ಬೆಂಗಳೂರು, ಅ.14: ನಗರದ ರಾಚೇನಹಳ್ಳಿ ಮತ್ತು ಉತ್ತರಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ ಕೋಟ್ಯಂತರ ರೂ. ಬೆಲೆಬಾಳುವ ಜಮೀನನ್ನು ಕಾನೂನು ಬಾಹಿರಯವಾಗಿ ಡಿನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಶನಿವಾರ ಪ್ರಕಟಿಸಲಿದೆ.
ಯಡಿಯೂರಪ್ಪರ ಮತ್ತವರ ಕುಟುಂಬ ಸದಸ್ಯರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾ.ಎನ್.ಕೆ.ಸುಧೀಂದ್ರ ರಾವ್, ತೀರ್ಪು ಪ್ರಕಟಿಸಲಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ಮತ್ತವರ ಪುತ್ರರ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ. ಕೋರ್ಟ್ ಜಾಮೀನು ನೀಡಿದರೆ ಯಡಿಯೂರಪ್ಪನವರಿಗೆ ಜೀವದಾನ ದೊರೆಯಲಿದ್ದು, ಜಾಮೀನು ನಿರಾಕರಿಸಿದೆ ಪುತ್ರರ ಸಹಿತ ಜೈಲುಪಾಲಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಾಮೀನು ಸಿಗುವುದೋ ಅಥವಾ ಜಾಮೀನು ಸಿಗದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹಕ್ಕೆ ಪ್ರಯಾಣ ಬೆಳಸುವರೊ ಎಂಬುದು ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಯಡಿಯೂರಪ್ಪನವರಲ್ಲದೆ ಅವರ ಇಬ್ಬರು ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್ ಮತ್ತು ಕೃಷ್ಣಯ್ಯ ಶೆಟ್ಟಿ ಕೂಡ ಪ್ರಕರಣದ ಆರೋಪಿಗಳಾಗಿದ್ದು, ಅವರ ಜಾಮೀನು ಅರ್ಜಿಯ ತೀರ್ಪು ಸಹ ಪ್ರಕಟವಾಗಲಿದೆ. ಅಲ್ಲದೆ, ಇತರ 18 ಮಂದಿ ಸಹ ಆರೋಪಿಗಳ ಹಣೆಬರಹ ಕೋರ್ಟ್ ಬರೆಯಲಿದೆ.
0 comments:
Post a Comment