PLEASE LOGIN TO KANNADANET.COM FOR REGULAR NEWS-UPDATES


ಕೃಷಿ ಭಾರತೀಯ ರೈತರ ಬೆನ್ನೆಲುಬು ಎನ್ನುವುದು ಜನಜನಿತ ಮಾತು. ಅದರಂತೆ ಹೈದರಬಾದ ಕರ್ನಾಟಕ ಪ್ರಾಂತ್ಯದ ರೈತರಿಗೆ ವ್ಯೆವಸಾಯ ಜೀವನದ ಮೂಲ ಕಸುಬಾಗಿದೆ. ಮೂಲತಃ ಈ ಪ್ರದೇಶವು ಹಿಂದುಳಿದ ಪ್ರದೇಶವಾಗಿ ಉಳಿದಿರುವದರಿಂದ ಈಗ ಇದರ ಸರ್ವತೊಮುಖ ಅಭಿವೃದ್ಧಿಗಾಗಿ ಹೈದರಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ಒಂದು ದಶಕದಿಂದ ಹಲವಾರು ಪ್ರಗತಿಪರ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ಈ ಪ್ರದೇಶವು ರಾಜ್ಯದಲ್ಲಿಯೆ ಅತೀ ಹೆಚ್ಚು ಒಣಬೇಸಾಯ ಪ್ರದೇಶವನ್ನು ಹೊಂದಿದ್ದು ಕೃಷಿ ಸಾಗುವಳಿ ಭೂಮಿಯು ಹೆಚ್ಚಾಗಿ ಮಳೆಯಾಶ್ರಿತವಾಗಿದೆ ಮತ್ತು ಅಪಾರವಾದ ಜನಸಂಖ್ಯೆಯು ಕೃಷಿಯನ್ನೆ ಜೀವನೋಪಾಯದ ಮೂಲವನ್ನಾಗಿರಿಸಿದೆ. 

ದಶಕಗಳಿಂದ ಕೃಷಿಯನ್ನೆ ಅವಲಂಬಿಸಿರುವ ಈ ಭಾಗದ ರೈತರು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಮತ್ತು ಆವಿಷ್ಕಾರಗಳನ್ನು ಅಳವಡಿಸುವಿಕೆಯಲ್ಲಿ ಆಮೆಗತಿಯ ವೇಗದಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣ ಹಲವಾರು ಆದರೆ, ಇಂದು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಮತ್ತು ದೇಶದ ರೈತಸಮುದಾಯ ಹಾಗೂ ಕೃಷಿ ವಿಜ್ಞಾನಿಗಳ ಮುಂದಿರುವ ಮುಖ್ಯ ಗುರಿಯಾದ ಎರಡನೆಯ ಹಸಿರು ಕ್ರಾಂತಿ ಹಾಗೂ ರಾಷ್ಟ್ರೀಯ ಆಹಾರ ಭದ್ರತೆಯ ಸಾಧನೆಗೈಯಲು ಈಗಿನ ಕೃಷಿ ಪದ್ದತ್ತಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ರೈತರಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ಲಭ್ಯಗೊಳಿಸುವುದು ಅತ್ಯವಶ್ಯಕವಾಗಿದೆ. ಈ ದಿಸೆಯಲ್ಲಿ ಹೈದರಬಾದ ಕರ್ನಾಟಕ ಪ್ರದೇಶದ ರೈತರ ಏಳ್ಗೆಗಾಗಿ ರಾಯಚೂರಿನಲ್ಲಿ ಪ್ರಥಮ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಕರ್ನಾಟಕ ಘನ ಸರಕಾರವು ಹಸಿರು ನಿಶಾನೆ ತೋರಿತು. ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. ಕೃಷಿ ರಂಗದಲ್ಲಿ ವ್ಯಾಪಕವಾದ ಅಭಿವೃದ್ದಿಯ ಕನಸುಗಳು ಹುಟ್ಟಿಕೊಳ್ಳತೊಡಗಿವೆ. ಆ ಕನಸುಗಳ ನನಸಾಗಿಸಲು ಹಲವಾರು ಕಾರ್ಯಕ್ರಮಗಳನ್ನು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿದೆ. 

