ಬೆಂಗಳೂರು ಅ೧೪;ರಾಜ್ಯ ಸರ್ಕಾರಕ್ಕೆ ಧೈರ್ಯವಿದ್ದರೆ ನನ್ನ ವರದಿ ತಿರಸ್ಕರಿಸಲಿ.ಅದನ್ನು ಬಿಟ್ಟು ಸಕಾರಣ ನೀಡದೇ ವರದಿಯ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಿರುವುದು ಬೇಸರ ಮೂಡಿಸಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಗಣಿ ವರದಿಯ ಕೆಲ ವಿಚಾರಗಳ ಕುರಿತು ಸರ್ಕಾರ ಅಭಿಪ್ರಾಯ ಕೋರಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರ ಈ ವಿಷಯ ತಿಳಿಸಿದ್ದಾರೆ.
ನಾನು ಕಾನೂನು ಮೀರಿ ವರ್ತಿಸಿಲ್ಲ.ಲೋಕಾಯುಕ್ತ ಸೆಕ್ಷನ್ ೭(೨)ಎ ಅಡಿ ತನಿಖೆಗೆ ವಹಿಸಿದ ಪ್ರಕರಣದಲ್ಲಿ ಹೇಗೆ ವಿಚಾರಣೆ ನಡೆಸಬೇಕೆಂಬ ಕಾನೂನು ಜ್ಞಾನ ನನಗಿದೆ.ಅದೇ ಪ್ರಕಾರ ನಡೆದುಕೊಂಡಿದ್ದೇನೆ.
ನನ್ನ ವರದಿಯಿಂದ ಯಡಿಯೂರಪ್ಪನವರು ರಾಜಿನಾಮೆ ಕೊಡುವಂಥ ಸನ್ನಿವೇಶ ಸೃಷ್ಟಿಯಾದರೆ ಅದಕ್ಕೆ ಅವರು ಹೊಣೆಗಾರರೆ ವಿನಾ ನಾನಲ್ಲ. ಸರ್ಕಾರ ನನ್ನ ವರದಿ ತಿರಸ್ಕರಿಸಬಹುದು, ಆದರೆ ನನಗೆ ಕಾನೂನು ಜ್ಞಾನ ಇಲ್ಲ ಎಂಬರ್ಥದಲ್ಲಿ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಛಾಟಿ ಏಟು ನೀಡಿದ್ದಾರೆ.
ಪತ್ರಿಕಾಗೋಷ್ಠಿಯ ಸಂಪೂರ್ಣ ವಿವರ ಹೀಗಿದೆ:
ಅಕ್ರಮ ಗಣಿಗಾರಿಕೆ ವರದಿ ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಸೆಕ್ಷನ್ ೭(೨)ಎ ಅಡಿ ತನಿಖೆ ನಡೆಸುವಾಗ ಯಾರಿಗೂ ನೋಟಿಸ್ ನೀಡಬೇಕಿಲ್ಲ. ಯಡಿಯೂರಪ್ಪನವರನ್ನೂ ಸೇರಿಸಿ ಸಾವಿರ ಕ್ಕೂ ಹೆಚ್ಚು ಆರೋಪಿಗಳಿಗೆ ಶೋಕಾಸ್ ನೋಟಿಸ್ ನೀಡಿ ಪ್ರತಿಯೊಬ್ಬರಿಂದ ವಿವರಣೆ ಪಡೆಯು ವುದು ನನ್ನ ಅಧಿಕಾರಾವಧಿಯಲ್ಲಂತೂ ಸಾಧ್ಯವಿರಲಿಲ್ಲ.
