PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.13: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ 78ನೆ ಕನ್ನಡ ಸಾಹಿತ್ಯ ಸಮ್ಮೇಳನವು ಒಂದು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.  ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಪರಿಷತ್‌ನ ವತಿಯಿಂದ ನಡೆಯಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಕನಿಷ್ಠ ಒಂದು ತಿಂಗಳ ಅವಧಿ ಬೇಕಾಗಬಹುದು. ಹೀಗಾಗಿ ಒಂದು ತಿಂಗಳು ಕಾಲಾವಕಾಶ ಕೊಡಿ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಲ್ಲೂರು ಪ್ರಸಾದ್‌ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಕನಿಷ್ಠ ಒಂದು ತಿಂಗಳು ಸಮಯ ಹಿಡಿಯಬಹುದು. ಅದಕ್ಕಾಗಿ ಸಮ್ಮೇಳನವನ್ನು ಒಂದು ತಿಂಗಳ ಕಾಲ ಮುಂದೂಡಲು ಅವಕಾಶ ಕೊಡಬೇಕು ಎಂದು ಮನವಿ ಸಲ್ಲಿಸಲು ಅ.10ರಂದು ನಡೆದ ಸಮ್ಮೇಳನದ ಸ್ವಾಗತ ಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ಸಹಕಾರ ಸಚಿವರು ಲಕ್ಷ್ಮಣ ಸವದಿ, ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಮತ್ತು ನಗರದ ಸಾಹಿತ್ಯ ಪ್ರೇಮಿಗಳ ಸಮ್ಮುಖದಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದು ಶೇಖರಗೌಡ ತಿಳಿಸಿದರು.

ಇದೆಲ್ಲದಕ್ಕೂ ಕೊಪ್ಪಳ ಚುನಾವಣೆ ಕಾರಣ: ಸೆ.26ರಂದು ನಡೆದ ಕೊಪ್ಪಳ ಉಪ ಚುನಾವಣೆಯ ಕರಿನೆರಳು ಸಮ್ಮೇಳನ ಮುಂದೂಡಲು ಕಾರಣವಾಗಿದೆ. ಚುನಾವಣೆಯಿಂದಾಗಿ ಜಿಲ್ಲೆಯಲ್ಲಿ ಯಾವುದೆ ಅಭಿವೃದ್ಧಿ ಕೆಲಸಗಳನ್ನು ಎಂಬುದು ಚುನಾವಣಾ ಆಯೋಗದ ನೀತಿ ಸಂಹಿತೆ. ಹೀಗಾಗಿ ಗಂಗಾವತಿಯಲ್ಲಿ ರಸ್ತೆಗಳ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ನಗರದ ಸೌಂದರ್ಯೀಕರಣ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸಲು ಆಗಿಲ್ಲ. ದೂರದ ಊರುಗಳಿಂದ ಬರುವ ಸಾಹಿತ್ಯ ಪ್ರೇಮಿಗಳು ಗಂಗಾವತಿ ನಗರವನ್ನು ಬೈಯ್ದು ಕೊಂಡು ಹೋಗು ವಂತಾಗಬಾರದು ಎಂಬ ಉದ್ದೇಶದಿಂದ ಸಮ್ಮೇಳನವನ್ನು ಒಂದು ತಿಂಗಳು ಮುಂದಕ್ಕೆ ಹಾಕಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಭರದಿಂದ ಸಾಗಿರುವ ಸಿದ್ಧತೆಗಳು: ಪರಿಷತ್‌ನ ವತಿಯಿಂದ ನಡೆಯಬೇಕಾದ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತದಲ್ಲಿವೆ. ಸಮ್ಮೇಳನದ ಯಶಸ್ಸಿಗಾಗಿ 33 ಉಪ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಸಮಿತಿಗಳು ತಮ್ಮ ಚಟುವಟಿಕೆಗಳಲ್ಲಿ ಸಮರ್ಪಕವಾಗಿ ನಿರತವಾಗಿವೆ. ಈಗ ಆಗಬೇಕಿರುವುದು ನಗರದ ಸೌಂದರ್ಯೀಕರಣ. ಅದಕ್ಕಾಗಿ ಈಗಾಗಲೆ ರಾಜ್ಯ ಸರಕಾರ 4.70 ಕೋಟಿ ರೂ. ಮಂಜೂರು ಮಾಡಿದೆ. ರಸ್ತೆ ಸುಧಾರಣೆ, ಶೌಚಾಲಯ ನಿರ್ಮಾಣ ಕಾರ್ಯಗಳು ಸಹ ಪ್ರಾರಂಭವಾಗಿವೆ ಎಂದು ಅವರು ಹೇಳಿದರು.
4 ಕೋಟಿ ಖರ್ಚಿನಲ್ಲಿ ಸಮ್ಮೇಳನ: ಸಮ್ಮೇಳನಕ್ಕೆ ಒಟ್ಟು ನಾಲ್ಕು ಕೋಟಿ ರೂ.ಗಳ ಬಂಡವಾಳ ಬೇಕಾಗಬಹುದು. ಈಗಾಗಲೇ ಸರಕಾರ 2 ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯ ಸರಕಾರಿ ನೌಕರರು ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಲು ಮುಂದಾಗಿದ್ದು, ಅದರಿಂದ 30 ಲಕ್ಷ ರೂ. ಬರುತ್ತದೆ. ಜಿಲ್ಲೆಯ ಗಣಿ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಒಂದು ಕೋಟಿ ರೂ. ನೀಡಲು ಮುಂದೆ ಬಂದಿದ್ದಾರೆ. ಜಿಲ್ಲೆಯ ಅಕ್ಕಿ ಮತ್ತು ಕಿರಾಣಿ ವ್ಯಾಪಾರಸ್ತರು ಸಮ್ಮೇಳನದ ಮೂರು ದಿನದ ಊಟೋಪಚಾರದ ಖರ್ಚಿಗಾಗಿ 50 ಲಕ್ಷ ರೂ. ನೀಡಲು ಮುಂದೆ ಬಂದಿದ್ದಾರೆ ಎಂದ ಅವರು, ಸಮ್ಮೇಳನಕ್ಕೆ ಬಂಡವಾಳ ಕ್ರೋಡೀಕರಣವಾಗುತ್ತಿರುವ ಬಗೆಯನ್ನು ವಿವರಿಸಿದರು.

