PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.18: ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದು, ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋ ರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಇಂದು ಸಂಜೆ ಜಯದೇವ ಆಸ್ಪತ್ರೆ ಯಿಂದ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆ್ಯಂಬ್ಯು ಲೆನ್ಸ್‌ನಲ್ಲಿ ಅವರನ್ನು ಕರೆತರಲಾಯಿತು. ಯಡಿಯೂರಪ್ಪನವರ ಆರೋಗ್ಯ ಸ್ಥಿತಿಯ ಬಗ್ಗೆ ನಿನ್ನೆ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿಕೆ ನೀಡಿ, ಹೃದಯಕ್ಕೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆ ಏನೂ ಇಲ್ಲ, ಅವರನ್ನು ಮಂಗಳವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ, ಬೆನ್ನಲ್ಲೇ ಇಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಬಳಿಕ ಯಡಿಯೂರಪ್ಪನವರನ್ನು ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಗೆ ಸಂಬಂಧಿಸಿದಂತೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಯಡಿಯೂರಪ್ಪನವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವ ವೇಳೆ ಮಾಧ್ಯಮದವರ ಕಣ್ಣು ತಪ್ಪಿಸಿ, ಕದ್ದುಮುಚ್ಚಿ ಜಯದೇವ ಆಸ್ಪತ್ರೆಯ ಕ್ಯಾಂಟಿನ್‌ನ ಹಿಂಬಾಗಿಲಿನ ಮೂಲಕ ಹೊರಗೆ ಕರೆದೊಯ್ದು, ಆ್ಯಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಡಿಸಿಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯೊಳಗೆ ಯಡಿಯೂರಪ್ಪರನ್ನು ಕರೆದೊಯ್ಯುವ ವೇಳೆ ಮಾಧ್ಯಮದವರ ಕ್ಯಾಮರಾ ಕಣ್ಣಿಗೆ ಕಾಣದಂತೆ ಬಟ್ಟೆಗಳನ್ನು ಅಡ್ಡಲಾಗಿಟ್ಟು ಒಳಗೆ ಕರೆದೊಯ್ಯಲಾಯಿತು. ತೀವ್ರ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವ ಯಡಿಯೂರಪ್ಪರನ್ನು ವಿಕ್ಟೋರಿಯಾ ಆಸ್ಪತ್ರೆಯ ಎರಡನೆ ಮಹಡಿಯ ಐಷಾರಾಮಿ ಕೊಠಡಿಗೆ ದಾಖಲಿಸಲಾಗಿದೆ.
ಹವಾನಿಯಂತ್ರಿತ ಐಷಾರಾಮಿ ಕೊಠಡಿಯಲ್ಲಿ ಸರ್ಜಿಕಲ್ ಗ್ಯಾಸ್ಟ್ರೋ ಎಂಟ್ರಾಲಜಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಯಡಿಯೂರಪ್ಪರಿಗೆ ವಿಕ್ಟೋರಿಯಾ ಆಸ್ಪತ್ರೆಯ ಡಾ.ರವೀಂದ್ರ ಹಾಗೂ ಡಾ.ಅನಂತ ಕುಮಾರ್ ಚಿಕಿತ್ಸೆ ನೀಡಲಿದ್ದಾರೆ ಎಂದು ಆಸ್ಪತ್ರೆಯ ಉಸ್ತುವಾರಿ ಅಧೀಕ್ಷಕ ಡಾ.ನಟರಾಜ್ ಮಾಧ್ಯಮದವರಿಗೆ ತಿಳಿಸಿ ದ್ದಾರೆ. ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿ ಬಂಧನವಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುವಿದ್ದ ಐಷಾರಾಮಿ ಕೊಠಡಿಯಲ್ಲಿಯೇ ಯಡಿಯೂರಪ್ಪರನ್ನು ದಾಖಲಿಸಲಾಗಿದ್ದು, ಈ ಐಷಾರಾಮಿ ಹವಾನಿಯಂತ್ರಿತ ಕೊಠಡಿಯೊಳಗೆ ಟಿ.ವಿ., ಗೀಸರ್, ಫ್ಯಾನ್, ಎರಡು ಕುರ್ಚಿ, ಒಬ್ಬರು ಉಳಿದುಕೊಳ್ಳಲು ವ್ಯವಸ್ಥೆ ಇದೆ.
ಅ.22ರ ವರೆಗೆ ಯಡಿಯೂರಪ್ಪನವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಜೈಲುವಾಸ ಅನುಭವಿಸುವುದನ್ನು ತಪ್ಪಿಸುವುದಕ್ಕಾಗಿ ಆರೋಗ್ಯ ಹದಗೆಟ್ಟ ನಾಟಕವಾಡುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಯಡಿಯೂರಪ್ಪರ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳೇನೂ ಉಂಟಾಗಿಲ್ಲ. ಹೃದಯಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆ ಇಲ್ಲ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ, ಮಂಗಳವಾರ ಯಡಿಯೂರಪ್ಪರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದಿರುವ ಬೆನ್ನಲ್ಲೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿರುವುದು ಹಲವು ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಜಯದೇವ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಯಡಿಯೂರಪ್ಪರನ್ನು ಕರೆತರುವಾಗಲೂ ಮಾಧ್ಯಮದವರ ಕಣ್ಣ ತಪ್ಪಿಸಿ, ಬಟ್ಟೆಗಳನ್ನು ಸುತ್ತಿ ಆಸ್ಪತ್ರೆಗೆ ದಾಖಲಿಸಿರುವುದು ಕೂಡಾ ಹಲವು ರೀತಿಯ ಪ್ರಶ್ನೆಗಳನ್ನು ಎಬ್ಬಿಸಿವೆ.

Advertisement

0 comments:

Post a Comment

 
Top