ಕೃಷಿ ವಿಶ್ವವಿದ್ಯಾಲಯ ರಾಯಚೂರು ಈ ಪ್ರದೇಶದ ಪ್ರಮುಖ ಜಿಲ್ಲೆಗಳಾದ ಬೀದರ, ಗುಲಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಕೃಷಿ ವಿಸ್ತರಣಾ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಯಶಸ್ವಿಯಾಗಿ ಕೈಗೊಳ್ಳಲು, ಪ್ರತಿ ಜಿಲ್ಲೆಯಲ್ಲಿ ಒಂದು ಕೃಷಿ ವಿಜ್ಞಾನ ಕೇಂದ್ರವನ್ನು ಹೊಂದಿದೆ. ಇದಲ್ಲದೆ, ವಿಶ್ವವಿದ್ಯಾಲಯವು ತನ್ನ ಕಾರ್ಯವ್ಯಾಪ್ತಿಯ ಜಿಲ್ಲೆಗಳಲ್ಲಿ ವಿಸ್ತರಣಾ ಶಿಕ್ಷಣ ಘಟಕಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿರುವದು ಶ್ಲಾಘನೀಯವಾಗಿದೆ. ಈ ಪ್ರಯತ್ನದ ಅಂಗವಾಗಿ ಕೃಷಿ ವಿಶ್ಯವಿದ್ಯಾಲಯ, ರಾಯಚೂರು, ರಾಜ್ಯದಲ್ಲಿಯೇ ವಿಶಿಷ್ಟವಾದ ಭೌಗೋಳಿಕ ಪ್ರದೇಶವನ್ನು ಮತ್ತು ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಪ್ರದೇಶಗಳೆರಡನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಘಟಕವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಕೃಷಿ ಸಮುದಾಯದ ಸರ್ವತೋಮುಖ ಏಳ್ಗೆಗಾಗಿ ಕೈಗೊಂಡಿರುವ ಈ ದಿಟ್ಟ ನಿರ್ಧಾರವು ಕೊಪ್ಪಳ ಜಿಲ್ಲೆಯ ರೈತರ ಅಭಿವೃದ್ಧಿಗೆ ಒಂದು ವರದಾನವಾಗಲಿದೆ. 

