ಕೊಪ್ಪಳ ಚುನಾವಣೆಯ ವಿಜಯದ ವಿಸ್ಮತಿಯಲ್ಲಿದ್ದ ಬಿಜೆಪಿಯ ಕೆನ್ನೆಗೆ ಬಿಜೆಪಿ ಮುಖಂಡನೆಂದು ಕರೆಸಿಕೊಂಡ ದುಷ್ಕರ್ಮಿಯೊಬ್ಬ ಚಪ್ಪಲಿಯಲ್ಲಿ ಬಾರಿಸಿದ್ದಾನೆ. ಇದು ಎಲ್ಲೋ ಬೀದಿಯಲ್ಲಿ, ಯಾರೋ ಪಕ್ಷದ ಮುಖಂಡನ ಮೇಲೆ ನಡೆದ ದಾಳಿಯಾಗಿದ್ದರೆ ಮಾಮೂಲಿ ಬೀದಿ ಜಗಳವೆಂದು ಸುಮ್ಮನಿರಬಹುದಿತ್ತು. ಆದರೆ ಘಟನೆ ನಡೆದಿರುವುದು ವಿಧಾನಸೌಧದಲ್ಲಿ. ಚಪ್ಪಲಿ ಏಟು ತಿಂದಿರುವುದು ವಸತಿ ಸಚಿವ ವಿ. ಸೋಮಣ್ಣ. ಸರಿ, ಅದಕ್ಕೂ ಆಸ್ಪದವಿಲ್ಲದಂತೆ ಇಡೀ ಘಟನೆಯನ್ನು ವಿರೋಧ ಪಕ್ಷದ ತಲೆಯ ಮೇಲೆ ಕೂರಿಸೋಣವೆಂದರೆ, ಚಪ್ಪಲಿಯಲ್ಲಿ ಥಳಿಸಿರುವುದು ಸ್ವತಃ ಬಿಜೆಪಿ ಮುಖಂಡನೇ. ಬಿಜೆಪಿಯೊಳಗಿನ ರಾಜಕೀಯ ಸಂಘರ್ಷ ಎಂತಹ ಹೇಯ ರೂಪವನ್ನು ಪಡೆಯುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇದು ಯಾವನೋ ಸಾಮಾನ್ಯ ಪ್ರಜೆಯೊಬ್ಬ ಆಕ್ರೋಶದಿಂದ ನಡೆಸಿದ ದಾಳಿಯಾಗಿದ್ದರೆ ನಾವು ಇಡೀ ಘಟನೆಯನ್ನು ಬೇರೆಯೇ ದೃಷ್ಟಿಯಿಂದ ನೋಡಬಹುದಿತ್ತು ಮತ್ತು ವಿಶ್ಲೇಷಿಸಬಹುದಿತ್ತು. ಇಲ್ಲಿ ಹಾಗಾಗಿಲ್ಲ.
ಬದಲಿಗೆ, ಬಿಜೆಪಿಯ ಮುಖಂಡನೊಬ್ಬ ತನಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ವಿಧಾನ ಸೌಧದ ಆವರಣದಲ್ಲಿ ಮಾನ್ಯ ಸಚಿವರ ಮೇಲೆ ದಾಳಿ ನಡೆಸಿದ್ದಾನೆ. ಆದುದರಿಂದ ಈ ದಾಳಿಗೆ ಕೇವಲ ಆ ದುಷ್ಕರ್ಮಿ ಮಾತ್ರ ಹೊಣೆಯಲ್ಲ. ರಾಜ್ಯ ಬಿಜೆಪಿಯ ಮುಖಂಡರು ಅದರ ಹೊಣೆಯನ್ನು ಹೊತ್ತುಕೊಳ್ಳಬೇಕು.ವಿಧಾನಸೌಧದೊಳಗೆ ಭದ್ರತಾ ವೈಫಲ್ಯ ನಡೆದಿದೆ ಎಂದು ಸಚಿವ ಸೋಮಣ್ಣ ಆರೋಪಿಸಿದ್ದಾರೆ.