ಅದೇ ರೀತಿ ಓಬಳಾಪುರಂ ಮೈನಿಂಗ್ ಅವ್ಯವಹಾರದಲ್ಲಿ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಶ್ರೀರಾಮುಲು ಅವರ ಹೆಸರನ್ನು ವರದಿಯಲ್ಲಿ ಸೇರಿಸಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪಾಲರಿಗೆ ಮನವಿ ಮಾಡಿದ್ದೆ.ಯಡಿಯೂರಪ್ಪ ಸೇರಿದಂತೆ ನನ್ನ ವರದಿಯಲ್ಲಿ ಎಲ್ಲಿಯೂ ನಾನು ಇಂಥವರನ್ನು ಅಧಿಕಾರದಿಂದ ತೆಗೆದು ಹಾಕಿ ಎಂದು ಹೇಳಿಲ್ಲ. ಆದರೆ ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದೇನೆ.ಲೋಕಾಯುಕ್ತ ಸಂಸ್ಥೆಗೆ ಇಂಥ ಅಧಿಕಾರ ಇಲ್ಲ ಎಂದು ಸರ್ಕಾರ ವಾದಿಸುವುದು ಅರ್ಥಹೀನ.ಲೋಕಾಯುಕ್ತ ಸಂಸ್ಥೆ ಈ ಹಿಂದೆ ಇಂಥ ಹಲವು ಶಿಫಾರಸುಗಳನ್ನು ಮಾಡಿದೆ.
ಅದೇ ರೀತಿ ಜನಪ್ರತಿನಿಧಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಸಂದರ್ಭದಲ್ಲೂ ರಾಜ್ಯ ಸರ್ಕಾರದ ಸೂಚನೆ ಪಾಲಿಸಿದ್ದೇನೆ.ಅಕ್ರಮ ಗಣಿಗಾರಿಕೆ ತನಿಖೆಯನ್ನು ನನಗೆ ವಹಿಸುವಾಗ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕ ಸೇವಕರು ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದು ಹಾಗೂ ಸಲಹೆ ನೀಡುವುದು ಎಂದು ಸರ್ಕಾರಿ ಆದೇಶದಲ್ಲಿ ಹೇಳಿದ್ದಾರೆ. ನಾನು ಅದೇ ಪ್ರಕಾರ ನಡೆದುಕೊಂಡಿದ್ದೇನೆ.
ನನ್ನ ಕಾನೂನು ತಿಳಿವಳಿಕೆ ಪ್ರಕಾರ,ಲೋಕಾಯುಕ್ತ,ಭಾರತೀಯ ದಂಡ ಸಂಹಿತೆ,ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಪ್ರಕಾರ ಸರ್ಕಾರಿ ಸೇವಕರು(ಪಬ್ಲಿಕ್ ಸರ್ವಂಟ್ )ಎಂಬ ಪದದ ವ್ಯಾಪ್ತಿ ಯಲ್ಲಿ ಚುನಾಯಿತ ಪ್ರತಿನಿಧಿಗಳು,ಮಂತ್ರಿಗಳು ಹಾಗೂ ಮುಖ್ಯಮಂತ್ರಿ ಬರುತ್ತಾರೆ.ಆದರೆ ಇವರೆಲ್ಲರೂ ನಾವು ಪ್ರಜೆಗಳ ಪ್ರಭು ಎಂದು ಭಾವಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳು,ಮಂತ್ರಿ,ಮುಖ್ಯಮಂತ್ರಿ ಪ್ರಜಾ ಸೇವಕರು.ಅದಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.ಆರೋಪ ಎದುರಿಸಲಾಗದೇ ಯಡಿಯೂರಪ್ಪ ಅವರು ರಾಜಿನಾಮೆ ನೀಡಿದರೆ ನಾನು ಹೊಣೆಗಾರನಲ್ಲ.ನ್ಯಾಯಾಧೀಶ ನೀಡಿದ ತೀರ್ಪಿನ ಬಗ್ಗೆ ಪ್ರಶ್ನಿಸಿದರೆ ಆರೋಪಿ ಯಾವ ಉತ್ತರ ನೀಡುತ್ತಾನೋ ಅದೇ ಉತ್ತರ ಈಗ ಯಡಿಯೂರಪ್ಪನವರಿಂದ ಬರುತ್ತಿದೆ.
