯೇ? ಕನಿಷ್ಠ ಶಾಸಕನೂ ಅಲ್ಲದ ಭೂಷಣ್ ತನ್ನದೇ ಆದ ಅಭಿಪ್ರಾಯವನ್ನು ಮಂಡಿಸಿದರೆ ಅದರ ವಿರುದ್ಧ ತಮ್ಮ ಅಭಿಪ್ರಾಯವನ್ನು ಮಂಡಿಸಲು ಸಾವಿರಾರು ದಾರಿಗಳನ್ನು ನಮ್ಮ ಸಂವಿಧಾನ ತೆರೆದುಕೊಟ್ಟಿದೆ. ಆದರೆ ಅದನ್ನೆಲ್ಲ ಪಕ್ಕಕ್ಕಿಟ್ಟು ಭೂಷಣ್‌ರ ಮೇಲೆ ಕೆಲ ಸಂಘಟನೆಗಳು ಹಲ್ಲೆ ನಡೆಸಿವೆಯೆಂದರೆ, ತಮ್ಮನ್ನು ತಾವು ನಿಷೇಧಕ್ಕೆ ಅರ್ಹ ಸಂಘಟನೆಗಳೆಂದು ಸ್ವತಃ ಘೋಷಿಸಿಕೊಂಡಿವೆ.
ಭೂಷಣ್ ಸಂವಿಧಾನ ವಿರೋಧಿ ಅಥವಾ ದೇಶವಿರೋಧಿ ಮಾತುಗಳನ್ನು ಎಲ್ಲಿಯೂ ಆಡಿಲ್ಲ. ಅವರಾಡಿದ ಮಾತು ಕೇವಲ ಕಾಶ್ಮೀರಕ್ಕೆ ಮಾತ್ರ ಅನ್ವಯವಾಗುವಂತಹದಲ್ಲ. ಕರ್ನಾಟಕವನ್ನೇ ತೆಗೆದುಕೊಳ್ಳೋಣ. ನಾಳೆ ಕರ್ನಾಟಕ ಭಾರತದ ಭಾಗವಾಗುವುದನ್ನು ನಿರಾಕರಿಸಿದರೆ, ಬಂದೂಕಿನ ಮೂಲಕ ಕರ್ನಾಟಕವನ್ನು ಭಾರತದ ಅಖಂಡ ಭಾಗವಾಗಿಸುವುದಕ್ಕೆ ಸಾಧ್ಯವೇ? ಭಾವನಾತ್ಮಕ ವಾಗಿ ಒಂದಾಗಲು ಸಾಧ್ಯವಿಲ್ಲದೆ ಇದ್ದಾಗ, ಕೇವಲ ಭೌಗೋಳಿಕವಾಗಿ ಒಂದಾಗಿರಬೇಕು ಎಂದು ಬಯಸುವುದು ಎಷ್ಟು ಸರಿ? ಬೆಳಗಾವಿ ವಿವಾದವನ್ನೇ ಉದಾಹರಣೆಯಾಗಿ ತೆಗೆದು ಕೊಳ್ಳೋಣ. ಇಂದು, ಬೆಳಗಾವಿಯ ಬಹುಸಂಖ್ಯಾತ ಕನ್ನಡಿಗರು ಕರ್ನಾಟಕದ ಪರವಾಗಿರುವುದರಿಂದ ಬೆಳಗಾವಿ ಕರ್ನಾಟಕದ್ದಾಗಿದೆ.
ನಾಳೆ ಇಡೀ ಬೆಳಗಾವಿ ಒಕ್ಕೊರಲಲ್ಲಿ ತಾವು ಮಹಾರಾಷ್ಟ್ರಕ್ಕೆ ಸೇರುತ್ತೇವೆ ಎಂದರೆ, ಅದನ್ನು ತಡೆಯಲು ಕರ್ನಾಟಕ ಸರಕಾರಕ್ಕೆ ಸಾಧ್ಯವೇ? ಕರ್ನಾಟಕ ಯಾರಿಗೆ ಸೇರಿದುದೆನ್ನು ವುದನ್ನು ನಿರ್ಧರಿಸುವವರು ಕನ್ನಡಿಗರು. ಹಾಗೆಯೇ ಕಾಶ್ಮೀರ ಯಾರಿಗೆ ಸೇರಬೇಕು ಎನ್ನುವುದನ್ನು ತೀರ್ಮಾನಿಸುವವರು ಕಾಶ್ಮೀರಿಗಳು ಎಂದಿದ್ದಾರೆ ಭೂಷಣ್. ಇದೇನು ಹೊಸ ಹೇಳಿಕೆಯಲ್ಲ. ಹಲವು ರಾಜಕೀಯ ಮುಖಂಡರು, ಚಿಂತಕರು ಇಂತಹದೇ ಹೇಳಿಕೆಗಳನ್ನು ಪದೇ ಪದೇ ನೀಡಿದ್ದಾರೆ.ಇಷ್ಟಕ್ಕೂ ಬಹುಸಂಖ್ಯಾತ ಕಾಶ್ಮೀರಿಗಳು ಇನ್ನೂ ಭಾರತದ ಪರವಾಗಿಯೇ ಇದ್ದಾರೆ.
