ಬೆಂಗಳೂರು, : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ನೀಡಿದ್ದ ತನಿಖಾ ವರದಿಯನ್ನು ಸರಕಾರ ತಿರಸ್ಕರಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.ಶುಕ್ರವಾರ ಮುಖ್ಯಮಂತ್ರಿಯ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಜನತಾ ದರ್ಶನದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯ ಕುರಿತ ತನಿಖಾ ವರದಿ ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ.ಆದರೆ, ಲೋಕಾಯುಕ್ತರು ತನಿಖೆ ನಡೆಸಿ ಸಲಹೆ ಕೊಡಬಹುದೇ ಹೊರತು, ಆದೇಶ ಮಾಡುವಂತಿಲ್ಲ. ಆದುದರಿಂದ ಈ ಬಗ್ಗೆ ಸ್ಪಷ್ಟೀಕರಣ ಕೇಳಲಾಗಿದೆ ಎಂದರು.ಸರಕಾರಿ ನೌಕರರಿಗೆ ಅನ್ವಯವಾಗುವ ಕಾನೂನನ್ನು ಜನ ಪ್ರತಿನಿಧಿಗಳಿಗೂ ಅನ್ವಯಿಸುವುದು ಸರಿಯಲ್ಲ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ ಎಂದ ಸದಾನಂದ ಗೌಡ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೈರಾಜ್ ನೇತೃತ್ವದಲ್ಲಿ ಸಮಿತಿ ನೀಡಲಿರುವ ಶಿಫಾರಸುಗಳನ್ನು ಆಧರಿಸಿ ಕ್ರಮ ಕೈಗೊಳ್ಳ ಲಾಗುವುದೆಂದು ಸ್ಪಷ್ಟಪಡಿಸಿದರು.
ನೂತನ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಶಿಫಾರಸು ಮಾಡುವಂತೆ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆಯಲಾಗಿದೆ.ಈ ಬಗ್ಗೆ ಅವರಿಂದ ಉತ್ತರದ ನಿರೀಕ್ಷೆ ಯಲ್ಲಿದ್ದೇವೆ ಎಂದ ಅವರು, ಈ ಬಗ್ಗೆ ಸಭೆ ನಡೆಸಬೇಕೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ಒತ್ತಾಯವನ್ನು ತಳ್ಳಿ ಹಾಕಿದರು.ಈ ಹಿಂದಿನ ಸಂಪ್ರದಾಯದಂತೆ ನಡೆದುಕೊಳ್ಳುತ್ತೇವೆ ಮುಖ್ಯಮಂತ್ರಿ ನುಡಿದರು.
0 comments:
Post a Comment