  ಈಗಾಗಲೆ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ೨೦೦೫ ರಿಂದ ಕಾರ್ಯನಿರತವಾಗಿದ್ದು ಸುತ್ತಮುತ್ತಲಿನ ರೈತರಿಗೆ ತನ್ನ ಸೇವೆಗಳನ್ನು ನೀಡುತ್ತ ಪ್ರಶಂಸನೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಐದು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ರೈತರಿಗೆ ಕೃಷಿ ಹಾಗೂ ಕೃಷಿಯೇತರ ವಿಷಯಗಳಲ್ಲಿ ಮಾಹಿತಿ ನೀಡುತ್ತಿದೆ. ಆದರೆ ಜಿಲ್ಲೆಯ ಯಲಬುರ್ಗ ಹಾಗೂ ಕೊಪ್ಪಳ ತಾಲೂಕಿನ ರೈತರಿಗೆ ಪ್ರತಿ ಬಾರಿ ಕೃಷಿ ವಿಜ್ಞಾನ ಕೆಂದ್ರ ಸಂಪರ್ಕಿಸಲು ಗಂಗಾವತಿಗೆ ಪ್ರಯಾಣಿಸುವ ತೊಂದರೆಯನ್ನು ಮನಗಂಡು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ: ಬಿ. ವ್ಹಿ. ಪಾಟೀಲರು ಕೃಷಿ ತಂತ್ರಜ್ಞಾನ ಹಾಗೂ ಮಾಹಿತಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಕೃಷಿವಿಸ್ತರಣಾ ಚಟುವಟಿಕೆಗಳನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ತಲುಪಿಸಲು ಮತ್ತು ಪರಿಣಾಮಕಾರಿಯಾದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೊಪ್ಪಳ ಪಟ್ಟಣದಲ್ಲಿ ಕೃಷಿ ವಿಸ್ತರಣಾ ಘಟಕವನ್ನು ಸ್ಥಾಪಿಸಿದೆ. ಕೊಪ್ಪಳದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭವನದ ಆವರಣದಲ್ಲಿ (ಪ್ರವಾಸಿ ಮಂದಿರದ ಎದುರಿಗೆ) ಘಟಕವನ್ನು  ಕಳೆದ ಆಗಸ್ಟ್ ೧೧ ರಿಂದ ಕಾರ್ಯ ಪ್ರಾರಂಭಿಸಲಾಗಿದೆ. ವಿಸ್ತರಣಾ ಶಿಕ್ಷಣ ಘಟಕವು ವಿವಿಧ ವಿಷಯ ತಜ್ಞರುಗಳನ್ನೊಳಗೊಂಡು ವಿಸ್ತರಣಾ ಮುಂದಾಳುವಿನ ಮೇಲ್ವಿಚಾರಣೆಯಲ್ಲಿ ಮುಂಬರುವ ದಿನಗಳಲ್ಲಿ ರೈತರ ಏಳ್ಗೆಗಾಗಿ ಹಲವಾರು ಚಟುವಟಿಕೆಗಳ ಯೊಜನೆಯನ್ನು ಹೊಂದಿದೆ. 
ವಿಸ್ತರಣಾ ಶಿಕ್ಷಣ ಘಟಕದ ಕಾರ್ಯವಿಧಾನ :
  ವಿಸ್ತರಣಾ ಶಿಕ್ಷಣ ಘಟಕವು ಕೃಷಿ ತಾಂತ್ರಿಕತೆಗಳನ್ನು, ಆವಿಷ್ಕಾರಗಳನ್ನು ಮತ್ತು ನವೀನ ಕೃಷಿ ಪದ್ಧತಿಗಳನ್ನು ರೈತರಿಗೆ ತಲುಪಿಸುವ ಧ್ಯೇಯದೊಂದಿಗೆ ಹಲವಾರು ವಿಷಯಗಳಲ್ಲಿ ರೈತರಿಗೆ, ರೈತಮಹಿಳೆಯರಿಗೆ, ಗ್ರಾಮೀಣ ಯುವಕ ಯುವತಿಯರಿಗೆ ಮತ್ತು ಕೃಷಿ ಮಹಿಳೆ ಹಾಗೂ ಇತರೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರೈತರಿಗೆ ಅತ್ಯವಶ್ಯಕವಿರುವ ವಿಶೇಷ ಹಾಗೂ ಕೆಲ ಆಯ್ದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಒಳಆವರಣ ಹಾಗೂ ಹೊರ ಆವರಣ ತರಬೇತಿಗಳನ್ನು ಸಹ ತನ್ನ ಕಾರ್ಯಕ್ರಮಗಳಲ್ಲಿ ಹೊಂದಿದೆ. ರೈತರಿಗೆ ಬೆಳೆಯಲ್ಲಿ ಕಂಡುಬರುವ ಕೀಟ, ರೋಗ, ಪೋಷಕಾಂಶಗಳ ಕೊರತೆ, ಅತೀವೃಷ್ಟಿ, ಅನಾವೃಷ್ಟಿ/ಬರ ನಿರ್ವಹಣೆ ಮತ್ತು ಮಣ್ಣು ಹಾಗೂ ನೀರು ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿ ಅವುಗಳು ಮರುಕಳಿಸದಂತೆ ಕ್ರಮವಹಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ರೈತರಿಗೆ ತಿಳಿಸುವದು ಘಟಕದ ಆದ್ಯ ಕಾರ್ಯಕ್ರಮಗಳಾಗಿವೆ 

