ಕೊಪ್ಪಳ: ಮರಳು ಖರೀದಿಗೆ ಹಾಗೂ ಸಾಗಾಟಕ್ಕೆ ಉಪಗ್ರಹ ಆಧಾರಿತ ಪರವಾನಗಿ ನೀಡುವ ವ್ಯವಸ್ಥೆಯನ್ನು ಮೊದಲ ಬಾರಿ ಜಾರಿಗೊಳಿಸಿದ ಕೀರ್ತಿ ಕೊಪ್ಪಳ ಜಿಲ್ಲೆಯದ್ದಾಗಿದೆ.
ಆಧುನಿಕ ತಂತ್ರಜ್ಞಾನ ಅಳವಡಿಸಿ ಮರಳಿನ ಅಕ್ರಮ ಮಾರಾಟ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿ ದ್ದ ನಷ್ಟವನ್ನು ತಪ್ಪಿಸುವ ಈ ನೂತನ ವ್ಯವಸ್ಥೆ ಜಿಲ್ಲೆಯಲ್ಲಿ ಅ. 15ರಿಂದ ಅನುಷ್ಠಾನಗೊಳ್ಳಲಿದೆ. ಬೆಂಗಳೂರು ಮೂಲದ ಇನ್‌ಟೆಕ್ ಸೊಲೂಷನ್ಸ್ ಪ್ರೈವೇಟ್ ಲಿಮಿಟೆಡ್ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಒಂದು ಘನ ಮೀಟರ್ ಮರಳಿಗೆ 250 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಗ್ರಾಹಕರು ತಮಗೆ ಅಗತ್ಯವಿರುವ ಮರಳಿನ ಪ್ರಮಾಣಕ್ಕೆ ತಗಲುವ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಡಿ.ಡಿ. ಪಡೆಯಬೇಕು.
ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿರುವ ಮರಳು ಸಂಗ್ರಹಾಗಾರದಲ್ಲಿ ಈ ಡಿ.ಡಿ. ಯನ್ನು ಹಾಜರುಪಡಿಸಿದ ನಂತರ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಪರವಾನ ಗಿಯ ಮುದ್ರಿತ ಪ್ರತಿಯನ್ನು ಗ್ರಾಹಕರಿಗೆ ನೀಡಲಾಗುವುದು. ನಂತರ ಪಡೆದ ಮರಳನ್ನು 12 ಗಂಟೆ ಅವಧಿ ಒಳಗಾಗಿ ಗ್ರಾಹಕರು ಸಾಗಾಟ ಮಾಡಬೇಕು ಎಂದು ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಶುಕ್ರವಾರ ತಿಳಿಸಿದರು.
ಮರಳನ್ನು ಒಯ್ಯಲು ಬಳಸುವ ಟ್ರ್ಯಾಕ್ಟರ್‌ಗೆ ವಾಣಿಜ್ಯ ಬಳಕೆಯ ಪರವಾನಗಿ ಹೊಂದಿರಬೇಕು. ಮರಳು ಸಾಗಣೆ ಮಾಡುವ ಸಂಬಂಧ ಟ್ರ್ಯಾಕ್ಟರ್‌ನ ವಿವರಗಳನ್ನು ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ಈ ನೋಂದಣಿ ಉಚಿತವಾಗಿರುತ್ತದೆ ಎಂದು ಹೇಳುತ್ತಾರೆ.
ಜಿಲ್ಲೆಯಲ್ಲಿ 8 ಸ್ಥಳಗಳಲ್ಲಿ ಮರಳು ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳಗಳಿಂದ ಜಿಲ್ಲೆಯ ಯಾವುದೇ ಸ್ಥಳಕ್ಕೂ 12 ಗಂಟೆಗಳ ಒಳಗಾಗಿ ಮರಳನ್ನು ಸಾಗಿಸಬಹುದು. ಖರೀದಿಸಿದ ಮರಳನ್ನು ಉದ್ದೇಶಿತ ಕಾರ್ಯಕ್ಕೆ ಬಳಸದೇ, ಹೆಚ್ಚಿನ ಬೆಲೆಗೆ ಮತ್ತೆ ಮಾರಾಟ ಮಾಡುವುದನ್ನು ತಪ್ಪಿಸುವ ಸಲುವಾಗಿ ಈ ನಿಬಂಧನೆ ಹೇರಲಾಗಿದೆ. ಈ ಅವಧಿ ತಾತ್ಕಾಲಿಕ ಮಾತ್ರ. 2-3 ತಿಂಗಳು ನಂತರ ಈ ಅವಧಿಯನ್ನು 6 ಗಂಟೆಗಳಿಗೆ ಇಳಿಸುವ ಯೋಚನೆ ಇದೆ ಎಂದೂ ಹೇಳುತ್ತಾರೆ.