ಮನೆ-ಮನೆಗೆ ಅತಿಥಿ: ಸಮ್ಮೇಳನದಲ್ಲಿ 6ರಿಂದ 8 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿನಿಧಿಗಳ ವಸತಿ ಜವಾಬ್ದಾರಿಯನ್ನು ನಿಭಾಯಿಸಲು ‘ಮನೆ-ಮನೆಗೆ ಅತಿಥಿ’ ಎಂಬ ಹೊಸ ಯೋಜನೆಯನ್ನು ಹುಟ್ಟು ಹಾಕಲಾಗಿದೆ. ಈಗಾಗಲೆ ನಗರದ 500 ಸಾಹಿತ್ಯ ಪ್ರೇಮಿಗಳು ಸಮ್ಮೇಳನಕ್ಕಾಗಿ ನಗರಕ್ಕೆ ಬರುವ ಅತಿಥಿಗಳಿಗೆ ತಮ್ಮ ಮನೆಗಳಲ್ಲಿ ವಸತಿ ವ್ಯವಸ್ಥೆ ನೀಡಲು ಮುಂದೆ ಬಂದಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಇಬ್ಬರು ಪ್ರತಿನಿಧಿಗಳು ತಂಗಬಹುದಾಗಿದ್ದು, ಇವರನ್ನು ಸಮ್ಮೇಳದನದ ವೇದಿಕೆಗೆ ತಂದು ಬೀಡುವ ಜವಾಬ್ದಾರಿಯು ಮನೆಯವರದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದರು.