ಇಂದಿನ ಕೃಷಿಯಲ್ಲಿ ಹೆಚ್ಚು ಪ್ರಚಲಿತಗೊಳ್ಳುತ್ತಿರುವ ಸಾವಯವ ಕೃಷಿಯ ಬಗ್ಗೆ ಮಾಹಿತಿ, ತರಬೇತಿ ಹಾಗೂ ಸಾವಯವ ಪೀಡೆ ನಿರ್ವಹಣೆಯ ಬಗ್ಗೆ ತರಬೇತಿ ಮತ್ತು ಮಾಹಿತಿಗಳು ರೈತರಿಗೆ ಘಟಕದಿಂದ ಲಬ್ಯವಾಗಲಿವೆ. ಸಮಗ್ರ ಕೀಟ ನಿರ್ವಹಣೆ, ಸಮಗ್ರ ರೋಗ ನಿರ್ವಹಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಬೆಳೆ ನಿರ್ವಹಣೆ ಮತ್ತು ಇತರೆ ಬೆಳೆ ನಿರ್ವಹಣಾ ಕ್ರಮಗಳ ಬಗ್ಗೆ ರೈತರಿಗೆ ತಿಳಿಸಲಾಗುವುದು. ಕೃಷಿಯಲ್ಲದೆ, ತೋಟಗಾರಿಕೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಕುರಿ/ಆಡು ಸಾಕಾಣಿಕೆ, ರೇಷ್ಮೇ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಜೇನು ಸಾಕಾಣಿಕೆ ಹಿಗೆ ಇತರ ವಿಷಯಗಳ ಬಗ್ಗೆ ಮಾಹಿತಿ ಹಾಗೂ ಮುಂಬರುವ ದಿನಗಳಲ್ಲಿ ಅವಶ್ಯಕತೆಗಳಿಗನುಗುಣವಾಗಿ ತರಬೇತಿಗಳನ್ನು ಕೈಗೊಳ್ಳಲಾಗುವುದು. ರೈತರಿಗೆ ಸಾವಯವ ಕೃಷಿಯಲ್ಲಿ ಎರೆಹುಳ ಗೊಬ್ಬರ ತಯಾರಿಸುವುದು, ಎರೆ ಜಲ ತೆಗೆಯುವುದು, ಪಂಚಾಮೃತ ತಯಾರಿಸುವದು, ಜೈವಿಕ ಅನಿಲ ಘಟಕ ಸ್ಥಾಪಿಸುವುದು, ಜೈವಿಕ ಪೀಡೆ ನಾಶಕಗಳ ಬಳಕೆ ಹಾಗೂ ಅವುಗಳ ಅಭಿವೃದ್ಧಿಗೊಳಿಸುವದು ಇತ್ಯಾದಿ ವಿಷಯಗಳ ಬಗ್ಗೆ ವಿಶೇಷ ತರಬೇತಿ ಒದಗಿಸಲಾಗುವುದು. ಹೊಸ ತಾಂತ್ರಿಕತೆಗಳ ಬಗ್ಗೆ, ಹೊಸ ತಳಿಯ ಬೀಜಗಳ ಬಗ್ಗೆ ರೈತರ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುವುದು ಮತ್ತು ಅಂತಹ ಕ್ಷೇತ್ರಗಳಲ್ಲಿ ರೈತರನ್ನು ಒಂದುಗೂಡಿಸಿ ಸೂಕ್ತವೆನಿಸಿದ ತಾಂತ್ರಿಕತೆಯ ಪ್ರಚಾರಕ್ಕೆ ಒತ್ತು ನೀಡಲಾಗುವುದು. 

ರೈತರಿಗೆ ಮತ್ತು ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ಅಭಿವೃದ್ಧಿಯ ತರಬೇತಿಗಳನ್ನು ಹಮ್ಮಿಕೊಂಡು ಅವರಿಗೆ ಸ್ವಾವಲಂಬನೆಯ ಅರಿವು ಮೂಡಿಸುವದು ಹಾಗೂ ಗ್ರಾಮಿಣ ಮಹಿಳೆಯರಿಗೆ ಗರ್ಬಿಣಿಯರ ಆರೈಕೆ, ಶಿಶು ಪೋಷಣೆ, ಗೃಹ ವಿಜ್ಞಾನದ ವಿಷಯಗಳ ಬಗ್ಗೆ ಮಾಹಿತಿ ನೀಡುವದಲ್ಲದೇ ಆಹಾರ ಸಂಸ್ಕರಣೆ, ಆಹಾರದಲ್ಲಿ ಪೌಷ್ಟಿಕತೆ ವೃದ್ದಿಸುವದು ಹಿಗೆ ಹತ್ತು ಹಲವಾರು ವಿಷಯಗಳಲ್ಲಿ ತರಬೇತಿಗಳನ್ನು ಕೈಗೊಳ್ಳಲಾಗುವದು. ಗೃಹಅಲಂಕಾರ, ಪಟ್ಟಣಗಳಲ್ಲಿ ಹಿತ್ತಲ ತೋಟಗಾರಿಕೆ, ಅಲಂಕಾರಿಕ ಗಿಡಗಳ ಅಭಿವೃದ್ದಿ, ಸಂರಕ್ಷಿತ ಕೃಷಿ ಹಾಗೂ ಸಸಿಮಡಿಗಳನ್ನು ತಯಾರಿಸುವದು, ತೋಟಗಾರಿಕೆಯ ಹಣ್ಣು ಮತ್ತು ಹೂವುಗಳ ಗಿಡಗಳ ಕಸಿ ಕಟ್ಟುವದು ಸಸ್ಯಾಭಿವೃದ್ದಿ ಮುಂತಾದ ಸ್ವಯಂ ಉದ್ಯೊಗ ನಡೆಸಲು ಸೂಕ್ತವಾದ ತರಬೇತಿಗಳನ್ನು ಹಮ್ಮಿಕೊಳ್ಳುವದು ವಿಸ್ತರಣಾ ಘಟಕದ ಪ್ರಮುಖ ಕಾರ್ಯಕ್ರಮಗಳಲ್ಲಿ ಸೇರಿವೆ. 