ತಿರಸ್ಕಾರಕ್ಕೆ ಹುನ್ನಾರ:ವರದಿಯ ಕೆಲ ಅಂಶಗಳ ಬಗ್ಗೆ ಅಭಿಪ್ರಾಯ ಕೋರಲು ನಿರ್ಧರಿಸಿ ರುವ ಸರ್ಕಾರದ ಕ್ರಮದ ಹಿಂದೆ ವರದಿಯನ್ನು ತಿರಸ್ಕರಿಸುವ ಹುನ್ನಾರ ಅಡಗಿದೆ.ನನ್ನ ವರದಿ ಒಪ್ಪಿಕೊಳ್ಳಲೇಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ.ಈ ಹಿಂದೆ ನಾನು ನೀಡಿದ ಹಲವು ವರದಿಗಳಿಗೆ ಯಾವ ಸ್ಥಿತಿ ಬಂದಿದೆಯೋ ಗಣಿ ವರದಿಗೂ ಅದೇ ಗತಿ ಬರಬಹುದು ಎಂದು ಅಭಿಪ್ರಾಯಪಟ್ಟರು.
ನಮ್ಮ ಅಪ್ಪನ ಹೆಸರು ಈಗ್ಯಾಕ್ರೀ...?
ಬಿಜೆಪಿ ರಾಷ್ಟ್ರೀಯ ಮುಖಂಡ ಎಲ್.ಕೆ.ಅಡ್ವಾಣಿ ಅವರ ಸೂಚನೆ ಮೇರೆಗೆ ಯಡಿಯೂರಪ್ಪನವರ ನ್ನು ನೀವು ಗಣಿ ವರದಿಯಲ್ಲಿ ಸಿಲುಕಿಸಿದ್ದೀರಿ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರಲ್ಲ ? ಎಂಬ ಸುದ್ದಿಗಾರರ ಪ್ರಶ್ನೆಗೆ ಸಂತೋಷ್ ಹೆಗ್ಡೆ ನೀಡಿದ ಪ್ರತಿಕ್ರಿಯೆ ಇದು.
ಈ ಹಿಂದೆ ಅಡ್ವಾಣಿ ಅವರು ನನ್ನ ತಂದೆಗೆ ಸಮಾನರು ಎಂದು ಸಂತೋಷ್ ಹೆಗ್ಡೆಯವರು ನೀಡಿದ ಹೇಳಿಕೆ ಕೆಲವರ ಟೀಕೆಗೆ ಒಳಗಾಗಿತ್ತು.ಹೀಗಾಗಿ ಅಡ್ವಾಣಿಯವರ ಹೆಸರು ಪ್ರಸ್ತಾಪ ವಾಗುತ್ತಿದ್ದಂತೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ಹಣ ನೀಡದಂತೆ ಮನವಿ
ಇಂಡಿಯಾ ಅಗೆನೆಸ್ಟ್ ಕರಪ್ಶನ್ ಸಂಸ್ಥೆ ಕಾರ್ಯಕರ್ತರು ಎಂದು ಹೇಳಿಕೊಂಡು ಕೆಲವರು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಇಂಥವರ ಮಾತಿಗೆ ಮರುಳಾಗಬೇಡಿ ಎಂದು ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.ನಾನು ಹಾಗೂ ಪ್ರಶಾಂತ್ ಭೂಷಣ್ ಜತೆಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ.ಅದಕ್ಕೆ ಚೆಕ್ ರೂಪದಲ್ಲಿ ಹಣ ನೀಡಿ ಎಂದು ಕೆಲವರು ದೇಣಿಗೆ ವಸೂಲಿ ಮಾಡುತ್ತಿದ್ದಾರೆ ಎಂದರು.