ಆದರೆ ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಸಚಿವರು ನಿರಾಕರಿಸಿದ್ದಾರೆ. ದುಷ್ಕರ್ಮಿಯ ಕೈಯಲ್ಲಿ ಯಾವುದೇ ಮಾರಕಾಸ್ತ್ರವಿರಲಿಲ್ಲ ಮತ್ತು ಆತ ಸ್ವತಃ ಬಿಜೆಪಿ ಕಾರ್ಯಕರ್ತನಾಗಿದ್ದ. ಅವನನ್ನು ತಡೆಯುವ ಯಾವ ಅಧಿಕಾರವೂ ಪೊಲೀಸ್ ಅಧಿಕಾರಿಗಳಿಗಿರಲಿಲ್ಲ. ಜನ ಸೇರಿದಲ್ಲಿ ಚಪ್ಪಲಿಯಿಂದ ಥಳಿಸುವುದು ಕಷ್ಟವೇನಲ್ಲ. ಅದಕ್ಕೆ ಭದ್ರತಾ ವೈಫಲ್ಯವಾಗಬೇಕೆಂದೇನೂ ಇಲ್ಲ. ಪೊಲೀಸ್ ಅಧಿಕಾರಿಗಳ ಈ ವಾದಕ್ಕೆ ನಾವು ತಲೆ ಬಾಗಲೇ ಬೇಕಾಗಿದೆ. ‘ಚಪ್ಪಲಿ’ ಮಾರಕಾಸ್ತ್ರಗಳ ಸಾಲಿನಲ್ಲಿ ಸೇರುತ್ತದೆಯೆಂದಾದರೆ, ನಾವು ಭದ್ರತಾ ವೈಫಲ್ಯವಾಗಿದೆಯೆಂದು ಆರೋಪಿಸಬಹುದಾಗಿತ್ತು. ರಾಜಕಾರಣಿಗಳ ಮೇಲೆ ನಡೆಯುತ್ತಿರುವ ಚಪ್ಪಲಿ ದಾಳಿ ಹೀಗೇ ಮುಂದುವರಿದರೆ, ಮುಂದೊಂದು ದಿನ ವಿಧಾನಸೌಧದೊಳಗೆ ಕಡ್ಡಾಯವಾಗಿ ಚಪ್ಪಲಿ ಕಳಚಿ ಬರಬೇಕಾದ ಸನ್ನಿವೇಶ ನಿರ್ಮಾಣವಾದಲ್ಲಿ ಆಶ್ಚರ್ಯವೇನೂ ಇಲ್ಲ.
ತಮಾಷೆ ಅದಲ್ಲ. ಸೋಮಣ್ಣ ಅವರ ಮೇಲೆ ಚಪ್ಪಲಿ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಗೃಹ ಸಚಿವ ಆರ್ ಅಶೋಕ್ ‘‘ಹಲ್ಲೆ ನಡೆಸಿದಾತ ಲಿಂಗಾಯತ’’ ಎಂದು ಘೋಷಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ, ಸೋಮಣ್ಣ ಅವರ ಮೇಲೆ ನಡೆದ ಹಲ್ಲೆಯನ್ನು ಪ್ರತಿಭಟಿಸಿ ಕೆಲವು ಲಿಂಗಾಯತ ಸ್ವಾಮೀಜಿಗಳು ಪ್ರತಿಭಟನೆಗೂ ಇಳಿದಿದ್ದರು. ಇದೆಲ್ಲ ಏನನ್ನು ಸೂಚಿಸುತ್ತದೆ? ಸಂಪುಟದ ಸಚಿವರ ಮೇಲೆ ಹಲ್ಲೆ ನಡೆಸಿದವನು ಯಾವ ಜಾತಿಯ ವನಾದರೇನು? ಗೃಹ ಸಚಿವರು ಆತನ ಜಾತಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವುದು ಅವರ ಜವಾಬ್ದಾರಿಯುತ ಸ್ಥಾನಕ್ಕೆ ಶೋಭೆ ತರುವುದೇ? ಲಿಂಗಾಯತನಲ್ಲದಿದ್ದರೆ ಇಡೀ ಪ್ರಕರಣ ಬೇರೆ ತಿರುವು ಪಡೆಯುತ್ತಿತ್ತು ಎಂದು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆಯೆ? ಅಥವಾ ಇಡೀ ಘಟನೆಯಲ್ಲಿ ಈ ರಾಜ್ಯವನ್ನು ಕಾಡುತ್ತಿ ರುವ ಜಾತಿ ರಾಜಕಾರಣ ಕೆಲಸ ಮಾಡಿದೆಯೆ? ಇದು ತನಿಖೆಗೆ ಅರ್ಹವಾದ ವಿಷಯ.