ಇಂದು ಕೃಷಿ ಯಾಂತ್ರೀಕರಣವು ಹೆಚ್ಚಿನ ಆದ್ಯತೆಯನ್ನು ಪಡೆಯುತ್ತಿದೆ. ಕೃಷಿಕಾರ್ಮಿಕರಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೌಶಲ್ಯ ಅಭಿವೃದ್ದಿ ತರಬೇತಿಗಳು ಅತ್ಯವಶ್ಯಕವಾಗಿವೆ. ಇದರೊಂದಿಗೆ ಕೃಷಿಯಲ್ಲಿನ ಹಲವಾರು ಜಟಿಲತೆಗಳನ್ನು ಸರಳವಾಗಿ ನಿಭಾಯಿಸಲು ಸಹಾಯಕವಾಗುವ ಸರಳವಾದ ಕೃಷಿ  ಯಾಂತ್ರೀಕರಣವು ಕಾರ್ಮಿಕರ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವದು. ಇಂತಹ ಕೃಷಿ ಯಂತ್ರೋಪಕರಣಗಳ ಪರಿಚಯ ವಿಸ್ತರಣಾ ಘಟಕದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿಯೇತರ ಚಟುವಟಿಕೆಗಳಾದ ತೋಟಗಾರಿಕೆ, ಹೈನುಗಾರಿಕೆ, ಕೋಳಿ, ಕುರಿ, ಜಾನುವಾರು ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಮುಂತಾದ ಚಟುವಟಿಕೆಗಳಿಗೆ ಲಭ್ಯವಿರುವ ಆಧುನಿಕ ಹಾಗೂ ಕಡಿಮೆ ವೆಚ್ಚದ ಯಾಂತ್ರೀಕರಣದ ಬಗ್ಗೆ ರೈತರಿಗೆ ಮಾಹಿತಿ ನೀಡುವದು ಹಾಗೂ ಅವುಗಳ ಬಗ್ಗೆ ರೈತರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗುವುದು. 

        ಕೃಷಿಮೇಳ ಹಾಗೂ ಕಿಸಾನ ಮೇಳಗಳು ವಿಸ್ತರಣೆಯ ಅವಿಭಾಜ್ಯ ಅಂಗಗಳಾಗಿವೆ. ಇದರಡಿ ವಿಸ್ತರಣಾ ಘಟಕವು ವಿಶೇಷ ಸಂದರ್ಭಗಳಲ್ಲಿ, ಜಾತ್ರೆಗಳಲ್ಲಿ, ಸಂತೆಗಳಲ್ಲಿ, ಮತ್ತು ಜಿಲ್ಲೆಯ ಜನತೆ ಒಂದಡೆ ಸೇರುವಂತಹ ಕಾರ್ಯಕ್ರಮಗಳಲ್ಲಿ ಸೂಕ್ತವಾದ ಮಳಿಗೆಗಳನ್ನು ಏರ್ಪಡಿಸಿ ತಂತ್ರಜ್ಞಾನಗಳ ಪ್ರದರ್ಶನ ಹಾಗೂ ರೈತರಿಗೆ ಮುಕ್ತ ಸಂದರ್ಶನ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಮುಂತಾದ ಕಾರ್ಯಕ್ರಮಗಳನ್ನು ಶಿಕ್ಷಣ ಘಟಕವು ಕೈಗೊಳ್ಳಲಿದೆ. ಆಧುನಿಕ ಮಾಹಿತಿ ತಂತ್ರಜ್ಞಾನದ ಸಂಪೂರ್ಣ ಉಪಯೋಗವನ್ನು ಕೃಷಿ ವಿಸ್ತರಣೆಯಲ್ಲಿ ಅಳವಡಿಸಿಕೊಂಡು ರೈತರಿಗೆ ಹವಮಾನ ಮುನ್ಸೂಚನೆ, ಪೇಟೆ ಧಾರಣೆ ಹಾಗೂ ಕೃಷಿ ಸಂಬಂಧಿತ ಸಮಸ್ಯಗಳಿಗೆ ಪರಿಹಾರ ಹಾಗೂ ಸಲಹೆಗಳನ್ನು ರೈತರ ಮೊಬೈಲ ಫೋನಗಳಿಗೆ, ರವಾನಿಸುವ ಯೋಜನೆಯನ್ನು, ರೇಡಿಯೊ ಸಂದರ್ಶನಗಳನ್ನು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ಪ್ರಸಾರಮಾಡುವ ಯೋಜನೆಯನ್ನು ಹೊಂದಿದೆ. 