ಭೂಷಣ್ ಇದನ್ನು ಪರೋಕ್ಷವಾಗಿ ಹೇಳುವುದಕ್ಕೆ ಹೊರಟಿದ್ದಾರೆ. ಕಾಶ್ಮೀರಿಗಳಿಗೆ ಭಾರತ ತಮ್ಮದು ಅನ್ನಿಸಬೇಕು. ಅದು ಬಿಟ್ಟು ಸೇನೆಯ ಕೋವಿಯ ಮೂಲಕ ಕಾಶ್ಮೀರವನ್ನು ಭಾರತದ ಭಾಗವಾಗಿ ಉಳಿಸುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ಭಾರತ ಸರಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎನ್ನುವುದು ಭೂಷಣ್‌ರ ಆಶಯವಾಗಿದೆ. ಆದರೆ ರಾಮಸೇನೆಯಂತಹ ಸಂಘಟನೆಗಳು ಕೈಬಲದಿಂದ ಕಾಶ್ಮೀರವನ್ನು ಭಾರತದ ಭಾಗವಾಗಿಸಲು ಹೊರಟಂತಿದೆ. ಅಂತಹ ಉದ್ದೇಶವೇನಾದರೂ ಇದ್ದಿದ್ದರೆ, ಅವರು ಭೂಷಣ್‌ಗೆ ಥಳಿಸುವ ಬದಲು ನೇರವಾಗಿ ಕಾಶ್ಮೀರಕ್ಕೆ ತೆರಳಿ ಅಲ್ಲಿಯ ಹೋರಾಟಗಾರರನ್ನೇ ಮುಖಾಮುಖಿ ಯಾಗುವುದು ಹೆಚ್ಚು ಸೂಕ್ತವಲ್ಲವೇ? ಕಾಶ್ಮೀರದ ಕುರಿತಂತೆ ಇರುವ ವಾದವಿವಾದವೇನೇ ಇರಲಿ.
ಸುಪ್ರೀಂ ಕೋರ್ಟ್‌ನಂತಹ ಮಹತ್ತ್ವದ ಸ್ಥಳಗಳಲ್ಲಿ ರಾಮಸೇನೆಯ ಹಣೆಪಟ್ಟಿ ಕಟ್ಟಿಕೊಂಡ ಗೂಂಡಾಗಳು ನಡೆಸುವ ದಾಂಧಲೆಗಳಿಗೆ ಕಡಿವಾಣ ಹಾಕುವುದಕ್ಕೆ ಸರಕಾರ ಮುಂದಾಗ ಬೇಕು. ಈಗಾಗಲೇ ಭಯೋತ್ಪಾದಕ ಕೃತ್ಯ ಸೇರಿದಂತೆ ದೇಶದ್ರೋಹಿ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಂಘಟನೆಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ, ದೇಶ ಭಾರೀ ಬೆಲೆ ತೆರಬೇಕಾಗುವ ಪರಿಸ್ಥಿತಿ ಬಂದೀತು.   -ವಾರ್ತಾಭಾರತಿ ಸಂಪಾದಕೀಯ

Advertisement

0 comments:

Post a Comment

 
Top