ಇಂದು ಸೋಮಣ್ಣ ಅವರಿಗೆ ಶತ್ರುಗಳಿರು ವುದು ವಿರೋಧ ಪಕ್ಷಗಳಿಂದಲ್ಲ. ಸ್ವತಃ ಬಿಜೆಪಿಯೊಳಗಿನ ಹಿರಿಯರೇ ಅವರ ವಿರುದ್ಧ ಹಲ್ಲು ಮಸೆಯುತ್ತಿದ್ದಾರೆ. ಸೋಮಣ್ಣ ಬೆನ್ನಿಗೆ ಯಡಿಯೂರಪ್ಪ ಹಾಗೂ ಲಿಂಗಾಯತ ಸ್ವಾಮೀಜಿಗಳು ಬಲವಾಗಿ ನಿಂತಿರುವುದು ಅವರಿಗೆ ಕಷ್ಟ ತಂದಿದೆ. ಇತ್ತೀಚೆಗೆ ಕೊಪ್ಪಳದಲ್ಲಿ ಕರಡಿ ಸಂಗಣ್ಣ ಗೆಲುವು ಸಾಧಿಸಿರುವುದು, ಯಡಿಯೂರಪ್ಪ ವಿರೋಧಿಗಳ ಆಕ್ರೋಶಕ್ಕೆ ತುಪ್ಪ ಸುರಿದಿದೆ. ಯಡಿಯೂರಪ್ಪರ ಮೇಲೆ ದಾಳಿ ನಡೆಸುವುದು ಅಸಾಧ್ಯವಾಗಿರುವುದರಿಂದ, ಸೋಮಣ್ಣ ವಿರುದ್ಧ ದಾಳಿ ನಡೆಸಿ ಯಡಿಯೂರಪ್ಪ ಅವರಿಗೆ ಮುಖಭಂಗ ಮಾಡುವ ಉದ್ದೇಶವೊಂದು ಈ ಘಟನೆಯ ಹಿಂದೆ ಅಡಗಿದೆಯೆ? ಗಂಭೀರ ತನಿಖೆಯಷ್ಟೇ ಇದಕ್ಕೆ ಉತ್ತರವನ್ನು ಹೇಳಬಹುದು. ‘ದಾಳಿ ನಡೆಸಿದಾತ ಲಿಂಗಾಯತ’ ಎಂದು ಹೇಳಿರುವ ಅಶೋಕ್‌ಗೆ ಈ ಕುರಿತಂತೆ ಏನಾದರೂ ಮಾಹಿತಿಗಳಿದ್ದರೆ ಅವರೂ ತಿಳಿಸಬಹುದು.
ರಾಜಕಾರಣಿಗಳು ನಾಚಿಕೆಯನ್ನು ಕಳೆದು ಕೊಳ್ಳುತ್ತಿದ್ದಾರೆ. ಯಾವ ಜೈಲೂ ಅವರಲ್ಲಿ ನಾಚಿಕೆ, ಅವಮಾನವನ್ನು ಸೃಷ್ಟಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವೆಡೆ ಆಕ್ರೋಶಗೊಂಡ ಜನಸಾಮಾನ್ಯರು ರಾಜಕಾರಣಿಗಳೆಡೆಗೆ ಚಪ್ಪಲಿ ತೂರಿದ್ದಾರೆ. ಸಾರ್ವಜನಿಕವಾಗಿ ಅವರನ್ನು ಅವಮಾನಿಸುವುದಕ್ಕೆ ಅವರು ಕಂಡುಕೊಂಡ ಒಂದೇ ಒಂದು ದಾರಿ ಚಪ್ಪಲಿ. ಆದರೆ ಇಲ್ಲಿ ದಾಳಿ ನಡೆಸಿರುವುದು ಆಕ್ರೋಶಗೊಂಡ ಜನಸಾಮಾನ್ಯನಲ್ಲ. ಸ್ವತಃ ಬಿಜೆಪಿಯ ಮುಖಂಡ. ಹೀಗಿರುವಾಗ, ಇಡೀ ಪ್ರಕರಣದ ಹಿನ್ನೆಲೆಯನ್ನು ಬಿಜೆಪಿಯ ನಾಯಕರೇ ಮುಖ್ಯವಾಗಿ ಈಶ್ವರಪ್ಪನವರು ಬಹಿರಂಗಪಡಿಸ ಬೇಕು.
ಪಕ್ಷದೊಳಗಿನ ಭಿನ್ನಮತ, ಒಳಜಗಳ ಹೀಗೆ ವಿಧಾನಸಭೆ ಮತ್ತು ಒಬ್ಬ ಸಚಿವನ ಸ್ಥಾನಕ್ಕೆ ಕಳಂಕ ತರುವಂತಿರಬಾರದು. ಇಂತಹ ಚಾಳಿ ಮುಂದುವರಿದರೆ, ನಾಳೆ ಈಶ್ವರಪ್ಪ, ಗೃಹ ಸಚಿವ ಅಶೋಕ್‌ರ ಮೇಲೆ ಇನ್ನೊಂದು ಗುಂಪು ಚಪ್ಪಲಿ ದಾಳಿ ನಡೆಸಬಹುದು. ಇದು ಮುಂದುವರಿದರೆ ಈಗಾಗಲೇ ಬೀದಿ ಪಾಲಾಗಿರುವ ಸರಕಾರದ ಘನತೆ, ಮಣ್ಣು ಪಾಲಾಗುತ್ತದೆ. ಆದುದರಿಂದ, ಸೋಮಣ್ಣ ಅವರ ಮೇಲೆ ಚಪ್ಪಲಿ ದಾಳಿ ನಡೆಸಲು ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು ಎನ್ನುವುದನ್ನು ತನಿಖೆ ನಡೆಸಿ, ಆ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಬೇಕಾಗಿದೆ. ಹಾಗೆಯೇ ಗೃಹ ಸಚಿವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡುವುದನ್ನು ಇನ್ನಾದರೂ ಕಲಿಯಬೇಕಾಗಿದೆ. ಕೃಪೆ : ವಾರ್ತಾಭಾರತಿ ಸಂಪಾದಕೀಯ
0 comments:
Post a Comment