ಇನ್ನುಳಿದಂತೆ ನಗರದ ಶಾಲಾ ಕಾಲೇಜುಗಳು, ವಸತಿ ನಿಲಯಗಳು, ಕಲ್ಯಾಣ ಮಂಟಪಗಳಲ್ಲಿ ಉಳಿದುಕೊಳ್ಳಲಿಕ್ಕೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ಜಿಲ್ಲೆಯಿಂದ ಬರುವ ಪರಿಷತ್ತಿನ ಪದಾಧಿಕಾರಿಗಳಿಗೆ ಮತ್ತು ವಿಶೇಷ ಆಹ್ವಾನಿತರಿಗೆ ಆಧುನಿಕ ಸೌಲಭ್ಯಗಳ್ಳುಳ್ಳ ವಸತಿಗೃಹಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕಟಕ್ ರೊಟ್ಟಿ, ಎಣ್ಣಿಗಾಯಿ ಪಲ್ಯ: ಊಟದ ವ್ಯವಸ್ಥೆಯನ್ನು ಅದ್ದೂರಿಯಾಗಿ ಮಾಡುವುದಕ್ಕಿಂತ ಉತ್ತರ ಕರ್ನಾಟಕದ ಸರಳ ಮತ್ತು ವೈವಿಧ್ಯಮಯ ಭಕ್ಷಗಳನ್ನು ಸಮ್ಮೇಳನದ ಪ್ರತಿನಿಧಿಗಳಿಗೆ ಪರಿಚಯಿಸುವುದು ಸ್ವಾಗತ ಸಮಿತಿಯ ಆಶಯ. ಜೋಳ ಮತ್ತು ಸಜ್ಜೆಯ ಕಟಕ್ ರೊಟ್ಟಿ, ಎಣ್ಣಿಗಾಯಿ ಪಲ್ಯ, ಗುರೆಳ್ಳು ಚಟ್ನಿ, ಮಜ್ಜಿಗೆ ಅನ್ನದಂತಹ ಸರಳ ಊಟವನ್ನು ಮೂರು ದಿನವೂ ಬಡಿಸಲಾಗುವುದು. ಬೆಳಗಿನ ಉಪಾಹಾರವಾಗಿ ಮೊದಲ ದಿನ ಉಪ್ಪಿಟ್ಟು, ಎರಡನೆ ದಿನ ಮಂಡಾಳು ಒಗ್ಗರಣೆ ಮತ್ತು ಮಿಡ್ಚಿ ಭಜಿ ಹಾಗೂ ಮೂರನೆ ದಿನ ಪುರಿ ಮತ್ತು ಇಲಕಲ್ ಚಟ್ನಿಯನ್ನು ಬಡಿಸಲಾಗುವುದು ಎಂದು ಅವರು ಊಟದ ವ್ಯವಸ್ಥೆ ಕುರಿತು ಮಾತನಾಡಿದರು.

ಒಂದು ಗೋಷ್ಠಿ-ಒಂದು ಸಾಂಸ್ಕೃತಿಕ ಕಾರ್ಯಕ್ರಮ: ಒಂದು ಪ್ರಧಾನ ಹಾಗೂ ಮತ್ತೊಂದು ಸಮನಾಂತರ ವೇದಿಕೆಯಲ್ಲಿ ಒಂದೊಂದು ಮುಗಿದ ನಂತರ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೊಪ್ಪಳ ಜಿಲ್ಲೆ ವೈವಿಧ್ಯತೆಯ ಕುರಿತು ಒಂದು ವಿಶೇಷ ನಡೆಸಲಾಗುತ್ತದೆ ಎಂದರು.

78 ಕೃತಿಗಳ ಬಿಡುಗಡೆ: 78ನೆಯ ಸಮ್ಮೇಳನದ ಸ್ಮರಣಾರ್ಥವಾಗಿ 78 ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು. ಎರಡು ಸ್ಮರಣ ಸಂಚಿಕೆಗಳನ್ನು ಸಂಪಾದಿಸಲಾಗುತ್ತಿದ್ದು, ಒಂದರಲ್ಲಿ ನಾಡಿನ ಸಾಹಿತ್ಯದ ಸ್ಥಿತಿಗತಿಯ ಲೇಖನಗಳಿದ್ದರೆ, ಮತ್ತೊಂದರಲ್ಲಿ ಕೊಪ್ಪಳ ಜಿಲ್ಲೆಯ ಸಾಹಿತ್ಯದ ಒಳನೋಟಗಳ ಕುರಿತು ಲೇಖನಗಳಿರುತ್ತವೆ. ಈಗಾಗಲೆ ಸ್ಮರಣ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಮೂರು ದಿನದೊಳಗೆ ತೀರ್ಮಾನ: ನಲ್ಲೂರು
ಸಮ್ಮೇಳನದ ದಿನಾಂಕ ಮುಂದೂಡಿಕೆ ವಿಷಯವಾಗಿ ಇನ್ನೂ ಮೂರು ದಿನದೊಳಗೆ ಸಾಹಿತ್ಯ ಪರಿಷತ್‌ನ ಎಲ್ಲ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಸಮ್ಮೇಳನದ ಯಶಸ್ಸಿಗಾಗಿ ಸೂಕ್ತ ತೀರ್ಮಾನವನ್ನೇ ಕೈಗೊಳ್ಳಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ತಿಳಿಸಿದರು.   ಕೃಪೆ: ವಾರ್ತಾಭಾರತಿ 

Advertisement

0 comments:

Post a Comment

 
Top