ಮರಳು ಸಂಗ್ರಹಾಗಾರದಲ್ಲಿ ಒಂದು ಲ್ಯಾಪ್‌ಟಾಪ್, ಜಿಪಿಎಸ್ ಸಾಧನ, ಬ್ಲೂಟೂಥ್ ಸಾಧನ ಹಾಗೂ ಥರ್ಮಲ್ ಪ್ರಿಂಟರ್ ಬಳಸಿ ಈ ಪರವಾನಗಿ ನೀಡಲಾಗುತ್ತದೆ ಎಂದು ತಂತ್ರಾಂಶ ಅಭಿವೃದ್ಧಿ ಪಡಿಸಿರುವ ಇನ್‌ಟೆಕ್ ಸೊಲೂಷನ್ಸ್ ಪ್ರೈವೇಟ್ ಲಿ.ನ ಎಸ್.ರಮೇಶ್ ಹೇಳುತ್ತಾರೆ.
ಗ್ರಾಹಕರ ಹೆಸರು, ಖರೀದಿಸಿದ ಮರಳಿನ ಪ್ರಮಾಣ, ಡಿ.ಡಿ. ಸಂಖ್ಯೆ, ಮೊತ್ತ, ಬ್ಯಾಂಕ್‌ನ ಹೆಸರು ಮತ್ತು ಶಾಖೆ, ಹಣ ಪಾವತಿಸಿದ ಸ್ಥಳ, ಮರಳನ್ನು ಯಾವ ಉದ್ದೇಶಕ್ಕೆ ಖರೀದಿ ಮಾಡಲಾಗುತ್ತಿ ದೆ, ಸಾಗಣೆಗೆ ಬಳಸುವ ವಾಹನದ ನೋಂದಣಿ ಸಂಖ್ಯೆ ಹಾಗೂ ಯಾವ ಮಾರ್ಗದ ಮೂಲಕ ಒಯ್ಯಲಾಗುತ್ತದೆ ಎಂಬ ವಿವರಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತದೆ.
ಇದರ ಜೊತೆಗೆ, ಜಿಪಿಎಸ್ ಸಾಧನದ ಸಹಾಯದಿಂದ ನಿರ್ದಿಷ್ಟ ಮರಳು ಸಂಗ್ರಹಾಗಾರಕ್ಕೆ ಸಂಬಂಧಿಸಿದ ರೇಖಾಂಶ ಮತ್ತು ಅಕ್ಷಾಂಶಗಳನ್ನು ಪರವಾನಗಿಯಲ್ಲಿ ಮುದ್ರಿಸಲಾಗುತ್ತದೆ. ಇವೆಲ್ಲವು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಂಡ ನಂತರ, ಥರ್ಮಲ್ ಪ್ರಿಂಟರ್‌ನಿಂದ ಪರವಾನಗಿಯ ಮುದ್ರಿತ ಪ್ರತಿಯನ್ನು ಗ್ರಾಹಕನಿಗೆ ನೀಡಲಾಗುತ್ತದೆ ಎಂದು ವಿವರಿಸುತ್ತಾರೆ.
ಲ್ಯಾಪ್‌ಟಾಪ್‌ನಲ್ಲಿನ ಸಮಯವನ್ನು ಬದಲಾಯಿಸುವ ಮೂಲಕ ಪರವಾನಗಿಯಲ್ಲಿ ಮುದ್ರಣ ಗೊಳ್ಳುವ ಖರೀದಿ ಸಮಯದಲ್ಲಿ ವ್ಯತ್ಯಾಸ ತರಬಹುದು. ಇದನ್ನು ತಪ್ಪಿಸುವ ಸಲುವಾಗಿ ಉಪಗ್ರಹದಿಂದಲೇ ಸಮಯವನ್ನು ದಾಖಲಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದೂ ಹೇಳುತ್ತಾರೆ.
ಈ ತಂತ್ರಾಂಶ ಬಳಕೆ ಕುರಿತಂತೆ ಲೋಕೋಪಯೋಗಿ ಇಲಾಖೆಯ ಆಯ್ದ ಸಿಬ್ಬಂದಿಗೆ ಶುಕ್ರವಾರ ತರಬೇತಿಯನ್ನೂ ನೀಡಲಾಗಿದೆ. ಬರುವ ದಿನಗಳಲ್ಲಿ ಈ ತಂತ್ರಾಂಶದಲ್ಲಿ ಅಗತ್ಯ ಬದಲಾವಣೆ ಮಾಡಲು ಸಾಧ್ಯವಿದೆ ಎಂದೂ ರಮೇಶ್ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕೃಪೆ : ಪ್ರಜಾವಾಣಿ
0 comments:
Post a Comment