        ಕೃಷಿ ಚಟುವಟಿಕೆಗಳ ಮಾಹಿತಿ ನೀಡಲು, ಬೇಸಾಯದ ಪ್ರಶ್ನೆಗಳ ಪರಿಹಾರಕ್ಕಾಗಿ, ತಂತ್ರಜ್ಞಾನಗಳ ವರ್ಗಾವಣೆ, ರೈತರಿಗೆ ತರಬೇತಿಗಳನ್ನು ನೀಡಲು ಮತ್ತು ಕ್ಷೇತ್ರ ವೀಕ್ಷಣೆಗಾಗಿ ಸಂಪೂರ್ಣ ಸುಸಜ್ಜಿತವಾದ ಕಾರ್ಯಾಲಯ ಶ್ರವಣ ಮಾದ್ಯಮಗಳನ್ನೊಳಗೊಂಡ ತರಬೇತಿ ಕೇಂದ್ರ ಹಾಗೂ ಸಿಬ್ಬಂದಿಯೊಂದಿಗೆ ಪ್ರಾರಂಭಗೊಳ್ಳುತ್ತಿರುವ ಈ ಘಟಕವು ಮುಂಬರುವ ದಿನಗಳಲ್ಲಿ ರೈತರಿಗೆ ಸಾರ್ಥಕವಾದ ಪ್ರಶಂಸನೀಯ ಸೇವೆಯನ್ನು ಒದಗಿಸುವ ಹಿನ್ನಲೆಯೊಂದಿಗೆ ಕೊಪ್ಪಳ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೃಷಿಯಲ್ಲಿ ಅಭಿವೃದ್ದಿ ಸಾಧಿಸಿ ಸ್ವಾವಲಂಬಿಯಾಗಲು ಹಾಗೂ ದೇಶದ ಆಹಾರ ಭದ್ರತೆ ಮತ್ತು ಎರಡನೇಯ ಹಸಿರು ಕ್ರಾಂತಿಯ ಸಾಧನೆಗೆ ಭಾಗಿಯಾಗಲು ವಿನಂತಿಸಲಾಗಿದೆ. ತೋಟಗಾರಿಕೆಯಲ್ಲದೇ ಕೃಷಿ ಮತ್ತು ಇತರೆ ಕೃಷಿಯೇತರೆ ರಂಗಗಳಲ್ಲಿ ಕೊಪ್ಪಳದ ರೈತರು ವಿಸ್ತರಣಾ ಶಿಕ್ಷಣ ಘಟಕದ ಅಮೂಲ್ಯ ಸೇವೆಯ ಪಡೆಯಬೇಕೆಂದು ವಿಶ್ವವಿದ್ಯಾಲಯದ ಕುಲಪತಿಗಳ ಹಾಗೂ ಎಲ್ಲ ಅಧಿಕಾರಿಗಳ ಆಸೆಯಾಗಿದೆ. 


    - ಡಾ. ಮಲ್ಲಿಕಾರ್ಜುನ ಕೆಂಗನಾಳ, ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಸ್ತರಣಾ ಶಿಕ್ಷಣ ಘಟಕ,   ಕೃಷಿ ವಿ.ವಿ. ರಾಯಚೂರು,        ಕೊಪ್ಪಳ.





Advertisement

0 comments:

Post a Comment

 
Top