ಧೈರ್ಯ ಇದ್ದರೆ ವರದಿ ತಿರಸ್ಕರಿಸಿ: ಹೆಗ್ಡೆ ಸವಾಲು
ಬೆಂಗಳೂರು:`ಧೈರ್ಯವಿದ್ದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನಿಖಾ ವರದಿಯನ್ನು ಯಾವುದೇ ಕಾರಣ ನೀಡದೇ ತಿರಸ್ಕರಿಸಲಿ.ವರದಿ ನೀಡಿದ ನನಗೆ ಕಾನೂನಿನ ಪರಿಜ್ಞಾನ ಇಲ್ಲ ಎಂಬರ್ಥ ಕಲ್ಪಿಸುವ ಗೊಂದಲಗಳನ್ನು ಹಬ್ಬಿಸುವುದು ಬೇಡ`ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.
ಲೋಕಾಯುಕ್ತ ವರದಿಗೆ ಸಂಬಂಧಿಸಿದಂತೆ ಮೂರು ಅಂಶಗಳ ಬಗ್ಗೆ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು,`ನಾನು ಕಾನೂನಿನ ವ್ಯಾಪ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಕಾನೂನಿನ ಅಡಿಯಲ್ಲಿ ಲೋಕಾಯುಕ್ತರು ಹೊಂದಿರುವ ಅಧಿಕಾರವನ್ನು ಮಾತ್ರವೇ ಬಳಸಿದ್ದೇನೆ` ಎಂದರು.
ಯಾರ ಹೆಸರನ್ನೂ ಬಿಟ್ಟಿಲ್ಲ: `ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರನ್ನು ನಾನು ವರದಿಯಿಂದ ಕೈಬಿಟ್ಟಿಲ್ಲ.ಕಾನೂನಿನ ಪ್ರಕಾರ ನಾನು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದೆ. ಹಿಂದಿನ ರಾಜ್ಯಪಾಲರು ಧರ್ಮಸಿಂಗ್ ವಿರುದ್ಧದ ಆರೋಪಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿದ್ದಾರೆ. ಆದರೂ,ಅವರಿಂದ ನಷ್ಟ ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇತ್ತು.ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡಿದವರು ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ` ಎಂದು ಹೇಳಿದರು.
`2004ರವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದವರ ಹೆಸರು ಸೇರಿಸಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಟೀಕಿಸುತ್ತಿದ್ದಾರೆ.ಆದರೆ,ತನಿಖೆಯ ಅವಧಿಯಲ್ಲಿ ಸರ್ಕಾರ ಒದಗಿಸಿದ ದಾಖಲೆಗಳು ಮತ್ತು ನಾವು ಪತ್ತೆಮಾಡಿದ ವಿಷಯಗಳ ಆಧಾರದಲ್ಲಿ ಮಾತ್ರ ವರದಿ ನೀಡಲು ಸಾಧ್ಯ. ಯಾವುದೇ ದಾಖಲೆಗಳ ಆಧಾರವಿಲ್ಲದೇ ಯಾರ ವಿರುದ್ಧವೂ ಆರೋಪ ಮಾಡಲಾಗದು.
ಕಾಂಗ್ರೆಸ್‌ಗೆ ಸಹಾಯ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಿಲ್ಲ ಎಂಬ ವದಂತಿ ಹಬ್ಬಿಸಲಾಗುತ್ತಿದೆ.ಆದರೆ,ಇದೇ ವರದಿಯ ವಿಷಯದಲ್ಲಿ ಕಾಂಗ್ರೆಸ್ ಮುಖಂಡರೇ ನನ್ನ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು ಎಂಬುದು ಆರೋಪ ಮಾಡುವ ವರಿಗೆ ಗೊತ್ತಿಲ್ಲವೇ`ಎಂದು ಸಂತೋಷ್ ಹೆಗ್ಡೆ ಪ್ರಶ್ನಿಸಿದರು.
0 comments:
Post a Comment